ಕಷ್ಟದ ಕಾಯಕಗಳನ್ನು ಕೆಲವರು ಹಠಬಿಡದೆ ಮಾಡಿ ಮುಗಿಸುವುದನ್ನು ಕಂಡಿದ್ದೇವೆ, ಕೇಳಿದ್ದೇವೆ. ನಿತ್ಯದ ಕೆಲಸಗಳನ್ನು ಮಾಡುವುದಕ್ಕೂ ಉದಾಸೀನ, ಬೇಸರ, ಬೋರು, ಸಮಯವೇ ಇಲ್ಲ, ಆಗದಾಗದು ಎನ್ನುವ ಜನರೇ ಹೆಚ್ಚಿರುವಾಗ, ಅಸಾಧ್ಯ ಅಥವಾ ಕಷ್ಟಸಾಧ್ಯ ಎಂಬಂಥ ಕೆಲಸಗಳನ್ನು ಅದು ಹೇಗೆ ಮಾಡುತ್ತಾರೆ ಎಂದು ಹಲವು ಬಾರಿ ಯೋಚಿಸಿರುತ್ತೇವೆ. ಮಾತ್ರವಲ್ಲ, ಅಂಥವರ ಜೀವನಗಾಥೆಯನ್ನು ಓದಿ ಏನಾದರೂ ಪ್ರಯೋಜನ ಆಗುತ್ತದೋ ಎಂಬುದನ್ನೂ ಪ್ರಯತ್ನಿಸಿರುತ್ತೇವೆ. ಆದರೆ ಮಂತ್ರಕ್ಕೆ ಮಾವಿನಕಾಯಿ ಉದುರುವುದು ಎಷ್ಟು ಅಸಂಗತವೋ, ಇಂಥ ಚಿಲ್ಲರೆ ಪ್ರಯತ್ನಗಳಿಂದ ದೊಡ್ಡ ಯಶಸ್ಸು ಕಾಣುವುದೂ ಅಷ್ಟೇ ಅಸಂಗತ. ಹಾಗಾದರೆ ಇದಕ್ಕೇನು ಬೇಕು?
ಅಮೆರಿಕದ ನ್ಯೂಯಾರ್ಕ್‌ನ ಮನೋವೈದ್ಯರ ತಂಡವೊಂದು, ಯಶಸ್ವಿಯಾಗಲು ವ್ಯಕ್ತಿಯಲ್ಲಿ ಇರಬೇಕಾದ್ದೇನು ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿತು. ಕೈಯಲ್ಲಿದ್ದ ಒಳ್ಳೆಯ ಉದ್ಯೋಗವನ್ನು ತೊರೆದು, ಶಾಲೆಯಲ್ಲಿ ಹಲವಾರು ವರ್ಷಗಳ ಕಾಲ ಪಾಠ ಹೇಳುತ್ತಿದ್ದ ಏಂಜೆಲಾ ಲೀ ಡಕ್ವರ್ಥ್, ಅಲ್ಲಿನ ಮಕ್ಕಳ ಜೊತೆಗಿನ ತಮ್ಮ ಅನುಭವದ ಆಧಾರದ ಮೇಲೆ ಯಶಸ್ಸಿನ ಗುಟ್ಟೇನು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಯತ್ನಿಸಿದರು. ಅದಕ್ಕಾಗಿ ಶಿಕ್ಷಕಿಯ ಉದ್ಯೋಗವನ್ನೂ ತೊರೆದು, ಮನಶ್ಶಾಸ್ತ್ರದಲ್ಲಿ ಪದವಿ ಪಡೆಯಲೆಂದು ವಿಶ್ವವಿದ್ಯಾಲಯಕ್ಕೆ ತೆರಳಿದರು. ಅವರ ಹೇಳುವ ಪ್ರಕಾರ, ಯಶಸ್ಸಿಗೆ ಮುಖ್ಯವಾಗಿ ಬೇಕಾದ್ದು ʻಇಚ್ಛಾಶಕ್ತಿʼ.
“ಶಾಲೆಯಲ್ಲಿ ನನ್ನ ವಿದ್ಯಾರ್ಥಿಗಳನ್ನು ನೋಡಿದಾಗ, ಅವರೆಲ್ಲರೂ ಶ್ರಮ ಮತ್ತು ಸಮಯ ವ್ಯಯಿಸಿದರೆ ಏನನ್ನೂ ಕಲಿಯಲು ಸಾಧ್ಯ ಎಂಬುದು ಅರ್ಥವಾಗಿತ್ತು. ಆದರೆ ಕಲಿಯುವಲ್ಲಿ ಯಶಸ್ವಿಯಾಗುವವರು ಮಾತ್ರ ಕೆಲವೇ ಮಂದಿಯಾಗಿದ್ದರು. ಹಾಗಾಗಿ ಇಡೀ ವಿಷಯವನ್ನು ಪ್ರೇರಣೆಯ ಮತ್ತು ಮನಶ್ಶಾಸ್ತ್ರದ ಆಧಾರದ ಮೇಲೆ ಅಧ್ಯಯನ ಮಾಡುವ ಅಗತ್ಯವಿದೆ ಎಂದು ನನಗನ್ನಿಸಿತು” ಎನ್ನುತ್ತಾರೆ ಈ ಅಧ್ಯಯನದ ಮುಂಚೂಣಿಯಲ್ಲಿರುವ ಡಕ್ವರ್ಥ್. ಯಶಸ್ವಿ ಆಗುವಂಥವರು ಯಾರು ಮತ್ತು ಯಾಕೆ ಎಂಬ ವಿಷಯವನ್ನು ಪ್ರಧಾನವಾಗಿ ಇರಿಸಿಕೊಂಡು ವಿಸ್ತೃತವಾದ ಅಧ್ಯಯನವನ್ನು ಆಕೆ ಕೈಗೊಂಡರು.
ಸ್ಥಳೀಯ ಶಾಲೆಗಳಲ್ಲಿ ಇದೇ ವಿಷಯವನ್ನು ಅಧ್ಯಾಪಕರೊಂದಿಗೆ ಚರ್ಚಿಸಲಾಯಿತು. ಸೇನಾ ಅಕಾಡೆಮಿಯೊಂದಕ್ಕೆ ಭೇಟಿ ನೀಡಿ, ಸೈನಿಕರಾಗಿ ಮುಂದುವರಿಯುವವರು ಯಾರು ಮತ್ತು ಉಳಿದವರು ಯಾಕಾಗಿ ಹೊರಬೀಳುತ್ತಾರೆ ಎಂಬುದನ್ನು ಪರಿಶೀಲಿಸಲಾಯಿತು. ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳ ಯಶಸ್ಸಿನ ಬಗ್ಗೆಯೂ ಅಧ್ಯಯನ ನಡೆಸಲಾಯಿತು. ಮಾತ್ರವಲ್ಲ, ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ವಿಜೇತರಾಗುವ ಮಕ್ಕಳ ಬಗ್ಗೆಯೂ ಕುತೂಹಲವನ್ನು ಈ ಅಧ್ಯಯನ ಹೊಂದಿತ್ತು.
ಇದನ್ನೂ ಓದಿ | Motivational story | ತಪ್ಪಾಗಿದ್ದು ಗೊತ್ತಾಗಬಾರದು ಎಂದು ತಿದ್ದುತ್ತಿದ್ದ ಹುಡುಗನಿಗೆ ಟೀಚರ್ ಹೇಳಿದ ಪಾಠ ಏನು?
ಈ ಎಲ್ಲಾ ವಿಶ್ಲೇಷಣೆಗಳಲ್ಲಿ ಮುಖ್ಯವಾಗಿ ಕೆಲವು ಅಂಶಗಳು ಗಮನ ಸೆಳೆದಿದ್ದವು. ವ್ಯಕ್ತಿಗಳ ಸಾಮಾಜಿಕ ಚಾಕಚಕ್ಯತೆ, ಸಂವಹನ ಸಾಮರ್ಥ್ಯ, ಅವರ ದೇಹಾರೋಗ್ಯ, ಸೌಂದರ್ಯ, ಬುದ್ಧಿಮತ್ತೆ- ಇವೆಲ್ಲ ಬೇಕಾದ ಅಂಶಗಳೇ ಆಗಿತ್ತು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ʻಇಚ್ಛಾಶಕ್ತಿʼಯನ್ನು ಹೊಂದಿದವರು ಮಾತ್ರವೇ ದೊಡ್ಡಮಟ್ಟದಲ್ಲಿ ಯಶಸ್ಸು ಗಳಿಸುವುದು ದಾಖಲಾಗಿತ್ತು. ದೀರ್ಘಕಾಲದವರೆಗೆ ತಮ್ಮ ಗುರಿಯ ಬಗ್ಗೆ ಲಕ್ಷ್ಯ ಹೊಂದಿದವರು, ಏನೇ ಆದರೂ ತಮ್ಮ ಗುರಿಯಿಂದ ಹಿಂದೆ ಸರಿಯದವರು, ಇದಕ್ಕೆಲ್ಲ ಸೂಕ್ತವಾದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿದವರು- ಒಂದೇ ಮಾತಿನಲ್ಲಿ ಹೇಳುವುದಾದರೆ ಇಚ್ಛಾಶಕ್ತಿ ಹೊಂದಿದವರು ಮಾತ್ರವೇ ಯಶಸ್ಸಿನ ಏಣಿಯ ತುದಿಯನ್ನು ಏರುತ್ತಿದ್ದುದು ಕಂಡುಬಂತು. ಇದೊಂದು ರೀತಿಯಲ್ಲಿ ಮ್ಯಾರಾಥಾನ ಓಟದಂತೆ. ಮ್ಯಾರಾಥಾನ್ ಓಡುವುದಕ್ಕೆ ಮತ್ತು ಸ್ಪ್ರಿಂಟ್ (ಕಡಿಮೆ ದೂರದ ಓಟ) ಓಡುವುದಕ್ಕೆ ಬೇಕಾದ ಅರ್ಹತೆಗಳೇ ಭಿನ್ನವಾದದ್ದು ಎಂಬುದು ಅಧ್ಯಯನಕಾರರ ಅಭಿಮತ.
“ನಮ್ಮ ಕಲಿಕೆಯ ಸಾಮರ್ಥ್ಯ ಮೊದಲೇ ನಿರ್ಣಯವಾದದ್ದಲ್ಲ. ಅದು ನಮ್ಮ ಪರಿಶ್ರಮಕ್ಕೆ ತಕ್ಕಂತೆ ಬದಲಾಗುತ್ತದೆ. ನಮ್ಮ ಅತ್ತ್ಯುತ್ತಮ ಸಾಮರ್ಥ್ಯವನ್ನು ನಿಕಷಕ್ಕೆ ಒಡ್ಡಿದಾಗಲೇ ಅದರ ಗುಣಾವಗುಣಗಳು ತಿಳಿಯುವುದು. ಹಾಗಾಗಿ ಸೋಲಿಗೆ ಹೆದರದೆ ಮುಂದುವರಿಯುವ ಇಚ್ಛಾಶಕ್ತಿ ಮಾತ್ರವೇ ನಮ್ಮನ್ನು ಯಶಸ್ಸಿನತ್ತ ಕರೆದೊಯ್ಯಬಲ್ಲದು” ಎಂಬುದು ಅವರ ಅನುಭವ.
ಇದನ್ನೂ ಓದಿ | Success guide | ಯಶಸ್ಸೆಂದರೇನು? ವಾರೆನ್ ಬಫೆಟ್‌ನ ಸರಳ ವ್ಯಾಖ್ಯಾನ