Site icon Vistara News

New Year Resolutions: ಹೊಸ ವರ್ಷಕ್ಕೆ ನಿಮ್ಮ ಹೊಸ ನಿರ್ಣಯಗಳು ಹೀಗಿರಲಿ!

New Year Resolutions

ಹೊಸ ವರ್ಷದಲ್ಲಿ ಹೊಸ ನಿರ್ಣಯಗಳನ್ನು ಕೈಗೊಳ್ಳುವುದು ಬಹಳಷ್ಟು ಜನರಿಗೆ ಅನೂಚಾನವಾಗಿ ನಡೆದುಬಂದ ಪರಂಪರೆ. ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಆರಂಭಶೂರತ್ವವೆಲ್ಲ ಮುಗಿದು, ಕೈಗೊಂಡ ನಿರ್ಣಯಗಳು ಸೂತ್ರವಿಲ್ಲದ ಗಾಳಿಪಟದಂತಾಗಿ, ಅರ್ಧ ವರ್ಷಕ್ಕೆ ಅದೇನೆಂಬುದೇ ಮರೆತು ಹೋಗಿರುತ್ತದೆ. ಮುಂದಿನ ಹೊಸ ವರ್ಷಕ್ಕೆ ಮತ್ತದೇ ನಿರ್ಣಯಗಳು. ಹೀಗಾಗದಿರುವಂತೆ ಮಾಡಬೇಕೆಂದರೆ ನಿಮ್ಮ ಅಗತ್ಯಗಳೇನು ಎಂಬುದನ್ನು ಆದ್ಯತೆಯ ಮೇರೆಗೆ ಪಟ್ಟಿ ಮಾಡಿಕೊಳ್ಳಿ. ವೈಯಕ್ತಿಕವಾಗಿ ನಿಮಗೇನು ಬೇಕು ಎಂಬುದು ಅರ್ಥವಾದರೆ, ಹೊಸ ವರ್ಷದ ನಿರ್ಣಯಗಳು ಗಾಳಿಗೆ ತೂರದಂತೆ ನೋಡಿಕೊಳ್ಳಬಹುದು. ಬದುಕು ಬದಲಾಯಿಸಬಹುದು. ಹಾಗೆಂದರೇನು? ಏನವು?

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಆದ್ಯತೆಯ ಪಟ್ಟಿಯಲ್ಲಿ ಮೊದಲಿಗೆ ನಿಮ್ಮ ಆರೋಗ್ಯಕ್ಕೆ ಸ್ಥಾನ ನೀಡಿ. ಆರೋಗ್ಯವೆಂಬ ಭಾಗ್ಯವನ್ನು ಬರಿಸಿಕೊಂಡಾದ ಮೇಲೆ, ಭಾಗ್ಯದಾ ಲಕ್ಷ್ಮಿ ಬರಲಿ. ಆಗಲೇ ಚೆನ್ನ ಬದುಕು. ಆನಂತರ ಪ್ರವಾಸ, ಹವ್ಯಾಸ ಇತ್ಯಾದಿ ಇತ್ಯಾದಿ. ಇದಕ್ಕೆ ಸೂಕ್ತವಾಗಿ ಒಂದಿಷ್ಟು ಆಯ್ಕೆಗಳು ನಿಮ್ಮ ಮುಂದಿದ್ದು, ಸರಿ ಹೊಂದುವುದನ್ನು ಆಯ್ದುಕೊಳ್ಳಿ

ಕೌಟುಂಬಿಕ ಸಮಯ

ಪುಟ್ಟ ಮಗಳು ಹುಟ್ಟಿದ್ದು ನೆನಪಿದೆ, ನಡೆದಿದ್ದು ಗೊತ್ತಿದೆ… ಈಗ ಎದೆ ಎತ್ತರಕ್ಕೆ ಬೆಳೆದಿದ್ದು ಯಾವಾಗ ಎಂದು ಯೋಚಿಸುವಂತಾಗಬಾರದು. ನಿದ್ದೆಗೆಟ್ಟು, ಬುದ್ಧಿಗೆಟ್ಟು ಮಾಡುವ ಉದ್ಯೋಗ, ಅದಕ್ಕಾಗಿ ಮಾಡುವ ಪ್ರಯಾಣ ಮುಂತಾದವೆಲ್ಲ ಬದುಕನ್ನು ತ್ವರಿತ ಗರಿಯಲ್ಲಿ ಓಡಿಸಿಬಿಡುತ್ತವೆ. ಇವೆಲ್ಲದರ ನಡುವೆ ಸಮಯ ಹೊಂದಿಸಿಕೊಳ್ಳಿ, ಕುಟುಂಬದೊಂದಿಗೆ ವೇಳೆ ಕಳೆಯಿರಿ. ಬದುಕಿನ ಮೇಲೆ ಮಹತ್ವದ ಪರಿಣಾಮವನ್ನಿದು ಬೀರಬಲ್ಲದು.

ಬಜೆಟ್‌ ಯೋಜನೆ

ನಮ್ಮದೇನು ದೇಶದ ಅಯವ್ಯಯವೇ ಎಂದು ಉಡಾಫೆ ಮಾಡಬೇಡಿ. ಆನೆ ತೂಕ ಆನೆಗೆ, ಇರುವೆ ತೂಕ ಇರುವೆಗೆ! ಈ ವರ್ಷದಲ್ಲಿ ಎಷ್ಟು ಪ್ರವಾಸ ಮಾಡಬಹುದು. ಹಳೆಯ ಕಾರು ಬದಲಾಯಿಸಬಹುದೇ? ಮಕ್ಕಳ ಓದಿಗೆ ಎಷ್ಟು ಉಳಿತಾಯ ಮಾಡಬೇಕು? ನಮ್ಮ ನಿವೃತ್ತಿಗೆ ಇನ್ನೆಷ್ಟು ಹನಿಗೂಡಿಸಬೇಕು ಇತ್ಯಾದಿಗಳು ವ್ಯವಸ್ಥಿತವಾಗಿ ಯೋಜನೆಗೆ ಒಳಪಡಬೇಕು. ಆಗಲೇ ಒತ್ತಡದಿಂದ, ಬೇಡದ ಯೋಚನೆಗಳಿಂದ ಮನಸ್ಸು ಮುಕ್ತವಾಗಲು ಸಾಧ್ಯ.

ಕ್ರೀಡೆ

ಇದರರ್ಥ ಮುಂದಿನ ಒಲಿಂಪಿಕ್ಸ್‌ಗೆ ಗುರಿ ಇರಿಸಿಕೊಳ್ಳಬೇಕೆಂದಲ್ಲ. ಆದರೆ ನಿಮಗೆ ಹೊಂದುವ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಗುರಿ ಇರಿಸಿಕೊಳ್ಳಿ. ಗೆಳೆಯರೊಂದಿಗೆ ಕ್ರಿಕೆಟ್‌, ವಾಲಿಬಾಲ್‌ನಂಥದ್ದು ಆಡುವುದು, ಒಬ್ಬರೇ ಕ್ರೀಡಿಸುವುದು ಇಷ್ಟವಾದರೆ ಸೈಕ್ಲಿಂಗ್‌, ಈಜು ಮುಂತಾದ ಯಾವುದನ್ನೇ ಆದರೂ ಜಾರಿ ಇರಿಸಿಕೊಳ್ಳಿ. ಇದರಿಂದ ಫಿಟ್‌ನೆಸ್‌ ಹೆಚ್ಚುವುದರ ಜೊತೆಗೆ ಮನಸ್ಸಿಗೂ ಆನಂದ ದೊರೆಯುತ್ತದೆ.

ಹೊಸ ಅಡುಗೆ

ಇದು ಮಹಿಳೆಯರ ಅಥವಾ ನಳ ಮಹಾರಾಜ ಕೆಲಸ ಮಾತ್ರ ಎಂದು ಬದಿಗಿರಿಸಬೇಡಿ. ಆಗೀಗ ಖುಷಿಗಾಗಿ ಅಡುಗೆ ಮಾಡುವುದು ಸಹ ಮನೋಲ್ಲಾಸಕ್ಕೆ ಕಾರಣವಾಗಬಲ್ಲದು. ವಾರಕ್ಕೊಮ್ಮೆ ಅಥವಾ ೧೫ ದಿನಗಳಿಗೊಮ್ಮೆ ಏನಾದರೊಂದು ಹೊಸ ರುಚಿ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.

ಪುಸ್ತಕ

ಇದಂತೂ ಆಪತ್ತಿನ ಗೆಳೆಯ. ಇಡೀ ಲೋಕದ ಸಂತೆಯಿಂದ ನಿಮ್ಮನ್ನು ದೂರ ಮಾಡಿ, ನೆಮ್ಮದಿಯ ರಕ್ಷೆಯಲ್ಲಿ ಇರಿಸಬಲ್ಲದು. ಹಾಗಾಗಿ ಈಗಾಗಲೇ ಓದುವ ಅಭ್ಯಾಸವಿದ್ದರೆ ಅದನ್ನು ವಿಸ್ತರಿಸಿಕೊಳ್ಳಿ. ಇಲ್ಲದಿದ್ದರೆ, ಪ್ರಾರಂಭಿಸಿ. ಇಂಥದ್ದೇ ಪುಸ್ತಕವೆಂದಿಲ್ಲ, ಅಡುಗೆ ಪುಸ್ತಕದಿಂದ ಹಿಡಿದು, ಕಥೆ, ಕಾದಂಬರಿ, ಸಾಮಾನ್ಯ ಜ್ಞಾನ, ಯಾವುದೋ ವಿಷಯಕ್ಕೆ ಸಂಬಂಧಿಸಿದವು, ಆಧ್ಯಾತ್ಮ… ನಿಮ್ಮಿಷ್ಟ.

ಸ್ವಚ್ಛತೆ

ಒತ್ತಡದ ಬದುಕಿನಲ್ಲಿ ಮನೆಯ ಸ್ವಚ್ಛತೆ ಕೆಲವೊಮ್ಮೆ ಹಿಂದಾಗಿಬಿಡುತ್ತದೆ. ಇದಕ್ಕಾಗಿ ಪಗಾರು ಕೊಟ್ಟು ಇರಿಸಿಕೊಂಡ ಕೆಲಸದವರು ನಮಗೆ ಬೇಕಾದಾಗ, ಬೇಕಾದಂತೆ ಮಾಡುವುದಿಲ್ಲ. ಅವೆಲ್ಲವನ್ನೂ ಎಂದೋ ಒಂದು ದಿನ ಸರಿ ಮಾಡಲು ಹೋದಾಗ, ಇಷ್ಟು ದಿನ ನಾವೀ ತಿಪ್ಪೆಯಲ್ಲಿ ಬದುಕುತ್ತಿದ್ದೆವೇ ಎಂದು ಗಾಬರಿಕೊಳ್ಳುತ್ತೇವೆ. ಹಾಗಾಗಿ ದಿನದ 10 ನಿಮಿಷ ಅಥವಾ ವಾರಕ್ಕೊಂದು ತಾಸು… ಹೀಗೆ ಒಂದಿಷ್ಟು ಸಮಯವನ್ನು ಮನೆಯ ಒಪ್ಪ-ಓರಣಕ್ಕೆ ನಿಗದಿಪಡಿಸಿ.

ಚಟ ನಿರ್ಮೂಲನೆ

ಇದಂತೂ ಸಾಧಾರಣ ಕೆಲವು ದಶಕಗಳ ಹೊಸ ವರ್ಷದ ನಿರ್ಣಯಗಳಲ್ಲಿ ಬರುವಂಥದ್ದು. ಇನ್ಮೇಲೆ- ಕುಡಿಯುವುದಿಲ್ಲ, ಸಿಗರೇಟ್‌ ಮುಟ್ಟುವುದಿಲ್ಲ, ಗುಟ್ಕಾ ಬಿಡುತ್ತೇನೆ, ದಿನಕ್ಕೆರಡೇ ಚಹಾ, ದಿನಕ್ಕೊಂದೇ ಕಾಫಿ … ಸರಣಿ ಎಷ್ಟೂ ಉದ್ದವಿರಬಹುದು. ಆದರೆ ಪ್ರತೀ ವರ್ಷವೂ ಇದೇ ನಿರ್ಣಯಗಳನ್ನು ಕೈಗೊಳ್ಳುವ ಅವಸ್ಥೆಗೆ ಎಂದಾದರೂ ಕೊನೆ ಹಾಡಬೇಕಲ್ಲ. ಕಣ್ಣು ಹಾಯುವಲ್ಲೆಲ್ಲಾ ನಿಮ್ಮ ನಿರ್ಧಾರಗಳನ್ನು ಬರೆದು ಅಂಟಿಸಿಕೊಳ್ಳಿ. ಪ್ರತಿ ಸಣ್ಣ ಪ್ರಗತಿಯನ್ನೂ ದಾಖಲಿಸಿ. ಇಷ್ಟಾಗಿಯೂ ಸಾಧ್ಯವಾಗದಿದ್ದರೆ, ಚಿಕಿತ್ಸಕರ ನೆರವು ಪಡೆಯಿರಿ.

ನಿದ್ದೆ

ದಿನಕ್ಕೆಂಟು ತಾಸು ನಿದ್ದೆ ಮಾಡುವ ನಿರ್ಧಾರವೇ ಹಾಸ್ಯಾಸ್ಪದ ಎನಿಸಬಹುದು. ಆದರೆ ಅದಕ್ಕೂ ನಿರ್ಣಯಗಳನ್ನು ಕೈಗೊಳ್ಳಬೇಕಾದ ಸ್ಥಿತಿಯಿದ್ದರೆ… ಆರೋಗ್ಯ ಏನಾಗಬೇಡ! ನಿದ್ದೆಯಿಲ್ಲದ ಬದುಕಿನಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಬೆನ್ನು ಬೀಳಬಹುದು. ಹಾಗಾಗಿ ಬೇಗನೇ ರಾತ್ರಿಯೂಟ ಮಾಡಿ, ಸರಿಯಾದ ಸಮಯಕ್ಕೆ ದಿನವೂ ಮಲಗುವ ಮತ್ತು ಏಳುವ ಅಭ್ಯಾಸಕ್ಕೆ ನಾಂದಿ ಹಾಡಿ. ದೀರ್ಘಾಯಸ್ಸಿಗೆ ಇದೂ ಕಾರಣ ಎನ್ನುತ್ತವೆ ಅಧ್ಯಯನಗಳು.

ಇದನ್ನೂ ಓದಿ: New Year Travel: ಹೊಸವರ್ಷದ ಪ್ರವಾಸಕ್ಕೆ ಈ ಸ್ಥಳಗಳು ರೋಮಾಂಚಕ!

Exit mobile version