ಮುಂದಿನ ಬಾರಿ ನಿಮ್ಮ ಮನೆಗೊಂದು ಚೆಂದನೆಯ ಗಿಡ ತರುವ ಮುನ್ನ ನೀವೂ ಹೀಗೂ ಯೋಚಿಸಬಹುದು. ಅದು ನಿಮ್ಮ ಜನ್ಮರಾಶಿಗೆ (zodiac) ಹೊಂದುತ್ತದೋ ಇಲ್ಲವೋ ಎಂದು! ಆಶ್ಚರ್ಯವಾಯಿತೇ? ಗಿಡದ ಜೊತೆಗೂ ತಾಳಮೇಳ ಇದೆಯೇ ಎಂದು ಹುಬ್ಬೇರಿಸಬೇಡಿ. ಖಂಡಿತಾ ಇದೆಯಂತೆ! ನೀವು ತಂದು ಸಾಕುವ ಗಿಡ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಏನರ್ಜಿ ನೀಡುವುದಷ್ಟೇ ಅಲ್ಲ, ನಿಮ್ಮ ಅದೃಷ್ಟಕ್ಕೂ ಬೆಳವಣಿಗೆಗೂ (Lucky plants) ಕಾರಣವಾಗುತ್ತದಂತೆ. ಹಾಗಾದರೆ ಬನ್ನಿ, ನಿಮ್ಮ ರಾಶಿಗೆ ಹೊಂದುವ ಗಿಡ (zodiac plants) ಯಾವುದು ಎಂಬುದನ್ನು ನೋಡೋಣ.
1. ಮೇಷ: ಈ ರಾಶಿಯ ಮಂದಿಗೆ ಆಲೋವೆರಾ ಒಳ್ಳೆಯದು. ಅದೃಷ್ಟ ಹಾಗೂ ಸಂಪತ್ತು ಆರೋಗ್ಯ ವೃದ್ಧಿಗೆ ಮೇಷ ರಾಶಿಯ ಮಂದಿ ತಮ್ಮ ಮನೆಯಲ್ಲಿ ಅಲೊವೆರಾ ಅಂದರೆ ಲೋಳೆಸರದ ಗಿಡವನ್ನು ಇಟ್ಟುಕೊಳ್ಳಬಹುದಂತೆ. ಝೀಬ್ರಾ ಗಿಡವೂ ಕೂಡಾ ಆದೀತು. ಕೆಂಪು ಗುಲಾಬಿ ಗಿಡ, ಕೊತ್ತಂಬರಿ ಗಿಡಗಳೂ ಕೂಡಾ ಒಳ್ಳೆಯದೇ.
2. ವೃಷಭ: ಈ ರಾಶಿಯ ಮಂದಿಯ ಆರೋಗ್ಯ ಹಾಗೂ ಸಂಪತ್ತು ವೃದ್ಧಿಗೆ ಅದೃಷ್ಟ ತರುವ ಗಿಡವೆಂದರೆ ಅದು ಮನಿಪ್ಲಾಂಟ್. ಅಥವಾ ಯಾವುದೇ ಹೃದಯಾಕಾರದ ಎಲೆಯುಳ್ಳ ಗಿಡ ಒಳ್ಳೆಯದಂತೆ. ಬಸಳೆಯೂ ಆದೀತು!
3. ಮಿಥುನ: ಈ ರಾಶಿಯ ಮಂದಿಗೆ ಪಾಸಿಟಿವ್ ಎನರ್ಜಿ ಹಾಗೂ ಅದೃಷ್ಟ ತರಲು ಲ್ಯಾವೆಂಡರ್ ಗಿಡ ಒಳ್ಳೆಯದಂತೆ. ಇಂಗ್ಲೀಷ್ ಐವಿ ಗಿಡವೂ ಒಳ್ಳೆಯದೇ. ಕ್ಯಾರೆಟ್, ಲಿಲ್ಲಿ, ಸೋಂಪು ಗಿಡ ಕೂಡಾ ಒಳ್ಳೆಯದು.
4. ಕರ್ಕ: ಜೇಡ್ ಗಿಡವನ್ನು ನೀವು ಬೆಳೆಸುವುದರಿಂದ ನಿಮಗೆ ಹಣಕಾಸಿನ ವಿಚಾರದಲ್ಲಿ ಅದೃಷ್ಟ ದೊರೆಯುತ್ತದಂತೆ. ಅಷ್ಟೇ ಅಲ್ಲ, ಆರೋಗ್ಯ ಹಾಗೂ ಸಮೃದ್ಧಿಗೆ ಈ ಗಿಡ ಶುಭವಂತೆ. ಲಕ್ಕಿ ಬ್ಯಾಂಬೂ ಅಂದರೆ ಅದೃಷ್ಟ ತರುವ ಬಿದಿರು ಕೂಡಾ ಆದೀತು. ಪುದಿನ, ಬ್ರೊಕೋಲಿ, ಡೈಸಿ, ಬಿಳಿ ಗುಲಾಬಿ, ನಿಂಬೆಹುಲ್ಲು, ನೀರಲ್ಲಿ ಬೆಳೆವ ಲಿಲ್ಲಿ ಹೂಗಳು ಕೂಡಾ ಆಗಬಹುದು.
5. ಸಿಂಹ: ಸಿಂಹ ರಾಶಿಯ ಮಂದಿಗೆ ಯಶಸ್ಸು ತರಲು ಸೂರ್ಯಕಾಂತಿ ಒಳ್ಳೆಯದಂತೆ. ಸೂರ್ಯಕಾಂತಿ ಹೂವಿನ ಗಿಡವನ್ನು ಇವರು ಇಟ್ಟುಕೊಂಡರೆ ಸದಾ ಅದೃಷ್ಟವಷ್ಟೇ ಅಲ್ಲ, ಮನೆಯಲ್ಲಿ ಪಾಸಿಟಿವ್ ಶಕ್ತಿಯ ಹರಿವು ವೃದ್ಧಿಸುತ್ತದಂತೆ. ಕ್ಯಾಮೋಮೈಲ್, ಮರಿಗೋಲ್ಡ್, ಕ್ಯಾಬೇಜು, ಜೋಳ, ಡೇಲಿಯಾಗಳೂ ಕೂಡಾ ಒಳ್ಳೆಯದು.
6. ಕನ್ಯಾ: ಕನ್ಯಾ ರಾಶಿಯ ಮಂದಿಗೆ ಅದೃಷ್ಟ, ಬೆಳವಣಿಗೆ ಹಾಗೂ ಸಾಮರ್ಥ್ಯ ಹೆಚ್ಚಳಕ್ಕೆ ಬಿದಿರು ಒಳ್ಳೆಯದಂತೆ. ಬಿದಿರನ್ನು ತಮ್ಮ ಕೋಣೆಯಲ್ಲಿ ಅಥವಾ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಇವರ ಅದೃಷ್ಟ ಖುಲಾಯಿಸುತ್ತದಂತೆ. ಬಾಳೆಗಿಡವೂ ಕೂಡಾ ಒಳ್ಳೆಯದಂತೆ. ಹಾಗಾಗಿ ಜಾಗ ಬೇಕಾದಷ್ಟಿದ್ದರೆ ಬಾಳೆ ತೋಟವನ್ನೇ ಬೆಳೆಸಬಹುದು!
7. ತುಲಾ: ಲಿಲ್ಲಿ ಹೂವಿನ ಗಿಡ ಈ ರಾಶಿಯ ಮಂದಿಯಲ್ಲಿ ಹೇರಳವಾಗಿ ಪಾಸಿಟಿವ್ ತಾಕತ್ತನ್ನು ವೃದ್ಧಿಸುತ್ತದೆಯಂತೆ. ಅಷ್ಟೇ ಅಲ್ಲ, ಅಚ್ಚ ಬಿಳಿಯ ಲಿಲ್ಲಿ ಇವರ ಜೀವನದಲ್ಲಿ ಶಾಂತಿ ನೆಮ್ಮದಿಯನ್ನೂ ತರುತ್ತದೆ. ಲೋಭವನ್ನು ಕಡಿಮೆ ಮಾಡಿ ಸಮತೋಲನವನ್ನು ವೃದ್ಧಿಸುತ್ತದೆ. ಬ್ರೊಕೊಲಿ, ಬದನೆ, ಸೇಬು, ಪುದಿನ, ಬಸಳೆ, ಬಟಾಣಿ ಇತ್ಯಾದಿ ಗಿಡಗಳೂ ಸೈ.
8. ವೃಶ್ಚಿಕ: ಈ ರಾಶಿಯ ಮಂದಿಗೆ ಸ್ನೇಕ್ ಪ್ಲಾಂಟ್ ಒಳ್ಳೆಯದಂತೆ. ಇವರು ಸ್ನಾಕ್‌ಪ್ಲಾಂಟ್ ಬೆಳೆಸಿದರೆ, ಇದು ಇದವರಿಗೆ ರಕ್ಷಣೆಯನ್ನು ನೀಡುವುದಲ್ಲದೆ, ಸಮತೋಲನವನ್ನೂ ವೃದ್ಧಿಸುತ್ತದೆ. ಕರಿಮೆಣಸು, ಅಣಬೆ, ಮೂಲಂಗಿ ಇತ್ಯಾದಿಗಳೂ ಕೂಡಾ ಒಳ್ಳೆಯದೇ.
ಇದನ್ನೂ ಓದಿ: Shani Jayanti 2023 : ಕರ್ಮಫಲ ನೀಡುವ ಶನಿ ದೇವರ ಬಗ್ಗೆ ನಿಮಗೆಷ್ಟು ಗೊತ್ತು?
9. ಧನು: ಈ ರಾಶಿಯ ಮಂದಿಗೆ ಸಿಟ್ರಸ್ ಗಿಡ ಒಳ್ಳೆಯದು. ಅದು ನಿಂಬೆ ಗಿಡವೇ ಆಗಬೇಕೆಂದಿಲ್ಲ. ಯಾವುದೇ ಸಿಟ್ರಸ್ ಗಿಡ ಅಂದರೆ ನಿಂಬೆ, ಕಿತ್ತಳೆ, ಮುಸಂಬಿ ಇತ್ಯಾದಿಗಳಾದರೂ ಒಕೆ. ಈ ಸಿಟ್ರಸ್ ಗಿಡ ಈ ರಾಶಿಯ ಮಂದಿಯಲ್ಲಿ ಸುಖ ಶಾಂತಿ ಸಮೃದ್ಧಿಯ ಜೊತೆಗೆ ಉತ್ತಮ ಭವಿಷ್ಯವನ್ನೂ ತರುತ್ತದೆ. ಟೊಮೆಟೋ, ಆಸ್ಪರಾಗಸ್, ಆಲಿವ್, ದಾಂಡೇಲಿಯನ್, ಪುದಿನ ಗಿಡಗಳೂ ಶುಭವೇ.
10.ಮಕರ: ಪಚೀರಾ ಅಕಾಟಿಕಾ ಎಂಬ ಗಿಡ ಈ ರಾಶಿಯ ಮಂದಿಗೆ ಸೂಕ್ತ. ಇದು ಇವರನ್ನು ಗುರಿಗಳತ್ತ ಮುನ್ನಡೆಯುವಲ್ಲಿ ಸಕಾರಾತ್ಮಕ ಭಾವನೆಗಳ ವೃದ್ಧಿಗೆ ಸಹಾಯ ಮಾಡುತ್ತದೆ. ಜೇಡ್ ಗಿಡವೂ ಆದೀತು. ಬೀಟ್‌ರೂಟ್, ಬಸಳೆ, ಪುದಿನ, ಲಕ್ಕಿ ಬ್ಯಾಂಬೂ ಕೂಡಾ ಒಳ್ಳೆಯದು.
11. ಕುಂಭ: ಕುಂಭ ರಾಶಿಯ ಮಂದಿಗೆ ಏರ್ ಪ್ಲಾಂಟ್ ಒಳ್ಳೆಯದಂತೆ. ಏರ್ ಪ್ಲ್ಯಾಂಟ್ ಅತ್ಯಂತ ವಿಶೇಷ ಹಾಗೂ ಅಪರೂಪದ್ದಾಗಿದ್ದು ಇದನ್ನು ಈ ರಾಶಿಯ ಮಂದಿ ಬೆಳೆಸಿದರೆ, ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಇವರ ವ್ಯಕ್ತಿತ್ವ ವಿಕಸನವಾಗುತ್ತದಂತೆ. ಕ್ಯಾಮೋಮೈಲ್, ಅಲೋವೆರಾ, ಲವಂಗ ಇತ್ಯಾದಿ ಕೂಡಾ ಶುಭ.
12. ಮೀನ: ಈ ರಾಶಿಯ ಮಂದಿಗೆ ಲಕ್ಕಿ ಬ್ಯಾಂಬೂ ಅಂದರೆ ಅದೃಷ್ಟದ ಬಿದಿರು ಒಳ್ಳೆಯದಂತೆ. ಉತ್ತಮ ಭವಿಷ್ಯ ಹಾಗೂ ಸುಖ ಸಂತೋಷ ವೃದ್ಧಿಗೆ ಈ ಗಿಡ ಅವರಿಗೆ ಒಳ್ಳೆಯದು. ಇವರು ಮಲ್ಲಿಗೆ, ನೀರಲ್ಲಿ ಬೆಳೆವ ಲಿಲ್ಲಿ, ಟೊಮೇಟೋ, ಬೀಟ್‌ರೂಟ್ ಇತ್ಯಾದಿಗಳನ್ನೂ ಬೆಳೆಸುವುದೂ ಒಳ್ಳೆಯದೇ!
ಇದನ್ನೂ ಓದಿ: Friendship Day 2023: ಗೆಳೆತನವೂ ರಾಶಿಗುಣವೂ! ಅಂದಹಾಗೆ, ನಿಮ್ಮ ಗೆಳೆಯರ ರಾಶಿ ಯಾವುದು?