ಮಧ್ಯಾಹ್ನದೂಟಕ್ಕೆ ಮೀನಿನಡುಗೆ ಮಾಡಿದ್ದೀರಿ. ಆದರೆ, ಗಂಟೆಗಳು ಕಳೆದರೂ ಮೀನಿನ ವಾಸನೆ ಮಾತ್ರ ಕಿಚನ್‌ನಿಂದ ಹೊರಹೋಗುತ್ತಿಲ್ಲ! ಅಥವಾ ಇನ್ಯಾವುದೋ ಗಾಢ ಮಸಾಲೆ ಬಳಸಿ ಅಡುಗೆ ಮಾಡಿದ್ದೀರಿ ಎಂದಾದಲ್ಲಿ ಅದರ ವಾಸನೆಯೂ ಮನೆಯ ಗೋಡೆಗಳಿಗೆಲ್ಲ ಅಂಟಿಕೊಂಡು ಬಿಟ್ಟಿವೆಯೇನೋ ಎಂಬಷ್ಟು ವಾಸನೆ ಮನೆ ತುಂಬ ಹರಡಿರುತ್ತದೆ. ಇಂಥ ಸಂದರ್ಭಗಳು ನಿಮಗೆ ಎದುರಾಗಿರಬಹುದು. ಅಡುಗೆ ಕೋಣೆ ಯಾವುದೇ ವಾಸನೆಗಳಿಂದ ಮುಕ್ತವಾಗಿದ್ದರೆ, ಮನೆಮಂದಿಗೆಲ್ಲ ನೆಮ್ಮದಿ. ಆದರೆ, ಅಡುಗೆಯ ಘಮ ಒಂದು ದಿನವಾದರೂ ಅಡುಗೆಮನೆಯಿಂದ ಹೊರಹೋಗದಿದ್ದರೆ ಕೊನೆಗದು ಕೆಟ್ಟ ವಾಸನೆಯಾಗಿಯೇ ಪರಿಣಮಿಸುತ್ತದೆ. ಗಾಢ ವಾಸನೆಗಳುಳ್ಳ, ಮಸಾಲೆಯುಕ್ತ ಅಡುಗೆಗಳನ್ನು ಮಾಡಿದಾಗ ಹೀಗಾಗುವುದುಂಟು. ಯಾರೋ ಮನೆಗೆ ನೆಂಟರೋ, ಗೆಳೆಯರೋ ಬರುವಾಗಲೇ,
ಅಡುಗೆ ಮನೆಯ ಹಳೆಯ ವಾಸನೆ ಮನೆ ತುಂಬ ಹರಡಿಕೊಂಡಿದ್ದರೆ ಮುಜುಗರಕ್ಕೆ ಒಳಗಾಗುವ ಸನ್ನಿವೇಶವೇ ಹೆಚ್ಚು. ಹಾಗಾದರೆ, ಇಂಥ ವಾಸನೆಗಳನ್ನು ಅಡುಗೆ ಮನೆಯಿಂದ ಹೊರ ಹೋಗಿಸುವುದು ಹೇಗೆ? ಅಡುಗೆಮನೆಯನ್ನು ವಾಸನೆಗಳಿಂದ ಮುಕ್ತವಾಗಿಸುವುದು ಹೇಗೆ ಎಂಬ ಗೊಂದಲ ನಿಮಗಿದ್ದರೆ ಇಲ್ಲಿವೆ ಕೆಲವು ಸರಳ ಉಪಾಯಗಳು. ಬನ್ನಿ, ಅವು (Kitchen Cleaning Tips) ಯಾವುವೆಂದು ನೋಡೋಣ.
ಕರ್ಪೂರ
ಮನೆಯನ್ನು ಸುಗಂಧಿತವಾಗಿಸಲು ಇರುವ ಅತ್ಯಂತ ಹಳೆಯ ಉಪಾಯಗಳ ಪೈಕಿ ಇದೂ ಒಂದು. ಕರ್ಪೂರವು ಕೆಟ್ಟ ವಾಸನೆಗಳನ್ನೆಲ್ಲ ಹೀರಿಕೊಂಡು ಮನೆಯನ್ನು ಸುವಾಸಿತಗೊಳಿಸುವ ಶಕ್ತಿ ಹೊಂದಿರುವುದರಿಂದ ಇದು ಫಟಾಫಟ್ ಸಹಾಯಕ್ಕೆ ಬರುತ್ತದೆ. ಮನೆಯಲ್ಲೊಂದು ಜಾಗದಲ್ಲಿ ಕೆಲವು ಕಾಳು ಕರ್ಪೂರ ಹಾಕಿ ಹೊತ್ತಿಸಿ ಇಡಿ. ಪರಿಮಳ ಮನೆ ತುಂಬ ಹರಡಿಕೊಳ್ಳುತ್ತದೆ. ಕ್ಷಣ ಮಾತ್ರದಲ್ಲಿ ಹಳೆಯ ಘಮ ಮಾಯವಾಗಿ ತಾಜಾತನ ಹರಡುತ್ತದೆ.
ವಿನೆಗರ್ ಅಥವಾ ನಿಂಬೆ
ಹೌದು. ನಿಂಬೆ ಹಣ್ಣಿನ ರಸ ಅಥವಾ ವಿನೆಗರ್ ಅನ್ನು ಒಂದು ಬೌಲ್‌ನಲ್ಲಿ ಹಾಕಿ ಸ್ವಲ್ಪ ನೀರು ಹಾಕಿ ಅದನ್ನು ಕುದಿಸಿ. ಚೆನ್ನಾಗಿ ಕುದಿಯಲಿ. ಆಗ ಅದರ ಘಮ ಮನೆ ತುಂಬ ಹರಡಿಕೊಂಡು, ಹಳೆಯ ವಾಸನೆ ಹೊರಟುಹೋಗುತ್ತದೆ.
ಕಿಟಕಿ ಬಾಗಿಲು ತೆರೆಯಿರಿ
ಅಡುಗೆ ಕೋಣೆಯಲ್ಲಿ ಚಿಮಣಿ, ಎಕ್ಸಾಸ್ಟ್ ಫ್ಯಾನ್ ಇದ್ದರೂ ಕೆಲವೊಮ್ಮೆ ವಾಸನೆ ಹೋಗಿಲ್ಲ ಅನಿಸಿದರೆ, ಮನೆಯ ಕಿಟಕಿ ಬಾಗಿಲುಗಳನ್ನು ತೆರೆದಿಡಿ. ಎಲ್ಲವೂ ಒಂದೆರಡು ಗಂಟೆಗಳ ಕಾಲ ತೆರೆದಿಟ್ಟರೆ, ನಿಧಾನವಾಗಿ ವಾಸನೆ ಹೊರಹೋಗುತ್ತದೆ.
ತಾಜಾ ಪೋಟ್‌ಪುರಿ
ಪೋಟ್‌ಪುರಿ ಅಂಗಡಿಯಿಂದಲೇ ಖರೀದಿಸಬೇಕಿಲ್ಲ. ಮನೆಯಲ್ಲೇ ಅಡುಗೆ ಮನೆಯ ಮಸಾಲೆಗಳಿಂದಲೇ ಒಂದು ಪೋಟ್‌ಪುರಿ ರೆಡಿ ಮಾಡಿ. ಹೇಘೆ ಅಂತೀರಾ? ಚೆಕ್ಕೆ, ಲವಂಗವನ್ನು ಒಂದು ಬೌಲ್‌ನಲ್ಲಿ ಹಾಕಿ ನೀರು ಹಾಕಿ ಚೆನ್ನಾಗಿ ಕುದಿಸಿ. ಮುಚ್ಚಳ ಮುಚ್ಚದೆ, ತೆರೆದಿಟ್ಟು ಕುದಿಸಿ. ಚೆನ್ನಾಗಿ ಕುದಿಯಲಿ. ಇದರ ಘಮ ಮನೆ ತುಂಬ ಹರಡಿಕೊಳ್ಳುತ್ತದೆ. ಆಗ ಹಳೆ ವಾಸನೆ ಹೊರಟುಹೋಗುತ್ತದೆ.