Site icon Vistara News

Friendship Day 2023: ಗೆಳೆತನದ ಸೀಕ್ರೆಟ್; ದೂರದ ಗೆಳೆಯರು ಸದಾ ಇರಲಿ ನಿಮ್ಮ ಹತ್ತಿರ!

friendship

ಕಾಲೇಜಿನಲ್ಲಿ, ಹಾಸ್ಟೆಲಿನಲ್ಲಿ ನಮ್ಮ ಗೆಳೆಯ/ತಿಯರನ್ನು ನಿತ್ಯವೂ ನೋಡುತ್ತೇವೆ, ಮಾತನಾಡುತ್ತೇವೆ, ಕಾಲೆಳೆದುಕೊಂಡು ಖುಷಿ ಪಡುತ್ತೇವೆ. ಲೋಕದ ತರಲೆಗಳನ್ನೆಲ್ಲ ಮಾಡುತ್ತೇವೆ. ಆಗ ಒಟ್ಟಿಗೇ ಇದ್ದುಕೊಂಡು ಮಾಡದ ಸಾಹಸಗಳೇ ಜಗತ್ತಿನಲ್ಲಿ ಇರುವುದಿಲ್ಲ. ಇಂತಹ ಬಂಧಗಳು ಬಹುಕಾಲದ ಗೆಳೆತನಕ್ಕೆ (relationship tips) ನಾಂದಿ ಹಾಡುತ್ತದೆ. ನಂತರ ನಾವೆಲ್ಲರೂ ವೃತ್ತಿ, ಜೀವನದ ಆಯ್ಕೆಗಳ ಹಿಂದೆ ಬಿದ್ದು ಸ್ಥಳ ಸಂದರ್ಭಗಳಲ್ಲಿ ದೂರಾಗಿಬಿಡುತ್ತೇವೆ. ಇಂತಹ ಸಂದರ್ಭಗಳಲ್ಲಿ ಕೆಲವು ಗೆಳೆತನಗಳು ಉಳಿಯುತ್ತವೆ. ಕೆಲವು ಕಾಲದ ಓಟದಲ್ಲಿ ಮರೆಯಾಗುತ್ತವೆ. ಕೆಲವು ಸ್ನೇಹಿತರ ದಿನದಂದು (friendship day 2023) ವಿಶ್‌ ಮಾಡುವುದಕ್ಕಷ್ಟೇ ಉಳಿಯುತ್ತವೆ. ಇಂದಿನ ಕಾಲಘಟ್ಟದಲ್ಲಿ ಗೆಳೆಯರನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳುವುದು ಕಷ್ಟವೇನಲ್ಲ. ಸಾಮಾಜಿಕ ಜಾಲತಾಣಗಳು, ಮೊಬೈಲ್‌ ಫೋನುಗಳು ಇರುವಾಗ ಬೆರಳ ತುದಿಯಲ್ಲೇ ಕ್ಷಣ ಮಾತ್ರದಲ್ಲಿ ನಮ್ಮ ಗೆಳೆಯರ ಜೊತೆ ಮಾತಾಡಬಹುದು. ಮನಬಿಚ್ಚಿ ಹರಟಬಹುದು (friendship secrets). ಆದರೂ, ಹಲವು ಗೆಳೆತನಗಳು ಮರೆಯಾಗುವುದು ಹೇಗೆ? ಬೇರೆ ಜಾಗಕ್ಕೆ ಹೋದ ತಕ್ಷಣ ಗೆಳೆತನವೂ ನಿಲ್ಲುವುದು ಯಾಕೆ? ಇಂತಹ ಪ್ರಶ್ನೆ ನಿಮ್ಮನ್ನು ಕಾಡಿದರೆ, ಅದಕ್ಕೆ ನೀವೇ ಹೊಣೆಗಾರರು. ನಿಮ್ಮ ಗೆಳೆಯರ ಸಂಪರ್ಕ ನಿಮಗೆ ತಪ್ಪಿದೆಯೆಂದಾದಲ್ಲಿ, ಅದರಲ್ಲಿ ನಿಮ್ಮ ಪಾಲೂ ಇದೆ. ಹಾಗಾದರೆ, ಬೇಕೆನ್ನುವ, ಕಾಡುವ ವ್ಯಕ್ತಿಗಳನ್ನು ನಿಮ್ಮ ಗೆಳೆಯರೇ ಆಗಿ ದೂರದೂರಿಗೆ ಹೋದರೂ ಮುಂದುವರಿಸುವುದು ಹೇಗೆ (friendship tips) ಎಂಬ ಗೊಂದಲವಿದ್ದರೆ ಇಲ್ಲಿ ಓದಿ!

1. ಸಮಯವಿದ್ದಾಗ, ಆಗಾಗ ಗೆಳೆಯರ ಬಳಿ ಮಾತನಾಡಿ. ಕರೆ ಮಾಡಿ ಮಾತನಾಡಬಹುದು. ಉಭಯ ಕುಶಲೋಪರಿ ವಿಚಾರಿಸಿಕೊಳ್ಳಬಹುದು. ಶುಭಸಂದರ್ಭಗಳಲ್ಲಿ ಮನಸಾರೆ ಹಾರೈಸಿ. ಅವರು ನಿಮ್ಮ ಬಳಿ ಮಾತನಾಡಲು ಪ್ರಯತ್ನಿಸಿದಾಗ ಅವರಿಗೆ ಸಮಯ ಕೊಡಿ. ಅವರು ಕರೆ ಮಾಡಿದ್ದಾಗ ಬ್ಯುಸಿಯಾಗಿದ್ದರೆ, ತಿರುಗಿ ಕರೆ ಮಾಡುವ ಪ್ರೀತಿ ತೋರಿಸಿ.

2. ದೂರದೂರಲ್ಲಿದ್ದರೇನಂತೆ, ಇಬ್ಬರಿಗೂ ಸುಲಭವಿರುವ ಅಥವಾ ಇಬ್ಬರಿಗೂ ಹತ್ತಿರ ಇರುವ ಒಂದು ಜಾಗದಲ್ಲಿ ಸಮಯವಿದ್ದಾಗ ಯಾವಾಗಲಾದರೊಮ್ಮೆ ಭೇಟಿಯಾಗಿ ಹರಟಬಹುದು. ಅಥವಾ ಕುಟುಂಬ ಸಮೇತರಾಗಿ ಸೇರುವ ಯೋಜನೆ ರೂಪಿಸಿಕೊಂಡು ಒಂದಿಡೀ ದಿನ ಮಜವಾಗಿ ಕಳೆಯಬಹುದು. ಮಧ್ಯಾಹ್ನದೂಟಕ್ಕೆ ಸೇರಬಹುದು, ಅಥವಾ ಒಂದು ಪ್ರವಾಸವನ್ನು ಇಬ್ಬರೂ ಸೇರಿ ಯೋಜನೆ ರೂಪಿಸಿಕೊಳ್ಳಬಹುದು. ದೂರವಿರುವುದನ್ನೇ ಒಂದು ಅವಕಾಶವನ್ನಾಗಿ ಪರಿವರ್ತಿಸಿ. ಯಾವಾಗಲೂ ದೂರವಿದ್ದಾಗಲೇ ಗೆಳೆತನದ ಮಹತ್ವ, ಆಳ ಅರ್ಥವಾಗುವುದು!

3. ಸಾಮಾಜಿಕ ಜಾಲತಾಣಗಳು ಈ ವಿಚಾರದಲ್ಲಿ ನಿಮಗೆ ವರ. ಯಾಕೆಂದರೆ, ಜಾಲತಾಣಗಳ ಮೂಲಕ ನೀವು ನಿತ್ಯವೂ ಕನೆಕ್ಟ್‌ ಆಗಿರಬಹುದು. ಇಬ್ಬರಿಗೂ ಇಷ್ಟವಿರುವ ಸಾಮಾನ್ಯ ವಿಚಾರಗಳ ಬಗ್ಗೆ ಓದಿದ ಕೇಳಿದ ಸಂಗತಿಗಳು, ವಿಡಿಯೋಗಳು, ತಮಾಷೆಯ ವಿಚಾರಗಳು ಇತ್ಯಾದಿಗಳನ್ನು ಹಂಚಿಕೊಂಡು ಖುಷಿ ಪಡಬಹುದು. ಇಬ್ಬರನ್ನೂ ಕನೆಕ್ಟ್‌ ಮಾಡಬಲ್ಲ ವಿಚಾರಗಳನ್ನು ಸಮಯವಿದ್ದಾಗಲೆಲ್ಲ ಹಂಚಿಕೊಳ್ಳಬಹುದು. ದಿನವೂ, ಅಥವಾ ನಾಲ್ಕೈದು ದಿನಕ್ಕೊಮ್ಮೆ ಮಾತನಾಡಲು ಸಾಧ್ಯವಾಗದಿದ್ದರೂ, ಇವೂ ಕೂಡಾ ನಿಮ್ಮ ನಡುವಿನ ಬಾಂಧವ್ಯದ ಕೊಂಡಿಯೇ. ಮೆಸೇಂಜರ್‌, ವಾಟ್ಸಾಪ್‌ಗಳ ಮೂಲಕ ಕಾಲೆಳೆದುಕೊಳ್ಳಬಹುದು.

ಇದನ್ನೂ ಓದಿ: Relationship Tips: ಇರಬೇಕಾದರೆ ಸಂಸಾರ ಸುಸೂತ್ರ, ಪಾಲಿಸಿ ಸುಗಮ ದಾಂಪತ್ಯದ 5 ಸೂತ್ರ!

4. ಇಬ್ಬರೂ ಬಿಡುವಿನ ವೇಳೆಯಲ್ಲಿ ನಿಮ್ಮ ನಿಮ್ಮ ಜಾಗದಲ್ಲಿಯೇ ಕುಳಿತು ಒಂದೇ ಟಿವಿ ಶೋ ನೋಡಬಹುದು. ಈಗಷ್ಟೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಸೀರೀಸ್‌ ಒಂದನ್ನು ರಜೆಯಲ್ಲಿ ಇಬ್ಬರಿಗೂ ಒಂದೇ ಸಮಯದಲ್ಲಿ ಬಿಡುವಾದಾಗ ಅವರಲ್ಲಿ, ನೀವಿಲ್ಲಿ ಎಂಬಂತೆ ಪರಸ್ಪರ ಮಾತನಾಡಿಕೊಂಡು ನೋಡಿ. ಅಥವಾ, ನೀವು ಕ್ರಿಕೆಟ್ಟೋ ಫುಟ್‌ಬಾಲೋ ಪ್ರಿಯರಾಗಿದ್ದರೆ, ಜೊತೆಗೆ ಅವರವರ ಸ್ಥಳಗಳಲ್ಲಿ ನೋಡುತ್ತಿರುವಾಗ, ಮ್ಯಾಚ್‌ ನಡೆಯುತ್ತಿರುವಾಗಲೇ ಖುಷಿ, ಬೇಸರವನ್ನು ಅದಕ್ಕೆ ಸಂಬಂಧಿಸಿದಂತೆ ಆಗಾಗ ವ್ಯಕ್ತಪಡಿಸಿಕೊಳ್ಳಬಹುದು. ಆಗ ನಿಮ್ಮ ಮ್ಯಾಚ್‌ ನೋಡುವ ಖುಷಿ ದುಪ್ಪಟ್ಟಾಗಬಹುದು.

5. ಗೆಳೆಯರನ್ನು ತೀರಾ ಪೊಸೆಸಿವ್‌ ಆಗಿ ನನ್ನ ಜೊತೆಗೇ ಇರಬೇಕೆಂಬ ಮನಸ್ಥಿತಿಯಿಂದ ಹೊರಗೆ ಬರಲು ಪ್ರಯತ್ನಿಸಿ. ಒಂದು ವೇಳೆ ನಿಮ್ಮ ಊರಿನಲ್ಲೇ ನಿಮ್ಮ ಜೊತೆಗೇ ಇದ್ದ ಗೆಳೆಯ ಅಥವಾ ಗೆಳತಿ ಬೇರೆ ಊರಿಗೆ ಹೋಗಬೇಕಾಗಿ ಬಂದಾಗ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಗೆಳೆಯ/ಗೆಳತಿಗೆ ಶುಭ ಹಾರೈಸಿ. ಯಾವಾಗಲೂ ಗೆಳೆಯರಿಗೆ ಅವರ ಸ್ಪೇಸ್‌ ನೀಡುವುದು ಒಂದು ಆರೋಗ್ಯಕರ ಸಂಬಂಧವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Friendship: ನೆನಪಿಡಿ, ಹಳಸಿದ ಗೆಳೆತನ ಕಾಪಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ!

Exit mobile version