Site icon Vistara News

Miss Universe | ಕಸದಿಂದ ರಸ; ಉರ್ಫಿ ಜಾವೇದ್‌ರಂತೆಯೇ ಸ್ಪೆಷಲ್‌ ಉಡುಗೆ ತೊಟ್ಟ ಥಾಯ್ಲೆಂಡ್‌ನ ಭುವನ ಸುಂದರಿ

ಥಾಯ್ಲೆಂಡ್‌: ಬಾಲಿವುಡ್‌ನ ಉರ್ಫಿ ಜಾವೇದ್‌ ಅವರ ವಿಡಿಯೊಗಳನ್ನು ನೀವು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿರಬಹುದು. ವಾಚ್‌, ವೈಯರ್‌, ಕಪ್ಪೆ ಚಿಪ್ಪು ಹೀಗೆ ಎಲ್ಲ ರೀತಿಯ ವಸ್ತುಗಳಿಂದಲೂ ಅವರು ವಸ್ತ್ರ ವಿನ್ಯಾಸ ತಯಾರಿಸಿ, ಅದನ್ನು ತೊಟ್ಟು ವಿಡಿಯೊಗಳನ್ನು ಹರಿಬಿಡುತ್ತಿರುತ್ತಾರೆ. ಇದೀಗ ಥಾಯ್ಲೆಂಡ್‌ನ ಭುವನ ಸುಂದರಿಯೂ (Miss Universe) ಕೂಡ ಅವರ ರೀತಿಯಲ್ಲಿಯೇ ಕಸದಿಂದ ರಸವೆನ್ನುವಂತೆ ವಸ್ತ್ರ ವಿನ್ಯಾಸ ಮಾಡಿಕೊಂಡು ತೊಟ್ಟಿದ್ದಾರೆ.

ಇದನ್ನೂ ಓದಿ: Urfi Javed | ನಮ್ಮ ದೇಶದ ಹುಡುಗಿಯರು ಉರ್ಫಿ ನೋಡಿ ಕಲಿಯಬೇಕು: ರ್‍ಯಾಪರ್‌ ಯೋ ಯೋ ಹನಿ ಸಿಂಗ್
ಭುವನ ಸುಂದರಿ ಸ್ಪರ್ಧೆಯ ಪ್ರಾರ್ಥಮಿಕ ಸುತ್ತು ಬುಧವಾರ ಸಂಜೆ ನಡೆದಿದೆ. ಅದರಲ್ಲಿ ಥಾಯ್ಲೆಂಡ್‌ ಅನ್ನು ಪ್ರತಿನಿಧಿಸಿದ ಮಾಡೆಲ್‌, ನಟಿ ಅನ್ನಾ ಸುಯಾಂಗಾಮ್‌ ಇಯಾಮ್‌ ಅವರು ವಿಶೇಷ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಾನೀಯಗಳ ಮುಚ್ಚುಳವನ್ನು ತೆರೆಯಲು ಇರುವ ಪುಲ್‌-ಟ್ಯಾಬ್‌ಗಳಿಂದಲೇ ವಸ್ತ್ರ ವಿನ್ಯಾಸ ಮಾಡಲಾಗಿತ್ತು. ಇಂತಹ ವಿಶೇಷ ಉಡುಗೆ ತೊಟ್ಟು ಬಂದ ಇಯಾಮ್‌ ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.


ಇಯಾಮ್‌ ಅವರ ತಂದೆ ಮೊದಲು ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರಂತೆ. ಹಾಗೆಯೇ ಅವರ ತಾಯಿ ಕೂಡ ಬೀದಿ ಬದಿಯಲ್ಲಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದರು. ಬಡತನದ ಜೀವನವಿದ್ದರೂ ಛಲ ಬಿಡದ ಇಯಾಮ್‌ ಸಾಧನೆಗಳನ್ನು ಮಾಡಿದ್ದಾರೆ. ಅವರಿಗೆ ಮೊದಲು ಜನರು ʼಗಾರ್ಬೆಜ್‌ ಬ್ಯೂಟಿ ಕ್ವೀನ್‌ʼ ಎಂದು ಹೀಯಾಳಿಸುತ್ತಿದ್ದರಂತೆ. ಅದೆಲ್ಲವನ್ನೂ ಮೆಟ್ಟಿ ಸಾಧನೆ ಮೆಟ್ಟಿಲೇರಿರುವ ಇಯಾಮ್‌ ತನ್ನ ಕಷ್ಟದ ಹೆಜ್ಜೆಗಳನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ಈ ರೀತಿಯ ವಸ್ತ್ರ ವಿನ್ಯಾಸ ಮಾಡಿಸಿಕೊಂಡಿದ್ದಾರೆ.


ಥಾಯ್ಲೆಂಡ್‌ನ MANIRAT ಹೆಸರಿನ ಸಂಸ್ಥೆಯ ವಸ್ತ್ರ ವಿನ್ಯಾಸಕರಾದ ಆರಿಫ್‌ ಈ ವಸ್ತ್ರವನ್ನು ವಿನ್ಯಾಸಗೊಳಿಸಿದ್ದಾರೆ. ಸ್ವರೊವಸ್ಕಿ ವಜ್ರಗಳನ್ನೂ ಸಹ ವಸ್ತ್ರದಲ್ಲಿ ಅಳವಡಿಸಲಾಗಿದ್ದು, ಇದಕ್ಕೆ ʼಹಿಡನ್‌ ಪ್ರೀಷಿಯಸ್‌ ಡೈಮೆಂಡ್‌ ಡ್ರೆಸ್‌ʼ ಎನ್ನುವ ಹೆಸರು ಕೊಡಲಾಗಿದೆ. “ನೀವು ಹುಟ್ಟಿದ ಸ್ಥಳ ಕೊಳಕಾಗಿದ್ದ ಮಾತ್ರಕ್ಕೆ ನೀವು ಅಲ್ಲೇ ಕೊಳೆಯಬೇಕೆಂದೇನಿಲ್ಲ. ನಿಮ್ಮ ಬದುಕನ್ನು ಅದ್ಭುತವಾಗಿಸಿಕೊಳ್ಳಬಲ್ಲ ಶಕ್ತಿ ನಿಮ್ಮಲ್ಲಿದೆ ಎನ್ನುವುದನ್ನು ಅರಿತುಕೊಳ್ಳಬೇಕು” ಎಂದು ಇಯಾಮ್‌ ಸ್ಫೂರ್ತಿದಾಯಕ ಮಾತುಗಳನ್ನು ಹಂಚಿಕೊಂಡಿದ್ದಾರೆ.

Exit mobile version