Site icon Vistara News

Parenting Tips: ಮಕ್ಕಳನ್ನು ಬೆಳಗ್ಗೆ ಬೇಗ ಏಳಿಸಿ ಶಾಲೆಗೆ ಹೊರಡಿಸುವುದೇ ಹೋರಾಟವೇ? ಇಲ್ಲಿವೆ ಟಿಪ್ಸ್!

kids morning

ಮಕ್ಕಳನ್ನು ಬೆಳೆಸುವುದು (good parenting) ಎಂದರೆ ಅದು ಸುಲಭದ ಕೆಲಸವಲ್ಲ. ಬಹಳ ಜವಾಬ್ದಾರಿಗಳನ್ನು ಬೇಡುವ ಕೆಲಸ. ಸಣ್ಣ ಮಗುವಿನ ತಾಯಿಗೆ, ನಿದ್ರೆಗೆಟ್ಟೂ ಕೆಟ್ಟೂ, ಎಷ್ಟೋ ಸಾರಿ ಮಕ್ಕಳು ಬೇಗನೆ ಶಾಲೆಗೆ ಹೋಗುವಷ್ಟು ದೊಡ್ಡದಾಗಿ ಬಿಟ್ಟರೆ ಸಾಕಪ್ಪಾ ಅನಿಸುತ್ತದೆ. ಆದರೆ ಶಾಲೆಗೆ ಹೋಗುವಷ್ಟು ಮಗು ದೊಡ್ಡದಾದ ಮೇಲೆಯೇ ಅದರ ಕಷ್ಟ ಅರಿವಾಗುವುದು. ಹೀಗೆ ಮಗುವೊಂದನ್ನು ಸಂಪೂರ್ಣ ದೊಡ್ಡವರನ್ನಾಗಿ ಮಾಡುವವರೆಗೆ ಹೆತ್ತವರು ಹಲವು ಹಾದಿಗಳನ್ನು ಸವೆಸಿರುತ್ತಾರೆ. ಪ್ರತಿಯೊಬ್ಬ ಹೆತ್ತವರಿಗೂ ಸವಾಲೆನಿಸುವುದು ಮಕ್ಕಳನ್ನು ಬೆಳಗ್ಗಿನ ಹೊತ್ತು ಶಾಲೆಗೆ ಹೊರಡಿಸುವ ಸಮಯ. ಬೆಳಗ್ಗೆ ಬೇಗ ಏಳಿಸಬೇಕು, ಸ್ನಾನ ಮಾಡಿಸಬೇಕು ಅಥವಾ ತಾನೇ ಸ್ನಾನ ಮಾಡುವಷ್ಟು ಮಗು ಬೆಳೆದಿದ್ದರೆ ಮಕ್ಕಳಿಗೆ ಬೇಗ ಬೇಗ ಸ್ನಾನ ಮುಗಿಸುವಂತೆ ಒತ್ತಡ ಹೇರಬೇಕು. ತಿಂಡಿ ರೆಡಿ ಮಾಡಬೇಕು, ಊಟದ ಡಬ್ಬಿಗೆ ನಿತ್ಯವೂ ಆಕರ್ಷಕ ತಿನಿಸುಗಳನ್ನು ರೆಡಿ ಮಾಡಬೇಕು, ಈ ನಡುವೆ ತಮಗೂ ತಿಂಡಿ ಮಾಡಬೇಕು, ಆಫೀಸಿಗೆ ಬುತ್ತಿ ಕಟ್ಟಿಕೊಳ್ಳಬೇಕು, ಅಬ್ಬಬ್ಬಾ, ಹೆತ್ತ ಜೀವಗಳ ಬೆಳಗಿನ ಹೋರಾಟದ ದೃಶ್ಯ ಯಾವ ಯುದ್ಧಭೂಮಿಗೂ ಕಡಿಮೆ ಇರುವುದಿಲ್ಲ. ಇಂಥ ಸಂದರ್ಭ ಈ ಎಲ್ಲ ತಯಾರಿಗಳ ನಡುವೆ ಮಕ್ಕಳನ್ನು ಹಾಸಿಗೆಯಿಂದ ಏಳಿಸುವುದೇ ದೊಡ್ಡ ಸವಾಲು. ಈ ಸವಾಲನ್ನು ಗೆದ್ದರೆ, ಯುದ್ಧದಲ್ಲಿ ಅರ್ಧ ಗೆದ್ದಂತೆ. ಹಾಗಾದರೆ ಬನ್ನಿ, ಮಕ್ಕಳನ್ನು ಬೆಳಗ್ಗೆ ಏಳಿಸುವ ಕಲೆ ನಿಮಗೆ ಕರತಲಾಮಲಕವಾಗಲು ಇಲ್ಲಿವೆ ಕೆಲವು (parenting tips) ಕಿವಿಮಾತುಗಳು.

1. ಮಕ್ಕಳಿಗೊಂದು ವೇಳಾಪಟ್ಟಿ ಇರಲಿ. ಮಕ್ಕಳು ಇಂಥ ಹೊತ್ತಿಗೆ ಏಳುವುದರಿಂದ ಹಿಡಿದು, ಹಲ್ಲುಜ್ಜುವುದು, ಸ್ನಾನ ಮಾಡುವುದು ಇತ್ಯಾದಿ ಪ್ರತಿಯೊಂದಕ್ಕೂ ನಿಗದಿತ ಸಮಯಾವಕಾಶವಿರಲಿ. ಆಗ ಮಕ್ಕಳು ತಮ್ಮ ಕೆಲಸಗಳನ್ನು ಒಂದೊಂದಾಗಿ ತಾವೇ ಮಾಡಿದ ಖುಷಿಯನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಇದನ್ನು ಮುಂದುವರಿಸಲು ಅವರಿಗೆ ಪ್ರೇರಣೆ ದೊರೆಯುತ್ತದೆ. ಒಂದನೇ ದಿನ ಮಕ್ಕಳು ಮಾಡಲಿಕ್ಕಿಲ್ಲ, ಎರಡನೇ ದಿನವೂ. ಆದರೆ, ನೀವು ಈ ಯೋಜನೆಯಿಂದ ಹಿಂಜರಿಯಬೇಡಿ. ಆಗ ಮಕ್ಕಳು ನಿಧಾನವಾಗಿ ತಮ್ಮ ಕೆಲಸವನ್ನು, ಪುಟ್ಟಪುಟ್ಟ ಜವಾಬ್ದಾರಿಗಳನ್ನು ನಿಭಾಯಿಸುವುದನ್ನು ಕಲಿಯುತ್ತಾರೆ.

2. ಸೂರ್ಯನ ಬೆಳಕು ಕೋಣೆಗೆ ಬರುವಂತಿರಲಿ. ಮುಖದ ಮೇಲೆ ಮುಂಜಾವಿನ ಬೆಳಕು ಬೀಳುವಾಗ ಅನುಭವವಾಗುವ ಆನಂದ ಮಕ್ಕಳು ಅನುಭವಿಸಲಿ.

3. ಬೆಳಗ್ಗೆ ಎದ್ದ ಕೂಡಲೇ ಮಕ್ಕಳ ಮನಸ್ಸನ್ನು ಖಷಿಯಾಗಿಸುವ ಒಂದು ಪುಟ್ಟ ಕೆಲಸಕ್ಕೆ ಜಾಗವಿರಲಿ. ಏನಾದರೊಂದು ಪುಟ ಓದುವುದಿರಬಹುದು, ಅಥವಾ ಒಂದು ಫ್ಯಾಮಿಲಿ ಹಗ್‌ ಕ್ಷಣವಿರಬಹುದು, ಅಥವಾ ಮಕ್ಕಳ ಇಷ್ಟದ ಹಾಡು ಪ್ಲೇ ಮಾಡುವುದಿರಬಹುದು ಹೀಗೆ ಏನಾದರೊಂದು ಪುಟ್ಟ ಖಷಿ ಪ್ರತಿ ದಿನ ಅವರಿಗಾಗಿ ಕಾದಿರಲಿ. ಎದ್ದ ಕೂಡಲೇ ಗಡಿಬಿಡಿ ಮಾಡುವುದು, ಲೇಟಾಗುತ್ತಿದೆ ಎಂದು ಕಿರುಚಾಡುವುದು ಇತ್ಯಾದಿಗಳನ್ನು ಬಿಟ್ಟು ಒಂದೈದು ನಿಮಿಷ ಶಾಂತವಾಗಿ ಪ್ರೀತಿಯಿಂದ ಮಾತನಾಡಿಸುವುದನ್ನು ಅಭ್ಯಾಸ ಮಾಡಿ. ಆಗ ಮಕ್ಕಳು ಬೆಳಗ್ಗೆದ್ದ ಕೂಡಲೇ, ಕಿರಿಕಿರಿ ಮಾಡುವುದಿಲ್ಲ.

4. ಮಕ್ಕಳಿಗೆ ಏಳಲು ಒಂದು ಅಲರಾಂ ಇಡುವುದನ್ನು ಅಭ್ಯಾಸ ಮಾಡಿ. ಆ ಅಲರಾಂ ಶಬ್ದ ತಮಾಷೆಯದ್ದೋ, ಅಥವಾ ಅವರಿಷ್ಟದ ಹಾಡೋ, ಮ್ಯೂಸಿಕ್ಕೋ ಇರಲಿ.

5. ಎಲ್ಲಕ್ಕಿಂತ ಮುಖ್ಯವಾಗಿ, ನಿಮ್ಮ ಕೆಟ್ಟ ಅಭ್ಯಾಸಗಳಿಂದ ಮಕ್ಕಳ ನಿದ್ದೆಯನ್ನು ಹಾಳು ಮಾಡಬೇಡಿ. ನೀವು ಶಿಸ್ತುಬದ್ಧ ಜೀವನ ನಡೆಸುತ್ತಿದ್ದರೆ, ಮಕ್ಕಳ ಇಂತಹ ಸಮಸ್ಯೆ ಸಾಕಷ್ಟು ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಮಕ್ಕಳನ್ನು ಬೇಗನೆ ಒಂದು ನಿಗದಿತ ಸಮಯಕ್ಕೆ ಮಲಗಿಸುವುದನ್ನು ಅಭ್ಯಾಸ ಮಾಡಿಸಿ. ಏನೇ ಕಾರಣಗಳಿದ್ದರೂ ಇದನ್ನು ಏರುಪೇರು ಮಾಡಬೇಡಿ.

6. ಮಕ್ಕಳು ಅವರಷ್ಟಕ್ಕೆ ಬೇಗನೆ ಎದ್ದು ಹಲ್ಲುಜ್ಜಿ ಮುಖ ತೊಳೆದು ಶಾಲೆಗೆ ರೆಡಿಯಾಗುವ ಕೆಲಸವನ್ನು ಯಾವ ಕಿರಿಕಿರಿಯೂ ಇಲ್ಲದೆ ಮಾಡಿದರೆ ಅವರಿಗೆ ರಿವಾರ್ಡ್‌ಗಳನ್ನು ಕೊಡಿ. ಸ್ಟಿಕ್ಕರ್‌, ಸ್ಮೈಲಿ, ಅವರಿಷ್ಟದ ಬ್ರೇಕ್‌ಫಾಸ್ಟ್‌ ಹೀಗೆ.

ಇದನ್ನೂ ಓದಿ: Parenting Tips: ನಿಮ್ಮ ಮಕ್ಕಳು ಅಡ್ಡ ಬೆಳೆಯದೆ, ಉದ್ದ ಬೆಳೆಯಬೇಕೆಂದರೆ ಈ ಆಹಾರವನ್ನೇ ನೀಡಿ!

7. ರಜೆಯ ದಿನಗಳಲ್ಲಿ ಮಕ್ಕಳನ್ನು ಬೆಳಗ್ಗೆ ಎದ್ದ ಮೇಲೆ ಪಾರ್ಕಿಗೆ ಕರೆದೊಯ್ಯುವುದು, ವಾಕಿಂಗ್‌ ಇತ್ಯಾದಿ ಕೆಲಸಗಳನ್ನು ಜೊತೆಯಾಗಿ ಮಾಡಬಹುದು. ಆಗ ಮಕ್ಕಳೊಡನೆ ಸಾಕಷ್ಟು ಸಮಯವೂ ದೊರೆಯುತ್ತದೆ. ಆಗ ರಜೆಯಲ್ಲೂ ಮಕ್ಕಳು ಇದೇ ಸಮಯಪಾಲನೆ ಮಾಡುತ್ತಾರೆ.

8. ಮಕ್ಕಳಿಗೆ ಬೆಳಗಿನ ಹೊತ್ತು ಅವರೇ ಮಾಡುವಂಥ, ಮಾಡಬಲ್ಲ ಏನಾದರೊಂದು ಸಣ್ಣ ಜವಾಬ್ದಾರಿ ಕೊಡಿ.

9. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳಿಗೆ ಏನೇ ಮಾಡಿದರೂ, ಏನೇ ಹೇಳಿದಿರೂ, ಅವರು ಕಲಿಯುವುದು ನೋಡಿದ್ದನ್ನು! ಹೀಗಾಗಿ ಮಕ್ಕಳಿಗೆ ನೀವೇ ರೋಲ್‌ ಮಾಡೆಲ್‌ ಆಗಿ. ಮಕ್ಕಳು ನಿಮ್ಮನ್ನು ನೋಡಿ ಕಲಿಯಲಿ. ಅವರು ನಿಮ್ಮನ್ನು ನೋಡಿ ಕಲಿಯುವಂಥದ್ದು ನಿಮ್ಮಲ್ಲೂ ಇರಲಿ. ಅವರಿಗೆ ನೀವೇ ಮೊದಲ ಪ್ರೇರಣೆ ಎಂಬುದು ಪ್ರತಿಯೊಂದು ಕೆಲಸದ ಸಂದರ್ಭವೂ ನಿಮಗೆ ನೆನಪಿರಲಿ.

ಇದನ್ನೂ ಓದಿ: Parenting Tips: ಹತ್ತು ವಯಸ್ಸಿನೊಳಗೆ ನಿಮ್ಮ ಮಕ್ಕಳಿಗೆ ಈ ಎಲ್ಲ ಜೀವನ ಕೌಶಲ್ಯಗಳು ತಿಳಿದಿರಲಿ!

Exit mobile version