Site icon Vistara News

Parenting Tips: ನೀವು ಆಲಸಿಗಳೇ? ನಿಮ್ಮ ಮಕ್ಕಳು ಬುದ್ಧಿವಂತರಾದಾರು!

parenting tips

ಗಂಡಹೆಂಡಿರಿರು ಹೆತ್ತವರಾದರಾಗ ಇದ್ದಕ್ಕಿದ್ದಂತೆ ಬರುವ ಜವಾಬ್ದಾರಿಗಳು ಅವರನ್ನು ಬದಲಾಯಿಸಿಬಿಡುತ್ತದೆ. ಇಬ್ಬರ ಬ್ಯುಸಿ ಜೀವನದಲ್ಲಿ ಹೊಸ ಜೀವವೊಂದರ ಪ್ರವೇಶವಾಗಿ ಬದುಕು ಬದಲಾಗಿಬಿಡುತ್ತದೆ. ಈಗಿನ ನಗರದ ಬದುಕಿನಲ್ಲಿ ಗಂಡಹೆಂಡಿರಿಬ್ಬರೂ ದುಡಿಯುವ ಸಂದರ್ಭಗಳಲ್ಲಿ ಮಕ್ಕಳಿಗೆ ಗಮನ ನೀಡುವುದು ಎಂಬುದು ಮರೀಚಿಕೆಯೇ. ಕನಸು, ಗುರಿ ಎಂದು ಇವುಗಳ ಹಿಂದೆ ಬಿದ್ದ ಪೋಷಕರು ಮಕ್ಕಳಿಗೆ ಗಮನ ಕೊಡಲು ಸಾಧ್ಯವಾಗದ ಪರಿಸ್ಥಿತಿ ಒಂದೆಡೆಯಾದರೆ, ಸಮಯ ಮಾಡಿಕೊಂಡು, ಪ್ರತಿಯೊಂದನ್ನೂ ಅಗತ್ಯಕ್ಕಿಂತ ಹೆಚ್ಚು ಗಮನ ಕೊಡುವ ಹೆಲಿಕಾಪ್ಟರ್‌ ಪೇರೆಂಟಿಂಗ್‌ ಮಾಡುವ ಹೆತ್ತವರು ಇನ್ನೊಂದೆಡೆ. ಇವೆರಡೂ ಬಗೆಗಳೂ ಮಕ್ಕಳನ್ನು ಸಹಜ ಕಲಿಕೆ, ಆತ್ಮವಿಶ್ವಾಸದಿಂದ ದೂರವೇ ಇಟ್ಟುಬಿಡುತ್ತದೆ.

ಜೀವನ ಆವತ್ತೂ ಹೂವಿನ ಹಾಸಿಗೆಯಲ್ಲ. ಚಿನ್ನದ ಚಮಚದಲ್ಲಿ ತಿನ್ನಿಸಿದರೂ, ದಾರಿ ತುಂಬ ಹೂವಿನ ಹಾಸಿಗೆ ಹಾಸಿದರೂ ಪ್ರತಿಯೊಬ್ಬರಿಗೂ ಜೀವನ ಅವರವರದೇ ರೀತಿಯಲ್ಲಿ ಸುಖದುಃಖಗಳನ್ನು ಪರಿಚಯ ಮಾಡಿಸುತ್ತದೆ. ಹಾಗಾಗಿ, ಮಕ್ಕಳನ್ನು ಅವರ ಪಾಡಿಗೆ ಬೆಳೆಯಲು ಬಿಟ್ಟರೆ ಅವರು ಮುಂದೆ ಕಷ್ಟ ಸಹಿಷ್ಣುಗಳಾಗಿ ಬೆಳೆಯುತ್ತಾರೆ. ದುಃಖವನ್ನು ಸುಲಭವಾಗಿ ಸ್ವೀಕರಿಸಿ ಬದುಕಿನಲ್ಲಿ ನೆಮ್ಮದಿಯಿಂದ ಇರುವುದನ್ನು ಕಲಿತುಕೊಳ್ಳುತ್ತಾರೆ. ಹಾಗಾಗಿ ಮಕ್ಕಳನ್ನು ಅವರ ಪಾಡಿಗೆ ಬಿಡುವುದು ಬಹಳ ಮುಖ್ಯ. ವಿಚಿತ್ರವೆಂದರೆ ಬಹಳ ಸಾರಿ, ಉದಾಸೀನತೆಯನ್ನು ಅಭ್ಯಾಸ ಮಾಡಿಕೊಂಡ ಆಲಸಿ ಹೆತ್ತವರು ಮಕ್ಕಳಿಗೂ ಮಾಡಲು ಕೆಲಸ ಉಳಿಸಿರುತ್ತಾರೆ. ಮಕ್ಕಳಿಗೆ ತಮ್ಮ ಕೆಲಸ ಮಾಡಿಕೊಳ್ಳಲು ಅವಕಾಶ ಉಳಿಯುತ್ತದೆ. ಮಕ್ಕಳು ತಪ್ಪುಗಳನ್ನು ಮಾಡಿಕೊಂಡೇ ನಿಧಾನವಾಗಿ ತಿದ್ದಿಕೊಂಡು ಮುನ್ನಡೆಯುತ್ತಾರೆ. ಬದುಕಿನ ನಿಜಾರ್ಥಗಳು ಎಳವೆಯಲ್ಲಿಯೇ ತಿಳಿಯುತ್ತಾ ಹೋಗುತ್ತದೆ.

ಮಜಾ ಎಂದರೆ, ಮಕ್ಕಳ ಕೆಲಸಗಳಲ್ಲಿ ಅನವಶ್ಯಕ ಮೂಗು ತೂರಿಸುವಿಕೆಯನ್ನು ಇಂಥ ಹೆತ್ತವರು ಮಾಡುವುದಿಲ್ಲ. ಇದರಿಂದ ಮಕ್ಕಳಿಗೆ ಅವರಾಗಿಯೇ ಸಹಜವಾಗಿ ಕಲಿಯಲು ಅವಕಾಶ ದೊರೆಯುತ್ತದೆ. ಅತಿಯಾಗಿ ಪ್ರತಿಯೊಂದರ ಮೇಲೆ ನಿಗಾ ಇಡುವುದು ಮಕ್ಕಳಲ್ಲಿ ಸ್ವಂತಿಕೆ ಬೆಳೆಸುವುದಿಲ್ಲ, ಅಷ್ಟೇ ಅಲ್ಲ ತಮ್ಮ ಮೇಲೆ ಆತ್ಮವಿಶ್ವಾಸ ರೂಢಿಸಿಕೊಳ್ಳುವಲ್ಲಿ ಕಷ್ಟವಾಗುತ್ತದೆ. ಹಾಗಾಗಿ ಮಕ್ಕಳನ್ನು ಅವರ ಪಾಡಿಗೆ ಬಿಟ್ಟುಬಿಡುವುದು ಅವರನ್ನು ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವುದಕ್ಕೆ ಆಸ್ಪದ ನೀಡುತ್ತದೆ. ಮಕ್ಕಳು ಎಡವುತ್ತಾ ಹೊಸ ವಿಚಾರಗಳನ್ನು ಕಲಿಯುತ್ತಾರೆ. ಧೈರ್ಯ, ಆತ್ಮವಿಶವಾಸಗಳಿಂದ ಬದುಕಿನ ಪಾಠಗಳನ್ನು ಕಲಿಯುತ್ತಾ ಮುಂದೆ ಸಾಗುತ್ತಾರೆ.

ಉದಾಸೀನತೆ ಒಮ್ಮೊಮ್ಮೆ ಒಳ್ಳೆಯದೇ. ಯಾವಾಗಲೂ ಗುರಿ ಕನಸು, ಕೆಲಸ ಎಂದು ಓಡಾಡಿಕೊಂಡಿರುವ ಹೆತ್ತವರಿಗೆ ಮಕ್ಕಳ ಮೇಲಿನ ಗಮನ ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಸುಮ್ಮನೆ ಕಾಲು ಚಾಚಿ ಬಿದ್ದುಕೊಂಡಿರುವುದು, ಮಕ್ಕಳ ಜೊತೆ ಆರಾಮವಾಗಿ ಸಮಯ ಕಳೆಯಲು ಅವಕಾಶ ನೀಡುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿ ಮುಖ್ಯವಾಗಿ ಬೇಕಾಗಿರುವುದು ಹೆತ್ತವರ ಜೊತೆಗಿನ ಗುಣಮಟ್ಟದ ಸಮಯ. ಇಬ್ಬರ ನಡುವಿನ ಆತ್ಮೀಯತೆ, ಸಲುಗೆ, ಪ್ರೀತಿ ಗೌರವಗಳು ಜಿನುಗುವುದೂ, ಹೆಚ್ಚಾಗುವುದೇ ಒಬ್ಬರಿಗೊಬ್ಬರು ಸಮಯ ಪರಸ್ಪರ ಕೊಟ್ಟಾಗ. ಸದಾ ಕೆಲಸದ ಹಿಂದೆಯೇ ಬಿದ್ದಿರುವ ಪೋಷಕರಿಗೆ ಇಷ್ಟು ಕಾಳಜಿ, ಗಮನ ಖಂಡಿತವಾಗಿಯೂ ಸಾಧ್ಯವಾಗದು. ಮಕ್ಕಳ ಮನದಲ್ಲಿ ಸದಾ ನೆನಪಿನಲ್ಲಿರುವುದು ಅವರನ್ನು ಬದುಕಿನಲ್ಲಿ ಬಾಂಧವ್ಯಗಳ ಬಗ್ಗೆ ಪ್ರೀತಿಯಿರುವಂತೆ ಮಾಡುವುದು ಬಾಲ್ಯದ ನೆನಪುಗಳು. ಇಂಥಹ ಬಾಲ್ಯದ ನೆನಪುಗಳು ಸೃಷ್ಟಿಯಾಗುವುದು ಮನೆಯೊಳಗೇ.

ಮಕ್ಕಳ ಪ್ರತಿಯೊಂದಕ್ಕೂ ಮಧ್ಯ ಪ್ರವೇಶಿಸದೆ ಅವರ ಆಸಕ್ತಿಗಳನ್ನು ಅನ್ವೇಷಿಸುವುದಕ್ಕೆ, ಬಾಲ್ಯವನ್ನು ನಿಜವಾದ ಅರ್ಥದಲ್ಲಿ ಅನುಭವಿಸಲು ಅವಕಾಶವಾಗುತ್ತದೆ. ಬಾಲ್ಯದಲ್ಲಿ ಮಕ್ಕಳಿಗೆ ಅವರದೇ ಆದ ಸಮಯವ ಸಿಕ್ಕು ತಮಗೆ ಯಾವುದರಲ್ಲಿ ಆಸಕ್ತಿ ಇದೆ ಎಂದು ಆತ್ಮಾವಲೋಕನ ಮಾಡಲು, ಅದನ್ನು ಪೋಷಕರು ಗುರುತಿಸಲು ಸಾಧ್ಯವಾಗುತ್ತದೆ. ಮಕ್ಕಳನ್ನು ಬ್ಯುಸಿಯಾಗಿಡುವ ಕಾರಣಕ್ಕೆ, ಮಕ್ಕಳ ಆಸಕ್ತಿಗಳಿಗೆ ಗಮನ ನೀಡದೆ, ಅವರಿಗೆ ಬೇಕಾದುದು ಎಂದು ಪೋಷಕರೇ ತಮಗೆ ತಾವೇ ನಿರ್ಧಾರ ತೆಗೆದುಕೊಂಡು ಅವರನ್ನು ಅವರಿಗಿಷ್ಟವಿಲ್ಲದ ಹಾದಿಯಲ್ಲಿ ಸಾಗಲು ಒತ್ತಾಯ ಮಾಡುವುದೂ ತಪ್ಪುತ್ತದೆ.

ಇದನ್ನೂ ಓದಿ: Parenting Tips: ತಾಯಂದಿರೇ, ಮಕ್ಕಳ ದೇಹಕ್ಕೆ ಕ್ಯಾಲ್ಶಿಯಂ ಈ ಎಲ್ಲ ಆಹಾರಗಳಿಂದಲೂ ಸಿಗುತ್ತವೆ!

Exit mobile version