Site icon Vistara News

ದೇಹವೆಂಬ ದೇಗುಲ ಹೊತ್ತು ನಡೆಯುವ ಕಾಲುಗಳಿಗೆ ಎಂಥಾ ಪಾದರಕ್ಷೆಗಳನ್ನು ಧರಿಸಬೇಕು? ಅಳತೆ ನೋಡೋದು ಹೇಗೆ?

Special Lifestyle Story about Footwear

#image_title

ವ್ಯಾಯಾಮದ ಉತ್ಸಾಹಿಗಳು ಮೊದಲಿಗೆ ಪ್ರಾರಂಭಿಸುವುದು ನಡಿಗೆಯಿಂದ. ಹೆಚ್ಚಿನ ತಯಾರಿಯಿಲ್ಲದ, ಹೇಳುವಂಥ ಖರ್ಚೂ ಬಯಸದ ವ್ಯಾಯಾಮವಿದು. ಕುತೂಹಲದ ವಿಷಯವೆಂದರೆ, ಇಡೀ ಭೂಮಿಯನ್ನು ಸುಮಾರು ಐದು ಬಾರಿ ಪ್ರದಕ್ಷಿಣೆ ಹಾಕಿದಷ್ಟು ದೂರವನ್ನು ನಮ್ಮ ಜೀವಿತಾವಧಿಯಲ್ಲಿ ನಾವು ನಡೆಯುತ್ತೇವಂತೆ! ವಿಷಯ ಹೀಗಿರುವಾಗ, ನಮ್ಮ ದೇಹವೆಂಬ ದೇಗುಲವನ್ನು ಹೊತ್ತು ನಿಲ್ಲುವ, ನಡೆಯುವ ಕಾಲೆಂಬ ಕಂಬಗಳ ಬಗ್ಗೆ ನಾವು ಕಾಳಜಿ ತೋರಬೇಡವೆ? ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ನಮ್ಮ ನಡಿಗೆಯ ಭಾಗವಾಗಿರುವ ಪಾದ ಮತ್ತು ಪಾದರಕ್ಷೆಯ ನಾವೆಷ್ಟು ಜಾಗ್ರತೆ ವಹಿಸುತ್ತೇವೆ? ದಿನದ ವಾಕಿಂಗ್‌ಗೆ ಯಾವುದಾದರೂ ಒಂದು ಪಾದರಕ್ಷೆ ತೊಟ್ಟು ಹೋದರಾಯಿತು ಎಂಬ ಧೋರಣೆಯಿದ್ದರೆ, ಕಾಲುಗಳ ಸಮಸ್ಯೆಗೆ ಮೂಲವಾಗಬಹುದು. ಹಾಗಾದರೆ ಇದಕ್ಕಾಗಿಯೇ ವಿನ್ಯಾಸಗೊಳಿಸಿದ ಪಾದರಕ್ಷೆಗಳು (Best Footwear) ನಮಗೆ ಬೇಕೆ? ಬೇಕಾದರೆ ಯಾಕೆ?

ಸ್ಥಿರತೆ: ಸರಿಯಾದ ಶೂಗಳು ನಮ್ಮ ಚಟುವಟಿಕೆಯ ಉದ್ದಕ್ಕೂ ಪಾದಗಳಿಗೆ ಸರಿಯಾದ ಸ್ಥಿರತೆಯನ್ನು ನೀಡುತ್ತವೆ. ಮಾತ್ರವಲ್ಲ, ಪಾದಗಳಲ್ಲಿ ಸರಿಯಾದ ಕುಷನಿಂಗ್‌ ಇದ್ದರೆ ಮೊಣಕಾಲುಗಳೂ ಕ್ಷೇಮವಾಗಿರುತ್ತವೆ.

ಆರಾಮ: ಪಾದಗಳ ಅಳತೆಗೆ ಸರಿಯಾಗಿರುವ ಮತ್ತು ಚಟುವಟಿಕೆಗೆ ಹೊಂದಾಣಿಕೆಯಾಗುವ (ಅಂದರೆ ನಡಿಗೆಯೊ, ಓಟವೋ- ಮಾಡುವ ಚಟುವಟಿಕೆಯೇನು) ಶೂಗಳು ಹೆಚ್ಚಿನ ಆರಾಮ ನೀಡುತ್ತವೆ.

ಗಾಯ-ನೋವು: ಭಾರವಾದ ಅಥವಾ ಅಳ್ಳಕವಾದ ಪಾದರಕ್ಷೆಗಳಿಂದ ನಡಿಗೆಯ ಸ್ವರೂಪ ಕೆಡುತ್ತದೆ. ಹೀಗಾದರೆ ಬೆನ್ನಲ್ಲಿ, ಮೊಣಕಾಲಿನಲ್ಲಿ, ಪಾದಗಳ ಕೀಲಿನಲ್ಲಿ ಅಥವಾ ಕಾಲಿಗೆ ಸಂಬಂಧಿಸಿದ ಯಾವುದಾದರೂ ಸಂದುಗಳಲ್ಲಿ ಗಾಯವಾಗಬಹುದು. ಮಾಂಸಖಂಡಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

ಲಾಭವಿದೆ: ವಾಕಿಂಗ್‌, ರನ್ನಿಂಗ್‌ ಮುಂತಾದ ಚಟುವಟಿಕೆಗಳಿಗೆ ಸೂಕ್ತವಾದ ಶೂಗಳ ಖರೀದಿ ಸ್ವಲ್ಪ ತುಟ್ಟಿ ಎನಿಸಬಹುದು. ಆದರೆ ಇಂಥವುಗಳನ್ನು ಧರಿಸಿ ಸಕ್ರಿಯರಾದಾಗ ದೊರೆಯುವ ಲಾಭಕ್ಕೆ ಹೋಲಿಸಿದರೆ, ಇದಕ್ಕೆ ತೆರುವ ಬೆಲೆ ದುಬಾರಿಯೇನಲ್ಲ.

ಪರಿಹಾರ: ತಲೆಯಿಂದ ಉಂಗುಷ್ಟದವರೆಗೆ ಯಾವುದೇ ನೋವಿನೊಂದಿಗೆ ವೈದ್ಯರ ಬಳಿ ಹೋದಾಗಲೂ, ಧರಿಸುವ ಪಾದರಕ್ಷೆಯನ್ನೂ ಅವರು ಪರಿಶೀಲಿಸುವುದಿದೆ. ಕಾರಣ, ತಲೆನೋವಿನಿಂದ ಹಿಡಿದು ಪಾದಗಳವರೆಗೆ ನಾನಾ ಸ್ವರೂಪದ ನೋವುಗಳು ಕೆಟ್ಟ ಪಾದರಕ್ಷೆಗಳಿಂದ ಬರಬಹುದು. ನಮ್ಮ ಶೂಗಳನ್ನು ಬದಲಿಸುತ್ತಿದ್ದಂತೆ ದೇಹದ ನೋವುಗಳು ಶಮನವಾದ ಉದಾಹರಣೆಗಳಿವೆ

ಇನ್ನೂ ಏನೇನಾಗಬಹುದು?: ಅತೀ ಎತ್ತರದ ಅಥವಾ ಚೂಪಾದ ಹೀಲ್‌ಗಳಿರುವ ಪಾದರಕ್ಷೆಗಳಿಂದ ಬೆನ್ನುನೋವು, ತಲೆನೋವು, ಪಾದಗಳ ಕೀಲಿನಲ್ಲಿ ನೋವು-ಗಾಯ ಕಾಡಬಹುದು. ಒರಟು ಮತ್ತು ಚಪ್ಪಟೆಯಾದ ಪಾದರಕ್ಷೆಗಳು ಮೊಣಕಾಲು ಮತ್ತು ಸೊಂಟದ ಕೀಲಿನಲ್ಲಿ ಸಮಸ್ಯೆಗಳನ್ನು ತರಬಹುದು. ಅಳ್ಳಕವಾದ ಪಾದರಕ್ಷೆಗಳಿಂದಾಗಿ ಹಿಮ್ಮಡಿಯಲ್ಲಿ ತೊಂದರೆ ಕಾಣಬಹುದು. ಈಗಾಗಲೇ ಬಳಸುತ್ತಿರುವ ಶೂಗಳ ಅಟ್ಟೆ ಸವೆದಿದ್ದರೆ, ಪಾದರಕ್ಷೆಯನ್ನು ಬದಲಿಸಬೇಕು. ಇಲ್ಲದಿದ್ದರೆ, ಅದನ್ನು ಯಾವ ಉದ್ದೇಕ್ಕೆಂದು ಬಳಸುತ್ತಿದ್ದೀರೋ ಆ ಪ್ರಯೋಜನ ದೊರೆಯದೆ ಹೋಗಬಹುದು.

ಇದನ್ನೂ ಓದಿ: Celebrity Fashion Corner | ಅಡುಗೆ ಪ್ರೋಗ್ರಾಂಗಳ ಮೂಲಕ ಮಹಿಳೆಯರ ಮನ ಗೆದ್ದಿರುವ ಮುರಳಿ ಫ್ಯಾಷನ್‌ ಲೈಫ್‌ ಹೇಗಿದೆ?

ಸರಿಯಾದ ಪಾದರಕ್ಷೆ ಎಂದರೇನು?: ನಮ್ಮ ಪಾದಗಳು ಬೆಳಗಿನ ಅಳತೆಯಲ್ಲಿ ಸಂಜೆ ಇರುವುದಿಲ್ಲ. ಅಂದರೆ ಬೆಳಗಿಗೆ ಹೋಲಿಸಿದಲ್ಲಿ, ಸಂಜೆಯಾಗುತ್ತಿದ್ದಂತೆ ಪಾದಗಳು ಸ್ವಲ್ಪ ಅಗಲವಾಗಿ ಉಬ್ಬಿದಂತಾಗುತ್ತವೆ. ಹಾಗಾಗಿ ಪಾದಗಳ ಅಳತೆಯನ್ನು ಸಂಜೆ ಹೊತ್ತು ತೆಗೆಯಿರಿ. ಶೂಗಳನ್ನು ಖರೀದಿ ಮಾಡುವಾಗ, ಸಾಕ್ಸ್‌ ಹಾಕಿಯೇ ಅಳತೆ ನೋಡಿ.

ಅಳತೆ ನೋಡುವಾಗ ಕುಳಿತು ನೋಡುವುದಲ್ಲ. ನಿಂತು, ನಡೆದಾಡಿ ನೋಡಿ. ಪಾದರಕ್ಷೆಗಳು ಪಾದಗಳನ್ನು ಅವಚಿ ಹಿಡಿದುಕೊಂಡಿರಬಾರದು. ಶೂ ಹಾಕಿದಾಗಲೇ ಪಾದಗಳನ್ನು ಸ್ವಲ್ಪ ಮೇಲೆ-ಕೆಳಗೆ, ಆಚೆ-ಈಚೆ ಆಡಿಸುವಷ್ಟು ಜಾಗ ಇರಬೇಕು. ಹಾಗೆಂದು ಶೂ ಅಳ್ಳಕವಾಗಿ, ಓಡಿದಾಗ ಕಳಚಿ ಬರಬಾರದು. ಧರಿಸಿದಾಗ ಆರಾಮದಾಯಕ ಅನುಭವ ನೀಡಬೇಕು. ಪಾದಗಳ ಅಡಿಯಲ್ಲಿರುವ ಕಮಾನುಗಳಿಗೆ ಶೂಗಳ ವಿನ್ಯಾಸ ಹೊಂದಿಕೆ ಆಗುತ್ತದೆಯೇ ಎಂಬುದನ್ನು ಪರಿಶೀಲಿಸಿ. ಹೈ-ಆರ್ಚ್‌ ಮತ್ತು ಲೋ-ಆರ್ಚ್‌ ಪಾದಗಳಿಗೆ ಪ್ರತ್ಯೇಕ ವಿನ್ಯಾಸದ ಪಾದರಕ್ಷೆಗಳು ಲಭ್ಯವಿದೆ. ನಿಮ್ಮ ಅಗತ್ಯವೇನು ಎಂಬುದನ್ನು ಮೊದಲು ನೀವು ಅರಿತುಕೊಳ್ಳಿ

Exit mobile version