ಸಾಮಾಜಿಕ ಜಾಲತಾಣದಲ್ಲಿ (Social media) ಮನಬಂದಂತೆ ವ್ಯವಹರಿಸುವವರಿದ್ದಾರೆ. ಸಣ್ಣ ಸಣ್ಣ ವಿಷಯಕ್ಕೆ ರೇಗುವವರಿದ್ದಾರೆ. ಚಿಕ್ಕ ವಿಷಯದ ಚರ್ಚೆ ದೊಡ್ಡದಾಗಿ ಗೆಳೆತನವನ್ನೇ ಮುರಿದುಕೊಂಡವರಿದ್ದಾರೆ. ನನ್ನ ನಿಲುವು ಇದೇ ಎಂದು ಉಗ್ರವಾಗಿ ವಾದಿಸುವವರಿದ್ದಾರೆ. ನನಗೆ ಮುಖವಾಡ ಹಾಕಲು ಬರುವುದಿಲ್ಲ, ನಾನಿರೋದು ಹೀಗೆಯೇ ಎಂದು ರಾಜಾರೋಷವಾಗಿ ಹೇಳಿಕೊಂಡು ತಿರುಗಾಡುವವರಿದ್ದಾರೆ. ಅನಿಸುವುದನ್ನೆಲ್ಲ ಹೇಳಿಬಿಡುತ್ತೇನೆ, ಮಾಡಿದ್ದನ್ನೆಲ್ಲ ಜಗತ್ತಿಗೆ ತೋರಿಸುತ್ತೇನೆ ಎಂದು ತೊಡೆ ತಟ್ಟಿದರೆ ಖಂಡಿತ ಗದಾಯುದ್ಧವೇ ನಡೆಯುತ್ತದೆ. ಹಾಗಾಗಿ, ಸಾಮಾಜಿಕ ಜಾಲತಾಣ ಯಾವತ್ತಿಗೂ ಜಾಲತಾಣವೇ. ನಾನು ಮನೆಯಲ್ಲಿ ಹೇಗಿರುತ್ತೇನೋ ಹಾಗೆಯೇ ಇಲ್ಲೂ ಇರುತ್ತೇನೆ ಎಂದರೆ ಇಲ್ಲಿ ನಡೆಯುವುದಿಲ್ಲ. ಸಾಮಾಜಿಕವಾಗಿ ವ್ಯಕ್ತಿಯೊಬ್ಬ ಹೇಗೆ ವರ್ತಿಸಬೇಕಾಗುತ್ತದೆಯೋ ಹಾಗೆಯೇ ಇಲ್ಲಿಯೂ ಸಾಮಾಜಿಕ ನಡವಳಿಕೆ (Social media tips) ಇರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಜಾಲತಾಣಗಳಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಹೇಗೆ ವರ್ತಿಸಬಹುದು ಎಂಬ ಬಗೆಗೆ ಸಲಹೆಗಳು (Social media guide) ಇಲ್ಲಿವೆ.
1. ಜಾಲತಾಣದಲ್ಲಿ ಬಹಳ ನೆಗೆಟಿವ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುವುದು ಒಳ್ಳೆಯದಲ್ಲ. ಜಾಲತಾಣವೆಂಬುದು ಸಮಾಜಕ್ಕೆ ಕನ್ನಡಿ. ಇಲ್ಲಿ ಕೆಟ್ಟ ಸಂದೇಶವನ್ನು ನೀವು ಸಾರುವ ಮೂಲಕ, ನಿಮ್ಮ ವ್ಯಕ್ತಿತ್ವ ಹಾಗೂ ನೀವು ಜಗತ್ತಿಗೆ ಹೇಗೆ ಕಾಣಿಸಬಯಸುತ್ತೀರಿ ಎಂಬುದನ್ನೂ ಇದು ಧ್ವನಿಸುತ್ತದೆ ಎಂಬ ಸೂಕ್ಷ್ಮ ನಿಮಗೆ ಗೊತ್ತಿರಲಿ.
2. ನಿಮ್ಮ ಕೆಲಸದ ಬಗ್ಗೆ ಪೋಸ್ಟ್ ಹಾಕುವುದು, ಅಥವಾ ಎಲ್ಲಾದರೂ ಬೇರೆಯವರ ವಾಲ್‌ನಲ್ಲಿ ಈ ಬಗ್ಗೆ ಕಮೆಂಟ್ ಮಾಡುವುದು ಕೂಡಾ ಒಳ್ಳೆಯದಲ್ಲ. ಕೆಲಸದ ಕುರಿತು ಅಸಮಾಧಾನಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣ ಖಂಡಿತ ವೇದಿಕೆ ಅಲ್ಲ. ನೀವು ಕೆಲಸ ಮಾಡುತ್ತಿರುವ ಸಂಸ್ಥೆ ನಿಮ್ಮ ಮೇಲೆ ಕಣ್ಣಿಟ್ಟಿರಲೂ ಬಹುದು. ಆ ಮೂಲಕ ನೀವೇ ನಿಮ್ಮ ಖೆಡ್ಡಾ ತೋಡಿದಂತಾಗುತ್ತದೆ, ನೆನಪಿರಲಿ.
3. ಜಾಲತಾಣದಲ್ಲಿ ಬರುವ ಪೋಸ್ಟ್‌ಗಳು, ವಾಗ್ವಾದಗಳು ಎಷ್ಟೇ ನಿಮ್ಮನ್ನು ಆಕರ್ಷಿಸಿದರೂ, ಇಂತಹವುಗಳಿಂದ ದೂರ ಇರುವುದು ಒಳ್ಳೆಯದು. ಚರ್ಚೆ, ಜಗಳ, ವಾದ ವಿವಾದಗಳು ಸಾಮಾಜಿಕ ಜಾಲತಾಣದಲ್ಲಿ ಬೇರೆಯೇ ಮಟ್ಟದಲ್ಲಿರುತ್ತದೆ. ಇದು ನಿಮ್ಮ ವೈಯಕ್ತಿಕ, ವೃತ್ತಿ ಎರಡೂ ಜೀವನವನ್ನು ಹಾಳು ಮಾಡುವ ಸಂಭವವಿದೆ. ವಾದಕ್ಕೆ ಹೋದರೂ ಸಭ್ಯ ಭಾಷೆಯ ಮಿತಿಯೊಳಗೇ ಇದ್ದರೆ ಒಳ್ಳೆಯದು.
4. ನೀವೇನೂ ದೊಡ್ಡ ಬರಹಗಾರರಿಲ್ಲದಿರಬಹುದು, ಆದರೆ ವಾಕ್ಯರಚನೆಯಲ್ಲಿ ಸಿಲ್ಲಿ ತಪ್ಪುಗಳನ್ನು ಮಾಡುವುದು ಜಗತ್ತಿಗೆ ಕಾಣುತ್ತದೆ ಎಂಬುದು ನೆನಪಿರಲಿ. ಹಾಗಾಗಿ ಏನೇ ಬರೆದರೂ ತಪ್ಪುಗಳಿಲ್ಲದಂತೆ ಮತ್ತೆ ನೋಡಿಕೊಳ್ಳಿ.
5. ಪ್ರಚಲಿತ ವಿದ್ಯಮಾನವಿರಬಹುದು ಅಥವಾ ಯಾವುದೋ ಜ್ಞಾನಾರ್ಜನೆಯ ಬರೆಹವಿರಬಹುದು, ಪೋಸ್ಟ್ ಮಾಡುವ ಮೊದಲು ಆ ವಿಚಾರದ ಬಗ್ಗೆ ಸ್ಪಷ್ಟತೆಯಿರಲಿ. ಯಾರೋ ಪೋಸ್ಟ್ ಮಾಡಿದ್ದನ್ನು ಶೇರ್ ಮಾಡುವಾಗಲೂ, ಅದು ಸರಿಯಾದ ಮಾಹಿತಿಯೇ ಎಂದು ಖಚಿತಪಡಿಸಿಕೊಳ್ಳಿ.
6. ನಿಮ್ಮದು ಬ್ಯುಸಿನೆಸ್ ಅಕೌಂಟ್ ಆಗಿದ್ದಲ್ಲಿ, ಕೇವಲ ಅದಕ್ಕೆ ಸಂಬಂಧಿಸಿದ ಪೋಸ್ಟ್‌ಗಳಷ್ಟೆ ಇರಲಿ. ಅನಗತ್ಯ ನಿಮ್ಮ ಖಾಸಗಿ ಫೋಟೋಗಳು ಅದರಲ್ಲಿ ಸ್ಥಾನ ಪಡೆಯದಿರುವಂತೆ ನೋಡಿಕೊಳ್ಳಿ.
7. ನೀವು ನಿಮ್ಮ ಸ್ವಂತ ಉದ್ಯಮವನ್ನು ಜಾಲತಾಣದಲ್ಲಿ ಪ್ರೊಮೋಟ್ ಮಾಡುತ್ತಿದ್ದರೆ, ಈ ಸಂಬಂಧ ಪೋಸ್ಟ್ ಹಾಕುವುದಿದ್ದಲ್ಲಿ ಹಾಕಿ. ಆದರೆ ಅದು ಅತಿಯಾಗದೆ ಇರಲಿ.
8. ನಿಮಗೆ ಬರುವ ಪ್ರತಿಕ್ರಿಯೆಗಳ ಬಗ್ಗೆ ಅವಜ್ಞೆ ಸಲ್ಲದು. ಪ್ರತಿಕ್ರಿಯಿಸಿದವರ ಮೇಲೆ ಗೌರವವಿರಲಿ. ಅವರಿಗೆ ಥ್ಯಾಂಕ್ಯೂ ಹೇಳಿ. ನೆಗೆಟಿವ್ ಕಮೆಂಟ್ ಆಗಿದ್ದರೂ ಹೆಚ್ಚು ಒತ್ತಡ ಹಾಕಿಕೊಳ್ಳದೆ, ಸಹಜವಾಗಿ, ಸ್ಪಷ್ಟವಾಗಿ ನೇರವಾಗಿ ವ್ಯವಹರಿಸಿ.
ಇದನ್ನೂ ಓದಿ: Social Media Addiction: ಸಾಮಾಜಿಕ ಮಾಧ್ಯಮಗಳ ವ್ಯಸನವೇ? ಚಟ ಬಿಡುವುದಕ್ಕೆ ಇಲ್ಲಿದೆ ನೆರವು!
9. ಎಲ್ಲ ಜಾಲತಾಣಗಳಲ್ಲೂ ಮೂರೂ ಹೊತ್ತು ಬಿದ್ದುಕೊಂಡಿರಬೇಡಿ. ಯಾವುದಾದರೂ ಒಂದು ತಾಣದಲ್ಲಿ ಸಕ್ರಿಯರಾಗಿರಿ. ಉಳಿದದ್ದನ್ನೂ ಹಿತಮಿತವಾಗಿ ಬಳಸಿ.
10. ಫಾಲೋವರ್‌ಗಳ ಖರೀದಿ ಒಳ್ಳೆಯದಲ್ಲ. ಬ್ಯುಸಿನೆಸ್ ಸಂಬಂಧಿ ಅಕೌಂಟ್ ಆಗಿದ್ದರೂ ಖರೀದಿಸಿದ ಫ್ಯಾನ್‌ಗಳು ನಿಲ್ಲುವುದಿಲ್ಲ.
11. ಅತಿಯಾಗಿ ಹ್ಯಾಷ್‌ಟ್ಯಾಗ್ ಬಳಕೆ ಬೇಡ. ಹ್ಯಾಷ್‌ಟ್ಯಾಗ್‌ಗಳನ್ನು ಅಗತ್ಯವಿದ್ದಲ್ಲಿ ಸರಿಯಾಗಿ ಬಳಸಿ.
12. ನೀವೇ ಎಲ್ಲ ಹೇಳಿ ಸುಮ್ಮನಾಗುವುದಲ್ಲ. ನೀವು ಜಾಲತಾಣದಲ್ಲಿ ಆಕ್ಟಿವ್ ಆಗಿದ್ದು ಚರ್ಚೆಗಳನ್ನು ಹುಟ್ಟುಹಾಕುತ್ತೀರಿ ಎಂದಾದಲ್ಲಿ, ಇತರರ ಮಾತಿಗೂ ಕಿವಿಯಾಗಿ. ಒಳ್ಳೆಯ ಹೇಳುಗರಾಗಿದ್ದಂತೆ ಒಳ್ಳೆಯ ಕೇಳುಗರೂ ಆಗಿರಿ.
13. ರಾಜಕೀಯ ಪ್ರೇರಿತ ವಿಚಾರಗಳಲ್ಲಿ ಜಾಗರೂಕತೆಯಿರಲಿ. ದೇಶದ ಆಗುಹೋಗುಗಳು, ರಾಜಕೀಯಗಳ ಚರ್ಚೆ ಒಳ್ಳೆಯದೇ. ಆದರೆ, ಇಲ್ಲಿ ನಿಮ್ಮ ನಿಲುವನ್ನು ಪ್ರದರ್ಶಿಸುವ ಅಗತ್ಯ ಇದೆಯೇ ಎಂಬುದನ್ನು ಯೋಚಿಸಿ. ಇವುಗಳು ಅವಾಂತರ ಸೃಷ್ಟಿಸಬಹುದಾದಲ್ಲಿ, ದೂರವಿರಿ. ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ನೀವೂ ಒಬ್ಬ ಜವಾಬ್ದಾರಿಯುತ ಪ್ರಜೆ ಎಂಬುದು ನೆನಪಿರಲಿ.
ಇದನ್ನೂ ಓದಿ: Social Media: ಸಾಮಾಜಿಕ ಮಾಧ್ಯಮಗಳು ಮಕ್ಕಳಿಗೆ ಯಾವ ವಯಸ್ಸಿನಿಂದ ಸೂಕ್ತ?