Site icon Vistara News

Parenting Tips: ಮಕ್ಕಳು ಹೀಗೆಲ್ಲ ನಡೆದುಕೊಂಡರೆ ನಿಮ್ಮ ಹಾಗೂ ಅವರ ನಡುವೆ ಎಲ್ಲವೂ ಸರಿಯಿಲ್ಲ ಎಂದರ್ಥ!

angry kid1

ನಿಮ್ಮ ಮಕ್ಕಳು ನಿಮ್ಮ ಜೊತೆ ಹೇಗೆ ವ್ಯವಹರಿಸುತ್ತಾರೆ ಎಂಬುದರ ಮೇಲೆ ನಿಮ್ಮ ಹಾಗೂ ನಿಮ್ಮ ಮಗುವಿನ ನಡುವಿನ ಸಂಬಂಧ ಇದೆ ಎಂಬುದು ತಿಳಿಯುತ್ತದೆ. ಸರಿಯಾದ ಕ್ರಮದಲ್ಲಿ ನಾವು ಮಕ್ಕಳ ಮೇಲೆ ಪ್ರೀತಿ ಹಾಗೂ ವಿಶ್ವಾಸ ತೋರಿಸಿದರೆ ಮಕ್ಕಳ ಜೀವನದಲ್ಲಿಯೂ ಒಂದು ಸಂಪೂರ್ಣತೆ, ಸಂತೃಪ್ತಿ ಇರುತ್ತದೆ. ಇದಿಲ್ಲ ಎಂದರೆ, ನಿಮ್ಮ ಹಾಗೂ ಮಕ್ಕಳ ನಡುವೆ ಏನೋ ಕೊರತೆಯಿದೆ ಎಂದೇ ಅರ್ಥ. ಆಗ ನೀವು ನೀಡಬೇಕಾದ ಪ್ರೀತಿಯ ಪರಿಭಾಷೆಯನ್ನು ಕೊಂಚ ಬದಲಾಯಿಸಬೇಕು ಎಂದೂ ಅರ್ಥ. ಹಾಗಾದರೆ ಬನ್ನಿ, ಮಕ್ಕಳ ಯಾವ ಸೂಕ್ಷ್ಮ ಬದಲಾವಣೆಗಳು ನಿಮ್ಮ ಹಾಗೂ ಅವರ ನಡುವೆ ಪ್ರೀತಿಯ ಕೊರತೆಯಿದೆ ಎಂಬುದನ್ನು ಹೇಳುತ್ತದೆ ಎಂದು ನೋಡೋಣ.

1. ನಿಮ್ಮ ಮಕ್ಕಳು ನಿಮ್ಮನ್ನು ದೂರುನುದು ಹೆಚ್ಚಾಗಿದೆಯಾ? ನೀವು ನಿಮ್ಮ ಕಚೇರಿಯಿಂದ ಬೇಗ ಮನೆಗೆ ಬರುತ್ತಿಲ್ಲ ಎಂದೋ, ಅವರ ಶಾಲೆಯ ಸಮಾರಂಭಕ್ಕೆ ನೀವು ಬಂದಿಲ್ಲ ಎಂದೋ, ನೀವು ಅವರಿಗೆ ಗಮನ ಕೊಡುತ್ತಿಲ್ಲ ಎಂದೋ ಅವರಿಗೆ ನಿಮ್ಮ ಮೇಲೆ ಸದಾ ಆಕ್ಷೇಪಗಳಿರುತ್ತದೆ ಎಂದರೆ, ಖಂಡಿತವಾಗಿಯೂ ನೀವು ನಿಮ್ಮ ಹಾಗೂ ನಿಮ್ಮ ಮಗುವಿನ ನಡುವಿನ ಸಂಬಂಧಕ್ಕೆ ರೀವರ್ಕ್‌ ಮಾಡಬೇಕಾಗಿದೆ ಎಂದೇ ಅರ್ಥ.

2. ಮಕ್ಕಳು ತರಲೆ, ಹಠ ಮಾಡುತ್ತವೆ ನಿಜ. ಅವರ ಈ ಹಠ, ತರಲೆ ಇದ್ದಿದ್ದೇ ಎಂದು ನಾವು ಉಡಾಫೆ ಮಾಡುತ್ತೇವೆ ಎಂಬುದೂ ಸತ್ಯವೇ. ಆದರೆ, ಎಲ್ಲ ಹಠಕ್ಕೂ ಉಡಾಫೆಯೇ ಮದ್ದಲ್ಲ. ಕೆಲವೊಮ್ಮೆ ಮಕ್ಕಳು ಹಠ ಯಾಕೆ ಮಾಡುತ್ತಾರೆಂದರೆ, ಅವರಿಗೆ ನಿಮ್ಮ ಪ್ರೀತಿಯ ಕೊರತೆಯಿರುತ್ತದೆ. ಅವರಿಗೆ ನಿಮ್ಮ ಗಮನದ ಅವಶ್ಯಕತೆಯಿರುತ್ತದೆ. ಅವರಿಗೆ ಆಗಾಗ ನಿಮ್ಮ ಪ್ರೀತಿ ಭದ್ರತೆಯನ್ನು ತೋರಿಸುವ ಅಗತ್ಯವೂ ಇರುತ್ತದೆ ಎಂಬುದನ್ನು ನೆನಪಿಡಿ.

3. ಕೆಲವೊಮ್ಮೆ ಮಕ್ಕಳು ವಿಚಿತ್ರವೆನಿಸುವ ರೀತಿಯಲ್ಲೇ ನಡೆಯುತ್ತಾರೆ. ಯಾವುದಾದರೊಂದು ವಿಷಯದ ವಿರುದ್ಧ ಹೋರಾಡಲು ಆಕ್ರಮಣಕಾರಿ ಧೋರಣೆಯನ್ನು ನಿಮ್ಮ ಮೇಲೆಯೂ ತೋರಿಸಬಹುದು. ಹಾಗಾದರೆ ಇಂಥ ಸಮಯ ಕೂಗಾಡುವುದು ಉತ್ತರವಲ್ಲ. ಬೆಣ್ಣೆಯಿಂದ ಕೂದಲು ತೆಗೆದಂತೆ ವ್ಯವಹರಿಸಬೇಕಾಗುತ್ತದೆ. ಮೆದುವಾಗಿ, ಕಾಳಜಿಯಿಂದ ಸಮಾಧಾನಚಿತ್ತದಿಂದ ಇದನ್ನು ಸರಿ ಪಡಿಸುವುದು ಹೆತ್ತವರ ಕರ್ತವ್ಯ.

4. ಮಕ್ಕಳು ನಿಮ್ಮ ಜೊತೆ ಮಾತನಾಡುತ್ತಿಲ್ಲ ಅಥವಾ ಇದ್ದಕ್ಕಿದ್ದಂತೆ ಮಾತು ನಿಲ್ಲಿಸುವುದು ಅಥವಾ ಒಂದು ವಿಚಿತ್ರ ಮೌನ ನಿಮ್ಮ ನಡುವೆ ಬೆಳೆದಂತೆ ನಿಮಗೆ ಅನಿಸಿದರೆ, ಅವರಿಗೆ ನೋವುಂಟು ಮಾಡಿರುವ ಏನೋ ಒಂದು ನಿಮ್ಮ ನಡುವೆ ನಡೆದಿದೆ ಎಂದೇ ಅರ್ಥ. ಯಾವುದೋ ಒಂದು ವಿಷಯ ಅವರ ಮನಸ್ಸನ್ನು ತಿನ್ನುತ್ತಿದೆ ಎಂದೇ ಅರ್ಥ. ಹೀಗಾದಾಗ ಮಕ್ಕಳ ಜೊತೆಗೊಂದು ವಾಕ್‌ ಹೋಗಿ. ಅವರನ್ನು ಎಲ್ಲಾದರೂ ಹೊರಗೆ ಕರೆದುಕೊಂಡು ಹೋಗಿ, ನಿಧಾನವಾಗಿ ಅವರ ಮನಸ್ಸಿನಲ್ಲಿರುವ ನೋವನ್ನು ತಿಳಿಯಲು ಪ್ರಯತ್ನಿಸಿ.

5. ನಿಮ್ಮ ಮಕ್ಕಳ ನಡವಳಿಕೆಯಲ್ಲಿ ಇದ್ದಕ್ಕಿದ್ದಂತೆ ವಿಚಿತ್ರ ಬದಲಾವಣೆ ಕಂಡಿದೆಯಾ? ಚೆನ್ನಾಗಿದ್ದ ಮಕ್ಕಳು ಇದ್ದಕ್ಕಿದ್ದಂತೆ ತಮ್ಮ ಕೋಣೆಯನ್ನು ಅಸ್ತವ್ಯಸ್ತವಾಗಿ ಇಟ್ಟುಕೊಳ್ಳುವುದು, ಅಥವಾ ಗೆಳೆಯರನ್ನು ಮನೆಗೆ ಕರೆದುಕೊಂಡು ಬರದೇ ಇರುವುದು ಇತ್ಯಾದಿ ಇತ್ಯಾದಿ ವಿಚಿತ್ರ ಬದಲಾವಣೆ ಕಂಡರೆ ಮಕ್ಕಳ ಮೇಲೆ ಗಮನ ಕೊಡಿ. ಅವರಿಗೊಂದು ರುಚಿಕಟ್ಟಾದ ಅವರ ಇಷ್ಟದ ಊಟ ಮಾಡಿ ಬಡಿಸಿ, ಅವರ ಜೊತೆ ಸಮಯ ಕಳೆಯಿರಿ.

ಇದನ್ನೂ ಓದಿ: Parenting Tips: ಮಕ್ಕಳಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆ ಏಕೆ ಬೇಕು?

6. ಬೇರೆಯವರ ಎದುರಲ್ಲಿ ತಮ್ಮ ಹೆತ್ತವರನ್ನು ಮಕ್ಕಳು ಎಂದಿಗೂ ಚಿಕ್ಕವರನ್ನಾಗಿ ಮಾಡಲಾರರು. ಹಾಗೇನಾದರೂ ಮಕ್ಕಳು ಇನ್ನೊಬ್ಬರ ಎದುರಲ್ಲಿ ನಿಮ್ಮ ವಿರುದ್ಧ ಮಾತಾಡಿದರು ಅಥವಾ ನಿಮ್ಮನ್ನು ನಾಚಿಗೆಗೀಡುವಾಡುವ ಪ್ರಸಂಗಕ್ಕೆ ತಳ್ಳಿದರು ಎಂದಾದಲ್ಲಿ ಖಂಡಿತವಾಗಿಯೂ ನಿಮ್ಮ ಹಾಗೂ ಅವರ ನಡುವಲ್ಲಿ ಎಲ್ಲವೂ ಸರಿಯಿಲ್ಲ ಎಂದೇ ಅರ್ಥ. ಅವರ ಈ ಉದ್ಧಟತನದ ನಡೆಗೆ ಕಾರಣ ಹುಡುಕಲು ಸಮಾಧಾನದಿಂದ ಅವರ ಜೊತೆ ಮಾತಿಗಿಳಿಯಿರಿ. ಒಂದೆರಡು ಬಾರಿ ಅವರ ಜೊತೆ ನಿಧಾನವಾಗಿ ಮಾತನಾಡಿದ ಮೇಲೆ ನಿಮಗೆ ಇದಕ್ಕೆ ಕಾರಣ ಅವರ ಮಾತಿನಲ್ಲಿ ಸಿಗಬಹುದು.

7. ಇತ್ತೀಚೆಗೆ ಮಕ್ಕಳು ಕೋಣೆಯಲ್ಲಿ ಬಾಗಿಲು ಹಾಕಿ ತಮ್ಮದೇ ಪ್ರಪಂಚದಲ್ಲಿ ಮುಳುಗಿರುತ್ತಾರೆ ಎಂದಾದಲ್ಲಿ ಕೂಡಾ ನಿಮ್ಮ ನೆರವಿನ, ಗಮನದ ಅವಶ್ಯಕತೆ ಅವರಿಗಿದೆ ಎಂದೇ ಅರ್ಥ.

8. ಮಕ್ಕಳು ಆಗಾಗ ನಿಮ್ಮ ಬಳಿ, ನಾನು ಹೇಗೆ ಕಾಣುತ್ತೇನೆ? ಇದು ಸರಿಯಾಗಿದೆಯಾ? ಇತ್ಯಾದಿ ಪ್ರಶ್ನೆ ಕೇಳುತ್ತಿದ್ದಾರೆ ಎಂದಾದಲ್ಲಿ ಕೂಡಾ ಮಗುವಿಗೆ ನಿಮ್ಮ ಗಮನದ ಅವಶ್ಯಕತೆ ಇದೆ ಎಂದೇ ಅರ್ಥ. ಅವರ ಆತ್ಮವಿಶ್ವಾಸ ಹೆಚ್ಚುವ ಮಾತನ್ನಾಡಿ.

9. ಮಕ್ಕಳು ನಿಮ್ಮ ಜೊತೆ ಇತ್ತೀಚೆಗೆ ಉದ್ಧಟತನದ ಮಾತನ್ನಾಡಲು ಆರಂಭಿಸಿದ್ದಾರೆ ಅಥವಾ ನೀವು ಏನು ಹೇಳಿದರೂ ಉಲ್ಟಾ ಹೇಳುತ್ತಾರೆ ಎಂದಾದಲ್ಲಿ ಖಂಡಿತವಾಗಿಯೂ ಅಲ್ಲೂ ಏನೋ ಸಮಸ್ಯೆಯಾಗಿದೆ ಎಂದೇ ಅರ್ಥ. ಮಕ್ಕಳು ನಿಮ್ಮ ಪ್ರೀತಿ ಪಾತ್ರರು ಎಂಬ ಅರಿವನ್ನು ಅವರಿಗೆ ಮೂಡಿಸಲು ಆಗಾಗ ಪುಟ್ಟ ಪುಟ್ಟ ಕ್ಯೂಟ್‌ ನೋಟ್‌ಗಳನ್ನು ಬರೆದು ಕೊಡಲು ಆರಂಭಿಸಿ. ನೀವು ಅವರಿಗೆ ಎಷ್ಟು ಮುಖ್ಯ ಎಂಬುದನ್ನು ಪ್ರೀತಿಯಲ್ಲೇ ಪ್ರದರ್ಶಿಸಿ.

ಇದನ್ನೂ ಓದಿ: Parenting Tips: ಹೆತ್ತವರ ಹಾಗೂ ಮಕ್ಕಳ ನಡುವಿನ ಆರೋಗ್ಯಕರ ಸಂಬಂಧ ಬೆಳೆಯಲು ಸರಳ ಸೂತ್ರಗಳು!

Exit mobile version