ಮಕ್ಕಳನ್ನು ಬೆಳೆಸುವುದು ಎಂಬುದು ಸರಳವಲ್ಲ. ಮಗು ಹುಟ್ಟಿದ ಕೂಡಲೇ ತನ್ನನ್ನು ನೋಡಿಕೊಳ್ಳುವ ಹೆತ್ತವರ, ತನ್ನ ಸುತ್ತಮುತ್ತಲಿನ ಮಂದಿಯನ್ನು ನೋಡಿ ಕಲಿಯಲು, ಬೆಳೆಯಲು ಪ್ರಯತ್ನಿಸುತ್ತದೆ. ನೋಡಿಕೊಳ್ಳುವವರು ಯಾರೇ ಆಗಲಿ, ಹೆತ್ತವರು, ಅಜ್ಜ ಅಜ್ಜಿ, ಅಥವಾ ತನ್ನ ಕೆಲಸದಾಕೆಯ ದೈಹಿಕ, ಮಾನಸಿಕ ಬೆಳವಣಿಗೆ ಮಗುವಿನ ಬೆಳವಣಿಗೆಯ ಮೇಲೆಯೂ ಪರಿಣಾಮ ಬೀರುತ್ತದೆ.
ಮಕ್ಕಳ ಜೊತೆ ವ್ಯವಹರಿಸಲು ಮುಖ್ಯ ಹಾಗೂ ಪರಿಣಾಮಕಾರಿ ವಿಧಾನ ಎಂದರೆ ಆಲಿಸುವುದು, ಪ್ರೋತ್ಸಾಹ ನೀಡುವುದು ಹಾಗೂ ಭರವಸೆ ಇವು ಮೂರು ಬಹಳ ಅಗತ್ಯ . ಮಗು ತನ್ನ ಜೊತೆ ಹಂಚಿಕೊಳ್ಳುವ ಪ್ರತಿಯೊಂದು ವಿಚಾರವನ್ನು, ಸಂದೇಹಗಳನ್ನು ಗಮನವಿಟ್ಟು ಆಲಿಸುವುದು ಮಗು ಹಾಗೂ ಮಗುವಿನ ಜೊತೆಗಿರುವ ವ್ಯಕ್ತಿಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಮಗು ಹೇಳುತ್ತಿರುವುದನ್ನು ಕೇಳುವ, ಕೇಳುತ್ತಿರುವಾಗ ತಾನು ಕೇಳುತ್ತಿದ್ದೇನೆ ಎಂದು ತಲೆಯಾಡಿಸುವುದು, ಸಣ್ಣಪುಟ್ಟ ಕೆಲವು ಧನಾತ್ಮಕ ಶಬ್ದಗಳಿಂದ ಅವರ ಮಾತಿಗೆ ಭರವಸೆ ನೀಡುವಂತ ಮಾತು ತಾನು ಆಡುವುದು ಹಾಗೂ ಆ ಬಗ್ಗೆ ತೀರ್ಪುಗಾರನಂತೆ ವರ್ತಿಸದೆ ಸಂಯಮದಿಂದ ಆಲಿಸುವುದು ಬಹಳ ಮುಖ್ಯವಾಗುತ್ತದೆ. ಇಲ್ಲಿ ತಾಳ್ಮೆಯಷ್ಟೇ ಹೆಚ್ಚು ಕೆಲಸ ಮಾಡುತ್ತದೆ.
ಮಕ್ಕಳನ್ನು ಹತ್ತಿರದಿಂದ ಗಮನಿಸುವುದು ಬಹಳ ಅಗತ್ಯ. ಮಕ್ಕಳನ್ನು ಗಮನಿಸುವಾಗ ನಮ್ಮನ್ನು ಹಾಡು, ಟಿವಿ, ಓದು ಇವ್ಯಾವುವೂ ಚಂಚಲಗೊಳಿಸಬಾರದು. ಫೋನ್ ಕಿವಿಗಿಟ್ಟು ಏನನ್ನೋ ಕೇಳುತ್ತಾ ಅಥವಾ ನೋಡುತ್ತಾ ಮಕ್ಕಳ ಮಾತಿಗೆ ಸುಮ್ಮನೆ ತಲಾಯಾಡಿಸುವುದು, ಯಾವುದೋ ಮನೆಗೆಲಸದಲ್ಲಿ ಬ್ಯುಸಿಯಾಗಿ ಮಕ್ಕಳ ಮಾತಿಗೆ ಸುಮ್ಮನೆ ಹಾಂ ಹೂಂ ಎನ್ನುವುದು ಇಂಥವುಗಳನ್ನು ಆಡಬಾರದು. ಗಮನ ಎಂದರೆ ಸಂಪೂರ್ಣ ಗಮನ ಇಲ್ಲಿ ಅಗತ್ಯವಾಗುತ್ತದೆ.
ಪ್ರಾಮಾಣಿಕವಾಗಿರುವುದೂ ಕೂಡಾ ಬಹಳ ಮುಖ್ಯ. ಪ್ರಾಮಾಣಿಕವಾಗಿ ಮಕ್ಕಳಿಗೆ ನಾನು ನಿನ್ನ ಜೊತೆಗೆ ಎಂದೆಂದಿಗೂ ಇದ್ದೇನೆ ಎಂಬ ಭಾವ ಹುಟ್ಟಿಸುವಂತೆ ಮಾಡುವುದು ಮುಖ್ಯ. ಅವರ ಆಸಕ್ತಿಗಳು, ಅವರು ಇಷ್ಟಪಡುವ ಸಂಗೀತ, ಅವರ ಟಿವಿ ಕಾರ್ಟೂನುಗಳು ಇವೆಲ್ಲವಕ್ಕೂ ಕಿವಿಯಾಗುವುದು ಕೂಡಾ ಅವರ ಹಾಗೂ ನಮ್ಮ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಅವರ ಪ್ರಪಂಚಕ್ಕೂ ನಮ್ಮ ಪ್ರಪಂಚಕ್ಕೂ ವ್ಯತ್ಯಾಸವಿಲ್ಲದಂತೆ ತಡೆಗೋಡೆಯನ್ನು ಉರುಳಿಸುತ್ತದೆ. ಅವರ ಜೊತೆಗಿದ್ದಾಗ ಸಂಪೂರ್ಣ ಅವರ ಜೊತೆಗಿರುವ, ನಮ್ಮ ಶೇ.100ರಷ್ಟನ್ನೂ ಅವರಿಗೆ ನೀಡುವುದು ಒಳ್ಳೆಯದು. ಅವರ ಹಾಗೂ ನಿಮ್ಮ ಇಬ್ಬರ ಒಂದೇ ಆಸಕ್ತಿಗಳನ್ನು ಹುಡುಕಿ ಅದರಲ್ಲಿ ಜೊತೆಯಾಗಿ ತೊಡಗಿಕೊಳ್ಳುವುದು ಕೂಡಾ ಮಗು ಹಾಗೂ ಹೆತ್ತವರ ಬಾಂಧವ್ಯವನ್ನು ವೃದ್ಧಿಸುತ್ತದೆ.
ಇದನ್ನೂ ಓದಿ: Parenting Tips: ಮಕ್ಕಳನ್ನು ಸಮಾಧಾನಗೊಳಿಸುವ ವೇದ ವಾಕ್ಯಗಳು!
ಮಕ್ಕಳನ್ನು ಹೊಗಳಲು ಹಿಂದೆ ಮುಂದೆ ನೋಡಬೇಕಿಲ್ಲ. ಅವರು ಮಾಡಿದ ಪುಟ್ಟ ಕೆಲಸಕ್ಕೂ, ಒಂದು ಮೆಚ್ಚುಗೆಯ ನುಡಿ ಅವರ ಬೆನ್ನಿಗಿರಲಿ. ಸಿಟ್ಟು ಬಂದಾಗ, ಬೇಸರವಾದಾಗ, ಏನೋ ಕಿರಿಕಿರಿಗಳಾದಾಗ ಅವರ ಜೊತೆಗೂ ನಿಮ್ಮ ಭಾವನೆಯನ್ನು ಹಂಚಿಕೊಳ್ಳಿ. ಆಗ ಅವರೂ ಅವರ ಭಾವನೆಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಮನಸ್ಸು ಮಾಡುತ್ತಾರೆ. ಮಕ್ಕಳೆಷ್ಟೇ ದೊಡ್ಡವರಾಗಲಿ, ಹೆತ್ತವರಾಗಿ, ಅವರ ಮೇಲಿನ ಕಾಳಜಿ, ಪ್ರೀತಿ, ಸದಾ ನಾವು ಜೊತೆಗಿದ್ದೇವೆಂಬ ಭರವಸೆಯ ಭಾವ ಮಕ್ಕಳ ಹಾಗೂ ಪೋಷಕರ ನಡುವಿನ ಸಾಮರಸ್ಯವನ್ನು ಹೆಚ್ಚಿಸುತ್ತದೆ. ಹದಿಹರೆಯಕ್ಕೆ ಬಂದ ಮಗನ ಅಥವಾ ಮಗಳ ಬಳಿಯ ʻನೀ ಹೇಗಿದ್ದಿʼ ಎಂಬ ಪುಟ್ಟ ಮಾತು ಕೂಡಾ ಅವರೊಳಗಿರುವ ಪರ್ವತವನ್ನೇ ಹಗುರ ಮಾಡಬಹುದು.
ಬೆಳೆಯುವ ವಯಸ್ಸಿನಲ್ಲಿ ಮಕ್ಕಳ ಮಾನಸಿಕ ಆರೋಗ್ಯದ ಬಗೆಗಿನ ಗಮನ ಅತ್ಯಂತ ಮುಖ್ಯ. ಅದು ಅಷ್ಟೇ ಸೂಕ್ಷ್ಮ ಕೂಡಾ. ಎಳವೆಯಿಂದಲೇ ಮಕ್ಕಳೊಂದಿಗಿನ ನಮ್ಮ ಸಂಬಂಧವೇ ಅವರ ಬದುಕಿಗೆ ದಾರಿದೀಪ. ಮಕ್ಕಳು ಹಾದಿ ತಪ್ಪದೆ ಸರಿಯಾದ ದಾರಿಯಲ್ಲಿ ನಡೆಯಲು ಹಿಡಿದು ನಡೆಸಲು ಪೋಷಕರಾಗಿ ನಾವು ಜೊತೆಗಿದ್ದೇವೆಂಬ ಭರವಸೆ ಸಾಕು, ಮಕ್ಕಳನ್ನು ಗೆಲ್ಲಿಸಿಬಿಡುತ್ತದೆ. ಆ ಭರವಸೆ ಕೊಡುವ ಗಳಿಗೆ ಕೇವಲ ಆ ಸಮಯದ್ದು ಮಾತ್ರವಲ್ಲ, ಮಕ್ಕಳ ಹಾಗೂ ಹೆತ್ತವರ ಇಡಿಯ ಬದುಕಿನ ಪಯಣವೇ ಆಗಿದೆ ಎಂಬುದರ ನೆನಪು ಹೆತ್ತವರಾಗಿ ನಮ್ಮಲ್ಲಿರಬೇಕು.
ಇದನ್ನೂ ಓದಿ: Parenting Tips: ಪ್ರತಿ ಬ್ಯುಸಿ ತಾಯಿಯೂ ಮಕ್ಕಳಿಗೆ ಮಾಡಿಕೊಡಲೇಬೇಕಾದ ದಿಢೀರ್ ಪರಾಠಾಗಳಿವು!