-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಹುಭಾಷಾ ತಾರೆ ನಟಿ ಪೂಜಾ ಹೆಗ್ಡೆ (Pooja Hegde), ರೇಷ್ಮೆ ಸೀರೆ ಉಟ್ಟು, ಹಣೆಗೆ ಬಿಂದಿ ಇಟ್ಟು, ಮಂಗಳೂರಿನ ಮಲ್ಲಿಗೆ ಮುಡಿದು ಪಕ್ಕಾ ಕನ್ನಡತಿಯಂತೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಇದ್ಯಾವ ಶೂಟಿಂಗ್‌ಗೆ ಎಂದುಕೊಂಡಿರಾ! ಇದು ಸಿನಿಮಾ ಶೂಟಿಂಗ್‌ಗಲ್ಲ! ಸಹೋದರನ ಮದುವೆಗಾಗಿ ಪೂಜಾ ಹೆಗ್ಡೆ ಅಲಂಕರಿಸಿಕೊಂಡ ಪರಿ ಹೀಗಿತ್ತು. ಕಳೆದ ವಾರದಿಂದಲೇ ಸಹೋದರನ ಮದುವೆಯಲ್ಲಿ ಬಿಝಿಯಾಗಿದ್ದ ಪೂಜಾ ಶೂಟಿಂಗ್‌ನಿಂದಲೂ ಬ್ರೇಕ್ ತೆಗೆದುಕೊಂಡು ಕುಟುಂಬದವರೊಂದಿಗೆ ಬಿಝಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಣ್ಣನ ಮದುವೆಯ ನಾನಾ ಫೋಟೋಗಳನ್ನು ಹಾಕಿ ಸಂತಸ ಪಟ್ಟಿದ್ದರು. ಇದೀಗ ಅವರು ತಮ್ಮದೇ ಆದ ರೇಷ್ಮೆ ಸೀರೆ ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದು, ಪಕ್ಕಾ ಕನ್ನಡತಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಪೂಜಾ
ನೋಡಿದ ತಕ್ಷಣ ದುಬಾರಿ ಕಾಂಚಿವರಂ/ಬನಾರಸಿ ರೇಷ್ಮೆ ಸೀರೆಯಂತೆ ಕಾಣುವ ಆರೆಂಜ್ ವರ್ಣದ ಗ್ರ್ಯಾಂಡ್ ಡಿಸೈನರ್ ಗೋಲ್ಡನ್ ಬಾರ್ಡರ್ ರೇಷ್ಮೆ ಸೀರೆಗೆ ಸಿಂಪಲ್ ಥ್ರೆಡ್ ವರ್ಕ್ನ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡಿದ್ದಾರೆ. ಕೇವಲ ಪೂಜಾ ಹೆಗ್ಡೆ ಮಾತ್ರವಲ್ಲ, ತಾಯಿ, ಅತ್ತಿಗೆ ಹೀಗೆ ಮನೆಯವರೆಲ್ಲರೂ ಕೂಡ ರೇಷ್ಮೆ ಸೀರೆಯನ್ನು ಉಟ್ಟು ಟ್ರೆಡಿಷನಲ್ ಲುಕ್‌ನಲ್ಲಿ ಸಂಭ್ರಮಿಸಿದ್ದಾರೆ. ಸ್ಟೈಲಿಸ್ಟ್ ಆಗಲಿ ಡಿಸೈನರ್ ಹೆಸರಾಗಲಿ ಎಲ್ಲಿಯೂ ಪೂಜಾ ಪ್ರಸ್ತಾಪಿಸಿಲ್ಲ! ಹಾಗಾಗಿ ಇದು ಸಾಮಾನ್ಯ ಬೋಟಿಕ್‌ನಲ್ಲಿ ಡಿಸೈನ್ ಮಾಡಿರಬಹುದು ಎಂಬುದು ಫ್ಯಾಷನ್ ವಿಮರ್ಶಕರ ಅಭಿಪ್ರಾಯ.
ಹಸಿರು ಸ್ಟೇಟ್‌ಮೆಂಟ್ ಜ್ಯುವೆಲರಿ ಮ್ಯಾಚಿಂಗ್
ಇನ್ನು ಗೋಲ್ಡ್ ಮಿಶ್ರಿತ ಆರೆಂಜ್ ಸೀರೆಗೆ ಪೂಜಾ ಹೆಗ್ಡೆ ತಿಳಿ ಹಸಿರು ವರ್ಣದ ಗ್ರ್ಯಾಂಡ್ ಕುಂದನ್ ಸ್ಟೇಟ್‌ಮೆಂಟ್ ಜ್ಯುವೆಲರಿಗಳನ್ನು ಧರಿಸಿದ್ದಾರೆ. ಕಮರ್‌ಬಾಂದ್‌ನಿಂದಿಡಿದು, ಮಾಂಗ್‌ಟೀಕಾ ಕೂಡ ಒಂದೇ ವರ್ಣದ್ದು ಮ್ಯಾಚಿಂಗ್ ಮಾಡಿದ್ದಾರೆ. ಹಣೆಗೆ ಚಿಕ್ಕ ಗೋಲ್ಡನ್ ಬೀಡ್ಸ್ ಬಿಂದಿ ಇರಿಸಿದ್ದಾರೆ. ಹೆಣೆದ ಜಡೆಗೆ ಮಂಗಳೂರು ಮಲ್ಲಿಗೆಯನ್ನು ಸುತ್ತಿ ಸಂಭ್ರಮಿಸಿದ್ದಾರೆ. ಅಷ್ಟೇಕೆ? ಫೋಟೋ ಕ್ಯಾಪ್ಷನ್‌ನಲ್ಲೂ ಮಂಗಳೂರು ಡೈರೀಸ್ ಎಂದು ಪ್ರಸ್ತಾಪಿಸಿದ್ದಾರೆ. ಒಟ್ನಲ್ಲಿ, ಮಂಗಳೂರಿನಲ್ಲಿ ನಡೆದ ಅಣ್ಣನ ಮದುವೆಯಲ್ಲಿ ಪಕ್ಕಾ ಕನ್ನಡತಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)