ನಿಮ್ಮ ಮಕ್ಕಳು ಶಾಲೆಯಲ್ಲಿ, ಕಲಿಕೆಯಲ್ಲಿ ಯಶಸ್ಸು ಗಳಿಸಬೇಕೇ? ಒಟ್ಟಾರೆ ಬದುಕಿನಲ್ಲಿ ಸತ್ಪ್ರಜೆಗಳಾಗಿ ಒಳ್ಳೆಯ ಹೆಸರು ಪಡೆಯಬೇಕೆಂಬ ಬಯಕೆ ನಿಮಗಿದೆಯೇ? ಇಲ್ಲ ಎಂದು ಯಾವ ಹೆತ್ತವರು ತಾನೇ ಹೇಳಿಯಾರು ಅಲ್ಲವೇ! ಹೌದು. ಪ್ರತಿಯೊಬ್ಬರಿಗೂ ತಮ್ಮಮಕ್ಕಳು ಶಾಳೆಯಲ್ಲಿ ಒಳ್ಳೆಯ ಮಕ್ಕಳಾಗಿ ಓದಿನ ಬಗೆಗೆ ಗಮನ ಕೊಟ್ಟು ವಿದ್ಯಾವಂತರಾಗಲಿ ಎಂಬ ಬಯಕೆಯಿರುತ್ತದೆ. ಆದರೆ, ಹೀಗೆ ಕೇವಲ ಕನಸು ಕಂಡರೆ ಸಾಲದು ತಾನೇ? ಆ ಕನಸನ್ನು ನನಸು ಮಾಡಲು ಮಕ್ಕಳ ಬದುಕಿಗೆ ಸರಿಯಾದ ದಾರಿ ತೋರುವುದೂ (parenting tips) ಕೂಡಾ ಪೋಷಕರ ಕರ್ತವ್ಯ. ಹಾಗಾದರೆ ಬನ್ನಿ, ಮಕ್ಕಳ ಕಲಿಕೆ ಸರಿಯಾದ ಹಾದಿಯಲ್ಲಿ ಯಾವ ತೊಂದರೆಯೂ ಇಲ್ಲದಂತೆ ಸಾಗಬೇಕೆಂದರೆ ಹೆತ್ತವರಾಗಿ ನಾವು ಮಾಡಬೇಕಾದ್ದೇನು (parenting Guide) ಎಂಬುದನ್ನು ನೋಡೋಣ.
1. ಮನೆಯಲ್ಲಿ ಕಲಿಕೆಯ ವಾತಾವರಣವಿರಲಿ. ಮಕ್ಕಳಿಗಾಗಿ ಓದುವ ಕೋಣೆ ಇರಲಿ. ಪುಟ್ಟ ಮನೆ ನಿಮ್ಮದಾಗಿದ್ದರೆ, ಒಂದು ಸಣ್ಣ ಜಾಗವಾದರೂ ಅವರ ಓದಿನ ವಿಚಾರಕ್ಕೆ ಮೀಸಲಿಡಿ. ಶಾಲೆಯಿಂದ ಬಂದು ಮಕ್ಕಳು ಆ ಜಾಗದಲ್ಲಿ ಕೂತು ಓದಿ, ಬರೆಯುವ ಕೆಲಸ ಮಾಡಲಿ. ಅದು ಒಪ್ಪ ಓರಣವಾಗಿರಲಿ. ಮಕ್ಕಳೇ ಆ ಜಾಗವನ್ನು ಪ್ರೀತಿಯಿಂದ ಚಂದಕ್ಕೆ ಇಟ್ಟುಕೊಳ್ಳುವ ಗುಣವನ್ನು ನೀವು ನಿಧಾನವಾಗಿ ಅವರಲ್ಲಿ ಬೆಳೆಸಿ.
2. ಮಕ್ಕಳಲ್ಲಿ ಉತ್ತಮ ರ್ಯಾಂಕ್ ಪಡೆಯುವತ್ತ ಪ್ರೋತ್ಸಾಹಿಸುವುದರ ಬದಲು ಅವರ ಸರ್ವತೋಮುಖ ಬೆಳವಣಿಗೆಯತ್ತ ಕಾಳಜಿ ಮಾಡಿ. ಅಂದರೆ, ಎಲ್ಲರೂ ಹೇಳುವಂತೆ ಫಸ್ಟ್ ರ್ಯಾಂಕ್ ಈ ಬಾರಿ ಬರಲೇಬೇಕು ಎಂಬ ಒತ್ತಡ ಹೇರುವುದರ ಬದಲಾಗಿ, ಮಕ್ಕಳ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು ಅದರಂತೆ ಅವರ ಬೆಳವಣಿಗೆಗೆ ಮಹತ್ವ ನೀಡಿ.
3. ಮಕ್ಕಳಿಗೆ ತಾವು ಕಲಿತದ್ದನ್ನು, ಶಾಲೆಯಲ್ಲಿ ಪಾಠ ಮಾಡಿದ್ದನ್ನು ಅರ್ಥ ಮಾಡಿಕೊಳ್ಳಲು ಸಮಯ ಕೊಡಿ. ಪಾಠವನ್ನು ಸುಮ್ಮನೆ ಉರು ಹೊಡೆದು ಪರೀಕ್ಷೆಯಲ್ಲಿ ಅಂಕ ಗಳಿಸುವುದರಿಂದ ಏನೂ ಸಾಧಿಸಿದಂತಾಗುವುದಿಲ್ಲ. ಮಕ್ಕಳು ಅವರದೇ ವಾಕ್ಯದಲ್ಲಿ ವಿಚಾರವೊಂದನ್ನು ವಿವರಿಸುವ, ಬರೆಯುವ ಸಾಮರ್ಥ್ಯ ಪಡೆದುಕೊಳ್ಳಲಿ. ಆ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹಿಸಿ.
4. ಮಕ್ಕಳಿಗೆ ಒಂದು ನಿರ್ಧಿಷ್ಟ ಹಾಗೂ ನಿಗದಿತ ವೇಳಾಪಟ್ಟಿಯಿರಲಿ. ಅವರು ಅದನ್ನು ಪಾಲನೆ ಮಾಡಲಿ. ಅವರಿಗೆ ಅದು ಒತ್ತಡವಾಗದಿರಲಿ. ಶಾಲೆಯಿಂದ ಬಂದ ಮೇಲೆ ಕೊಂಚ ರಿಲ್ಯಾಕ್ಸಿಂಗ್ ಟೈಮ್, ಓದಿ ಬರೆಯುವ ಸಮಯ, ಆಟವಾಡುವ ಸಮಯ ಹೀಗೆ ಮಕ್ಕಳ ಆಸಕ್ತಿಗನುಗುಣವಾಗಿ ವೇಳಾಪಟ್ಟಿಯಿರಲಿ. ತೀರಾ ಸ್ಟ್ರಿಕ್ಟ್ ಆಗಿ ಅಲ್ಲದಿದ್ದರೂ, ಮಕ್ಕಳು ಶಿಸ್ತುಬದ್ಧವಾಗಿ ಅದನ್ನು ಒಂದು ಮಟ್ಟಿಗೆ ಮಾಡಲಿ.
5. ಮಕ್ಕಳ ಶಾಲೆಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಅರಿವಿರಲಿ. ಅವರಿಗೇನು ಹೋವರ್ಕುಗಳು ದೊರೆಯುತ್ತಿವೆ, ಅದನ್ನವರು ಸಮರ್ಪಕವಾಗಿ ಮಾಡುತ್ತಿದ್ದಾರಾ ಎಂಬ ಗಮನ ನಿಮಗೆ ಇರಲಿ. ಆಗಾಗ ಮಕ್ಕಳ ಹೋಂವರ್ಕುಗಳನ್ನು ಚೆಕ್ ಮಾಡಿ. ಅವರಿಗೆ ಬೇಕಾದ ಸಹಾಯ ಮಾಡಿ. ಅವರಿಂದ ಮಾಡಬಹುದಾದ ಟಾರ್ಗೆಟ್‌ಗಳನ್ನು ಕೊಡಿ.
6. ಪೇರೆಂಟ್- ಟೀಚರ್ ಸಭೆಗಳಿಗೆ ಹಾಜರಾಗಿ. ಮಕ್ಕಳ ಸಮಸ್ಯೆಗಳನ್ನು ಅವರ ಜೊತೆ ಸಮರ್ಪಕವಾಗಿ ಹಂಚಿಕೊಳ್ಳಿ. ಸಮಸ್ಯೆಯಿಂದ ನುಣುಚಿಕೊಂಡರೆ ಪರಿಹಾರ ಸಿಗುವುದಿಲ್ಲ. ಸಭೆಗೆ ಹಾಜರಾಗದೆ ಎಸ್ಕೇಪ್ ದಾರಿಗಳನ್ನೂ ಹುಡುಕದಿರಿ. ಮಕ್ಕಳ ಹಾಗೂ ಅವರ ಗುರುಗಳ ಹಾಗೂ ನಿಮ್ಮ ನಡುವೆ ಒಂದು ಪಾರ್ದರ್ಶಕ ಸಂಬಂಧ ಇರಲಿ.
7. ಮುಖ್ಯವಾಗಿ ಮಕ್ಕಳ ಕುತೂಹಲಗಳನ್ನು ಅಲ್ಲೇ ಚಿವುಟಬೇಡಿ. ಮಕ್ಕಳು ಪ್ರಶ್ನೆಗಳನ್ನು ಕೇಳಿದರೆ ಅದನ್ನು ಪ್ರೋತ್ಸಾಹಿಸಿ. ತಪ್ಪಿದಲ್ಲಿ ತಿದ್ದಿ. ಅವರಿಗೊಂದು ಸುರಕ್ಷಿತ ವಾತಾವರಣ ಕಲ್ಪಿಸಿ. ನಮ್ಮ ಹೆತ್ತವರೊಡನೆ ನಾವು ಎಂಥ ಸಂಶಯಗಳನ್ನೂ ಕೇಳಬಹುದು, ವಿಚಾರಗಳನ್ನು ಹಂಚಿಕೊಳ್ಳಬಹುದು ಎಂಬ ಧೈರ್ಯ, ನೆಮ್ಮದಿ ಹಾಗೂ ಆತ್ಮವಿಶ್ವಾಸ ಬರುವುದೇ ಇಂಥ ವಾತಾವರಣವಿದ್ದಾಗ. ಈ ಸ್ವಾತಂತ್ರ್ಯ ಅವರಿಗೆ ಇರಲಿ.
ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳ ಪ್ರತಿಭೆಯನ್ನು ಎಳವೆಯಲ್ಲಿಯೇ ಗುರುತಿಸಿ ಪ್ರೋತ್ಸಾಹಿಸುವುದು ಹೇಗೆ?
8. ಈಗಿನ ಧಾವಂತದ ಯುಗದಲ್ಲಿ ಮಕ್ಕಳ ಜೊತೆಗೆ ಸಮಯ ಕಳೆಯುವುದು ಕಷ್ಟ ನಿಜ. ಆದರೂ ವಾರಕ್ಕೊಮ್ಮೆಯಾದರೂ ಮಕ್ಕಳ ಜೊತೆ ಒಳ್ಳೆಯ ಸಮಯ ಕಳೆಯಿರಿ. ಅವರ ಜೊತೆ ಆಟವಾಡಿ. ಅವರ ಜೊತೆಗೆ ವ್ಯಾಯಾಮ, ಯೋಗ ಇತ್ಯಾದಿಗಳನ್ನಾದರೂ ಮಾಡಿ. ಕನಿಷ್ಟ ಯಾವುದಾದರೊಂದು ಹೊರಗಿನ ಚಟುವಟಿಕೆ ಮಕ್ಕಳೊಂದಿಗೆ ಮಾಡಿ!
9. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಓದುವ ಹವ್ಯಾಸ ಕಲಿಸಿ. ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳೆಲ್ಲರೂ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ ದಾಸರಾಗಿರುವಾಗ ಪುಸ್ತಕ ಎಲ್ಲಿ ಓದುತ್ತಾರೆ ಎಂದು ಮರು ಪ್ರಶ್ನೆ ಹಾಕಬೇಡಿ. ನಿಮ್ಮ ಮನೆಯ ಪರಿಸ್ಥಿತಿ ಹೀಗಿದೆ ಎಂದರೆ ಅದು ಮಕ್ಕಳ ತಪ್ಪಲ್ಲ. ನಿಮ್ಮದೇ ತಪ್ಪು. ನೀವು ಇತ್ತೀಚೆಗೆ ಏನಾದರೂ ಓದಿದ್ದೀರಾ ಎಂದು ನೆನಪಿಸಿಕೊಳ್ಳಿ. ಮಕ್ಕಳ ಎದುರು ನೀವು ಫೋನ್ ಹಿಡಿದು ಕೂತರೆ ಮಕ್ಕಳೂ ಅದನ್ನೇ ಅನುಕರಿಸುತ್ತಾರೆ. ಹಾಗಾಗಿ, ನೀವು ಪುಸ್ತಕ ಹಿಡಿಯಿರಿ. ಸಮಯವಿಲ್ಲ ಎಂಬ ನೆಪಗಳನ್ನು ದೂರಕ್ಕಿಟ್ಟು ದಿನಕ್ಕೆ ಕನಿಷ್ಟ ಅರ್ಧ ಗಂಟೆಯಾದರೂ ಮಕ್ಕಳ ಜೊತೆಗೆ ಪುಸ್ತಕ ಹಿಡಿದು ಕೂರುವುದನ್ನು ರೂಢಿಸಿಕೊಳ್ಳಿ. ಅವರು ಖಂಡಿತವಾಗಿಯೂ ಪುಸ್ತಕ ಓದಲು ಆರಂಭಿಸದಿದ್ದರೆ ಕೇಳಿ!
ಇದನ್ನೂ ಓದಿ: Positive Parenting Tips: ನಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವುದು ಹೇಗೆ? ಇಲ್ಲಿವೆ ಉಪಯುಕ್ತ ಸಲಹೆ