Site icon Vistara News

Parenting tips | ಮಕ್ಕಳನ್ನು ಕಲಿಕೆಗೆ ಪ್ರೇರೇಪಿಸಲು 6 ವೈಜ್ಞಾನಿಕ ದಾರಿಗಳು!

parenting tips

ಮಕ್ಕಳನ್ನು ಬೆಳೆಸುವುದು ಮಕ್ಕಳಾಟವಲ್ಲ. ಅದರಲ್ಲೂ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಳವೆಯಲ್ಲೇ ಎಲ್ಲ ಸಾಧ್ಯತೆಗಳಿಗೂ ತೆರೆದುಕೊಂಡೇ ಹುಟ್ಟುವ ಮಕ್ಕಳಿಗೆ ಯಾವುದನ್ನು ಹೇಗೆ ಯಾವಾಗ ಎಷ್ಟು ಕಲಿಸಬೇಕೆಂಬ ಗೊಂದಲ ಪೋಷಕರಿಗೆ ಇದ್ದಿದ್ದೇ. ಶಾಲೆಗಳಲ್ಲೂ ಈಗ ಶಿಕ್ಷಣದ ಕ್ರಮ ಬದಲಾಗಿದೆ. ಪುಟ್ಟ ಮಕ್ಕಳಿಗೆ ಶಿಸ್ತುಬದ್ಧವಾಗಿ ಕಲಿಸುವುದಕ್ಕಿಂತ ಆಡಾಡುತ್ತಾ, ಅವರನ್ನು ಪ್ರೇರೇಪಿಸುವ ಬಗೆಯ ನಾನಾ ತಂತ್ರಗಳನ್ನು ಉಪಯೋಗಿಸುವ ಕಲಿಕೆಯ ಪದ್ಧತಿಯೂ ನಡೆಯುತ್ತಿದೆ. ಹೀಗಿದ್ದರೂ ಎಲ್ಲ ಮಕ್ಕಳಿಗೂ ಒಂದೇ ಬಗೆಯ ತಂತ್ರಗಳೂ ಕೆಲಸ ಮಾಡುವುದಿಲ್ಲ. ಮಕ್ಕಳು ಕಲಿಕೆಯಲ್ಲಿ ಹಿಂದೆ ಬೀಳುವಾಗ, ಅವರನ್ನು ಹೊಡೆಯದೆ, ಬಡಿಯದೆ ನಯವಾದ ಮಾತುಗಳಲ್ಲಿ ಮುಂದಿನ ಹೆಜ್ಜೆಯತ್ತ ಪ್ರೇರೇಪಿಸುವುದೇ ಈಗ ಮಕ್ಕಳ ಹೆತ್ತವರಿಗೆ, ಶಿಕ್ಷಕರಿಗೆ ಇರುವ ದೊಡ್ಡ ಸವಾಲು. ಹಾಗಾದರೆ, ಮಕ್ಕಳಿಗೆ ಹೀಗೆ ಕಲಿಕೆಯತ್ತ ಸ್ಪೂರ್ತಿ ನೀಡುವ ತಂತ್ರಗಳು ಯಾವುವು? ಯಾವ ಮಾದರಿಯಲ್ಲಿ ಮಕ್ಕಳಿಗೆ ತಿಳಿ ಹೇಳಿದರೆ ಅವರಿಗೆ ಮುನ್ನುಗ್ಗಲು ಪ್ರೇರಣೆ ದೊರೆಯುತ್ತದೆ ಎಂಬ ವೈಜ್ಞಾನಿಕವಾಗಿ ಸಾಬೀತಾದ ಕೆಲ ದಾರಿಗಳು ಇಲ್ಲಿವೆ.

೧. ಪ್ರೇರೇಪಣೆ ನೀಡುವುದನ್ನೇ ನಿಲ್ಲಿಸಿ: ನಿಮ್ಮ ಮಗು ಪ್ರೇರೇಪಿಸಿದಷ್ಟೂ ಆ ವಿಷಯದ ಬಗ್ಗೆ ಉತ್ಸಾಹ ತೋರುವುದನ್ನು ಕಡಿಮೆ ಮಾಡುತ್ತದೆ ಅಂತ ನಿಮಗನ್ನಿಸಿದರೆ ಖಂಡಿತ ಪ್ರೋತ್ಸಾಹ ಕೊಡುವ ಕೆಲಸವನ್ನು ನಿಲ್ಲಿಸಿ. ಒತ್ತಾಯದಿಂದ ಕಲಿಕೆ ಸಾಧ್ಯವಿಲ್ಲ. ನಿಮ್ಮ ಮಗು ಈ ಮಾದರಿಯಲ್ಲಿ ಕಲೆಕೆಗೆ ಆಸಕ್ತಿ ಕಂಡುಕೊಡುತ್ತಿಲ್ಲ ಎಂಬುದನ್ನು ಅರಿತುಕೊಳ್ಳಿ. ಇದರರ್ಥ ಅದಕ್ಕೆ ಬೇರೆ ಮಾರ್ಗದ ಅಗತ್ಯವಿದೆ.

೨. ಸಹಾಯ ಮಾಡಿ: ಮಕ್ಕಳನ್ನು ಕಂಟ್ರೋಲ್‌ ಮಾಡುವ ಬದಲು ಸಹಾಯ ಮಾಡಿ. ಸಾಂಪ್ರದಾಯಿಕ ಮಾದರಿಗಳಾದ ಹೊಗಳುವುದು, ಏನಾದರೂ ಗಿಫ್ಟ್‌ ಕೊಡುವುದು, ಬೈಯುವುದು, ಹೊಡೆಯುವುದು ಎಂಬ ನಾಲ್ಕು ವಿಧಾನಗಳು ಮತ್ತೊಬ್ಬರ ಭಾವನೆಯನ್ನು ಕಂಟ್ರೋಲ್‌ ಮಾಡುವ ವಿಧಾನಗಳು. ಕಂಟ್ರೋಲ್‌ ಮಾಡುವ ಪೇರೆಂಟಿಂಗ್‌ ಯಾವತ್ತಿಗೂ ಆ ಕ್ರಿಯೆಯೊಂದನ್ನು ಖುಷಿಯಿಂದ ಮಾಡುವ ಅವಕಾಶ ಕಟ್ಟಿಕೊಡುವುದಿಲ್ಲ. ಆದ್ದರಿಂದ ಮಕ್ಕಳಿಗೆ ಸ್ವಾತಂತ್ರ್ಯ ಕೊಡಿ. ಆ ಸ್ವಾತಂತ್ರ್ಯದ ಮೂಲಕ ಅವರಾಗಿ ಆಸಕ್ತಿ ತೆಗೆದುಕೊಂಡು ಕಲಿಯುವಂತೆ ಮಾಡಿ.

ಇದನ್ನೂ ಓದಿ | Baby crying | ಮಗುವಿನ ಅಳು ನಿಲ್ಲಿಸುವ ಸುಲಭೋಪಾಯ ಕಂಡು ಹಿಡಿದರು ಜಪಾನೀಯರು!

3. ಇಷ್ಟಪಡುವಂತೆ ಮಾಡಿ: ಯಾವುದೇ ಕಲಿಕೆಯನ್ನು ಮಜವಾಗಿ ತೆಗೆದುಕೊಳ್ಳಲು ಪ್ರೇರಣೆ ನೀಡಿ. ಮಕ್ಕಳು ಹೋಂವರ್ಕ್‌ ಮುಗಿಸಿದರೆ, ಗ್ರೇಡ್‌ ಸಿಗುವುದಿಲ್ಲ ಎಂಬ ಮನಸ್ಥಿತಿಯಿಂದ ಹೊರಬಂದು ಅದೇ ಹೋಂವರ್ಕನ್ನು ಪ್ರತಿನಿತ್ಯ ಇಷ್ಟಪಟ್ಟು ಮಾಡುವಂಥ ವಾತಾವರಣ ಕಲ್ಪಿಸಿ ಅವರಿಗೆ ಅವರದ್ದೇ ಆದ ಆಸಕ್ತಿಗಳನ್ನು ಬೆಳೆಸಿಕೊಳ್ಳಲು ಸ್ವಾತಂತ್ರ್ಯ ನೀಡಿ. ಮಕ್ಕಳಲ್ಲಿ ವಿವಿಧ ವಿಷಯಗಳಲ್ಲಿ ಕುತೂಹಲ ಹೆಚ್ಚಿಸುವಂತೆ ಮಾಡಿ. ಮಕ್ಕಳಿಗೆ ಯಾವುದಾದರೊಂದು ವಿಷಯ ಕಷ್ಟವಾದರೆ ಅದನ್ನೊಂದು ಚಾಲೆಂಜ್‌ ಆಗಿ ಸ್ವೀಕರಿಸಲು ಪ್ರೇರಣೆ ನೀಡಿ. ಕಷ್ಟದ ವಿರುದ್ಧ ಜಯಿಸುವ ಮಾದರಿಯಲ್ಲಿ ಅಲ್ಲ. ಅವರು ಮಾಡುವ ಕೆಲಸವನ್ನು ಮಕ್ಕಳ ಕೆಲಸವೆಂದು ಮೂದಲಿಸಬೇಡಿ. ʻನೋ ಸ್ಕೂಲ್‌ ವರ್ಕ್‌ ಡೇʼ ಎಂಬಂಥ ರಿವಾರ್ಡುಗಳನ್ನು ಕೊಡಬೇಡಿ.

4. ನೀವೂ ಭಾಗಿಯಾಗಿ: ಖಂಡಿತವಾಗಿಯೂ ಕೆಲವು ಕ್ರಿಯೆಗಳು ನಿಜಕ್ಕೂ ಅವರಿಗೆ ಮಜಾ ಕೊಡಲಾರವು. ಅಂತಹ ಸಂದರ್ಭಗಳಲ್ಲಿ ಮಕ್ಕಳ ಜೊತೆಗೆ ನೀವೂ ಭಾಗಿಯಾಗಿ ಅವರನ್ನು ಕೆಲಸ ಮಾಡಿ ಮುಗಿಸುವತ್ತ ಪ್ರೇರೇಪಿಸಿ. ಇನ್ನೂ ಕೆಲವೊಂದು ಕಲಿಕೆಯ ಆರಂಭದಲ್ಲಿ ಬಹಳ ಕಷ್ಟವೆನಿಸುತ್ತದೆ. ಆದರೆ ಒಮ್ಮೆ ಅರ್ಥವಾದರೆ, ಪದೇ ಪದೇ ಅಭ್ಯಾಸ ಮಾಡುತ್ತಲೇ ಹೋದರೆ ಅವರಿಗೆ ನಮ್ಮ ಪ್ರೋತ್ಸಾಹದ ಬಲವಿದ್ದರೆ ನಿಧಾನವಾಗಿ ಆ ಕೆಲಸದಲ್ಲಿ ಆಸಕ್ತಿ ಬೆಳೆಸಿಕೊಂಡು ಮುನ್ನುಗ್ಗುತ್ತಾರೆ. ಈಜು ಕಲಿಕೆಯಲ್ಲಿ ಮೊದಲು ನೀರಿಗಿಳಿಯಲು ಭಯವಾಗಬಹುದು, ಆದರೆ ಕ್ರಮೇಣ ಭಯ ನಿವಾರಣೆಯಾಗಿ ಈಜು ಇಷ್ಟದ ವಿಷಯವೂ ಆಗಬಹುದು!

೫. ಅವರದೇ ನಿರ್ಧಾರವಿರಲಿ: ಅವರದ್ದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಿಡಿ. ಬಹಳಷ್ಟು ಸಾರಿ ಪೋಷಕರು, ಮಕ್ಕಳಿಗೆ ನೀನು ಸಣ್ಣವನು/ಳು, ನಿನ್ನ ನಿರ್ಧಾರಗಳೇನಿದ್ದರೂ ನನ್ನವು ಎಂಬಂತೆ ವರ್ತಿಸುತ್ತಾರೆ. ಮಕ್ಕಳು ಗೊತ್ತಾಗದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಭಯವೇ ಹೆಚ್ಚು. ಆದರೆ, ಮಕ್ಕಳಿಗೆ ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಬಿಡಿ. ಅವರ ನಿರ್ಧಾರಗಳಿಗೆ ನಿಮ್ಮ ಸಹಾಯ ಇರಲಿ ಎಂಬುದಷ್ಟೇ ನೆನಪಿಡಿ.

೬. ಸುಲಭದಿಂದ ಕಷ್ಟಕ್ಕೆ: ಯಾವುದೇ ಕ್ರಿಯೆ ತುಂಬ ಸುಲಭವಿದ್ದರೆ ಮಗು ಬೇಗನೆ ಮಾಡಿ ಮುಗಿಸುತ್ತದೆ. ತುಂಬ ಕಷ್ಟವಿದ್ದರೆ ಮಾಡುವ ಆಸಕ್ತಿಯೇ ಕಳೆದುಕೊಳ್ಳಬಹುದು. ಹಾಗಾಗಿ ಯಾವುದೇ ಕಲಿಕೆಯಲ್ಲೂ ಮೆಟ್ಟಿಲುಗಳು ಏಕಪ್ರಕಾರವಾಗಿರುವಂತೆ ನೋಡಿಕೊಳ್ಳಿ. ಮಕ್ಕಳು ಹಂತ ಹಂತವಾಗಿ ಮೇಲೇರಲಿ. ಆಗ ಮಕ್ಕಳಿಗೆ ಅಭಿವೃದ್ಧಿ ಸಾಧಿಸುವ ಮನಸ್ಥಿತಿ ಬರುತ್ತದೆ. ಒಂದೇ ಬಗೆಯ ಕ್ರಿಯೆ ನಡೆಯುತ್ತಿದ್ದರೆ, ಅಲ್ಲಿ ಬೆಳವಣಿಗೆ ಇರುವುದಿಲ್ಲ. ಮಗುವಿಗೆ ತಾನಿದರಲ್ಲಿ ಪಳಗಿಬಿಟ್ಟೆ ಎಂಬ ಮನಸ್ಥಿತಿ, ಅತಿಯಾದ ಆತ್ಮವಿಶ್ವಾಸಕ್ಕೆ ಕಾರಣವಾಗಬಹುದು. ಹಾಗಾಗಿ, ಆತ್ಮವಿಶ್ವಾಸ ವೃದ್ಧಿಯಾಗುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯ.

ಇದನ್ನೂ ಓದಿ | No marriage movement | ಮದುವೆ, ಮಕ್ಕಳು ಯಾವುದೂ ಬೇಡ: ಯುವತಿಯರಲ್ಲೀಗ ಹೊಸ ಟ್ರೆಂಡ್‌!

Exit mobile version