Site icon Vistara News

Personality Test: ನೀವು ಒಳ್ಳೆಯವರೇ, ಕೆಟ್ಟವರೇ?; ನಿಮ್ಮನ್ನೇ ನೀವು ಪರೀಕ್ಷಿಸಬೇಕಾದರೆ ಇದನ್ನು ಓದಿ!

Personality Test

ಬಹಳಷ್ಟು ಸಾರಿ ನಾವು ನಮ್ಮ ಜೊತೆಗಿರುವವರನ್ನು ಬಹುಬೇಗನೆ ಜಡ್ಜ್‌ ಮಾಡಿಬಿಡುತ್ತೇವೆ. ಕೆಲವು ಸಂದರ್ಭಗಳಲ್ಲಿ ಅವರ ನಡತೆಯನ್ನು ಕಂಡ ನಾವು ಅವರಿಗೆ ಹಣೆಪಟ್ಟಿ ಅಂಟಿಸಿಬಿಡುತ್ತೇವೆ. ಅಂಥ ಪರಿಸ್ಥಿತಿಯಲ್ಲಿ ನಾವು ಇದ್ದರೆ ಹೇಗೆ ಎಂದು ಯೋಚಿಸಿರುವುದಿಲ್ಲ. ಕೆಲವೊಮ್ಮೆ ನಮ್ಮನ್ನೂ ಬೇರೆಯವರು ಹಾಗೆ ತಿಳಿಯುವುದುಂಟು. ಕೆಲವರು ಹೊರಗಿನಿಂದ ಅದ್ಭುತ ಅನಿಸಿದರೂ, ಒಳಗಿನಿಂದ ಹಾಗಲ್ಲ ಎಂದು ತಿಳಿಯುವುದಕ್ಕೆ ವರ್ಷಗಳೇ ಬೇಕಾಗುತ್ತವೆ. ಹಲವು ಕಷ್ಟದ ಸಂದರ್ಭಗಳು, ಖುಷಿಯ ಸನ್ನಿವೇಶಗಳು ನಮ್ಮ ಆತ್ಮೀಯರು ಯಾರು, ಒಳ್ಳೆಯವರು ಯಾರು ಎಂಬುದನ್ನು ನಮಗೆ ಪರಿಚಯ (Personality Test) ಮಾಡಿಸಿಕೊಡುತ್ತದೆ. ಒಳ್ಳೆಯವರು ಯಾರು, ಕೆಟ್ಟವರು ಯಾರು ಎಂಬುದನ್ನು ಕಡ್ಡಿ ಮುರಿದ ಹಾಗೆ ಹೇಳುವುದು ಕಷ್ಟವೇ ಆದರೂ, ಈ ಕೆಲವು ಗುಣಗಳು ನಿಮ್ಮಲ್ಲಿ ನಿಮಗೆ ಕಾಣಿಸಿದರೆ, ಅಥವಾ ಬೇರವರಲ್ಲಿ ಕಂಡರೆ, ಅವರು ತೋರಿಕೆಗೆ ಒಳ್ಳೆಯವರೆಂದು ಅನಿಸಿದರೂ, ನೀವಂದುಕೊಂಡಷ್ಟು ಒಳ್ಳೆಯವರಲ್ಲ ಎಂದುಕೊಳ್ಳಬಹುದು. ಇದು ನಮಗೂ ಅನ್ವಯಿಸುತ್ತದೆ. ನಿಮಗೆ ನೀವು ಮಾಡಿದ್ದು ಎಲ್ಲ ಸಂದರ್ಭದಲ್ಲೂ ಸರಿಯೇ ಅನಿಸಿದರೂ ಖಂಡಿತ ಒಮ್ಮೆ ಯೋಚಿಸಿ. ಬನ್ನಿ, ಇದು ಆತ್ಮವಿಮರ್ಶೆಗೆ ಸಕಾಲ.

Personality Development

ಸದಾ ಕಾಲ ಒಂದೇ ಸಮನಾಗಿರುವುದಿಲ್ಲ

ನಾವೇನು ಹೇಳುತ್ತೇವೆ ಅನ್ನುವುದಕ್ಕಿಂತಲೂ, ನಾವೇನು ಮಾಡುತ್ತೇವೆ ಅನ್ನುವುದು ಮುಖ್ಯವಾಗುತ್ತದೆ. ನಮ್ಮೆದುರು ಚಂದ ಮಾತನಾಡಿ ಹೋದವರು ಮಾತಿನಲ್ಲಂದರೆ ಕೃತಿಯಲ್ಲಿರುವುದಿಲ್ಲ ಎಂಬುದು ನಂತರ ತಿಳಿಯುತ್ತದೆ. ನೀವೂ ಹೀಗೇನಾ? ಮಾತಿಗೂ ಕೃತಿಗೂ ತಾಳಮೇಳ ಸರಿ ಬರದಿದ್ದರೆ, ಖಂಡಿತ ನಾವು ನಾವಂದುಕೊಂಡಷ್ಟು ಒಳ್ಳೆಯವರಲ್ಲ.

ಯಾವಾತ್ತೂ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ ನಿಜ. ಆದರೆ, ಆ ತಪ್ಪುಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಕೆಲವೊಮ್ಮೆ ಗೊತ್ತಿಲ್ಲದೆ ತಪ್ಪುಗಳಾಗುತ್ತವೆ. ಆದರೆ, ತಪ್ಪನ್ನು ತಿದ್ದಿ ಮುನ್ನಡೆಯುವುದು, ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವುದು ಇತ್ಯಾದಿಗಳೂ ಸೇರುತ್ತವೆ. ಆ ಜವಾಬ್ದಾರಿಯನ್ನೇ ಹೊರಲು ಸಿದ್ಧವಿಲ್ಲದಿದ್ದರೆ? ಆಗ ಖಂಡಿತ ಒಳ್ಳೆಯತನವೂ ನಿರ್ಧಾರವಾಗುತ್ತದೆ.

ಸೇಡು ಉಳಿಸಿಕೊಂಡಿರುವುದು

ಮನುಷ್ಯನಾಗಿ ವರ್ತಿಸುವುದು ಎಂದರೆ, ಸದಾ ಕ್ಷಮೆಯ ಗುಣವನ್ನೂ ಹೊತ್ತಿರುವುದು. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಜೊತೆಗೆ ಪ್ರತಿಯೊಬ್ಬರೂ ಕ್ಷಮೆಗೆ ಅರ್ಹರು. ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಖಂಡಿತಾ ಬೇಕು. ಯಾವತ್ತೋ ಏನೋ ಆದ ವಿಚಾರವನ್ನೇ ಮನಸ್ಸಿನಲ್ಲಿ ಹಿಡಿದಿಟ್ಟುಕೊಂಡು ಸೇಡು ತೀರಿಸಿಕೊಳ್ಳುವುದು ಒಳ್ಳೆಯ ಮನುಷ್ಯನ ಲಕ್ಷಣವಂತೂ ಖಂಡಿತಾ ಅಲ್ಲ. ನಿಮ್ಮಲ್ಲೂ ಸೇಡಿನ ಬುದ್ಧಿ ಇದೆಯೇ?

4 ವಿಕ್ಟಿಮ್‌ ಕಾರ್ಡ್‌ ಪ್ಲೇ ಮಾಡುವವರು

ಯಾವುದೇ ಸನ್ನಿವೇಶ ಬಂದರೂ ತಮಗೆ ಅನ್ಯಾಯವಾಗಿದೆ ಎಂದು ಬಿಂಬಿಸುವ ಮಂದಿ ಇರುತ್ತಾರೆ. ಎಲ್ಲಿದ್ದರೂ, ತಮ್ಮನ್ನೇ ತಾವು ಅಂತಹ ಪರಿಸ್ಥಿತಿಯಲ್ಲಿ ನಿಲ್ಲಿಸಿಕೊಳ್ಳುತ್ತಾರೆ. ಎಲ್ಲ ಕರುಣೆ ತಮ್ಮ ಮೇಲಿರಲಿ ಎಂದು ಬಯಸುತ್ತಾರೆ. ತಮ್ಮದೇ ತಪ್ಪಿದ್ದರೂ ಅವರು ಹೀಗೆ ಮಾಡುವಲ್ಲಿ ಬಹಳ ಸಾರಿ ಯಶಸ್ವಿಯೂ ಆಗುತ್ತಾರೆ. ಇಂತಹ ಮಂದಿಯೂ ಅಷ್ಟೇ, ಒಳ್ಳೆಯ ಗುಣದವರು ಎಂದು ಹೇಳಲು ಸಾಧ್ಯವಿಲ್ಲ.

ಗಾಸಿಪ್‌ ಮಾಡುವವರು

ಗಾಸಿಪ್‌ ಮಾಡುವುದು ಬಹಳ ಸಲ ಹಾರ್ಮ್‌ಲೆಸ್‌ ಅನ್ನಬಹುದು. ಆದರೆ, ಬಹಳ ಸಲ ಇದು ಬೇರೆ ವ್ಯಕ್ತಿಯ ವ್ಯಕ್ತಿತ್ವವನ್ನು ಜಡ್ಜ್‌ ಮಾಡುವಂತೆ ಮಾಡುತ್ತದೆ. ಕೆಲವರಿಗೆ ಸದಾ ಬೇರೆಯವರ ಬಗ್ಗೆ ಆಡಿಕೊಳ್ಳುವುದರಲ್ಲೇ ಸಂತೋಷ. ಮತ್ತೊಬ್ಬರು ತಮ್ಮ ಆಪ್ತರು ಎಂದು ಹಂಚಿಕೊಂಡ ಖಾಸಗಿ ಸಂಗತಿಗಳನ್ನೂ ಇವರು ಸಿಕ್ಕಸಿಕ್ಕವರಲ್ಲಿ ಗಾಸಿಪ್‌ ಮಾಡುತ್ತಾರೆ. ಇವು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತವೆ. ಹಾಗಾಗಿ ಇದು ಖಂಡಿತ ಒಳ್ಳೆಯದಲ್ಲ.

ಸಹಾನುಭೂತಿ ಇಲ್ಲದಿರುವವರು

ಮನುಷ್ಯನಿಗೆ ಸಹಾನುಭೂತಿ ಬಹಳ ಮುಖ್ಯ. ಇನ್ನೊಬ್ಬರು ಯಾವ ಪರಿಸ್ಥಿತಿಯಲ್ಲಿದ್ದಾರೆ ಎಂಬುದನ್ನು ಅರಿತುಕೊಂಡು ಕಾಳಜಿ, ಕಳಕಳಿ ವ್ಯಕ್ತ ಪಡಿಸುವುದು, ಅರ್ಥ ಮಾಡಿಕೊಳ್ಳುವುದು, ಅವರ ನೋವಿಗೆ ಕಿವಿಯಾಗುವುದು, ಸಾಂತ್ವನ ಹೇಳುವುದು ಬಹಳ ಮುಖ್ಯ. ಅವೇ ಇಲ್ಲವಾದರೆ, ಒಳ್ಳೆಯವರಾಗುವುದು ಕಷ್ಟ.

ಇದನ್ನೂ ಓದಿ: Red Spinach Benefits: ಕೆಂಪು ಹರಿವೆ; ಇದು ಕೇವಲ ಸೊಪ್ಪಲ್ಲ, ಪೋಷಕಾಂಶಗಳ ಪವರ್‌ಹೌಸ್‌!

ಮತ್ತೊಬ್ಬರ ಸಂತೋಷವನ್ನು ಆನಂದಿಸದೆ ಇರುವವರು

ಕೆಲವರಿಗೆ ಬೇರೆವರು ಸಂತೋಷದಿಂದಿರುವುದನ್ನು ಕಂಡರೆ ಸಹಿಸಲು ಸಾಧ್ಯವಾಗುವುದಿಲ್ಲ. ಬೇರೆಯವರ ಖುಷಿ, ಗೆಲುವು, ಸಂಭ್ರಮ, ಏಳಿಗೆಗಳು ಅವರಿಗೆ ಚೇಳಿನಂತೆ ಕುಟುಕುತ್ತಿರುತ್ತದೆ. ಅಸಾಧಯವಾದ ಅಸೂಯೆ ಮೈತಳೆಯುತ್ತದೆ. ಗೆಳೆಯರೇ ಆದರೂ ಹೊಟ್ಟೆಕಿಚ್ಚಾಗುತ್ತದೆ. ಇಂತಹ ಸ್ವಭಾವವೂ ಅಷ್ಟೇ ಒಳ್ಳೆಯದನ್ನು ಮಾಡದು. ಇದು ಒಳ್ಳೆಯತನವೂ ಅಲ್ಲ. ಈ ಗುಣಗಳು ನಿಮ್ಮಲ್ಲಿವೆಯೇ? ನಿಮ್ಮ ಓರಗೆಯರಲ್ಲಿ ನಿಮಗೆ ಕಂಡಿದೆಯೇ? ಇದು ಖಂಡಿತಾ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳುವ ಸಮಯ. ನಿಮ್ಮನ್ನೇ ಚಿವುಟಿ ನೋಡೊಕೊಳ್ಳಿ ಒಮ್ಮೆ.

Exit mobile version