ಆಟ ಎಂದರೆ ಅದು ಮಕ್ಕಳ ಪಾಲಿನದ್ದು ಎಂದು ನೀವು ಅಂದುಕೊಂಡರೆ ತಪ್ಪಾದೀತು. ಕೇವಲ ಮಕ್ಕಳಿಗೆ ಮಾತ್ರ ಆಟ ಮುಖ್ಯವಲ್ಲ. ವಯಸ್ಸಿನ ಹಂಗಿಲ್ಲದೆ, ಆರೋಗ್ಯಕರ ಜೀವನಕ್ಕೆ ಸಮಸ್ತ ಪ್ರಾಣಿ ಜೀವರಾಶಿಗೆ ಆಟವೂ ಬಹುಮುಖ್ಯವಂತೆ! ಆರೋಗ್ಯಕರ ಜೀವನಕ್ಕೆ ಕೇವಲ ಉತ್ತಮ ಆಹಾರ, ನಿದ್ದೆಯಷ್ಟೇ ಸಿಕ್ಕರೆ ಸಾಲದು, ಆಟವೂ ಅಷ್ಟೇ ಮುಖ್ಯ ಎನ್ನುತ್ತದೆ ಮನಃಶಾಸ್ತ್ರ.
ಬೆಳಗ್ಗೆ ಒಮ್ಮೆ ಎದ್ದು ಒಂದು ವಾಕ್ ಹೋಗಿ ನೋಡಿ. ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ, ಬೆಳ್ಳಂಬೆಳಗ್ಗೆ ಎದ್ದ ಹಕ್ಕಿ ಪಕ್ಷಿಗಳು ತಮ್ಮ ದೈನಂದಿನ ಚಟುವಟಿಕೆ ಆರಂಭಿಸಿದ್ದರೂ ಅವರಲ್ಲೊಂದು ಚುರುಕಾದ ಆಟವಿರುತ್ತದೆ. ಹಾಕಿದ ಕಾಳನ್ನು ತಿನ್ನಲು ಬರುವ ಮೈನಾಗಳು, ಮರದಿಂದಿಳಿದು ಬಂದ ಅಳಿಲೂ ಹೊಂದಿಕೊಂಡು ಒಂದೇ ಜಾಗದಲ್ಲಿ ತಿನ್ನುವ ಜೊತೆಗೆ ಆಡುತ್ತಾ ಇರುತ್ತವೆ. ಅಮ್ಮನ ಹಾಲನ್ನು ಕುಡಿಯುತ್ತಿರುವ ಮರಿ ನಾಯಿಯೂ ಅಮ್ಮನ ಮೈಮೇಲೆ ಬಿದ್ದುಕೊಂಡು ಹಾಲು ಕುಡಿವ ಜೊತೆಗೆ ಆಡುತ್ತಾ ಇರುತ್ತದೆ. ಬೀದಿಬದಿ ಚಿಂದಿ ಆಯುವ ಮಕ್ಕಳು ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ, ಕೈಗೆ ಸಿಕ್ಕಿದ್ದನ್ನು ಹೆಕ್ಕಿ ಆಡುತ್ತಿರುತ್ತವೆ. ಒಟ್ಟಾರೆ ಆಟ ಎಂಬುದು ಬದುಕಿನ ಅಂಗ ಎಂಬುದನ್ನು ಮೊದಲು ಪ್ರತಿಯೊಬ್ಬರೂ ಅರಿಯಬೇಕು.
ನಿದ್ದೆ ಹಾಗೂ ಕನಸಿನ ಹಾಗೆ, ಅಥವಾ ಪಚನಕ್ರಿಯೆಯೂ ಸೇರಿದಂತೆ ನಮ್ಮ ದೇಹದ ಇತರ ಎಲ್ಲ ವ್ಯವಸ್ಥೆಯ ಹಾಗೆ ಆಟವೆಂಬುದು ಬಹಳ ಅಗತ್ಯ ಹಾಗೂ ಮುಖ್ಯ. ಸಾಮಾಜಿಕ ಹಾಗೂ ದೈಹಿಕ ಆರೋಗ್ಯಕ್ಕೆ ಆಟ ಬಹಳ ಮುಖ್ಯ. ಯಾವುದೇ ಹಕ್ಕಿ, ನಾಯಿ, ಬೆಕ್ಕು, ಹುಲಿ, ಜಿರಾಫೆಗಳಂತಹ ಪ್ರಾಣಿಗಳವರೆಗೆ ಒಮ್ಮೆ ಅವುಗಳ ಲೋಕದಲ್ಲಿ ಇಣುಕಿ ನೋಡಿ. ಅವರ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಆಟ ಇದ್ದೇ ಇರುತ್ತದೆ. ಇದು ನೈಸರ್ಗಿಕವಾದ ಕ್ರಿಯೆ. ಬೀದಿಬದಿಯ ನಾಯಿಮರಿಗಳನ್ನೇ ನೋಡಿ. ಅವುಗಳು ಆಡುವ ಮೂಡಿನಲ್ಲಿ ಸದಾ ಇರುತ್ತವೆ. ಈ ಮರಿಗಳು ದೊಡ್ಡವಾದ ನಂತರ ಅವುಗಳ ಜೀವನಕ್ರಮದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದೇ ಹೊರತು ಆಟ ಅವುಗಳ ದಿನನಿತ್ಯದ ಭಾಗವಾಗಿರುತ್ತದೆ. ಹಾಗಾಗಿ ಪ್ರಾಣಿಗಳಲ್ಲಿ ಮುಖ್ಯವಾಗಿ ಸಸ್ತನಿಗಳಿಗೆ ಆಟ ಬಹಳ ಮುಖ್ಯ.
ಬದುಕೆಂದರೆ ಕೇವಲ ಕೆಲಸ, ದುಡ್ಡು, ಆಸ್ತಿ ಅಷ್ಟೇ ಅಲ್ಲ. ನಮ್ಮ ಖುಷಿಗಳನ್ನು ನಾವು ಹುಡುಕಿಕೊಳ್ಳಬೇಕು. ದಿನದಲ್ಲಿ ಸ್ವಲ್ಪ ಹೊತ್ತಾದರೂ ನಮಗೆ ಸಂತಸ ಕೊಡುವ ಕೆಲಸಗಳಿಗೆ ನಾವು ಸಮಯ ಮೀಸಲಿಡಬೇಕು. ಯಾವುದರಲ್ಲಿ ದೇಹಕ್ಕೆ ಮನಸ್ಸಿಗೆ ಉಲ್ಲಾಸ ಸಿಗುತ್ತದೋ ಅಂಥದ್ದನ್ನು ಕಂಡುಕೊಳ್ಳಬೇಕು ಎನ್ನುತ್ತಾರೆ ಮನಃಶಾಸ್ತ್ರಜ್ಞ ಡಾ. ಸ್ಟುವರ್ಟ್ ಬ್ರೌನ್. ೮೯ರ ಹರೆಯದ ಇವರು ಕಳೆದ ೬೦ ವರ್ಷಗಳಿಂದ ಮಾನವ ಹಾಗೂ ಎಲ್ಲ ಪ್ರಾಣಿ ಸಂಕುಲಗಳಿಗೂ ಅಗತ್ಯವಾಗಿ ಬೇಕಾಗುವ ಆಟ ಎಂಬ ಬಗ್ಗೆ ಸಂಶೋಧನೆಯನ್ನೂ ನಡೆಸಿ, ಇದೇ ಕ್ಷೇತ್ರದಲ್ಲಿ ಕೌನ್ಸೆಲಿಂಗ್ ನಡೆಸುತ್ತಾರೆ.
ಇದನ್ನೂ ಓದಿ | Woman health tips | ಹೀಗಾದಲ್ಲಿ ಮಹಿಳೆ ತನ್ನ ಆರೋಗ್ಯಕ್ಕೆ ಗಮನ ಕೊಡುವುದು ಯಾವಾಗ?
ಡಾ ಸ್ಟುವರ್ಟ್ ಹೇಳುವಂತೆ, ಆಟವೆಂದರೆ, ಮೈದಾನಕ್ಕಿಳಿದೇ ಆಡುವುದು ಎಂಬ ಅರ್ಥವಲ್ಲ. ದಿನನಿತ್ಯದ ಕೆಲಸದ ನಡುವಿನ ಆಟವೂ ಇರಬಹುದು. ಮಕ್ಕಳಾದರೆ ಪ್ರತಿನಿತ್ಯ ಮೈದಾನಕ್ಕಿಳಿದು ಆಡುವುದು, ದೇಹಕ್ಕೆ ವ್ಯಾಯಾಮ ದೊರೆಯುವುದು, ಆ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಯಾಗುವುದು ಆಟದಲ್ಲಿ ಬಹಳ ಮುಖ್ಯವಾಗುತ್ತದೆ. ಆದರೆ ವಯಸ್ಕರ ಆಟ ಹಾಗೆಯೇ ಇರಬೇಕೆಂದೇನಿಲ್ಲ. ಇಲ್ಲಿ ದೇಹದಂಡನೆಗೆ ಮಾಡುವುದು ವ್ಯಾಯಾಮ ಆಟವಲ್ಲದೇ ಇರಬಹುದು. ನಿಮ್ಮ ತಂಟೆ ತಕರಾರುಗಳೂ ಆಟವೇ. ತಮಾಷೆಯಾಗಿ, ಖುಷಿಯಾಗಿ ಎಲ್ಲ ಕೆಲಸದ ಒತ್ತಡಗಳನ್ನು ಮರೆತು ಖುಷಿಕೊಡುವ ಕೆಲಸದಲ್ಲಿ ಮಗ್ನರಾಗುವುದು ಆ ಮೂಲಕ ಮನಸ್ಸು ಉಲ್ಲಸಿತವಾಗುವಂತೆ ನೋಡಿಕೊಳ್ಳುವುದು ಆಟದ ವಿಭಾಗಕ್ಕೇ ಬರುತ್ತದೆ, ಅದು ಪುಟ್ಟ ಮಕ್ಕಳ ಜೊತೆಗಿನ ತುಂಟಾಟದ ಲವಲವಿಕೆಯ ಕ್ಷಣಗಳೂ ಆಗಬಹುದು, ಅಥವಾ ಪ್ರವಾಸದ ಮೂಲಕ ಜಗತ್ತು ಮರೆಯುವುದೂ ಆಗಿರಬಹುದು ಎಂಬುದನ್ನು ಮೊದಲು ಅರಿಯಬೇಕು. ಅದಕ್ಕೆ ಸಮಯ ನೀಡಬೇಕು ಎಂದು ಅವರು ಹೇಳುತ್ತಾರೆ. ಇಂಥವಕ್ಕೆ ಸಮಯ ನೀಡುವ ಮೂಲಕ ಸಿಗುವ ಮಾನಸಿಕ ನೆಮ್ಮದಿಯೇ ದೈಹಿಕ ಆರೋಗ್ಯದ ಕೀಲಿಕೈಯಾಗುತ್ತದೆ ಎಂಬುದು ಅವರ ಅಂಬೋಣ.
ಡಾ. ಸ್ಟುವರ್ಟ್ ಈ ವಿಷಯಾಧಾರಿತ ʻPlay: How it Shapes the Brain, Opens the ImAgination, and Invigorates the Soulʼ ಎಂಬ ಪುಸ್ತಕವನ್ನು ಬರೆದಿದ್ದಾರೆ.
ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!