Site icon Vistara News

Friendship Day 2023: ಗೆಳೆತನದ ಭಾಷೆ: ಇಲ್ಲಿ ಸಾರಿ ಹೇಳದೆಯೂ ಕ್ಷಮೆ ಕೇಳಬಹುದು ಗೊತ್ತೇ?

sorry

ಎಷ್ಟೇ ಹತ್ತಿರದ ಗೆಳೆಯರಾದರೂ, ಕೆಲವೊಮ್ಮೆ ಇಬ್ಬರ ಸಂಬಂಧದಲ್ಲಿ ಸಣ್ಣಪುಟ್ಟದಾದರೂ ಮನಸ್ತಾಪಗಳು, ಜಗಳಗಳು ಬಂದೇ ಬರುತ್ತವೆ. ಯಾಕೆಂದರೆ ಎಲ್ಲರೂ ಮನುಷ್ಯರೇ! ಕೆಲವು ಸಂದರ್ಭಗಳು ಇಬ್ಬರ ನಡುವೆ ದೊಡ್ಡ ಕಂದಕವನ್ನು ಸೃಷ್ಟಿಸಬಹುದು. ಆದರೆ, ತಪ್ಪುಗಳನ್ನು ತಿದ್ದಿಕೊಂಡು, ಅಹಂಕಾರದಿಂದ ನಡೆಯದೇ, ಸರಿಪಡಿಸಿಕೊಂಡು ಮುಂದುವರಿಯುವುದು ನಿಜವಾದ ಗೆಳೆತನ. ಕೆಲವೊಮ್ಮೆ ಹೀಗೆ ಗೆಳೆತನದಲ್ಲಿ ನಮ್ಮಿಂದ ತಪ್ಪುಗಳಾದಾಗ, ಮನಸ್ತಾಪಗಳಾದಾಗ, ತಾನು ತಪ್ಪು ಮಾಡಿಬಿಟ್ಟೆ ಅನಿಸಿದಾಗ, ಸಾರಿ ಎಂದು ಕೇಳುವುದು ತೀರಾ ವಾಚ್ಯವಾಯಿತು ಅನಿಸಿದಾಗ, ಕ್ಷಮಿಸು ಎಂದು ಹೇಳದೆಯೂ ನಮ್ಮ ಗೆಳೆಯನಿಗೆ ಅಥವಾ ಗೆಳತಿಗೆ ನಮ್ಮ ಮನಸ್ಸಿನ ಭಾವನೆಯನ್ನು ಸ್ಪಷ್ಟವಾಗಿ ತಲುಪಿಸಬಹುದು. ನಮ್ಮಿಂದ ತಪ್ಪಾಯಿತು ಎಂಬುದನ್ನು ನಮ್ಮ ಬಾಯಿ ಮಾತಿನ ಹೊರತಾಗಿ ಕೃತಿಯಲ್ಲೂ ತೋರಿಸಬಹುದು. ಆ ಮೂಲಕ, ಗೆಳೆತನ ಅಹಂಕಾರ ಸ್ವಪ್ರತಿಷ್ಠೆಗಳನ್ನೂ ಮೀರಿ ಇನ್ನೂ ಗಾಢವಾಗಿ ರೂಪುಗೊಳ್ಳಲು ಸಹಾಯವಾಗಬಹುದು. ಬನ್ನಿ, ಸಾರಿ ಹೇಳದೆಯೂ ಗೆಳೆಯರಲ್ಲಿ ಹೇಗೆ ಕ್ಷಮೆ ಕೇಳಬಹುದು (asking sorry in friendship) ಎಂಬುದನ್ನು ಇಂದಿನ ಗೆಳೆಯರ ದಿನದ ಹಿನ್ನೆಲೆಯಲ್ಲಿ (Friendship Day 2023) ನೋಡೋಣ.

೧. ನಿಮ್ಮ ಹಾಗೂ ಗೆಳೆಯನ ಅಥವಾ ಗೆಳತಿಯ ನಡುವಿನ ಮನಸ್ತಾಪಕ್ಕೆ ಕಾರಣವಾದ ಘಟನೆಯ ಬಗ್ಗೆ ನೇರವಾಗಿ ಹೇಳಿ. ʻಇಂಥ ಘಟನೆ ಹೀಗೆ ಬದಲಾಗುವುದಕ್ಕೆ ನಾನೇ ಕಾರಣವಾದೆ. ಇದರಿಂದ ನಿನಗೆ ಬೇಸರವಾಯಿತು ಎಂಬುದು ಗೊತ್ತಿದೆ. ಪರಿಸ್ಥಿತಿ ಇಂಥದ್ದೊಂದು ಸನ್ನಿವೇಶವನ್ನುನಮ್ಮ ನಡುವೆ ಸೃಷ್ಟಿಸಿತು. ಇನ್ನು ಮುಂದೆ ನಾನು ಹೀಗೆ ವರ್ತಿಸಲಾರೆ. ಹೀಗಾಗಬಾರದಿತ್ತು ಎಂದು ಎಷ್ಟೋ ಬಾರಿ ಯೋಚಿಸಿದೆʼ ಇತ್ಯಾದಿ ಇತ್ಯಾದಿ ಮನಸ್ಸಿನ ಮಾತುಗಳನ್ನು ನೇರವಾಗಿ ಹೇಳಿ. ಇದನ್ನು ಹೇಳಲು ನಿಮ್ಮ ಇಗೋ ಅಥವಾ ಅಹಂಕಾರ ಅಡ್ಡ ಬರದೇ ಇರಲಿ. ಮನಸ್ಸಿನಲ್ಲಿ ಏನೋ ಇಟ್ಟುಕೊಂಡು ಸಾರಿ ಎಂದಷ್ಟೇ ಹೇಳಿ ಮುಖ ತಿರುಗಿಸಬೇಡಿ.

೨. ನಿಮ್ಮದು ತಪ್ಪು ಎಂಬ ಭಾವನೆ ನಿಮಗೆ ಬಂದಿದ್ದರೆ, ಮನಸ್ತಾಪಕ್ಕೆ ಕಾರಣವಾದ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಹಾಕಿಕೊಳ್ಳಿ. ಆ ಸಂದರ್ಭಕ್ಕೆ ಅವರು ಹೇಗೆಯೇ ಕಿರುಚಾಡಿರಲಿ, ಹೇಗೆಯೇ ಬೈದಿರಲಿ. ತಪ್ಪು ನಿಮ್ಮದೆಂದಾದ ಮೇಲೆ, ಗೆಳೆತನ ಉಳಿಯುವುದು ಮುಖ್ಯ ಎಂದನಿಸಿದಾಗ, ಇದನ್ನು ಮಾಡಲು ಖಂಡಿತಾ ನಿಮಗೆ ಕಷ್ಟವಾಗಲಿಕ್ಕಿಲ್ಲ. ಗೆಳೆತನದಲ್ಲಿ ಇಷ್ಟೂ ಮಾಡಲಾಗದಿದ್ದರೆ ಅದು ಗೆಳೆತನ ಹೇಗಾದೀತು!

೩. ಇಂಥ ಘಟನೆ ನಡೆದಾಗ ಅವರಿಗೆ ಅವರ ಸಮಯ ಕೊಡಿ. ನೀವು ಈ ಎಲ್ಲವುಗಳನ್ನೂ ಮಾಡಿದರೂ, ಅವರಿಗೆ ನಿಮ್ಮ ಜೊತೆ ಸಹಜವಾಗಿರಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಅವರಿಗೆ ಅವರದೇ ಆದ ಸಮಯ ಕೊಡಿ. ಆತನಿಗೆ/ಆಕೆಗೆ ಕೊಬ್ಬು, ಇಷ್ಟು ಹೇಳಿದ ಮೇಲೂ ಸೊಕ್ಕು ಮಾಡುತ್ತಿದ್ದಾರೆ ಎಂಬಿತ್ಯಾದಿ ಮಾತುಗಳು ನಿಮ್ಮಿಂದ ಬರದಿರಲಿ. ಅವರ ಜೊತೆಗೆ ಆದಷ್ಟೂ ಸಂಯಮದಿಂದ ವರ್ತಿಸಿ. ಇದರಿಂದ ನಿನಗೆ ಇಷ್ಟು ಬೇಸರವಾಗುತ್ತದೆ ಎಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ ಅನ್ನಿ.

೪. ಜೊತೆಗೊಂದು ವಾಕ್‌, ಒಂದು ಜೊತೆಗೇ ಊಟ, ಸಂಜೆಯ ಸ್ನ್ಯಾಕ್‌ ಇತ್ಯಾದಿಗಳನ್ನು ಮಾಡಿ. ಮನಸ್ಸು ಬಿಚ್ಚಿ ಮಾತನಾಡಿ. ಮಾತಿಗಿಂತ, ನೀವು ವ್ಯಕ್ತಪಡಿಸುವ ಭಾವನೆಗಿಂತ ಮಿಗಿಲಾದ ಭಾಷೆಯೇ ಇಲ್ಲ. ಉತ್ತಮ ಗೆಳೆಯರು ನೀವಾಗಿದ್ದರೆ, ಖಂಡಿತ ಅವರು ನಿಮ್ಮ ತಪ್ಪನ್ನು ಕ್ಷಮಿಸಿ ಮತತೆ ನಿಮ್ಮೆಡೆ ತೋಳುಗಳನ್ನು ಚಾಚುತ್ತಾರೆ. ಹೋಗಲಿ ಬಿಡು ಗೆಳೆಯಾ ಎಂದು ನಿಮ್ಮ ಜೊತೆಗೊಂದು ಬೈಟೂ ಚಹಾಕ್ಕೆ ಬಂದೇ ಬರುತ್ತಾರೆ.

೫. ಇಂತಹ ಮನಸ್ತಾಪಗಳಾದ ಎಂದಿಗೂ ನಿಮ್ಮ ಫೋನಿನ ಮೂಲಕ ಸಂದೇಶ ಕಳಿಸಿ ಸುಮ್ಮನಾಗಬೇಡಿ. ಭಾವನೆಗಳನ್ನು ಸರಿಯಾಗಿ ತಲುಪಿಸುವಲ್ಲಿ ಮೊಬೈಲ್‌ ಸಂದೇಶಗಳು ಸೋಲುತ್ತವೆ. ಇದರಿಂದ ಅಪಾರ್ಥವಾಗುವ ಸಂಭವವೂ ಇವೆ. ನಿಮ್ಮ ವಾಕ್ಯಗಳನ್ನು ಬೇರೆಯೇ ಮಾದರಿಯಲ್ಲಿ ಅವರು ಓದಿ ಭಾವವನ್ನು ಗ್ರಹಿಸದೇ ಹೋಗುವ ಅಪಾಯ ಇದೆ. ಹಾಗಾಗಿ ಇಂಥ ಸಂದರ್ಭಗಳಲ್ಲಿ ಅವರನ್ನು ಭೇಟಿಯಾಗಿ, ಅಥವಾ ಫೋನ್‌ ಮೂಲಕ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿ.

ಇದನ್ನೂ ಓದಿ: Friendship Day 2023: ಗೆಳೆತನದ ಸೀಕ್ರೆಟ್; ದೂರದ ಗೆಳೆಯರು ಸದಾ ಇರಲಿ ನಿಮ್ಮ ಹತ್ತಿರ!

೬. ಹಳೆಯ ವಿಚಾರಗಳನ್ನು ಮಧ್ಯೆ ತರಬೇಡಿ. ಹಳೆಯ ತಪ್ಪುಗಳನ್ನು ಈಗ ಎಳೆದು ತಂದು ಹೋಲಿಕೆ ಮಾಡಬೇಡಿ. ಆದಷ್ಟೂ ವಿಷಯ ತಿಳಿಯಾಗಿ ಇಡಲು ಪ್ರಯತ್ನಿಸಿ.

೭. ಘಟನೆಯ ಕಾವು ಸ್ವಲ್ಪ ತಗ್ಗಲಿ. ಅವರು ಕೋಪದಲ್ಲಿದ್ದರೆ, ಕೊಂಚ ಅವರನ್ನು ತಣ್ಣಗಾಗಲು ಬಿಡಿ. ಅವರೂ ಶಾಂತವಾಗಿ ಯೋಚಿಸಲು ಸ್ವಲ್ಪ ಸಮಯ ಕೊಡಿ. ನಂತರ ನಿಧಾನವಾಗಿ ಮಾತನಾಡಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

ನೆನಪಿಡಿ, ಕ್ಷುಲ್ಲಕ ಕಾರಣಗಳಿಗಾಗಿ ಜಗಳವಾಡದೆ, ಗೆಳೆತನದ ಮಹತ್ವ ಅರಿಯಿರಿ. ಜೀವನದಲ್ಲಿ ಕುಟುಂಬ ಹೇಗೆ ಮುಖ್ಯವೋ, ಗೆಳೆಯರೂ ಅಷ್ಟೇ ಮುಖ್ಯ. ಸಂಬಂಧಗಳಿಗೆ ಗೌರವ ಕೊಡಿ. ತಾನೇತಾನಾಗಿ ಸಮಸ್ಯೆಗಳೇ ಇಲ್ಲವಾಗುತ್ತವೆ.

ಇದನ್ನೂ ಓದಿ: Friendship Day 2023: ನೀವು ಒಳ್ಳೆಯ ಗೆಳೆಯರೇ? ರಾಶಿಗನುಗುಣವಾಗಿ ನಿಮ್ಮ ಗೆಳೆತನದ ಗುಣ ಹೀಗಿದೆ!

Exit mobile version