Site icon Vistara News

Parenting Tips: ಮಕ್ಕಳಿಗೆ ಹುಟ್ಟುಹಬ್ಬದ ಸಂಭ್ರಮಾಚರಣೆ ಏಕೆ ಬೇಕು?

birthday

ಮಕ್ಕಳ ಜೀವನದಲ್ಲಿ, ಚಾತಕ ಪಕ್ಷಿಯಂತೆ ಪ್ರತಿ ವರ್ಷ ಅವರನ್ನು ಕಾಯುವಂತೆ ಮಾಡುವ ಏಕೈಕ ದಿನವೆಂದರೆ ಅದು ಅವರ ಹುಟ್ಟುಹಬ್ಬ! ಮಕ್ಕಳಿಗೆ ಹುಟ್ಟುಹಬ್ಬ ಎಂದರೆ ನಿಜವಾಗಿಯೂ ಹಬ್ಬ, ಸಡಗರ, ಬದುಕಿನ ಒಂದು ಮೈಲಿಗಲ್ಲು. ಹದಿಹರೆಯಕ್ಕೆ ಬಂದ ಮಕ್ಕಳಲ್ಲೂ ಈ ಸಡಗರವೇನೂ ಕಡಿಮೆಯಾಗುವುದಿಲ್ಲ. ಹುಡುಗು ಬುದ್ಧಿ ಕಡಿಮೆಯಾಗಿ ನಿಧಾನವಾಗಿ ಒಂದೊಂದೇ ವರ್ಷ ಜಾರಿ ಮುಂದಡಿಯಿಡುತ್ತಿದ್ದರೆ, ಇಂತಹ ದಿನಗಳು ಸಹಜವಾಗತೊಗುತ್ತದೆ. ಆದರೆ ಬಹಳಷ್ಟು ಸಾರಿ, ಮಕ್ಕಳ ಹುಟ್ಟುಹಬ್ಬದ ಆಚರಣೆಯ ವಿಷಯದಲ್ಲಿ ಪೋಷಕರು ಗೊಂದಲಕ್ಕೆ ಬೀಳುವುದುಂಟು. ಹುಟ್ಟುಹಬ್ಬಕ್ಕೆ ಇಷ್ಟೆಲ್ಲ ಸಂಭ್ರಮ ಬೇಕಾ ಎಂದು ಯೋಚನೆ ಮೂಡುವುದುಂಟು.

ಮಕ್ಕಳ ಹುಟ್ಟುಹಬ್ಬದ ಪಾರ್ಟಿಗಳು ಕೇವಲ ಪಾರ್ಟಿಗಳಾಗಿರುವುದಿಲ್ಲ. ಈಗಿನ ಕಾಲದಲ್ಲಿ ಮಕ್ಕಳ ಹುಟ್ಟುಹಬ್ಬದ ಸಂಭ್ರಮಗಳು ಯಾವ ಮದುವೆಗೂ ಕಮ್ಮಿಯಿಲ್ಲದಂತೆ ಭರ್ಜರಿಯಾಗಿಯೇ ನಡೆಯುತ್ತವೆ. ತಮ್ಮ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಪ್ರತಿಯೊಬ್ಬ ಪೋಷಕರೂ ಮಕ್ಕಳ ಹುಟ್ಟುಹಬ್ಬವನ್ನು ಸಂತೋಷವಾಗಿ ಆಚರಿಸುತ್ತಾರೆ. ಪುಟ್ಟ ಮಕ್ಕಳ ಹುಟ್ಟುಹಬ್ಬಗಳ ಗಮ್ಮತ್ತು, ಸಂಭ್ರಮ, ಖುಷಿಗಳು ಬದುಕಿನ ಕೊನೆಯ ಗಳಿಗೆಯವರೆಗೂ ನೆನಪಿನಲ್ಲಿ ಇಡಬಹುದಾದ ಗಳಿಗೆಗಳೇ ಆದರೂ ಅದನ್ನೂ ಮೀರಿದ್ದು ಕೂಡಾ ಹುಟ್ಟುಹಬ್ಬದಲ್ಲಿದೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲೂ ಹುಟ್ಟುಹಬ್ಬದ ಆಚರಣೆಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಒಮ್ಮೆಯಾದರೂ ಯೋಚಿಸಿದ್ದೀರಾ? ಅದೇನೆಂದು ನೋಡೋಣ.

1. ಮಕ್ಕಳು, ಮುಖ್ಯವಾಗಿ ಮೂರ್ನಾಲ್ಕು ವರ್ಷಕ್ಕಿಂತ ಹೆಚ್ಚು ಪ್ರಾಯದ ಮಕ್ಕಳು ಹುಟ್ಟುಹಬ್ಬವೆಂದರೆ ಹಬ್ಬದಂತೆ ಸಂಭ್ರಮಿಸುತ್ತಾರೆ. ಅವರ ವಯಸ್ಸಿನ ಮಕ್ಕಳೊಂದಿಗೆ ಕುಣಿದು ಕುಪ್ಪಳಿಸಲು ಸಿಗುವ ಅಮೋಘ ಅವಕಾಶವಿದು. ಆ ವಯಸ್ಸು ದಾಟಿದ ಮೇಲೆ ಬೇಕೆಂದರೂ ಸಿಗದ ಖುಷಿಯಿದು.

2. ಇದು ಆತ್ಮವಿಶಾಸವನ್ನು ಹೆಚ್ಚಿಸುತ್ತದೆ. ಎಲ್ಲರ ಬಾಯಿಯಿಂದ ಶುಭಾಶಯಗಳನ್ನು ಕೇಳುತ್ತಾ, ಎಲ್ಲರ ಮುಖ್ಯ ಆಕರ್ಷಣೆಯ ಬಿಂದುವಾಗಿ ಓಡಾಡುವುದು ಖಂಡಿತವಾಗಿ ಆತ್ಮವಿಶಾವಸವನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಇದು ಹೊಸ ಹುರುಪನ್ನೂ, ಎಂದೂ ಸಿಕ್ಕದ ಆನಂದವನ್ನೂ, ಎಲ್ಲರ ಮುಂದೆ ಸ್ಟಾರ್‌ ಆಗಿ ಕಂಗೊಳಿಸುವುದು ಬೇರೆಯದೇ ಅನುಭವ ನೀಡುತ್ತದೆ. ಎಲ್ಲರೆದುರು ಕೇಕ್‌ ಕತ್ತರಿಸುವುದರಿಂದ ಹಿಡಿದು, ಎಲ್ಲರಿಗಿಂತ ಚೆಂದದ ಹೊಸ ಬಟ್ಟೆ ಧರಿಸಿ, ಆಟಗಳಲ್ಲಿ ಭಾಗಿಯಾಗುವುದು, ಎಲ್ಲರ ಗಮನ ತನ್ನತ್ತ ಸೆಳೆಯುವುದು ಖಂಡಿತವಾಗಿಯೂ ಮಕ್ಕಳೊಳಗಿನ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ.

3. ಈಗಿನ ಬ್ಯುಸಿ ಜೀವನದಲ್ಲಿ ಯಾರಿಗೂ ಯಾವುದಕ್ಕೂ ಸಮಯ ಇರುವುದಿಲ್ಲ. ಕುಟುಂಬಗಳೆಲ್ಲ ಒಡೆದು ಪುಟ್ಟ ಪುಟ್ಟ ಗೂಡುಗಳಾಗಿವೆ. ಹೀಗಾಗಿ, ಬಂಧುಮಿತ್ರರೊಡನೆ ಸೇರುವುದು ಕೂಡಾ ಅಪರೂಪವಾಗಿರುತ್ತದೆ. ಹಾಗಾಗಿ ಹುಟ್ಟುಹಬ್ಬಗಳು ಕುಟುಂಬದೊಳಗಿನ ಸಾಮರಸ್ಯವನ್ನು ಹೆಚ್ಚಿಸುವ ಒಂದು ಸೇತುವೆ. ಮಕ್ಕಳ ಹುಟ್ಟುಹಬ್ಬವೆಂದರೆ ಅದು ಕೇವಲ ಮಕ್ಕಳ ವಯಸ್ಸಿನ ಗೆಳೆಯ ಗೆಳತಿಯರು ಸೇರುವ ಸಂಭ್ರಮವಲ್ಲ. ಅಲ್ಲಿ ಅಜ್ಜ, ಅಜ್ಜಿ, ಅತ್ತೆ ಮಾವ, ಚಿಕ್ಕಪ್ಪ, ಚಿಕ್ಕಮ್ಮ, ಅವರ ಮಕ್ಕಳು ಎಲ್ಲರೂ ಸೇರಿ ಸಂಭ್ರಮ ಮನೆಮಾಡುತ್ತದೆ. ಹುಟ್ಟುಹಬ್ಬವೆಂಬ ನೆಪ ಎಲ್ಲರನ್ನೂ ಒಟ್ಟುಸೇರುವಂತೆ ಮಾಡುತ್ತದೆ. ಆ ಮೂಲಕ ಕುಟುಂಬದ ಸದಸ್ಯರಲ್ಲಿ, ಬಾಂಧವ್ಯವೊಂದು ಸದಾ ಕಾಲ ಉಳಿಯುತ್ತದೆ. ಮಕ್ಕಳಿಗೂ ಎಳವೆಯಲ್ಲಿಯೇ ಬಂಧುಬಳಗದ ಬಗೆಗೆ, ತಮ್ಮ ಕುಟುಂಬಸ್ಥರ ಬಗೆಗೆ ತಿಳುವಳಿಕೆ ಮೂಡಿ ಕುಟುಂಬ ಪ್ರೀತಿ ಬೆಳೆಯುತ್ತದೆ.

ಇದನ್ನೂ ಓದಿ: Parenting Tips: ಮಕ್ಕಳ ಆತ್ಮವಿಶ್ವಾಸಕ್ಕೆ ಪ್ರೇರಕ ಶಕ್ತಿಯಾಗುವ ಹೆತ್ತವರಾಗಿ!

4. ಇಂತಹ ಹಬ್ಬಗಳು ಸಾಮಾಜಿಕ ಸಂಬಂಧಗಳನ್ನು ಬೆಳೆಸುತ್ತದೆ. ಇತರರು ನಮ್ಮ ಮನೆಗೆ ಬರುವುದು, ಆದರಿಸುವುದು, ಚೆನ್ನಾಗಿ ನೋಡಿಕೊಳ್ಳುವುದು, ಸಣ್ಣ ಗೆಟ್‌ ಟುಗೆದರ್‌ ಆದರೂ ನಾವು ಇತರರ ಜೊತೆಗೆ ಬೆರೆಯುವುದು ಹೇಗೆ ಮತ್ತಿತರ ಸಾಮಾನ್ಯ ನಡವಳಿಕೆಗಳನ್ನು ರೂಪುಗೊಳಿಸುವಲ್ಲಿ ಇಂತಹ ಹುಟ್ಟುಹಬ್ಬದ ಪಾರ್ಟಿಗಳು ನೆರವಾಗುತ್ತದೆ. ಇದರಿಂದ ಸಾಮಾಜಿಕ ಸಂಬಂದ ಬೆಳೆಯುತ್ತದೆ. ಅಕ್ಕಪಕ್ಕದ ಮನೆಯವರ ಜೊತೆ ಬಾಂಧವ್ಯ ವೃದ್ಧಿಯಾಗುತ್ತದೆ.

5. ಚೆಂದದ ನೆನಪುಗಳನ್ನು ಕಲೆ ಹಾಕುವಲ್ಲಿ ಹುಟ್ಟುಹಬ್ಬಗಳು ಬಹುಮುಖ್ಯ ಪಾತ್ರ ವಹಿಸುತ್ತದೆ. ಮನೆಯನ್ನು ಹೇಗೆ ಅಲಂಕಾರ ಮಾಡಿದ್ದೆವು, ಯಾವ ಕೇಕ್‌, ಏನೆಲ್ಲ ತಿಂಡಿ ಮಾಡಿಸಿದ್ದೆವು ಇವೆಲ್ಲ ಕೇವಲ ನೆಪಗಳಾದರೂ, ಬಂಧು ಬಳಗ, ಗೆಳೆಯರ ಜೊತೆಗೂಡಿ ಕಳೆದ ಕ್ಷಣಗಳು ಬದುಕಿನಲ್ಲಿ ಎಂದೂ ಮರೆಯದ ಬಾಲ್ಯಕಾಲದ ನೆನಪುಗಳಾಗಿ ಉಳಿಯುತ್ತವೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳ ಮೇಲೆ ನಿಜವಾದ ಪ್ರೀತಿಯಿದ್ದರೆ ಈ 12 ತಪ್ಪು ಮಾಡಬೇಡಿ!

Exit mobile version