Site icon Vistara News

Parenting tips: ನಿಮ್ಮ ಮಕ್ಕಳು ದೊಡ್ಡವರಾಗಿಬಿಡುವ ಮೊದಲೇ ನೀವು ಮಕ್ಕಳಾಗಿಬಿಡಿ!

children

ಬಹಳಷ್ಟು ಸಾರಿ ಮಕ್ಕಳ ಹಾಗೆ ಹುಡುಗಾಟಿಕೆ ಮಾಡಿಕೊಂಡಿದ್ದವರಿಗೆ ಮಕ್ಕಳಾದ ತಕ್ಷಣ ಗಂಭೀರತೆ ಬಂದು ಬಿಡುತ್ತದೆ. ಹುಡುಗುತನವೆಲ್ಲ ಮಾಯವಾಗಿ, ಪೋಷಕರ ಜವಾಬ್ದಾರಿಗಳು, ಮಕ್ಕಳನ್ನು ಶಿಸ್ತಾಗಿ, ಸಮಾಜದಲ್ಲಿ ಎಲ್ಲವುಗಳೊಂದಿಗೆ ಎಲ್ಲದರೊಂದಿಗೆ ಸ್ಪರ್ಧಿಸಬಲ್ಲ ತಾಕತ್ತಿರುವ ಮಗುವನ್ನು ಬೆಳೆಸಬೇಕೆಂಬ ಒತ್ತಡ ಹೆಚ್ಚಾಗುತ್ತದೆ. ಆ ಒತ್ತಡದಲ್ಲಿ ಮಕ್ಕಳೊಂದಿಗೆ ಮಕ್ಕಳಾಗುವ ಅಮೂಲ್ಯ ಅವಕಾಶಗಳು ಕಣ್ಣುಮುಚ್ಚಿ ತೆರೆವ ಒಳಗೆ ಕಳೆದುಹೋಗುತ್ತದೆ. ವಯಸ್ಸಾದಂತೆಲ್ಲ, ಮಕ್ಕಳು ಜೊತೆಗಿಲ್ಲದಿರುವಾಗ, ಅವರ ಗುರಿಯ ಬೆನ್ನತ್ತಿ ಅವರು ಹೋದಾಗ ಜವಾಬ್ದಾರಿಗಳೆಲ್ಲ ಮುಗಿದು ನಿರಾಳರಾದಾಗ, ಮಕ್ಕಳ ಜೊತೆಗೆ ಕಳೆದ ಅಮೂಲ್ಯ ಕ್ಷಣಗಳನ್ನು ನೆನಪಿಸಿಕೊಂಡು ನಗುವ ಎಂದರೆ, ಅಂಥವು ಇಲ್ಲವೇ ಇಲ್ಲ ಎಂದು ಅನಿಸುವ ಅಪಾಯವಿದೆ!

ಹೌದು, ಆಯಾ ವಯಸ್ಸಿಗೆ, ಆಯಾ ಕಾಲಕ್ಕೆ ಕೌಟುಂಬಿಕವಾಗಿ ಇರುವ ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕು. ಆದರೆ, ಈ ಜವಾಬ್ದಾರಿಗಳ ನಡುವಿನಲ್ಲಿ ನಮ್ಮನ್ನು ಜೀವಂತವಾಗಿಡುವ ಗಳಿಗೆಗಳೇ ಇಂಥವು. ತೀರಾ ಸಣ್ಣ ಪುಟ್ಟದ್ದೇ ಆಗಿದ್ದರೂ ಬದುಕಿನಲ್ಲಿ ಪೋಷಕರಾಗಿ ಸಿಗುವ ಇಂಥ ಅವಕಾಶಗಳನ್ನು ಅನುಭವಿಸಿ.

ಪೋಷಕರಾಗಿ ಮಾಡಬೇಕಾದ ಕೆಲಸಗಳಿಗಿಂತ ಹೆಚ್ಚು ಕುಟುಂಬ ನಿರ್ವಹಣೆಯ ಕೆಲಸವೂ ಇರುತ್ತದೆ ನಿಜ. ಆದರೆ, ಕುಟುಂಬ ನಿರ್ವಹಣೆಯ ಜವಾಬ್ದಾರಿಗಳಿಂದಾಗಿ ಪೋಷಕರಾಗಿ ಮಾಡಬೇಕಾದ ಕೆಲಸಗಳಿಂದ ನುಣುಚಿಕೊಳ್ಳಬೇಡಿ. ಇದರರ್ಥ ಮಕ್ಕಳ ಜೊತೆಗೆ ಎಲ್ಲ ಸಂದರ್ಭಗಳಲ್ಲೂ ಇರಬೇಕು ಅಂದಲ್ಲ. ಆದರೆ, ಮಕ್ಕಳಿಗೆ ನಿಮ್ಮ ಅಗತ್ಯ ಇದೆ ಅನಿಸುವಾಗಲೆಲ್ಲ ಅವರ ಜೊತೆಗಿರಿ. ಅವರ ಜೊತೆಗಿನ ಒಂದು ವಾಕ್‌, ಅವರು ಕಲಿತ ಹೊಸ ಬಗೆಯ ಆಟ, ಹೊಸತೊಂದು ಪದ್ಯ, ಅವರ ಯಾವುದೋ ಸಣ್ಣ ಡೌಟ್‌ ಎಲ್ಲದಕ್ಕೂ ನಿಮ್ಮ ಇರುವಿಕೆಯ ಅಗತ್ಯ ಇದೆ. ಆಗ ಕೊಡಬೇಕಾದ ನಿಮ್ಮ ಗಮನವನ್ನು ಕೊಡಲೇಬೇಕು.

ಎಸ್‌ ಹಾಗೂ ನೋ ಹೇಳುವುದು ಗೊತ್ತಿರಲಿ. ಯಾವುದಕ್ಕೆ ನೋ ಹೇಳಬೇಕೆಂದು ಗೊತ್ತಿರುತ್ತದೆಯೋ, ಹಾಗೆಯೇ ಎಸ್‌ ಹೇಳುವುದೂ ಗೊತ್ತಿರಲಿ. ಅತಿಯಾದ ಎಸ್‌ ಅತಿಯಾದ ನೋ ಎರಡೂ ಒಳ್ಳೆಯದಲ್ಲ. ಹಾಗೆಂದುಕೊಂಡು, ಪ್ರತಿ ಬಾರಿಯೂ ನಿಮ್ಮ ಮಗು ಕೇಳುವ ಯಾವುದೋ ಆಟಿಕೆಯನ್ನು ತಂದುಕೊಡಿ ಎಂದಲ್ಲ. ಯಾವುದೇ ಹಣದ ವ್ಯಯವಿಲ್ಲದೆ ಮಗು ನಿಮ್ಮಲ್ಲಿ ಕೇವಲ ನಿಮ್ಮ ಇರುವಿಕೆಯ ಅಗತ್ಯವನ್ನು ಕೇಳುತ್ತದಲ್ಲ, ಆಗ ಎಸ್‌ ಹೇಳಿ. ಅಯ್ಯೋ ಇದನ್ನೆಲ್ಲ ಮಾಡಲು ಸಮಯವಿಲ್ಲ, ಹೋಗಿ ಆಡ್ಕೋ ಎಂದು ಹೇಳಿ ಎಸ್ಕೇಪ್‌ ಆಗೋ ಬದಲು, ಎಸ್‌, ಖಂಡಿತ ಇದನ್ನು ಮಾಡೋಣ ಎಂದು ಹೇಳಿ ನೋಡಿ!

ಮಕ್ಕಳು ಜೋರಾಗಿ ಗಲಾಟೆ ಮಾಡುತ್ತಾರೋ, ಬಿಡಿ. ಅದಕ್ಕೆ ಹೆಚ್ಚು ತಲೆಕೆಡಿಸಿಕೊಂಡು ಯಾವಾಗಲೂ ಶಾಂತವಾಗಿಯೇ ಇರಬೇಕೆಂದು ಒತ್ತಡ ಹೇರಿ, ಇತರರನ್ನು ಮೆಚ್ಚಿಸಲು ಅತಿ ಶಿಸ್ತು ಹೇರಬೇಡಿ. ಗಲಾಟೆಯೂ ಬಹಳ ಸಾರಿ ಒಳ್ಳೆಯದೇ!

ಸಮುದ್ರತೀರ, ನದೀತೀರಗಳಿಗೆ ಹೋಗಿ ಮಕ್ಕಳು ನೀರಿಗಿಳಿಯದಿದ್ದರೆ ಹೇಗೆ. ಬಿಡಿ. ಮಕ್ಕಳಾಗಿ ಜಾಗರೂಕತೆಯಿಂದ ಆಡಲಿ. ಜೊತೆಗೆ ನೀವೂ. ಮಳೆ ಬಂದು ನಿಂತ ನೀರಿನಲ್ಲಿ ಕುಣಿಯುತ್ತಾ ನಡೆದರೆ ನಡೆಯಲಿ. ಬಟ್ಟೆ ಕೊಳೆಯಾದರೆ ತೊಳೆಯಬಹುದು. ಆದರೆ, ಇಂಥ ಸಮಯಗಳು ಮತ್ತೆ ಬರುವುದಿಲ್ಲ.

ಮಕ್ಕಳ ಜೊತೆಗೆ ದೊಡ್ಡ ಸ್ವರದಲ್ಲಿ ಪುಸ್ತಕ ಓದುವಷ್ಟು ಸಮಯ ಇಟ್ಟುಕೊಳ್ಳಿ. ಕೆಲಸದ ಒತ್ತಡದ ನಡುವೆ ಇಂಥ ಚಿಕ್ಕ ಚಿಕ್ಕ ರಿಲ್ಯಾಕ್ಸಿಂಗ್‌ ಸಮಯವನ್ನು ಅನುಭವಿಸದೆ ಇರಬೇಡಿ. ಮಕ್ಕಳಿಗೆ ಉತ್ತಮ ಅಭ್ಯಾಸಗಳನ್ನು, ಪುಸ್ತಕ ಓದುವ ಹವ್ಯಾಸವನ್ನು ಈ ಮೂಲಕ ಸುಲಭವಾಗಿ ಎಳವೆಯಲ್ಲೇ ಮಾಡಿಸಬಹುದು.

ಇದನ್ನೂ ಓದಿ: ಭಾರತದ ಈ 7 ಸಂಗತಿ ಕಂಡರೆ ಪ್ರವಾಸಿಗರಿಗೆ ಮೆಚ್ಚು

ಹೆಚ್ಚೆಂದರೆ ಎಷ್ಟು ಕಾಲ ಮಕ್ಕಳು ಫೇರಿಟೇಲ್‌ ಲೋಕದಲ್ಲಿರಬಹುದು ಹೇಳಿ? ಹಾಗಾಗಿ ಮಕ್ಕಳ ಲೋಕದ ಸಿಂಹ, ಆನೆ, ಕುದುರೆ, ಹಕ್ಕಿಗಳೇ ನೀವಾಗಿ. ಅದರಷ್ಟು ಚಂದದ ಗಳಿಗೆಗಳು ಮತ್ತೆ ಬದುಕಿನಲ್ಲಿ ಸಿಗುವುದಿಲ್ಲ.

ವಿಚಿತ್ರ, ಸಿಲ್ಲಿ ಅನಿಸುವ ತೀರಾ ಸಣ್ಣ ಸಣ್ಣ ವಿಚಾರಗಳನ್ನೂ ಮಕ್ಕಳೊಂದಿಗೆ ಮಾಡಬಹುದು. ಇಷ್ಟು ದೊಡ್ಡವರಾದ ಮೇಲೆ ಇಂಥದ್ದೆಲ್ಲ ಯಾಕೆ ಅನ್ನಬೇಡಿ. ಮಕ್ಕಳೊಂದಿಗೆ ಮಕ್ಕಳಾಗಿ ಯೋಚಿಸಿ. ಯಾಕೆಂದರೆ, ನೀವೂ ಒಂದು ಕಾಲದಲ್ಲಿ ಮಕ್ಕಳಾಗಿ ಇವೆಲ್ಲ ಮಾಡಿದ್ದೀರಿ. ಅಂಥ ಖುಷಿಗಳನ್ನು ಅವರೂ ಅನುಭವಿಸಲಿ ಬಿಡಿ. ಯಾರೂ ನೋಡುತ್ತಿಲ್ಲ ಅಂದುಕೊಂಡು ಅವರೊಂದಿಗೆ ಕುಣಿಯಿರಿ.

ಒಂದು ದಿನ ಅವರೂ ದೊಡ್ಡವರಾಗುತ್ತಾರೆ. ಬದುಕು ನೀಡುವ ಸವಾಲುಗಳಿಗೆ ಅವರೂ ಒಗ್ಗಿ ಹೋಗುತ್ತಾರೆ ನಿಜ. ಆದರೆ, ಕಷ್ಟಗಳ ಬಗ್ಗೆಯೂ ಅವರಿಗೆ ಗೊತ್ತಿರಲಿ. ಆದರೆ, ಕಷ್ಟಗಳಿದ್ದರೂ ಮನುಷ್ಯ ಜೀವನದಲ್ಲಿ ಇಡಬೇಕಾದ ಆಶಾವಾದವನ್ನು ಅವರಿಗೆ ಅರಿವು ಮೂಡಿಸುವಲ್ಲಿ ಸೋಲಬೇಡಿ. ಅದಕ್ಕೆ ಇವೆಲ್ಲವೂ ಬೇಕು. ಪೋಷಕರಾಗಿ ಅವರೊಂದಿಗೆ ನೀವು ಇರುವ ಸಮಯವೇ ಮುಂದೊಂದು ದಿನ ಅವರ ಒಟ್ಟು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ನೆನಪಿರಲಿ.

ಇದನ್ನೂ ಓದಿ: Fathers Day: ಆದರ್ಶ ಅಪ್ಪನ ನೆನೆದುಕೊಂಡ ಸೆಲೆಬ್ರಿಟಿ ಮಕ್ಕಳು

Exit mobile version