ಸ್ಟ್ರಾಬೆರಿ (Strawberry) ಕಂಡು ಆಸೆ ಪಡದವರು ವಿರಳ. ಭಾರತದಲ್ಲಿ ದೊರೆಯುವ ಸ್ಟ್ರಾಬೆರಿ ಹೆಚ್ಚಿನ ಸಾರಿ ಹುಳಿ ರುಚಿಯೇ ಇದ್ದರೂ, ಇದನ್ನು ಮೆಚ್ಚಿನಿಂದ ಕಚ್ಚುವವರಿದ್ದಾರೆ. ಪಶ್ಚಿಮ ದೇಶಗಳಲ್ಲಿ ಸ್ಟ್ರಾಬೆರಿಯ ಲಭ್ಯತೆ, ರುಚಿ ಎಲ್ಲವೂ ನಮ್ಮಲ್ಲಿಗಿಂತ ಹೆಚ್ಚೆ. ಹಾಗಾಗಿ ಬೇಸಿಗೆಯಲ್ಲಿ ದೊರೆಯುವ ಸ್ಟ್ರಾಬೆರಿಯನ್ನು ಬೊಗಸೆಗಟ್ಟಲೆ ಮೆಲ್ಲುವವರಿದ್ದಾರೆ. ಅದರಲ್ಲೂ ಸ್ಟ್ರಾಬೆರಿ ಹೊಲಗಳಿಗೇ ಹೋಗಿ ಕೊಯ್ಯುವ ಅವಕಾಶಗಳಿದ್ದರೆ, ಬುಟ್ಟಿಗಟ್ಟಲೆ ಹೊಟ್ಟೆಗಿಳಿಸುತ್ತಾರೆ. ಇಂಥ ಸ್ಟ್ರಾಬೆರಿ ಪ್ರೇಮಿಗಳಿಗೊಂದು ಪ್ರಶ್ನೆ- ಪ್ರೇಮಕ್ಕೂ ಸ್ಟ್ರಾಬೆರಿಗೂ ಸಂಬಂಧವುಂಟೇ?
ಹಲವು ದೇಶಗಳ ಸಂಪ್ರದಾಯಗಳನ್ನು ಅವಲೋಕಿಸಿದರೆ, ಹೌದೆಂದೇ ಉತ್ತರಿಸಬಹುದು. ಕೆಂಪಾದ ರಸಭರಿತ ಸ್ಟ್ರಾಬೆರಿಗೂ ಪ್ರೀತಿ, ಪ್ರೇಮದ ಭಾವನೆಗಳಿಗೂ ಹಿಂದಿನ ಕಾಲದಿಂದಲೇ ನಂಟನ್ನು ಅಂಟಿಸಲಾಗಿದೆ. ನೋಡುವುದಕ್ಕೆ ಹೃದಯವನ್ನೇ ಹೋಲುವ ಈ ಹಣ್ಣು, ಪ್ರೇಮಿಗಳನ್ನು ಹೃದಯದಿಂದಲೇ ಹತ್ತಿರವಾಗಿಸೀತು ಎಂಬುದು ಹಲವು ದೇಶ, ಸಂಪ್ರದಾಯಗಳ ನಂಬಿಕೆ. ಹಾಗೆಂದೇ ಪ್ರೇಮಿಗಳ ನಡುವಿನ ಹಲವು ಭಾವಗಳನ್ನು ಸ್ಟ್ರಾಬೆರಿಯ ಆಣೆಯಾಗಿ ಹಂಚಿಕೊಳ್ಳುವುದನ್ನು ನೋಡಿದರೆ, ನಗಬೇಕಿಲ್ಲ. ಪ್ರೀತಿಗೆ ಅಗ್ನಿಯೊಂದೇ ಸಾಕ್ಷಿಯಾಗಬೇಕಿಲ್ಲ, ಸ್ಟ್ರಾಬೆರಿಯೂ ಸಾಕ್ಷಿಯಾದೀತು! ಇಷ್ಟಕ್ಕೂ ಪ್ರೇಮಕ್ಕೂ ಸ್ಟ್ರಾಬೆರಿಗೂ ನಂಟೇಕೆ? ಏನುಂಟು ಅವೆರಡರ ನಡುವೆ?
ಪ್ರೇಮದ ದೇವತೆ
ಸ್ಟ್ರಾಬೆರಿಯೇ ಪ್ರೀತಿಯ ದೇವರಲ್ಲ ಅಥವಾ ಅಂಥ ದೇವರಿಗೆ ನೈವೇದ್ಯಕ್ಕೂ ಅಲ್ಲ. ಪ್ರಾಚೀನ ರೋಮ್ ನಾಗರೀಕತೆಯಲ್ಲಿ ಎಲ್ಲದಕ್ಕೂ ಒಂದೊಂದು ದೇವರುಗಳು ಇರುತ್ತಿದ್ದರು, ಸ್ವಲ್ಪ ನಮ್ಮಂತೆಯೇ. ನಮಗೆ ಪ್ರೀತಿಗಾಗಿ ಮನುಮಥನಿದ್ದಂತೆ ಪ್ರಾಚೀನ್ ರೋಮ್‌ನಲ್ಲಿ ಪ್ರೀತಿಯ ದೇವತೆಯಾಗಿ ವೀನಸ್ ಇದ್ದಳು. ಸ್ಟ್ರಾಬೆರಿಗಳನ್ನು ವೀಸನ್ ದೇವತೆಯ ಸಂಕೇತವಾಗಿ ಭಾವಿಸಲಾಗುತ್ತಿತ್ತಂತೆ. ಅದರಿಂದಲೇ ಪ್ರೇಮಕ್ಕೂ ಹೃದಯಾಕೃತಿಯ ಕೆಂಪು ಸ್ಟ್ರಾಬೆರಿಗೂ ಅಂಟಾಗಿರಬಹುದು.
ಹೀಗೂ ಉಂಟೇ!
ಅಮೆರಿಕದ ಕೆಲವು ಜನಪದ ನಂಬಿಕೆಗಳು ಈ ನಿಟ್ಟಿನಲ್ಲಿ ಕುತೂಹಲ ಕೆರಳಿಸುತ್ತವೆ. ಒಂದೇ ಸ್ಟ್ರಾಬೆರಿಯನ್ನು ಕತ್ತರಿಸಿ ಅದನ್ನು ಹುಡುಗ-ಹುಡುಗಿ ತಿಂದರೆ, ಅಥವಾ ಜಂಟಿಯಾಗಿರುವ ಸ್ಟ್ರಾಬೆರಿಗಳನ್ನು ಬಿಡಿಸಿಕೊಂಡು ಇಬ್ಬರು ತಿಂದರೆ, ಅವರಿಬ್ಬರಲ್ಲೂ ಪ್ರೀತಿ ಮೂಡುವುದಂತೆ. ಆವರೆಗೆ ʻನನ್ನ ನಿನ್ನ ನಡುವೆ ಏನಿಲ್ಲʼ ಎಂದು ಹಾಡುತ್ತಿದ್ದವರು ನಂತರ ತಮ್ಮ ಟ್ಯೂನ್ ಬದಲಾಯಿಸಿ ಬಿಡುತ್ತಾರೆ ಎನ್ನುವುದು ಮಿಸ್ಸೌರಿ ಪ್ರಾಂತ್ಯದ ಜನಪದ ನಂಬಿಕೆ.
ಮದುವೆಯಲ್ಲೂ ಬೇಕು
ಫ್ರಾನ್ಸ್‌ನಲ್ಲೂ ಸ್ಟ್ರಾಬೆರಿ ಕುರಿತಾದ ಆಚರಣೆಗಳಿವೆ. ಹೊಸದಾಗಿ ಮದುವೆಯಾದ ಜೋಡಿಗೆ ತಣ್ಣಗಿನ ಸ್ಟ್ರಾಬೆರಿ ಸೂಪ್ ನೀಡುವ ವಾಡಿಕೆ ಇದೆಯಂತೆ. ಸೂಪ್ ಅಂದರೇ ಬಿಸಿಯಾಗಿ ಹಬೆಯಾಡಬೇಕು. ಅಂಥದ್ದರಲ್ಲಿ ತಣ್ಣಗಿನ…! ಇದಕ್ಕೆ ಕಾರಣವೂ ಉಂಟು. ಸ್ಟ್ರಾಬೆರಿಗೆ ಕಾಮೋತ್ತೇಜಕ ಗುಣವಿದೆ ಎಂಬುದು ಅಲ್ಲಿನ ನಂಬಿಕೆ. ಹಾಗಾಗಿ ಹೊಸ ಸಂಸಾರದಲ್ಲಿ ಬಿಸಿಯೇರಲಿ ಎಂಬ ಆಶಯದೊಂದಿಗೆ ತಣ್ಣಗಿನ ಸೂಪ್ ಕುಡಿಸುತ್ತಾರಂತೆ.
ಪ್ರೀತಿಯ ಬಣ್ಣ
ಕೆಂಪು ವರ್ಣವನ್ನು ಪ್ರೀತಿಯ ಬಣ್ಣ ಎಂದೇ ವಿಶ್ವದೆಲ್ಲೆಡೆ ಕರೆಯಲಾಗುತ್ತದೆ. ಇದೇನು ಹೊಸದಲ್ಲ ಬಿಡಿ. ವ್ಯಾಲೆಂಟೈನ್ ದಿನ ಬಂತೆಂದರೆ ಇಡೀ ಲೋಕವೇ ಕೆಂಬಣ್ಣ ಬಳಿದು ಕೂತಂತೆ ಕಾಣುವುದಿಲ್ಲವೇ. ಬಣ್ಣಗಳ ಕುರಿತಾದ ಮನೋಶಾಸ್ತ್ರವೂ ಇದನ್ನೇ ಸಮರ್ಥಿಸುತ್ತದೆ; ಕೆಂಪು ಬಣ್ಣವೆಂದರೆ ಪ್ರೀತಿ, ಬಯಕೆ, ಕಾಮನೆಗಳಿಗೆ ಸಂಬಂಧಿಸಿದ್ದು ಎಂದೇ ಹೇಳುತ್ತದೆ. ಅದೂ ಅಲ್ಲದೆ, ಬಣ್ಣಗಳಿಗೆ ನಾವು ಅಂಟಿಸುವ ಗುಣಗಳೂ ಸೇರಿ, ಜನಪ್ರಿಯವಾಗಿರುವ ಪ್ರತಿಕ್ರಿಯೆಗಳೇ ಮೂಡಿ ಬರುವುದು ಸಾಮಾನ್ಯ ತಾನೆ.
ಮುಂದಿನ ಬಾರಿ ಅಥವಾ ಮುಂದೆಂದಾದರೂ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಬೇಕೆಂಬ ಬಯಕೆಯಿದ್ದರೆ, ಚಾಲಕೇಟ್, ಗುಲಾಬಿ ಮುಂತಾದವುಗಳ ಬದಲು ಸ್ಟ್ರಾಬೆರಿ ನೆರವಾಗುತ್ತದೋ ಎಂಬುದನ್ನು ಪ್ರಯತ್ನಿಸಬಹುದು. ಒಂದೊಮ್ಮೆ ಬಯಸಿದ ಪ್ರೇಮ ದೊರೆಯದಿದ್ದರೆ, ಬೇಸರ ಕಳೆಯುವುದಕ್ಕೆ ಸ್ಟ್ರಾಬೆರಿಯನ್ನಾದರೂ ಕೂತು ತಿನ್ನಬಹುದಲ್ಲ!