ಅಂದೊಂದು ಕಾಲವಿತ್ತು. ಆಗ ಓದು (reading hobby) ಅನ್ನುವುದೊಂದು ಮನಸ್ಸಿಗೆ ಅತ್ಯಂತ ಹತ್ತಿರವಾದ ಜ್ಞಾನಾರ್ಜನೆಯ (knowledge) ಜೊತೆಗೆ ಮನರಂಜನೆಯೂ (entertainment) ಹೌದು. ಎಲ್ಲರ ಮನೆಯಲ್ಲಿ ದುಡ್ಡು ಕೊಟ್ಟು ಖರೀದಿ ಮಾಡಿ ಪುಸ್ತಕ ಓದುವ ಆರ್ಥಿಕ ತಾಕತ್ತು ಇಲ್ಲವಾದರೂ, ಇದ್ದವರ ಬಳಿಯಿಂದ ಪುಸ್ತಕ ಎರವಲು ಪಡೆದು ಓದಿ ಮುಗಿಸಿ ವಾಪಾಸು ಮಾಡುವುದು, ಗ್ರಂಥಾಲಯದಿಂದ ತರುವುದು (library borrow) ಇತ್ಯಾದಿಗಳನ್ನು ಮಾಡುತ್ತಿದ್ದ ಕಾಲವದು. ಆಗೆಲ್ಲ, ಅವರಿವರ ಮನೆಗೆ ಹೋದರೆ, ಅಲ್ಲಿ ಸಿಕ್ಕ ಮ್ಯಾಗಜಿನ್‌ಗಳನ್ನೋ, ಪುಸ್ತಕದ ರಾಶಿಯನ್ನೋ ಕಣ್ಣಾಡಿಸಿ ಕೂತು ಓದಿ ಬರುತ್ತಿದ್ದುದೂ ಸಾಮಾನ್ಯ. ಶಾಲೆ ಕಾಲೇಜುಗಳಲ್ಲಿ ಓದುವ ಮಕ್ಕಳೂ, ಪುಸ್ತಕಗಳ ನಡುವೆ ಕಥೆ ಕಾದಂಬರಿಯನ್ನಿಟ್ಟು ಕದ್ದು ಓದುತ್ತಿದ್ದ ಕಾಲವೂ ಇತ್ತು. ಅಷ್ಟೊಂದು ಪುಸ್ತಕ ಪ್ರೀತಿ (book love) ಇದ್ದ ಕಾಲವದು. ಆದರೆ, ಈಗ, ಹಾಗೆ ಪುಸ್ತಕ ಓದುತ್ತಿದ್ದ ಮಂದಿಯ ಕೈಯಿಂದಲೂ ಪುಸ್ತಕ ನಿಧಾನವಾಗಿ ಮಾಯವಾಗುತ್ತಿದೆ ಎಂದರೆ ನಂಬಲೇಬೇಕು!
ಹೇಳಿ ಕೇಳಿ, ಇಂದಿನ ಡಿಜಿಟಲ್ ಜಗತ್ತಿನಲ್ಲಿ (digital world) ದಿನೇ ದಿನೇ ನಮ್ಮ ಕೈಯಲ್ಲಿ ಪುಸ್ತಕದ ಜಾಗವನ್ನು ಫೋನ್ ಆವರಿಸಿಕೊಂಡಿದೆ. ಪೇಪರ್, ಮ್ಯಾಗಜಿನ್ ಓದುವವರ್ಯಾರಿದ್ದಾರೆ ಎಂದರೆ, ಫೋನ್‌ನಲ್ಲೇ ಸುದ್ದಿ ಓದುತ್ತೇವೆ ಎಂದು ಜಾರಿಕೊಳ್ಳುವವರೂ ಇದ್ದಾರೆ. ಎಲ್ಲವೂ ಬೆರಳ ತುದಿಗೆ ಬಂದಿರುವಾಗ ಯಾರಿಗಾದರೂ ಕಷ್ಟವೆಲ್ಲಿದೆ! ಆದರೆ, ಓದುವ ಸುಖದೆಡೆಗೆ ಮತ್ತೆ ಹೊರಳಬೇಕು ಎಂದು ಹಲವರು ಮನಸ್ಸು ಮಾಡಿದರೂ, ಡಿಜಿಟಲ್ ಜಗತ್ತು ಮಾತ್ರ ಪುಸ್ತಕದೆಡೆಗೆ ವಾಲಲು ಅಷ್ಟು ಸುಲಭವಾಗಿ ಯಾರನ್ನೂ ಬಿಡುವುದಿಲ್ಲ. ಮಕ್ಕಳಿಗೆ ಓದುವ ಅಭ್ಯಾಸವಿಲ್ಲ ಎಂದು ದೂರುವ ಹೆತ್ತವರೂ ಕೂಡಾ, ನೆಟ್‌ಫ್ಲಿಕ್ಸ್, ಪ್ರೈಮ್ ಎಂದುಕೊಂಡು ಸಮಯವಾದಾಗಲೆಲ್ಲ ಫೋನು ಹಿಡಿದು ಕೂರುವುದು ರೂಢಿಯಾಗಿದೆ. ಹೀಗಾಗಿ ಮಕ್ಕಳಿಗಾದರೂ ಓದುವ ರುಚಿ ಹತ್ತೀತು ಹೇಗೆ?
ಹಾಗಾದರೆ, ನಮಗೆ ಮತ್ತೆ ಪುಸ್ತಕದೆಡೆಗೆ ಮರಳಲು ಸಾಧ್ಯವೇ ಇಲ್ಲವೇ? ಯಾವ ಕೆಲವು ಅಭ್ಯಾಸಗಳನ್ನು ಬೆಳೆಸಿಕೊಳ್ಳುವ ಮೂಲಕ ನಾವು ಮತ್ತೆ ನಮ್ಮನ್ನು ಪುಸ್ತದೆಡೆಗೆ ಕೈಹಿಡಿದು ನಡೆಸಬಹುದು ಎಂಬುದನ್ನು ನೋಡೋಣ.
೧. ನಿಮ್ಮ ಮನೆಯಲ್ಲೊಂದು ಓದುವ ಕೋಣೆಯಿರಲಿ. ಮನೆ ಸಣ್ಣದಾಗಿದ್ದರೆ, ಓದಲಿಕ್ಕಾಗಿಯೇ ಕೋಣೆ ಹೊಂದುವುದು ಸಾಧ್ಯವಾಗದಿದ್ದರೇನಂತೆ, ಮನೆಯ ಒಂದು ಕೋಣೆಯ ಮೂಲೆಯ ಚಂದದ ಜಾಗ ಓದುವ ಕಾರ್ನರ್ ಆಗಲಿ. ಆ ಜಾಗಕ್ಕೆ ನೀವು ಹೋದರೆ, ಅಲ್ಲಿಂದ ನಿಮ್ಮ ಯೋಚನೆ ಬೇರೆಡೆಗೆ ಗದಂತಿರಲಿ. ಮನಸ್ಸಿಗೆ ಹಿತ ನೀಡುವ ಶಾಂತವಾದ ಜಾಗ ಆದಾಗಿರಲಿ. ಕಿಟಕಿ ಬದಿಯ, ಚಂದನೆಯ ಗಾಳಿ ಬೆಳಕಿರುವ ಆ ಜಾಗದಲ್ಲೊಂದು ಕೂರಲು ವ್ಯವಸ್ಥೆ, ಒಂದಿಷ್ಟು ನಿಮ್ಮದೇ ಕಲೆಕ್ಷನ್‌ನ ಪುಸ್ತಕಗಳನ್ನು ನೀಟಾಗಿ ಇಡುವಷ್ಟು ಜಾಗ ಮಾಡಿಕೊಳ್ಳಿ.
೨. ಓದುವ ಬಗ್ಗೆ ಒಂದು ಗುರಿ ಇಟ್ಟುಕೊಳ್ಳಿ. ದಿನಕ್ಕೆ ಕಡೇ ಪಕ್ಷ ಎಷ್ಟು ಸಮಯ ನಾನು ಓದಲು ನೀಡಬಹುದು ಎಂಬ ನಿರ್ಧಾರ ಮಾಡಿಕೊಳ್ಳಿ. ಎಷ್ಟೇ ಬ್ಯುಸಿ ಜೀವನವಾದರೂ, ನಮಗೆ ನಾವು ಕೊಡಬಹುದಾದ ಗಿಫ್ಟ್ ಇದು. ಹೆಚ್ಚು ಸಮಯ ಸಿಗದಿದ್ದರೂ ತೊಂದರೆಯಿಲ್ಲ. ಕಡೇ ಪಕ್ಷ ದಿನದಲ್ಲೊಂದು ೧೫ರಿಂದ ೨೦ ನಿಮಿಷವಾದರೂ ಓದಲು ಸಾಧ್ಯವಾಗುವ ಹಾಗೆ ಮಾಡಿಕೊಳ್ಳಿ.
೩. ನಿಮಗೆ ಯಾವ ಕ್ಷೇತ್ರ ಇಷ್ಟವೋ ಆ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕ ಆಯ್ಕೆ ಮಾಡಿಕೊಳ್ಳಿ. ಕಥೆಯೋ, ಕಾದಂಬರಿಯೋ, ಕವನವೋ, ಅಥವಾ, ರಾಜಕೀಯವೋ, ಧಾರ್ಮಿಕವೋ, ಯಾವುದಾದರೂ ಆಗಿಸರಲಿ. ನಿಮ್ಮ ಕುತೂಹಲವನ್ನು ಹಿಡಿದಿಟ್ಟುಕೊಳ್ಳುಂಥದ್ದಾಗಿರಲಿ.
೪. ಆದಷ್ಟೂ ಡಿಜಿಟಲ್ ಜಗತ್ತಿನಿಂದ ದೂರವಿರಿ. ಅನಗತ್ಯವಾಗಿ ಅವುಗಳಿಗಾಗಿ ನೀವೆಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ ಎಂದು ನಿಮ್ಮನ್ನು ನೀವು ಗಮನಿಸಿ. ೧೦ ನಿಮಿಷ ಓದಲು ಕೂತರೂ, ಫೋನ್ ನಿಮ್ಮಿಂದ ದೂರವಿಟ್ಟು ಕೂರಿ.
೫. ಒಂದು ನಿರ್ಧಿಷ್ಟ ಸಮಯವನ್ನು ನಿತ್ಯವೂ ಓದಿಗಾಗಿ ಮೀಸಲಿಡಿ. ದಿನಕ್ಕೆ ಹತ್ತು ನಿಮಿಷವಾದರೂ, ಇಂಥ ಹೊತ್ತಿನಲ್ಲಿ ಓದಲು ಕೂರುವುದು ಎಂಬುದು ನಿಮ್ಮ ದಿನಚರಿಯಾಗಲಿ. ಬಹುತೇಕರಿಗೆ ಎಲ್ಲ ಕೆಲಸ ಮುಗಿಸಿ ಮಲಗುವ ಮೊದಲು ಕೊಂಚ ಹೊತ್ತು ಸಮಯ ಸಿಗಬಹುದು. ಆಗ ಫೋನ್ ಹಿಡಿದು ಕೂರುವ ಬದಲು ಪುಸ್ತಕವನ್ನು ಕಣ್ಣಾಡಿಸಲು ಸಮಯ ಇಟ್ಟುಕೊಳ್ಳಿ.
೬. ಯಾವುದಾದರೂ ಬುಕ್‌ಕ್ಲಬ್ಬನ್ನೋ, ಓದುವ ಬಳಗವನ್ನೋ ಸೇರಿಕೊಳ್ಳಬಹುದು. ಸಾಮಾಜಿಕ ಜಾಲಗಳಲ್ಲಿ ಈ ಬಗೆಗೆ ಚರ್ಚೆಯಾಗುವ ಪುಟಗಳನ್ನು ಫಾಲೋ ಮಾಡಬಹುದು. ಆ ಮೂಲಕ ಪುಸ್ತಕ ಓದಲು ಪ್ರೇರಣೆ ಪಡೆದುಕೊಳ್ಳಿ.
೭. ತಾಳ್ಮೆ ಇರಲಿ. ಒಮ್ಮೆಯೇ ಇಡೀ ಪುಸ್ತಕ ರಾತ್ರಿ ಹಗಲು ಕೂತು ಓದಲು ನಿಮಗೆ ಮೊದಲಿನಂತೆ ಸಾಧ್ಯವಾಗದಿರಬಹುದು, ಸಮಯ ಸಿಗದೇ ಇರಬಹುದು. ಆದರೆ, ಬೇರೆ ಜವಾಬ್ದಾರಿಗಳನ್ನು ನಿಭಾಯಿಸುತ್ತಲೇ, ನಿಮ್ಮ ಆಸಕ್ತಿಯಾದ ಪುಸ್ತಕ ಓದುವುದನ್ನೂ ಹೇಗೆ ಮುಂದುವರಿಸಬಹುದು ಎಂಬುದಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿ.
೮. ನಿಮಗೆ ಓದಲು ಸಾಧ್ಯವಾಗದಿರುವುದಕ್ಕೆ ನೆಪ ಹುಡುಕಬೇಡಿ. ಅದು ನಿಮಗೇ ನೀವು ಮೋಸ ಮಾಡಿದಂತೆ! ಓದಲು ಪ್ರಾಮಾಣಿಕ ಪ್ರಯತ್ನ ಮಾಡಿ. ಖಂಡಿತವಾಗಿಯೂ ಇದರಲ್ಲಿ ಸಫಲರಾಗುತ್ತೀರಿ! ನಾವು ಸಫಲರಾದರೆ, ನಮ್ಮ ಮಕ್ಕಳೂ ನಮ್ಮನ್ನೇ ನೋಡಿ ಕಲಿಯುತ್ತಾರೆ!
ಇದನ್ನೂ ಓದಿ: Life tips: ಅಂದುಕೊಂಡದ್ದನ್ನು ಮಾಡಲಾಗದಿದ್ದರೆ ನೀವು ಹೀಗಿದ್ದೀರಿ!