ಬೆಳಗ್ಗೆ ಬೇಗ ಏಳುವುದು (Morning Tips) ಎಷ್ಟು ಜನರ ಕನಸು ಹೇಳಿ? ಆ ಕನಸನ್ನು ನಿತ್ಯವೂ ನನಸಾಗಿಸಿಕೊಂಡು ಅದನ್ನೊಂದು ಶಿಸ್ತುಬದ್ಧ ಕ್ರಮದಲ್ಲಿ ಕೊಂಡೊಯ್ಯುವ ಮಂದಿ ವಿರಳ. ಕೆಲಸದ ಒತ್ತಡ, ರಾತ್ರಿ ತಡವಾಗಿ ಮಲಗುವ ಅಭ್ಯಾಸ, ಆಹಾರ ಕ್ರಮ, ಈಗಿನ ಆಧುನಿಕ ಜೀವನಕ್ರಮದ ಪರಿಣಾಮಗಳಿಂದಾಗಿ ಬೆಳಗ್ಗೆ ಬೇಗ ಏಳುವ ಕಷ್ಟವನ್ನು ಬಹುತೇಕರು ತೆಗೆದುಕೊಳ್ಳುವುದಿಲ್ಲ. ಅನೇಕರು ತಮ್ಮ ಅನಿವಾರ್ಯ ಕಾರಣಗಳಿಂದ ಬೆಳಗ್ಗೆ ಬೇಗ ಎದ್ದರೂ, ಬೇಗ ಏಳುವುದೇ ಒಂದು ಸುಖ ಎಂದು ಭ್ರಮಿಸುವ ಮಂದಿ ವಿರಳಾತಿವಿರಳ. ಆದರೂ, ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ನಾವು ರೂಢಿಸಿಕೊಂಡರೆ, ನಮ್ಮ ಎಷ್ಟೋ ಸಮಸ್ಯೆಗಳು ಯಾವುದೇ ಸೂಚನೆಯನ್ನೂ ಕೊಡದೆ ಸುಲಭವಾಗಿ ದೂರವಾಗುತ್ತವೆ. ಇಷ್ಟು ದಿನ ಇದ್ದ ಸಮಸ್ಯೆಗಳು ಹೇಗೆ ಪರಿಹಾರವಾದವು ಎಂಬುದೂ ಕೂಡಾ ತಿಳಿಯುವುದಿಲ್ಲ. ಹಾಗಾದರೆ, ಬನ್ನಿ, ಬೆಳಗ್ಗೆ ಬೇಗ ಏಳಬೇಕೆಂದು ಬಯಸುವ ಮಂದಿ ಈ ಕೆಲವು ಕೆಲಸಗಳನ್ನಾದರೂ ಬೆಳಗ್ಗೆ ಏಳರೊಳಗಾಗಿ ಮುಗಿಸುವ ಪಣಕ್ಕೆ ಬೀಳಿ. ಆಗ, ನೀವು ಅಂದುಕೊಂಡ, ಮಾಡಲು ಬಯಸಿದ ಕೆಲಸಗಳಿಗೂ ಸಾಕಷ್ಟು ಸಮಯ ದೊರೆಯುತ್ತದೆ. ಅವು ಯಾವುವು ಎಂಬುದನ್ನು ನೋಡೋಣ.
ನೀರು ಕುಡಿಯಿರಿ
ಬೆಳಗ್ಗೆ ಬೇಗ ಎದ್ದ ಕೂಡಲೇ ನೀವು ಮಾಡಬೇಕಾದ ಮೊದಲ ಕೆಲಸ ನೀರು ಕುಡಿಯುವುದು. ಇದರಿಂದ ಬೆಳಗು ತಾಜಾತನವನ್ನು ತರುತ್ತದೆ. ನಿದ್ದೆ ಮಾಯವಾಗುತ್ತದೆ. ದೇಹಕ್ಕೆ ಉಲ್ಲಾಸವು ಬರುತ್ತದೆ. ದೇಹದಲ್ಲಿ ಕೆಲಸಗಳನ್ನು ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಅಂಗಾಗಗಳೆಲ್ಲ ಮತ್ತೆ ನಿಧಾನವಾಗಿ ತಮ್ಮ ಕೆಲಸಕ್ಕೆ ತೊಡಗಿಕೊಳ್ಳಲು ಇದು ನೆರವಾಗುತ್ತದೆ.
ಫೋನ್ ಮುಟ್ಟಬೇಡಿ
ಎದ್ದ ಕೂಡಲೇ, ಪ್ರತಿಯೊಬ್ಬರೂ ಮಾಡುವ ಮೊದಲ ಕೆಲಸ ಎಂದರೆ ಫೋನ್ ಚೆಕ್ ಮಾಡುವುದು. ಯಾರ ಮೆಸೇಜ್ ಬಂದಿದೆ, ಯಾರು ತಮ್ಮ ಆಕರ್ಷಕ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ, ಯಾರದ್ದಕ್ಕೆ ಎಷ್ಟು ಲೈಕ್ ಬಂದಿದೆ, ಇತ್ಯಾದಿ ಇತ್ಯಾದಿಗಳ ವಿವರಣೆಯನ್ನು ಎದ್ದ ಕೂಡಲೇ ನೋಡಬೇಕಾಗಿಲ್ಲ. ಫೋನ್ ಮುಟ್ಟದೆ, ಫ್ರೆಶ್ಶಾಗಿ, ಬೇರೆ ಕೆಲಸಗಳತ್ತ ಗಮನ ಹರಿಸುವ ಸವಾಲನ್ನು ನೀವೇ ಸ್ವೀಕರಿಸಿ.
ವ್ಯಾಯಾಮ ಮಾಡಿ
ಕನಿಷ್ಟ 20 ನಿಮಿಷಗಳನ್ನು ನಿಮಗಾಗಿ ಇಟ್ಟುಕೊಳ್ಳಿ. ವ್ಯಾಯಾಮ ಮಾಡಿ. ಯೋಗಾಭ್ಯಾಸ ಮಾಡಿ, ಅಥವಾ ಪ್ರಕೃತಿಯ ನಡುವೆ ಒಂದು ವಾಕ್ ಮಾಡಿ ಬನ್ನಿ. ನೀವು ಓಡುವುದನ್ನು ಇಷ್ಟಪಡುತ್ತೀರಾದರೆ, ಓಡಿ ಬನ್ನಿ. ಸೈಕ್ಲಿಂಗ್ ಮಾಡಿ. ಅಥವಾ, ದೇಹಕ್ಕೆ ಕೊಂಚ ವ್ಯಾಯಾಮ ನೀಡುವ ಯಾವುದೇ ಕೆಲಸವನ್ನಾದರೂ ಮಾಡಿ.
ಧ್ಯಾನ ಮಾಡಿ
ಹತ್ತು ನಿಮಿಷ ಧ್ಯಾನ ಮಾಡಿ. ದೇಹಕ್ಕೆ ವ್ಯಾಯಾಮ ದೊರೆತರೆ ಸಾಲದು. ಮನಸ್ಸಿಗೆ ಇಡೀ ದಿನ ಲವಲವಿಕೆಯಿಂದಿರಬೇಕಾದರೆ, ಧ್ಯಾನ ಅತ್ಯಗತ್ಯ. ಒಂದು ೧೦ ನಿಮಿಷವಾದರೂ ಜಂಜಡಮುಕ್ತರಾಗಿ, ಯಾವ ಬೇರೆ ಯೋಚನೆಗಳನ್ನೂ ತಲೆಯೊಳಗೆ ನುಸುಳದಂತೆ ನೋಡಿಕೊಂಡು ಮನಸ್ಸನ್ನು ರಿಲ್ಯಾಕ್ಸ್ ಮಾಡಲು ಧ್ಯಾನಕ್ಕೆ ಮೊರೆ ಹೋಗಿ.
ಸಕಾರಾತ್ಮಕವಾಗಿ ಯೋಚಿಸಿ
ದೇವರಿಗೆ ನಮಸ್ಕರಿಸಿ, ಒಂದು ಸಕಾರಾತ್ಮಕ ಆಲೋಚನೆಯೊಂದಿಗೆ, ಜಗತ್ತಿಗೆ ಒಳ್ಳೆಯದು ಮಾಡು ತಂದೆ ಎಂದು ಪ್ರಾರ್ಥಿಸಿ. ಯಾವುದಾದರೂ ಪುಸ್ತಕ ಓದಲು ಒಂದೈದು ನಿಮಿಷ ನೀವು ಮೀಸಲಿಡಬಹುದು. ಅಥವಾ, ದೇವರ ಪೂಜೆ ಇತ್ಯಾದಿಗಳಿಗೂ ಈ ಐದು ನಿಮಿಷವನ್ನು ನೀವು ಬಳಸಬಹುದು.
ಬೇಗ ಸ್ನಾನ ಮುಗಿಸಿ
ಒಂದು ಚಂದನೆಯ ಸ್ನಾನ ಮಾಡಿ ಬನ್ನಿ. ಬೆಳಗ್ಗೆ ಏಳರ ಮೊದಲೇ ಸ್ನಾನ ಮಾಡಿದರೆ ಮನಸ್ಸು, ದೇಹ ಎರಡೂ ಪ್ರಫುಲ್ಲವಾಗುತ್ತದೆ. ಖುಷಿ, ಸಕಾರಾತ್ಮಕತೆ ನಿಮ್ಮನ್ನು ಆವರಿಸುತ್ತದೆ.
ಮುಖ್ಯ ಕೆಲಸ ಗುರುತಿಸಿ
ಆ ದಿನ ಮಾಡಬೇಕಾದ್ದೇನು ಎಂಬುದನ್ನು ಯೋಚಿಸಿ. ತುಂಬ ಮುಖ್ಯವಾದುದಾದರೆ ಬರೆದಿಡಿ. ಆ ಕಡೆಗೆ ಗಮನ ಹರಿಸುವ ಜೊತೆಗೆ ಮುಂದೆ ಮಾಡಬೇಕಾದ್ದರ ಬಗ್ಗೆ ಗಮನ ಕೊಡಿ. ಅಡುಗೆ, ಮನೆಗೆಲಸ ಇತ್ಯಾದಿಗಳಿದ್ದರೆ, ಅವುಗಳ ಕಡೆಗೆ ಗಮನ ಹರಿಸಿ. ಬೆಳಗ್ಗೆ ಏಳರಳಗೆ ಈ ಏಳು ಕೆಲಸಗಳನ್ನು ನೀವು ಮಾಡಿಕೊಂಡರೆ ಸಾಕು, ಇಡೀ ದಿನ ಸಕಾರಾತ್ಮಕವಾಗಿ ಕಳೆಯಲು, ಇದೇ ಮುಂದೆ ಶೀಸ್ತುಬದ್ಧವಾಗಿ ನಿಮ್ಮ ಜೀವನಕ್ರಮವಾಗಲು ದಾರಿಯಾಗುತ್ತದೆ.