ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿದೇಶಿ ಮಹಿಳೆಯರು ಕೂಡ ಸೀರೆಯನ್ನು ಪ್ರೀತಿಸುವಂತಹ (Foreigners Saree Swag) ಕೆಲಸ ಮಾಡುತ್ತಿದ್ದಾರೆ ಮೈಸೂರಿನ ಶಶಿಕಲಾ ಅಶೋಕ್. ಭಾರತೀಯ ಸಂಸ್ಕೃತಿ ಬಿಂಬಿಸುವ ಸೀರೆಗಳನ್ನು ಪರಿಚಯಿಸಿ, ಅವರಲ್ಲೂ ಸೀರೆ ಬಗ್ಗೆ ಪ್ರೇಮ ಹುಟ್ಟಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮೈಸೂರಿನ ಟೂರಿಸ್ಟ್‌ಗಳೇ ಸೀರೆ ಪ್ರೇಮಿಗಳು
“ ಪತಿ ಮೂಲತಃ ಟ್ರಾವೆಲ್ ಏಜೆನ್ಸಿ ನಡೆಸುತ್ತಿರುವವರು. ಸರಿ ಸುಮಾರು ದಶಕಗಳ ಹಿಂದೆ ವಿದೇಶದಿಂದ ಬಂದ ಪ್ರವಾಸಿಗರ ಪೈಕಿ ಕೆಲವರು ಸ್ಥಳೀಯ ಸಂಸ್ಕೃತಿಯನ್ನು ತಿಳಿದುಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದರು. ಒಂಟಿಕೊಪ್ಪಲ್‌ನಲ್ಲಿ ಹಳ್ಳಿ ಮನೆಯಂತಿದ್ದ ನಮ್ಮ ಮನೆಗೆ ಬಾಳೆ ಎಲೆ ಊಟಕ್ಕೆ ಬಂದವರಲ್ಲಿ, ಕೆಲವು ವಿದೇಶಿ ಮಹಿಳೆಯರು ನನ್ನ ಸೀರೆಯನ್ನು ನೋಡಿ ತಮಗೂ ಉಡಿಸಿಕೊಡುವಂತೆ ಹೇಳಿದರು. ನನ್ನ ಸೀರೆಗಳನ್ನೇ ಉಡಿಸಿಕೊಂಡು ಸಂಭ್ರಮಿಸಿದರು. ಮಲ್ಲಿಗೆ ಮುಡಿಸಿಕೊಂಡರು. ಬರಬರುತ್ತಾ ಈ ವಿಷಯ ಹರಡಿತು. ಬಂದ ವಿದೇಶಿ ಪ್ರವಾಸಿ ಮಹಿಳೆಯರು ಸೀರೆ ಡ್ರೆಪಿಂಗ್ ಬೇಡಿಕೆ ಇಡತೊಡಗಿದರು. ಪರಿಣಾಮ, ಸೀರೆ ಡ್ರೆಪಿಂಗ್ ಕುರಿತ ಕಾರ್ಯಾಗಾರ ಮಾಡಲಾರಂಭಿಸಿದೆ” ಎನ್ನುತ್ತಾರೆ ಶಶಿಕಲಾ ಅಶೋಕ್.
ವಿದೇಶಿಗರಿಗೆ ಸೀರೆ ಡ್ರೆಪಿಂಗ್
“ಮೈಸೂರಿಗೆ ಆಗಮಿಸುವ ಬಹುತೇಕ ವಿದೇಶಿ ಮಹಿಳೆಯರೆಲ್ಲಾ ಮೈಸೂರು ಉದ್ಯೋಗ್‌ಗೆ ಭೇಟಿ ನೀಡಿ ಸೀರೆಗಳನ್ನು ಖರೀದಿಸಿ ಬಂದಿರುತ್ತಾರೆ. ಆದರೆ ಅವರಿಗೆ ಸೀರೆ ಹೇಗೆ ಉಡುವುದು ಎಂಬುದು ಗೊತ್ತಿರುವುದಿಲ್ಲ. ಇಂಟರ್‌ನೆಟ್ ನೋಡಿದರೂ, ಪ್ರಾಕ್ಟಿಕಲ್ ಆಗಿ ಉಡಿಸಿದಾಗ ಅವರ ಸಂತಸ ಹೇಳತೀರದು. ಸೀರೆಯೊಂದಿಗೆ ಕೆಲವರು ಜಡೆ ಹಾಕಿಸಿಕೊಂಡು ಮಲ್ಲಿಗೆ ಹೂವನ್ನು ಮುಡಿಸಿಕೊಳ್ಳುತ್ತಾರೆ. ನಂತರ ಖುಷಿ ಪಟ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಇದು ಇತ್ತೀಚೆಗೆ ಸಾಮಾನ್ಯವಾದ ವಿಷಯವಾಗಿದೆ” ಎನ್ನುವ ಶಶಿಕಲಾ ಅಶೋಕ್‌ಗೆ ಈ ಕೆಲಸ ಸಂತಸ ನೀಡುತ್ತದಂತೆ.
ವಿದೇಶಿ ಮಹಿಳೆಯರ ಸೀರೆ ಲವ್
“ಬಾಲಿವುಡ್ ಸಿನಿಮಾಗಳಲ್ಲಿ ನೋಡಿದ ನಂತರ ಒಮ್ಮೆಯಾದರೂ ಸೀರೆ ಉಡಬೇಕೆಂಬ ಆಸೆ ಇದೀಗ ನೆರವೇರಿದೆ” ಎನ್ನುತ್ತಾರೆ ಇಸ್ರೇಲ್‌ನ ರೋನಿ. “ಸೀರೆಯನ್ನು ನೋಡಿದ್ದೆ, ಖರೀದಿಸಿದ್ದೆ. ಇದೀಗ ಉಡಿಸಿಕೊಂಡು ಖುಷಿ ಪಟ್ಟೆ” ಎನ್ನುತ್ತಾರೆ ಸೌತ್ ಕೊರಿಯಾದ ಎಲ್ಮಿರಾ. ಇನ್ನು ಫ್ರಾನ್ಸ್‌ನ ಎಲ್ಡೋಯಿ, ಬ್ರಿಟನ್‌ನ ಜಾರ್ವೈಸ್ ಕೂಡ ಈ ಮಾತುಗಳನ್ನೇ ಹೇಳುತ್ತಾರೆ. ಕಳೆದ ೨೦೧೦ರಲ್ಲಿ ಆರಂಭವಾದ ಈ ಸೀರೆ ಪರಿಣಯ ಇಂದಿಗೂ ಮುಂದುವರೆದಿದೆ. ನಮ್ಮ ನೆಲದ ಸಂಸ್ಕೃತಿಗೆ ಸಾಥ್ ನೀಡುತ್ತಿದ್ದೇವೆ ಎಂಬ ಖುಷಿಯಿದೆ. ವಿದೇಶಿ ಪ್ರವಾಸಿಗರಿಗೆ ಸೀರೆಯ ಸಂಕ್ಷೀಪ್ತ ಇತಿಹಾಸದೊಂದಿಗೆ ಆಚಾರ-ವಿಚಾರಗಳನ್ನು ಪರಿಚಯ ಮಾಡುವ ತನಕ ಬೆಳೆದಿದೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಶಶಿಕಲಾ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)