ಪ್ರತಿ ಯಶಸ್ಸಿನ ಹಿಂದೊಂದು ಕಷ್ಟ ದಿನಗಳ ಸರಮಾಲೆ ಇರುತ್ತದೆ. ದಿನ ಬೆಳಗಾಗುವುದರೊಳಗೆ ಯಶಸ್ಸು ಸಾರ್ವಜನಿಕರ ಕಣ್ಣಿಗೆ ಕಂಡಿರಬಹುದಾದರೂ, ಅದರ ಹಿಂದೆ ಕಾಣದ ದಿನಗಳ ಶ್ರಮ ಇದ್ದೇ ಇರುತ್ತದೆ. ಅಂತಹ ಯಶಸ್ಸಿನ ಹಿಂದಿನ ಕತೆಗಳು ಪ್ರತಿಯೊಬ್ಬರ ಶ್ರಮಕ್ಕೂ ನೀರೆರೆಯಬಲ್ಲದು. ಹಲವರ ಬದುಕಿಗೆ ದಾರಿದೀಪವಾಗಬಲ್ಲದು. ಶ್ರಮ ವಹಿಸಿ ಕೆಲಸ ಮಾಡುವ ಮೂಲಕ ಮುಂದೊಂದು ದಿನ ತಾನು ಒಳ್ಳೆಯ ದಿನಗಳನ್ನು ಕಾಣಬಹುದು, ಯಶಸ್ಸು ತನ್ನ ಕೈ ಹಿಡಿದೇ ಹಿಡಿಯುತ್ತದೆ ಎಂಬ ಭರವಸೆಯ ಬೆಳಕು ಕೈಹಿಡಿದು ನಡೆಸುವ ಹುಮ್ಮಸ್ಸನ್ನು ಇವು ನೀಡುವುದು ಸುಳ್ಳಲ್ಲ. ಅಂತಹ ಕತೆಗಳಲ್ಲಿ ಬಾಲಿವುಡ್‌ನ ಯಶಸ್ವೀ ನಟ, ನಿರ್ದೇಶಕ, ಹಾಗೂ ನಿರ್ಮಾಪಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಆಮೀರ್ ಖಾನ್ (Aamir Khan) ಕತೆಯನ್ನೂ ಕೇಳಬೇಕು.
ನಿಮಗೆ ಗೊತ್ತೇ? ಈಗ ಕೋಟಿಗಳ ಲೆಕ್ಕದಲ್ಲಿ ದುಡಿಯುವ, ಕೋಟಿಗಟ್ಟಲೆ ಬಜೆಟ್ ಚಿತ್ರಗಳಲ್ಲಿ ಕೆಲಸ ಮಾಡುವ ಆಮೀರ್ ಖಾನ್ ʼಖಯಾಮತ್ ಸೇ ಖಯಾಮತ್ ತಕ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಾಗ ತಮ್ಮ ಮೊದಲ ಚಿತ್ರದಲ್ಲಿ ದುಡಿದದ್ದು ತಿಂಗಳಿಗೆ ಒಂದು ಸಾವಿರ ರೂಪಾಯಿಗಳನ್ನು. ಹಾಗಂತ ಸ್ವತಃ ಆಮೀರ್ ಖಾನ್ ಅವರೇ ಇತ್ತೀಚೆಗೆ ತನ್ನ ಮೊದಲ ದಿನಗಳ ಯಶೋಗಾಥೆಯ ಬಗ್ಗೆ ನೆನಪುಗಳನ್ನು ಹರವಿಡುವ ಸಂದರ್ಭದ ಮಾತುಕತೆಯೊಂದರಲ್ಲಿ ನೆನಪನ್ನು ಬಿಚ್ಚಿಟ್ಟಿದ್ದಾರೆ.
ತಮ್ಮ ಮೊದಲ ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದ ಆಮೀರ್ ಖಾನ್ ಅವರ ʼಖಯಾಮತ್ ಸೇ ಖಯಾಮತ್ ತಕ್ʼ ಚಿತ್ರ ಏಳು ಫಿಲಂ ಫೇರ್ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದಿತ್ತು. ಏನೂ ಆಗಿರದ ಆಮೀರ್ ಖಾನ್ ಒಂದೇ ಚಿತ್ರದ ಮೂಲಕ ಮನೆಮಾತಾಗಿ ಬದಲಾಗಿದ್ದರು.
ಇತ್ತೀಚೆಗೆ ವೆಬ್‌ಸೈಟೊಂದರ ಸಂದರ್ಶನದಲ್ಲಿ ಮಾತನಾಡುತ್ತಾ ಆಮೀರ್ ಖಾನ್, ನಾನು ಪ್ರಶಸ್ತಿಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಹೀಗೆ ಮಾತನಾಡಬಾರದು ಎಂಬುದು ನನಗೆ ಗೊತ್ತು. ಆದರೂ ನನಗೆ ಪ್ರಶಸ್ತಿಗಳ ಬಗ್ಗೆ ಅಂತಹ ವ್ಯಾಮೋಹ ಆಗಲೂ ಇರಲಿಲ್ಲ, ಈಗಲೂ ಇಲ್ಲ. ಪ್ರಶಸ್ತಿಗಳನ್ನು ಬಾಚುವುದು ನನಗೆ ಜೀವನದ ದೊಡ್ಡ ಸಂಭ್ರಮ ಅಥವಾ ಅನುಭವ ಎಂದು ಯಾವತ್ತೂ ಅನಿಸಲಿಲ್ಲ. ಆದರೆ, ಅಂತಹ ಚಿತ್ರಗಳಿಗಾಗಿ ಕೆಲಸ ಮಾಡಿದ್ದು ನನಗೆ ಜೀವನದ ದೊಡ್ಡ ಅನುಭವ ಎಂದೇ ನಾನು ಇಂದಿಗೂ ಅಂದುಕೊಳ್ಳುತ್ತೇನೆ ಎಂದವರು ಹೇಳಿದ್ದಾರೆ.
ಮನ್ಸೂರ್ ಅವರೊಬ್ಬ ಒಳ್ಳೆಯ ನಿರ್ದೇಶಕ. ಆ ಚಿತ್ರದಲ್ಲಿ ನನಗೆ ಒಳ್ಳೆಯ ಅವಕಾಶ ಸಿಕ್ಕಿತು. ಅದರಲ್ಲಿ ನಾನು ಕೇವಲ ನಟ ಮಾತ್ರವಲ್ಲ, ಸಹಾಯಕ ನಿರ್ದೇಶಕನೂ ಆಗಿ ಕೆಲಸ ಮಾಡಿದೆ. ನನಗೆ ಒಳ್ಳೆಯ ಅನುಭವ ಒಂದೇ ಚಿತ್ರದಲ್ಲಿ ಸಿಕ್ಕಿತ್ತು. ನನ್ನ ಬೆಳವಣಿಗೆಯ ಗತಿ ವೇಗವಾಗಿತ್ತು. ಈ ಚಿತ್ರದಿಂದ ನನಗಾಗ ತಿಂಗಳಿಗೆ ಒಂದು ಸಾವಿರ ರೂಪಾಯಿ ಸಿಗುತ್ತಿತ್ತು. ಅದು ನನ್ನ ಖರ್ಚಿಗೆ ಸಾಕಾಗುತ್ತಿತ್ತು ಕೂಡ ಎಂದವರು ಹೇಳಿಕೊಂಡಿದ್ದಾರೆ.
ಈ ಸಿನಿಮಾ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಾಗ ನನಗೇ ಆಶ್ಚರ್ಯವಾಗಿತ್ತು. ಎಲ್ಲರೂ ಕುಟುಂಬ ಸಮೇತರಾಗಿ ಬಂದು ಥಿಯೇಟರ್‌ನಲ್ಲಿ ಈ ಸಿನಿಮಾ ನೋಡಿದರು. ನಾನು ಆಗ ಸಾಧಾರಣವಾಗಿ ನಟಿಸಿದ್ದೆ ಅಂದುಕೊಂಡಿದ್ದೆ. ನನಗೆ ನಿರ್ದೇಶಕ ಮನ್ಸೂರ್ ಅವರ ಕೆಲಸವೂ, ಜೂಹಿ ಚಾವ್ಲಾ ನಟನೆಯೂ ಇಷ್ಟವಾಗಿತ್ತು, ನನ್ನದಲ್ಲ. ಆದರೆ ನನ್ನ ಮೊದಲ ಸಿನಿಮಾ ಹಿಟ್ ಆಗಿ ನಾನು ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಆಗಿಬಿಟ್ಟೆ. ನನಗಾಗ ಸ್ಟಾರ್‌ಗಿರಿ ಏನೆಂದೂ ಗೊತ್ತಿರಲಿಲ್ಲ. ಆದರೆ ನನ್ನ ಬದುಕೇ ಪೂರ್ತಿ ಬದಲಾಗಿಬಿಟ್ಟಿತು. ನಾನು ರಾತ್ರಿ ಬೆಳಗಾಗುವಷ್ಟರಲ್ಲಿ ಎಂದಿನಂತೆ ಎದ್ದು ಹೊರಗೆ ಓಡಾಡುವಂತಿರಲಿಲ್ಲ. ಜನ ನನ್ನನ್ನು ಗುರುತಿಸಲಾರಂಭಿಸಿದ್ದರು. ಕೊನೆಗೆ ನಾನು ಒಂದು ಹಳೆ ಫಿಯೆಟ್ ಕಾರನ್ನು ಕೊಂಡುಕೊಂಡೆ. ಆದರೆ, ಅದರಲ್ಲೂ ಜನ ನನ್ನನ್ನು ಗುರುತಿಸಲಾರಂಭಿಸಿದರು. ನಾನು ಕಾರು ಓಡಿಸುತ್ತಿದ್ದರೆ, ನನ್ನ ಅಕ್ಕಪಕ್ಕ ಇದ್ದ ಬೇರೆ ಆಟೋ, ಕಾರು ಬೈಕ್‌ಗಳೆಲ್ಲ ಅಲ್ಲಲ್ಲೇ ನಿಂತು ಟ್ರಾಫಿಕ್ ಜಾಮ್ ಆಗಿ ಬಿಡುತ್ತಿತ್ತು. ಈ ಸ್ಟಾರ್‌ಗಿರಿಯೆಂಬುದು ಇದ್ದಕ್ಕಿದ್ದ ಹಾಗೆ ನನ್ನ ಬದುಕಿನಲ್ಲಿ ಬಹುದೊಡ್ಡ ಅಲೆಯಂತೆ ಬಂದೆರಗಿತು ಎಂದು ಅವರು ತನ್ನ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.
ನಾನು ದೆಹಲಿಗೋ, ಅಥವಾ ಎಲ್ಲಾದರೂ ಹೋದರೆ ಹೋಟೆಲ್‌ನಲ್ಲಿ ಉಳಿದುಕೊಳ್ಳಲು ಒಳ ಬರುತ್ತಿದ್ದಂತೆ, ಇಡೀ ಹೋಟೆಲ್ ಸ್ಟಾಫ್ ನನ್ನ ಜೊತೆ ಮಾತನಾಡಲು ಬರುತ್ತಿದ್ದರು. ಆಮೇಲೆ ನಾನಲ್ಲಿ ಬಂದಿದ್ದು ಗೊತ್ತಾಗಿ ಎಲ್ಲರೂ ನನ್ನನ್ನು ನೋಡಲು ಬರುತ್ತಿದ್ದರು. ಬದುಕು ದುಸ್ತರವಾಗತೊಡಗಿತು. ಇದನ್ನೆಲ್ಲ ಹೇಗೆ ಸಂಭಾಳಿಸಬೇಕೆಂಬುದೇ ಆಗ ಗೊತ್ತಾಗುತ್ತಿರಲಿಲ್ಲ. ಜನರು ಹೊಗಳುತ್ತಿದ್ದರೆ ನಾಚಿಕೆಯಾಗುತ್ತಿತ್ತು. ನನಗಾಗ ಹೊಗಳಿಕೆಯನ್ನು ಹೇಗೆ ಸ್ವೀಕರಿಸಬೇಕೆಂದೂ ಗೊತ್ತಾಗುತ್ತಿರಲಿಲ್ಲ. ಮೊದಲೇ ನಾನು ನಾಚಿಕೆ ಸ್ವಭಾವದ ಮನುಷ್ಯನಾಗಿದ್ದೆ ಎಂದು ನೆನೆಸಿಕೊಂಡು ನಗುತ್ತಾರೆ ಆಮೀರ್ ಖಾನ್.
ಆಮೀರ್ ಖಾನ್ ಅವರು ಇದೇ ಡಿಸೆಂಬರ್ ೯ರಂದು ತೆರೆ ಕಾಣಲಿರುವ ಕಾಜೋಲ್ ನಟನೆಯ ಕೌಟುಂಬಿಕ ಸಿನಿಮಾ ಸಲಾಮ್ ವೆಂಕಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ಲಾಲ್ ಸಿಂಗ್ ಚಡ್ಡಾ ನಂತರ ಖಾನ್ ವೃತ್ತಿ ಜೀವನದಲ್ಲಿ ಬ್ರೇಕ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ| Akshay Kumar | ಲೈಂಗಿಕ ಶಿಕ್ಷಣ ಕುರಿತು ಸಿನಿಮಾ ಮಾಡಲಿದ್ದಾರೆ ಅಕ್ಷಯ್ ಕುಮಾರ್!