Site icon Vistara News

Mental Wellness: ಗ್ರಹಚಾರ ಕೈಕೊಟ್ಟಾಗ ಶಾಂತ ರೀತಿಯಿಂದ ವರ್ತಿಸುವುದು ಹೇಗೆ ಅಂತೀರಾ? ಇಲ್ಲಿವೆ ಟಿಪ್ಸ್!

yoga with kid

ಎಂಥ ಪರಿಸ್ಥಿತಿ ಬಂದರೂ ಎದೆಗುಂದದೆ, ಸರಳವಾಗಿ ಸಹಜವಾಗಿ ಶಾಂತಿಯಿಂದ (keeping calm) ಇರುವುದು ಹೇಗೆ ಎಂಬುದು ಬಹುತೇಕ ಎಲ್ಲರಿಗೂ ಇರುವ ಮಿಲಿಯನ್‌ ಡಾಲರ್‌ ಪ್ರಶ್ನೆ. ಇತರರು ಕಷ್ಟದಲ್ಲಿದ್ದಾಗ, ಅವರಿಗೆ ಎದೆಗುಂದದೆ ಇರುವಂತೆ ಸಮಾಧಾನ ಹೇಳುತ್ತೇವೆ, ಆದರೆ, ನಾವೇ ಅಂಥ ಪರಿಸ್ಥಿತಿಯಲ್ಲಿದ್ದಾಗ ಅದನ್ನು ನಿಭಾಯಿಸುವುದು, ಹೇಳಿದಷ್ಟು ಸುಲಭವಲ್ಲ ಎಂಬುದು ಬಹುಶಃ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಯದಲ್ಲಿ ಅನಿಸಿರಬಹುದು. ಯಾಕೆಂದರೆ, ಕಷ್ಟಕಾಲದಲ್ಲಿ ಶಾಂತಿಯಿಂದ ಇರುವುದೂ ಕೂಡಾ ಒಂದು ಕಲೆ. ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ, ಪ್ರಯತ್ನಪಟ್ಟರೆ ಇದು ಕಲಿಯದ ವಿದ್ಯೆಯೇನಲ್ಲ. ನಮ್ಮ ಒಟ್ಟು ಆರೋಗ್ಯದ (Life tips) ದೃಷ್ಟಿಯಿಂದ ಶಾಂತರೀತಿಯಿಂದ ತೊಂದರೆಗಳನ್ನು ನಿಭಾಯಿಸುವುದು ಅತ್ಯಂತ ಅಗತ್ಯ ಕೂಡಾ. ಹಾಗಾದರೆ, ವಾಸ್ತವದಲ್ಲಿ ಕಷ್ಟಕಾಲದಲ್ಲಿ, ಮಾನಸಿಕವಾಗಿ (mental wellness) ತುಂಬ ದುರ್ಬಲ ಗಳಿಗೆಗಳಲ್ಲಿ ನಮ್ಮನ್ನು ನಾವು ಶಾಂತ ರೀತಿಯಲ್ಲಿರುವಂತೆ, ಸರಿಯಾದ ಕ್ರಮದಲ್ಲಿ ನಿಭಾಯಿಸುವಂತೆ ಮಾಡಬಹುದಾದ ದಾರಿ ಯಾವುದು ಎಂಬ ಪ್ರಶ್ನೆಯಿದ್ದರೆ ಅಂಥವರಿಗೆ ಇಲ್ಲಿವೆ ಕೆಲವು ಟಿಪ್ಸ್!

1. ಮಾನಸಿಕವಾಗಿ ಉದ್ವೇಗ ಅಥವಾ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿದ್ದಾಗ ಒಮ್ಮೆ ಒಂದು ಕ್ಷಣ ಎಲ್ಲವನ್ನು ಬಿಟ್ಟು ಶಾಂತವಾಗಿ ಕುಳಿತುಕೊಳ್ಳಿ. ನಿಧಾನವಾಗಿ, ಆಳವಾಗಿ (slow breath) ಉಸಿರಾಡಿ. ಮೂಗಿನ ಮೂಲಕ ಗಾಳಿಯನ್ನು ಒಳಗೆಳೆದುಕೊಂಡು, ಬಾಯಿಯ ಮೂಲಕ ಗಾಳಿಯನ್ನು ಹೊರಗೆ ಬಿಡಿ. ಇದನ್ನೇ, ಕೆಲವು ಸಲ ಮಾಡಿ. ಏಳೆಂಟು ಬಾರಿ ಮಾಡಿದಾಗ ನಿಧಾನವಾಗಿ ನೀವೊಂದು ಶಾಂತ ಮನೋಸ್ಥಿತಿಗೆ ಬಂದಿರುತ್ತೀರಿ. ಅದನ್ನು ಹಾಗೆಯೇ ಕಾಪಿಡಿ.

2. ಧ್ಯಾನ ಮಾಡುವುದನ್ನು (meditation) ಅಭ್ಯಾಸ ಮಾಡಿಕೊಳ್ಳಿ. ಎಂಥದ್ದೇ ಪರಿಸ್ಥಿತಿಯಲ್ಲೂ ಅದು ನಿಮ್ಮನ್ನು ಶಾಂತವಾಗಿರುವಂತೆ ಎಚ್ಚರಿಸುತ್ತಲೇ ಇರುತ್ತದೆ. ಪರಿಸ್ಥಿತಿಯಲ್ಲಿದ್ದುಕೊಂಡೂ ಸಹಜವಾಗಿರುವುದನ್ನು ಅದು ನಿಮಗೆ ಕಲಿಸುತ್ತದೆ. ನಿಮ್ಮ ಭಾವನೆಗಳನ್ನು ಹೊರಗಿನವರಾಗಿದ್ದುಕೊಂಡು ನೋಡುವುದನ್ನು ಅದು ನಿಮಗೆ ಕಲಿಸುತ್ತದೆ. ಹೀಗಾಗಿ, ಪರಿಸ್ಥಿತಿಯನ್ನು ಸಹಜವಾಗಿ, ಸರಳವಾಗಿ ತೆಗೆದುಕೊಂಡು ಶಾಂತವಾಗಿ, ಹೆಚ್ಚು ಉದ್ವೇಗಕ್ಕೊಳಗಾಗದೆ ಪ್ರತಿಕ್ರಿಯಿಸುವುದನ್ನೂ ಕೂಡಾ ಅದು ಕಲಿಸುತ್ತದೆ.

3. ಶಿಸ್ತುಬದ್ಧವಾದ ಜೀವನಕ್ರಮವನ್ನು (lifestyle discipline) ಪಾಲಿಸದಿರುವುದರಿಂದಲೇ ತೊಂದರೆಗಳು ಆಗಾಗ ಎದುರಾಗುತ್ತದೆ. ಹೀಗಾಗಿ, ಆದಷ್ಟೂ, ನಿಮ್ಮ ಜವಾಬ್ದಾರಿಗಳ ಬಗ್ಗೆ, ನಿಮ್ಮ ಕೆಲಸಗಳ ಬಗ್ಗೆ ಶಿಸ್ತನ್ನು ಪಾಲಿಸಿ. ಸಮಯಕ್ಕೆ ಸರಿಯಾಗಿ ಕಚೇರಿಗೆ ಹೋಗುವುದು, ಅದಕ್ಕೆ ತಕ್ಕನಾಗಿ ಬೇಗ ಎದ್ದು ನಿತ್ಯದ ಕೆಲಸಗಳನ್ನು ಮುಗಿಸಿಕೊಂಡು ತಯಾರಾಗಿ ಹೊರಡುವುದು ಕೂಡಾ, ನಿಮ್ಮ ಎಷ್ಟೋ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಅಂದುಕೊಂಡದ್ದಕ್ಕಿಂತ ಬೇಗನೆ ತಲುಪಲು ತಯಾರಾಗಿ ಹೊರಟು ಬಿಡುವುದೂ ಕೂಡಾ ನಿಮ್ಮನ್ನು ಶಾಂತವಾಗಿರಿಸುತ್ತದೆ. ಹಾಗಾಗಿ, ಶಿಸ್ತುಬದ್ಧ, ಯೋಜನೆಗಳು ತೊಂದರೆಗಳಿಗೆ ಸಿಕ್ಕಿ ಹಾಕಿಕೊಳ್ಳದಂತೆ ನೋಡಿಕೊಳ್ಳುತ್ತದೆ.

4. ಈಗಿನ ಡಿಜಿಟಲ್‌ ಕಾಲಘಟ್ಟದಲ್ಲಿ ನಿಮ್ಮನ್ನು ನೀವು ಅತೀವ ಮಾಹಿತಿಗಳಿಂದ ಓವರ್‌ಲೋಡ್‌ (Digital overload) ಮಾಡಿಕೊಳ್ಳಬೇಡಿ. ಅಗತ್ಯಕ್ಕಿಂತ ಹೆಚ್ಚು ತಿಳುವಳಿಕೆ ಕೂಡಾ ಮಾನಸಿಕವಾಗಿ ತೊಂದರೆಯೆಡೆಗೇ ದಾರಿ ತೋರಿಸುತ್ತದೆ. ಹಾಗಾಗಿ, ಹೆಚ್ಚು ಡಿಜಿಟಲ್‌ ದಾಸರಾಗಿರಬೇಡಿ.

5. ಯಾವಾಗಲೂ ಕೃತಜ್ಞತಾ (Gratitude) ಭಾವವನ್ನು ಮನಸ್ಸಿನಲ್ಲಿಡಿ. ನಿಮ್ಮ ಬದುಕಿನ ಪಾಸಿಟಿವ್‌ ಗಳಿಗೆಯ (positive attitude) ಬಗ್ಗೆ ನಿಮಗೆ ಕೃತಜ್ಞತೆಯಿರಲಿ. ನಿಮ್ಮ ಜಗತ್ತನ್ನು ಒಳ್ಳೆಯ ಹಾದಿಯೆಡೆಗೆ ಕರೆದೊಯ್ಯುವ ಶಕ್ತಿಯೆಡೆಗೆ, ನಿಮ್ಮ ಬಂಧು ಬಳಗದೆಡೆಗೆ ಕೃತಜ್ಞತೆ ರೂಢಿಸಿಕೊಳ್ಳಿ. ಆಗ ಬದುಕಿನಲ್ಲಿ ತಾನೇತಾನಾಗಿ ಪಾಸಿಟಿವಿಟಿ ಬೆಳೆಯುತ್ತದೆ.

6. ನಿತ್ಯವೂ ದೈಹಿಕ ವ್ಯಾಯಾಮಕ್ಕೆ (exercise) ಕೊಂಚ ಸಮಯ ಇಡಿ. ಅದು ನಡಿಗೆ ಇರಬಹುದು, ಯೋಗ ಇರಬಹುದು ಅಥವಾ ಜಿಮ್‌ ಇರಬಹುದು. ಇವು ನಿಮ್ಮನ್ನು ಕೇವಲ ದೂಹಿಕವಾಗಿ ಅಷ್ಟೇ ಅಲ್ಲ, ಮಾನಸಿಕವಾಗಿಯೂ ಸದೃಢರನ್ನಾಗಿಸುತ್ತದೆ.

7. ಕಷ್ಟಕಾಲದಲ್ಲಿ ಗೆಳೆಯರ ಆತ್ಮೀಯರ ನೆರವನ್ನು ಕೇಳಲು ಹಿಂದೆಮುಂದೆ ನೋಡಬೇಡಿ. ಕಷ್ಟವನ್ನು ಇತರರ ಜೊತೆಗೆ ಹಂಚಿಕೊಳ್ಳಿ. ಮನಸ್ಸು ಬಿಚ್ಚಿ ನೋವನ್ನು ಹೇಳಿಕೊಳ್ಳಿ. ಇದರಿಂದ ಮಾನಸಿಕವಾಗಿ ನೀವು ಹಗುರಾಗುತ್ತೀರಿ, ಹಾಗೂ ಅವರ ಕಾಳಜಿ, ಸಲಹೆಗಳು ನಿಮ್ಮನ್ನು ಸಮಸ್ಯೆಯನ್ನೆದುರಿಸಲು ಧೈರ್ಯ ತುಂಬಬಹುದು.

8. ಯಾವಾಗಲೂ ಸಮಸ್ಯೆಯೆಡೆಗೆ ಮಾನಸಿಕವಾಗಿ ತಕ್ಷಣ ಪ್ರತಿಕ್ರಿಯಿಸಬೇಡಿ. ಸಮಯ ತೆಗೆದುಕೊಂಡು ಯೋಚಿಸಿ. ಆಗ ಬೇರೆ ಮಾರ್ಗಗಳು ತೆರೆದುಕೊಳ್ಳುತ್ತವೆ. ಬೇರೆ ಆಯಾಮಗಳು ಗೋಚರಿಸುತ್ತವೆ.

ಇದನ್ನೂ ಓದಿ: Mental Wellness: ಮಾನಸಿಕ ಆರೋಗ್ಯಕ್ಕೂ ಇದೆ ಏಕರೂಪ ನೀತಿ ಸಂಹಿತೆ! ಈ ಸೂತ್ರಗಳನ್ನು ಪಾಲಿಸಿದರೆ ಸಾಕು

Exit mobile version