Site icon Vistara News

Motivational Tips: ನಿಮ್ಮದೇ ಈ 10 ಅಭ್ಯಾಸಗಳು ಜೀವನದ ಯಶಸ್ಸಿಗೆ ಅಡ್ಡಗೋಡೆಯಾಗಬಹುದು!

Motivational Tips

ಸಾಧನೆ ಮಾಡಬೇಕಾದರೆ ಪರಿಶ್ರಮ (Motivational Tips) ಬೇಕು. ಬದುಕಿನಲ್ಲಿ ಕನಸು ಕಂಡು ಆ ನಿಟ್ಟಿನಲ್ಲಿ ಪಟ್ಟು ಹಿಡಿದು ಮಾಡುವ ತಾಳ್ಮೆಯೂ ಬೇಕು. ಅಷ್ಟರವರೆಗೆ ಲೋಕದ ಕಣ್ಣಿಗೆ ಏನೂ ಅಲ್ಲದೆ ಇದ್ದ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್‌ ಆಗಿ ಬದಲಾಗಬಹುದು. ಲಕ್ಷಾಂತರ ಮಂದಿಗೆ ಸ್ಫೂರ್ತಿಯ ಚಿಲುಮೆಯಾಗಬಹುದು. ಇವೆಲ್ಲ ಒಂದೇ ದಿನದಲ್ಲಿ ನಿಜವಾಗಿಯೂ ಆಗುವುದಿಲ್ಲ. ಈ ಒಂದು ದಿನದಲ್ಲಿ ಆತ ಜಗತ್ತಿಗೆ ಹಾಗೆ ಕಾಣಬೇಕಾದರೆ, ಅದರ ಹಿಂದೆ ಕನಿಷ್ಟ ಆತ/ಆಕೆ ಹತ್ತು ವರ್ಷಗಳಷ್ಟು ಪರಿಶ್ರಮ ಪಟ್ಟಿರುತ್ತಾನೆ/ಳೆ. ಯಶಸ್ಸು ಯಾರಿಗೂ ಸುಲಭವಾಗಿ ದಕ್ಕುವುದಿಲ್ಲ. ಅದರ ಹಿಂದೆ ಹಲವು ವಿಚಾರಗಳು ಕೆಲಸ ಮಾಡುತ್ತವೆ. ಬನ್ನಿ, ನೀವು ಜೀವನದಲ್ಲಿ ಯಶಸ್ಸು ಕಾಣಲು ನಿಮ್ಮ ಯಾವ ಹತ್ತು ಕೆಟ್ಟ ಅಭ್ಯಾಸಗಳು ಅಡ್ಡಗೋಡೆಯಾಗಬಹುದು ಎಂಬುದನ್ನು ನೋಡೋಣ.

ಸರಿಯಾದ ಹೆಜ್ಜೆ ಮುಖ್ಯ

ಗುರಿಯನ್ನು ಸಾಧಿಸುವ ಯೋಜನಗೆಳು ಒಳ್ಳೆಯದೇ. ಆದರೆ, ಆ ಕಡೆಗೆ ಸರಿಯಾದ ಹೆಜ್ಜೆಯೂ ಅಷ್ಟೇ ಮುಖ್ಯ. ಇಲ್ಲವಾದರೆ, ಯಶಸ್ಸು ಕೇವಲ ಹಗಲು ಕನಸಾಗಬಹುದು. ಗುರಿಯೆಡೆಗಿನ ಹೆಜ್ಜೆಗಳನ್ನು ಮುಂದೂಡುತ್ತಲೇ ಇರುವುದು, ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವುದು, ಅವಕಾಶಗಳನ್ನು ಕೈಬಿಡುವುದು ಇತ್ಯಾದಿ ಮಾಡುವುದರಿಂದ ಗುರಿ ಸಾಧಿಸುವುದು ಕಷ್ಟವಾಗಬಹುದು.

ಶಿಸ್ತಿನ ಕೊರತೆ

ಶಿಸ್ತಿನ ಕೊರತೆ ನಿಮ್ಮ ಯಶಸ್ಸಿಗೆ ತಡೆಗೋಡೆಯಾಗಬಹುದು. ಹೌದು. ಯಾವುದೇ ಕೆಲಸವನ್ನು ಸಾಧಿಸುವವರೆಗೆ ಶಿಸ್ತಿನ ಹಾದಿಯೂ ಅಷ್ಟೇ ಮುಖ್ಯ. ಒಂದು ನಿರ್ಧಿಷ್ಟ ಬಗೆಯಲ್ಲಿ ನಿತ್ಯವೂ ಶಿಸ್ತಿನಿಂದ ಕೆಲಸ ಮಾಡುತ್ತಿದ್ದರೆ ಮಾತ್ರ ಅಂದುಕೊಂಡ ಕೆಲಸ, ಗುರಿ ಸಾಧಿಸಲು ಸಾಧ್ಯವಾದೀತು.

ಋಣಾತ್ಮಕ ಯೋಚನೆ

ಋಣಾತ್ಮಕ ಯೋಚನೆಯೂ ನಿಮ್ಮ ಗುರಿಯೆಡೆಗಿನ ಪಯಣವನ್ನು ನಿಧಾನವಾಗಿಸಬಹುದು. ತನ್ನ ಬಗ್ಗೆಯೇ ಋಣಾತ್ಮಕವಾಗಿ ಮಾತನಾಡಿಕೊಳ್ಳುವುದು, ತನ್ನ ಬಗ್ಗೆಯೇ ನಂಬಿಕೆ ಇಲ್ಲದಿರುವುದು, ಆತ್ಮವಿಶ್ವಾಸವೇ ನಡುನಡುವೆ ಕಾಣೆಯಾಗುವುದು ಎಲ್ಲವೂ ಸಾಧನೆಯ ಹಾದಿಯ ತೊಡಕುಗಳೇ ಆಗಿವೆ.

ಜವಾಬ್ದಾರಿ ತೆಗೆದುಕೊಳ್ಳಬೇಕು

ಜವಾಬ್ದಾರಿಗಳನ್ನು ತೆಗೆದುಕೊಳ್ಳದಿರುವುದೂ ಕೂಡಾ ಬಾಧಕವೇ. ಜವಾಬ್ದಾರಿಗಳನ್ನೇ ತೆಗೆದುಕೊಳ್ಳಲು ಸಿದ್ಧವಿಲ್ಲದಿದ್ದರೆ, ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಇದರಿಂದ ಸಾಧ್ಯವಾಗುವುದಿಲ್ಲ.

ಸಮಯ ಪಾಲನೆ ಮುಖ್ಯ

ಸಮಯ ಪಾಲನೆ ಬಹಳ ಮುಖ್ಯ. ಅಂದುಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಲು ಸಾಧ್ಯವಾಗದಿರುವುದು ಯಶಸ್ಸಿನ ಹಾದಿಯ ಮುಳ್ಳುಗಳು.

ಸೋಲುವ ಭಯ

ಸೋಲುವ ಭಯ ಕೂಡಾ ಯಶಸ್ಸಿನ ಹಾದಿಯ ದೊಡ್ಡ ತೊಡಕು. ತಾನು ಮಾಡಬೇಕಾದ ಕೆಲಸಗಳ ಬಗ್ಗೆ, ತನ್ನ ಬಗ್ಗೆಯೇ ಆತ್ಮವಿಶ್ವಾಸವಿಲ್ಲದೆ, ಸೋಲುವ ಭಯ ಇದ್ದರೆ ಖಂಡಿತ ಸಾಗುವ ಹಾದಿ ಸುಗಮವಾಗಿ ಕಾಣದು.

ಸರಿಯಾದ ಗುರಿ

ಸರಿಯಾದ ಗುರಿಯನ್ನೇ ಸೆಟ್‌ ಮಾಡದಿರುವುದೂ ಕೂಡಾ ಅತಂತ್ರರನ್ನಾಗಿಸುತ್ತದೆ. ಯಶಸ್ಸು ಬೇಕೆಂದರೆ ನಿರ್ಧಿಷ್ಠ ಗುರಿಯೂ ಬೇಕು. ಗುರಿಯೇ ಸರಿಯಾಗಿಲ್ಲದಿದ್ದರೆ ಸಾಗುವ ಹಾದಿಯ ಬಗ್ಗೆ ನಿಶ್ಚಿತತೆ ಸಾಧ್ಯವಾಗದು.

ಹೊಸ ಬದಲಾವಣೆ

ಹೊಸ ಬದಲಾವಣೆಗೆ ಹೊಂದಿಕೊಳ್ಳಲಾಗದೆ ಇರುವುದೂ ಕೂಡಾ ಬೆಳವಣಿಗೆಯ ಹಾದಿಯಲ್ಲಿ ಬರುವ ಕಲ್ಲುಮುಳ್ಳುಗಳು. ಹೊಸದಕ್ಕೆ ಹೊಂದಿಕೊಳ್ಳುವುದೂ ಕೂಡಾ ಮುಖ್ಯವಾಗುತ್ತದೆ.

ಪಟ್ಟು ಬಿಡದೆ ಪ್ರಯತ್ನಿಸಿ

ಸೋತರೂ, ಮುಗ್ಗರಿಸಿದರೂ ಪಟ್ಟು ಬಿಡದೆ ಪ್ರಯತ್ನಿಸುವುದು ಅತ್ಯಂತ ಮುಖ್ಯವಾಗುತ್ತದೆ. ಸವಾಲುಗಳು ಬಂದಾಗ ಹೆದರಿ ಹಿಂತೆಗೆಯುವ ಪ್ರಯತ್ನವೂ ಕೂಡಾ ಸಾಧನೆಯ ಹಾದಿಗೆ ಮುಳ್ಳೇ.

ಇದನ್ನೂ ಓದಿ: Choosing The Right Pillow: ಸರಿಯಾದ ದಿಂಬನ್ನು ಆಯ್ಕೆ ಮಾಡುವುದು ಹೇಗೆ?

ಆರೋಗ್ಯ ಮುಖ್ಯ

ಆರೋಗ್ಯವನ್ನು ನಿರ್ಲಕ್ಷ್ಯ ಮಾಡುವುದು ಕೂಡಾ ಸಾಧನೆಗೆ ಪ್ರೇರಣೆಯಾಗದು. ಮಾನಸಿಕವಾಗಿ, ದೈಹಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲಕ್ಕಿಂತ ಮುಖ್ಯ. ಆರೋಗ್ಯ ಸರಿಯಾಗಿದ್ದರಷ್ಟೇ ಸಾಧನೆಯ ಹಾದಿ ಅನಾಯಾಸವಾಗಿರಬಹುದು.

Exit mobile version