Site icon Vistara News

ಒಳ ಉಡುಪುಗಳಿಗೂ ಇರತ್ತೆ ಎಕ್ಸ್‌ಪೈರಿ ಡೇಟ್‌; ಹರಿಯುವವರೆಗೂ ಕಾಯಬೇಡಿ !

UnderWear

ನಾವು ಚೆನ್ನಾಗಿ ಕಾಣಿಸುವಂಥ ಉಡುಪು ಧರಿಸಬೇಕು..ಹೆಚ್ಚಿಗೆ ಬೆಲೆ ಇರುವ ಬಟ್ಟೆ ತೊಡಬೇಕು, ನಮ್ಮ ಹೈಟ್‌, ಚರ್ಮದ ಬಣ್ಣ, ತೂಕಕ್ಕೆ ಒಪ್ಪುವ ಅಂಗಿಗಳೇ ಇರಲಿ ಎಂದು ಬಯಸುವ ಅನೇಕರು ಒಳ ಉಡುಪುಗಳ ವಿಚಾರಕ್ಕೆ ಬಂದರೆ ನಿರ್ಲಕ್ಷ್ಯ ವಹಿಸಿಬಿಡುತ್ತಾರೆ. ಒಳ ಉಡುಪುಗಳು ಕಣ್ಣಿಗೆ ಕಾಣುವುದಿಲ್ಲವಲ್ಲ, ಒಳಗಿರುತ್ತವೆ ಎಂಬ ಉದಾಸೀನ ಬೆಳೆಸಿಕೊಂಡುಬಿಡುತ್ತಾರೆ. ಆದರೆ ನೆನಪಿರಲಿ, ನಮ್ಮ ಹೊರ ಉಡುಪುಗಳಷ್ಟೇ ಮಹತ್ವವನ್ನು ಒಳ ಉಡುಪುಗಳಿಗೂ ಕೊಡಬೇಕು. ಇವು ದೇಹದ ಸೂಕ್ಷ್ಮ ಅಂಗಗಳಿಗೆ ಹೊಂದಿಕೊಂಡು ಇರುವ ಬಟ್ಟೆಗಳಾಗಿದ್ದರಿಂದ ಆರೋಗ್ಯದೊಂದಿಗೂ ನೇರವಾಗಿ ಸಂಬಂಧಪಟ್ಟಿರುತ್ತವೆ. ಅವುಗಳ ಅಳತೆ, ಸ್ವಚ್ಛತೆ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಆದ್ಯತೆಯಾಗಿರಬೇಕು.

ನಮ್ಮಲ್ಲಿ ಬಹುತೇಕರು ಈ ಒಳ ಉಡುಪುಗಳನ್ನು ಒಮ್ಮೆ ಕೊಂಡರೆ ಅವು ಹರಿಯುವವರೆಗೂ ಧರಿಸುವ ಪರಿಪಾಠ ಬೆಳೆಸಿಕೊಂಡಿರುತ್ತಾರೆ. ಚೂರುಪಾರು ಹರಿದರೂ, ನೋಡೋಣ ಎಷ್ಟು ದಿನ ಬರುತ್ತದೆಯೋ ಅಷ್ಟು ದಿನ ಹಾಕಿಬಿಡೋಣ. ಹೇಗೂ ಯಾರಿಗೂ ಕಾಣುವಂಥದ್ದಲ್ಲವಲ್ಲ ಎಂಬ ನಿರ್ಲಕ್ಷ. ಆದರೆ ಇದು ಒಳ್ಳೆಯ ಕ್ರಮವಲ್ಲ. ತಿನ್ನುವ ಆಹಾರಗಳಿಗೆ, ಮುಖ-ದೇಹಕ್ಕೆ ಹಚ್ಚುವ ಕ್ರೀಮಗಳಿಗೆ ಇರುವಂತೆ ಒಳ ಉಡುಪುಗಳಿಗೂ ಎಕ್ಸ್‌ಪೈರಿ ಡೇಟ್‌ (ಅವಧಿ ಮುಗಿಯುವ ದಿನಾಂಕ) ಇದ್ದೇ ಇರುತ್ತದೆ. ನಾವು ಧರಿಸುವ ಒಳ ಉಡುಪುಗಳನ್ನು ಆಯಾ ಸಮಯಕ್ಕೆ ತಕ್ಕಂತೆ ಬದಲಿಸಿಕೊಳ್ಳಬೇಕು. ಅದು ಹರಿಯಲಿ ಎಂದು ಕಾಯಬಾರದು.

ಇದನ್ನೂ ಓದಿ: Bridal Lehenga | ಲೆಹೆಂಗ ಪರ್ಚೇಸ್‌ ಮಾಡುವ ಮುನ್ನ ಇಲ್ಲಿದೆ 7 ಟಿಪ್ಸ್‌

ಒಳ ಉಡುಪನ್ನು ಯಾವಾಗ ಬದಲಿಸಬೇಕು?
ಆಗಲೇ ಹೇಳಿದಂತೆ ಒಳ ಉಡುಪುಗಳು ಹರಿಯುವವರೆಗೂ ಕಾಯಬೇಡಿ. ಒಂದಷ್ಟು ಜನರು ಸೀಮಿತ ಸಂಖ್ಯೆಯ ಒಳ ಉಡುಪನ್ನು ಖರೀದಿಸಿಟ್ಟುಕೊಂಡು ಒಂದಿನ ಒಂದು, ಮತ್ತೊಂದಿನ ಮತ್ತೊಂದು ಎಂದು ಅವುಗಳನ್ನೇ ಬಳಸುತ್ತಿರುತ್ತಾರೆ. ಹಾಗೇ, ಒಂದಷ್ಟು ಮಂದಿ ಹಲವು ಜತೆ ಒಳ ಉಡುಪು ಇಟ್ಟುಕೊಂಡು ಬಳಕೆ ಮಾಡುತ್ತಾರೆ. ಅದೇನೇ ಇರಲಿ, ನಿಮ್ಮ ಒಳ ಉಡುಪುಗಳ ಸೈಜ್‌ ಬದಲಾವಣೆಯಾಗುವುದನ್ನು ಗಮನಿಸಿ. ನೀವು ಖರೀದಿಸಿ ಹೊಸದಿದ್ದಾಗ ಇರುವಷ್ಟು ಫಿಟ್‌ ಆಗಿ ಮೂರ್ನಾಲ್ಕು ತಿಂಗಳ ಬಳಿಕ ಇರುವುದಿಲ್ಲ. ಅದರ ಅಳತೆ ದೊಡ್ಡದಾಗುತ್ತ ಹೋಗುತ್ತದೆ. ನೀವದನ್ನು ಧರಿಸಿದಾಗಲೂ ಅನ್‌ಕಂಫರ್ಟ್‌ ಆಗುತ್ತಿರುತ್ತದೆ. ಆಗ ಅದರ ಅವಧಿ ಮುಕ್ತಾಯವಾಗಿದೆ ಎಂದು ಭಾವಿಸಿ, ನೀವು ಬದಲಾವಣೆ ಮಾಡಲೇಬೇಕಾಗುತ್ತದೆ.

ಕೆಲವೊಮ್ಮೆ ಒಳ ಉಡುಪನ್ನು ಖರೀದಿಸುವಾಗ ಇದ್ದ ನಮ್ಮ ದೇಹದ ತೂಕ ಬಳಿಕ ಕಡಿಮೆಯಾಗಬಹುದು ಅಥವಾ ಹೆಚ್ಚಾಗಬಹುದು. ಆಗ ಆ ಒಳ ಉಡುಪುಗಳು ಹೊಂದಿಕೆಯಾಗುವುದಿಲ್ಲ. ಆಗ ಅವು ಹೊಸದಾಗೇ ಇದ್ದರೂ ಅನಿವಾರ್ಯವಾಗಿ ಬದಲಾವಣೆ ಮಾಡಿಕೊಳ್ಳಲೇಬೇಕಾಗುತ್ತದೆ. ಇನ್ನು ಒಳ ಉಡುಪುಗಳ ಎಲೆಸ್ಟಿಕ್‌ ಲೂಸ್‌ ಆಗಿದ್ದರೆ, ಬಣ್ಣ ತೀರ ಮಾಸಿದ್ದರೆ ಬಿಟ್ಟುಬಿಡಿ. ಅವೂ ಕೂಡ ಡೇಟ್‌ ಬಾರ್‌ ಆಗಿವೆ ಎಂದೇ ಅರ್ಥ. ನೀವು ಮೂರ್ನಾಲ್ಕೇ ಜತೆ ಇಟ್ಟುಕೊಂಡಿದ್ದರೆ ಆರು ತಿಂಗಳವರೆಗೆ ಮಾತ್ರ ಅವುಗಳನ್ನು ಬಳಸಿ, ಬಳಿಕ ಪೂರ್ತಿ ಬದಲಿಸಿಬಿಡಿ. ಏಳೆಂಟು ಜತೆ ಇಟ್ಟುಕೊಂಡು ಬಳಕೆ ಮಾಡುತ್ತಿದ್ದರೆ ಒಂದು ವರ್ಷದವರೆಗೂ ಬಳಸಬಹುದು.

ಇದನ್ನೂ ಓದಿ: ಚಹಾಕ್ಕೆ ಬೆಲ್ಲ ಬೆರೆಸಿ ಕುಡೀತಿದ್ದೀರಾ?-ಈ ಅಭ್ಯಾಸ ಬೇಡ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು !

Exit mobile version