ನಿಮ್ಮ ಮಕ್ಕಳು ಹೆಚ್ಚು ಬುದ್ಧಿವಂತರಾಗಿಯೂ, ಹೆಚ್ಚು ಆತ್ಮವಿಶ್ವಾಸಿಗಳಾಗಿಯೂ ಬೆಳೆಯಬೇಕೇ, ಹಾಗಾದರೆ ಹೆಚ್ಚು ಅಪ್ಪಿಕೊಂಡು ಬಿಡಿ. ಹೆಚ್ಚು ಅಪ್ಪಿ ಮುದ್ದಾಡಿದ ಮಕ್ಕಳು ಹೆಚ್ಚು ಸ್ಮಾರ್ಟ್ ಆಗುತ್ತಾರೆ ಅಂತಿದೆ ಸಾಕಷ್ಟು ಅದ್ಯಯನಗಳು!
ಹೌದು. ಹಗ್ಸ್/ಅಪ್ಪುಗೆ ಎಂಬೊಂದು ಸ್ಪರ್ಶಕ್ಕೆ ಅಂಥ ಮಾಂತ್ರಿಕತೆಯಿದೆ. ದೊಡ್ಡವರಿರಲಿ, ಚಿಕ್ಕವರಿರಲಿ, ಎಂತಹುದೇ ಸಂದರ್ಭ ಇರಲಿ, ಯಾವ ಮಾತೂ ಕತೆಯೂ ಇಲ್ಲದೆ, ಒಂದೇ ಒಂದು ಅಪ್ಪುಗೆಯ ಸ್ಪರ್ಷ ಸಿಕ್ಕರೆ ಸಾಕು, ಎಂಥವರಿಗೂ ಎಂತಹುದೇ ಕಷ್ಟದಲ್ಲಿರಲಿ, ಸುಖದಲ್ಲೇ ಇರಲಿ ಇವರು ನನ್ನವರು, ನನ್ನ ಜೊತೆ ಎಂದಿಗೂ ಇದ್ದಾರೆ, ಇರುತ್ತಾರೆ ಎಂಬ ಧೈರ್ಯ ಬರುತ್ತಾದೆ. ಅಲ್ಲಿ ಮಾತಿನ ಅವಶ್ಯಕತೆಯೂ ಇರುವುದಿಲ್ಲ. ಅಪ್ಪುಗೆಯೇ ಶಬ್ದಗಳಿಗೆ ಸಿಗದ ಬಂಧವನ್ನು, ಅಭಯವನ್ನೂ ನೀಡುತ್ತದೆ.
ಕಾಲ ಬದಲಾಗಿದೆ. ಬದಲಾದ ಈ ಕಾಲಘಟ್ಟದಲ್ಲಿ, ಪ್ರತಿಯೊಬ್ಬ ವ್ಯಕ್ತಿಯೂ ಪ್ರತಿದಿನವೂ ಒಂದಲ್ಲ ಒಂದು ಅಪ್ಪುಗೆಯನ್ನು ಪಡೆದಿರುತ್ತಾನೆ/ಳೆ. ದಿನನಿತ್ಯದ ಅವರಿವರ ಭೇಟಿಗಳಲ್ಲಿ, ಒಂದು ಸಾಮಾನ್ಯ ಕ್ಯಾಶುವಲ್ ಅಪ್ಪುಗೆ ಬದುಕಿನ ಅಂಗವಾಗಿ ಬದಲಾಗಿದೆ. ಮೊದಲಿಗಿಂತಲೂ ಈಗ ಹೆಚ್ಚಾಗಿ ಎಲ್ಲರೂ ಅಪ್ಪುಗೆಯನ್ನು ಹಂಚಿ, ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಮಕ್ಕಳಿಗೆ ಈ ಅಪ್ಪುಗೆ ಅಗತ್ಯ ಹಿಂದೆಂದಿಗಿಂತಲೂ ಈಗ ಅತೀ ಅಗತ್ಯವಿದೆ!
ಮಕ್ಕಳು ದೊಡ್ಡವರಿಗಿಂತಲೂ ಹೆಚ್ಚು ಅಪ್ಪುಗೆಯನ್ನು ಬಯಸುತ್ತಾರೆ. ವಯಸ್ಸಿಗೆ ಅನುಗುಣವಾಗಿ, ಅವರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಲೂ ಇರುತ್ತಾರೆ. ಅವರೇ ತಾವಾಗಿಯೇ, ವಯಸ್ಸಿಗೆ ತಕ್ಕಂತೆ ಬೆಳೆಯುತ್ತಾ ಅದಕ್ಕೊಂದು ರೂಪ ಕೊಡುತ್ತಾ ಬರುತ್ತಾರೆ. ಅವರ ಮಾನಸಿಕ ಬೆಳವಣಿಗೆ ಹಾಗೂ ಅವರು ಈ ವಯಸ್ಸಿನಲ್ಲಿ ಸುಂದರ ಹೂವಾಗಿ ಅರಳಲು ಅವರ ಬಳಿ ನಮ್ಮ ಪ್ರೀತಿಯನ್ನು ವ್ಯಕ್ತ ಪಡಿಸುವುದೂ ಅಷ್ಟೇ ಅಗತ್ಯವಿದೆ. ಅದಕ್ಕೆ ಹೆಚ್ಚಿಗ ಕಷ್ಟ ತೆಗೆದುಕೊಳ್ಳುವ ಅಗತ್ಯವೂ ಇಲ್ಲ. ಅವರಿಗೆ ಹೆತ್ತವರ ಅಪ್ಪುಗೆ ಸಾಕು!
ನಮ್ಮ ಮಕ್ಕಳನ್ನು ಅಪ್ಪಿಕೊಳ್ಳುವುದರ ಹಿಂದೆ ದೊಡ್ಡ ವಿಜ್ಞಾನವೇ ಇದೆ. ಇದರ ಉಪಯೋಗವೂ ಸಾಕಷ್ಟಿದೆ. ಮಗುವಿನ ಮಾನಸಿಕ, ದೈಹಿಕ ಹಾಗೂ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಲ್ಲಿ ಈ ಅಪ್ಪುಗೆ ಸಾಕಷ್ಟು ಕೆಲಸ ಮಾಡುತ್ತದೆ ಎನ್ನುತ್ತದೆ ವಿಜ್ಞಾನ. ಹೆತ್ತವರ ಹಾಗೂ ಮಗುವಿನ ನಡುವಿನ ಬಾಂಧವ್ಯದ ತಳಪಾಯವೇ ಈ ಅಪ್ಪುಗೆಯಲ್ಲಿದೆ. ಈ ಅಪ್ಪುಗೆ ಹೆಚ್ಚು ಸಿಕ್ಕ ಮಗು ಹೆಚ್ಚು ಖುಷಿಯಿಂದಲೂ, ಆರೋಗ್ಯದಿಂದಲೂ ಇರುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.
ಇದನ್ನೂ ಓದಿ: Parenting tips: ನಿಮ್ಮ ಮಕ್ಕಳು ದೊಡ್ಡವರಾಗಿಬಿಡುವ ಮೊದಲೇ ನೀವು ಮಕ್ಕಳಾಗಿಬಿಡಿ!
ಮಗುವಿನ ಮಿದುಳು ಬೆಳೆಯುವ ಹಂತದಲ್ಲಿ ಮಗುವಿಗೆ ಹೆಚ್ಚಿನ ಅಪ್ಪುಗೆಯ ಅಗತ್ಯವಿದೆ ಎನ್ನುತ್ತದೆ ಅಧ್ಯಯನ. ಕೊಲಂಬಸ್‌ನ ಮಕ್ಕಳ ಆಸ್ಪತ್ರೆಯೊಂದು ಈ ಬಗ್ಗೆ ಸಂಶೋಧನೆಯನ್ನೂ ನಡೆಸಿದ್ದು, ಇದಕ್ಕೆ ಪೂರಕ ಅಂಶಗಳನ್ನೇ ಅಧ್ಯಯನದಲ್ಲಿ ಕಂಡುಕೊಂಡಿದೆ. ೧೨೫ ಮಕ್ಕಳನ್ನು ಇಟ್ಟುಕೊಂಡು ಈ ಸಂಶೋಧನೆ ನಡೆಸಿದ್ದು, ದೈಹಿಕವಾಗಿ ಮನುಷ್ಯನ ಸಾಂಗತ್ಯ ಪಡೆದ ಮಕ್ಕಳು ಉತ್ತಮವಾಗಿ ಪ್ರತಿಕ್ರಿಯೆ ತೋರಿಸುವುದನ್ನು ಗಮನಿಸಿತ್ತು. ಇಇಜಿ ಮೂಲಕವೂ ಪರೀಕ್ಷೆ ನಡೆಸಿ, ಮಿದುಳು ನೀಡುವ ಪ್ರತಿಕ್ರಿಯೆಯನ್ನೂ ದಾಖಲಿಸಿತ್ತು. ತಮ್ಮ ಹೆತ್ತವರಿಂದ ಹೆಚ್ಚು ಪ್ರೀತಿ ಪಡೆದ ಮಕ್ಕಳ ಮಿದುಳು ಹೆಚ್ಚು ಸ್ಪಂದಿಸುವುದನ್ನೂ ಇದು ಗಮನಿಸಿತ್ತು.
ಹಾಗಾದರೆ, ಇವರ ಪ್ರಕಾರ ದಿನಕ್ಕೆ ಎಷ್ಟು ಅಪ್ಪುಗೆಯ ಅಗತ್ಯವಿದೆ ಎಂದರೆ, ಅದಕ್ಕೂ ಇವರಲ್ಲಿ ಲೆಕ್ಕಾಚಾರವಿದೆ. ಮಗು ಸಹಜವಾಗಿ, ಆರಾಮದಾಯಕವಾಗಿ ಇರಬೇಕೆಂದಾದಲ್ಲಿ ದಿನಕ್ಕೆ ನಾಲ್ಕು ಅಪ್ಪುಗೆಯೂ, ಚೆನ್ನಾಗಿರಲು 8 ಅಪ್ಪುಗೆಯೂ, ೧೨ ಅಪ್ಪುಗೆ ಮಗು ಆತ್ಮವಿಶ್ವಾಸದಿಂದಲೂ ಖುಷಿಯಿಂದಲೂ ಬೆಳೆಯುವುದಕ್ಕೆ ಎನ್ನುತ್ತದೆ!
ಇಷ್ಟೇ ಅಲ್ಲ. ನೀವು ಲೆಕ್ಕ ಹಾಕಿ ೧೨ ಅಪ್ಪುಗೆಯನ್ನು ಯದ್ವಾತದ್ವಾ ಕೊಟ್ಟು ಬಿಟ್ಟರೆ ಇದೆಲ್ಲ ನಡೆಯದು. ಪ್ರತಿ ಅಪ್ಪುಗೆಯಲ್ಲೂ ಪ್ರೀತಿ ತುಂಬಿರಬೇಕು. ಅಪ್ಪುಗೆಯೊಂದು ಏಳಗಿಂದ ೨೦ ಸೆಕೆಂಡುಗಳ ಕಾಲ ಇದ್ದರೆ, ಆ ಸಂದರ್ಭ ನಮ್ಮ ದೇಹ ಬಿಡುಗಡೆ ಮಾಡುವ ಆಕ್ಸಿಟೋಸಿನ್ ಎಂಬ ಹಾರ್ಮೋನು ಮಿದುಳನ್ನು ಶಾಂತಗೊಳಿಸಿ, ಅಪ್ಪುಗೆ ಪಡೆದ ವ್ಯಕ್ತಿಯಲ್ಲಿರು ದುಗುಡ, ಸಂಶಯ, ಒತ್ತಡಗಳನ್ನು ದೂರ ಮಾಡಿ ಸಂತೋಷದ ಅಲೆಯನ್ನು ಚಿಮ್ಮಿಸುತ್ತದೆ. ಆ ಮೂಲಕ ಒಂದು ಶಕ್ತಿಯುತವಾದ ಸಂಬಂಧವೊಂದು ಅಲ್ಲಿದೆ ಎಂಬುದನ್ನು, ಯಾವುದೇ ಶಬ್ದಗಳ ನೆರವಿಲ್ಲದೆ ದಾಟಿಸುತ್ತದೆ.
ಹಾಂ, ಮಗುವಿಗೆ ಈ ಅಪ್ಪುಗೆ ಬೇಡವೆಂದು ಅದು ಹೇಳಿದರೆ, ಕೊಸರಾಡಿದರೆ, ಅದರ ಭಾವನೆಗಳನ್ನು ಗೌರವಿಸಿ ಅಪ್ಪುಗೆಯಿಂದ ದೂರವಿರಬೇಕು ಎಂದೂ ನೆನಪಿಡಿ!
ಇದನ್ನೂ ಓದಿ: Postpartum Depression: ಆ ಹಸಿ ಬಾಣಂತಿಗೆ ಮಗುವೂ ಬೇಡ, ಯಾವುದೂ ಬೇಡ ಅನಿಸೋದು ಯಾಕೆ?