ನಿಂಬೆಹಣ್ಣು ಕೇವಲ ಆಹಾರವಾಗಿ ಜನಪ್ರಿಯವಾದಷ್ಟೇ ಕ್ಲೀನಿಂಗ್ ಏಜೆಂಟ್ ಆಗಿಯೂ ಕೂಡಾ ಜನಪ್ರಿಯ. ಎಷ್ಟೋ ಬಾರಿ ಯಾವ ಕ್ಲೀನಿಂಗ್ ಏಜೆಂಟ್‌ಗೂ ಬಗ್ಗದ ಕಲೆಗಳು ನಿಂಬೆಹಣ್ಣಿನ ಶಕ್ತಿಯಿಂದ ಮಾಯವಾಗುತ್ತದೆ. ಫಳಪಳಿಸುವ ಮೇಲ್ಮೈಗೆ, ಕಲೆಗಳನ್ನು ತೆಗೆಯಲು, ವಾಸನೆಯನ್ನು ಹೋಗಲಾಡಿಸಲು ಹೀಗೆ ಹಲವು ಕ್ಷೇತ್ರಗಳಲ್ಲಿ ನಿಂಬೆಹಣ್ಣಿನದೇ ಮೇಲುಗೈ. ಮುಖ್ಯವಾಗಿ ಪಾತ್ರೆಗಳನ್ನು ಫಳಫಳಿಸುವಂತೆ ಮಾಡಲು ನಿಂಬೆಹಣ್ಣು ಅತ್ಯುತ್ತಮ ಉಪಾಯ. ಆದರೆ, ನಿಂಬೆಯ ಶಕ್ತಿಯ ಬಗ್ಗೆ ತಿಳಿದುಕೊಂಡವರು ಕೆಲವು ವಿಚಾರಗಳಿಗೆ ನಿಂಬೆಯನ್ನು ನಾವು ಬಳಸಲೇಬಾರದು ಎಂಬುದನ್ನು ತಿಳಿದಿರಬೇಕು. ಎಲ್ಲ ಬಗೆಯ ಸ್ವಚ್ಛತೆಗೂ ನಿಂಬೆ ಯೋಗ್ಯವಲ್ಲ. ಬನ್ನಿ, ಯಾವೆಲ್ಲ ವಸ್ತುಗಳ ಮೇಲೆ ನಾವು ನಿಂಬೆಯ ಪ್ರಯೋಗವನ್ನು ಯಾವತ್ತೂ ಮಾಡಲೇಬಾರದು (Things to Avoid Cleaning with Lemon) ಎಂಬುದನ್ನು ನೋಡೋಣ ಬನ್ನಿ.
ಮಾರ್ಬಲ್ ಹಾಗೂ ಗ್ರಾನೈಟ್ ಫ್ಲೋರ್‌ಗಳ ಮೇಲೆ
ನಿಮ್ಮ ಕಿಚನ್‌ನ ಸ್ಲ್ಯಾಬ್ ಮಾರ್ಬಲ್ ಅಥವಾ ಗ್ರಾನೈಟ್‌ನದ್ದಾಗಿದ್ದರೆ ಖಂಡಿತ ಅವುಗಳ ಮೇಲ್ಮೈ ಕ್ಲೀನ್ ಮಾಡಲು ನಿಂಬೆಹಣ್ಣಿನ ಪ್ರಯೋಗ ಮಾಡಬೇಡಿ. ನಿಂಬೆಹಣ್ಣಿನಲ್ಲಿ ಹೆಚ್ಚು ಆಮ್ಲೀಯ ಪ್ರಕೃತಿ (ಅಸಿಡಿಕ್ ನೇಚರ್) ಇರುವುದರಿಂದ ಅವು ಮಾರ್ಬಲ್ ಗ್ರಾನೈಟ್ ಮೇಲೆ ಸರಿಯಾಗಿ ವರ್ತಿಸಲಾರವು. ನೈಸರ್ಗಿಕ ಕಲ್ಲುಗಳಾಗಿರುವುದರಿಂದ ಇವು ನಿಂಬೆಹಣ್ಣಿನ ಜೊತೆಗೆ ಕಾಲಕ್ರಮೇಣ ವರ್ತಿಸುತ್ತಾ, ಇವುಗಳಿಂದ ಅವುಗಳ ಮೇಲಮೈ ಸೌಂದರ್ಯ ಕೆಡಬಹುದು. ಕೊನೆಗೆ ಹಾಳಾಗಬಹುದು. ಪಿಎಚ್ ನ್ಯೂಟ್ರಲ್ ಇರುವ ಕ್ಲೆನ್ಸರ್‌ಗಳನ್ನು ಇವಕ್ಕೆ ಬಳಸುವುದು ಒಳ್ಳೆಯದು.
ಕಬ್ಬಿಣದ ಕಾವಲಿಗಳು
ತಾಮ್ರ, ಹಿತ್ತಾಳೆಯ ಪಾತ್ರೆಗಳನ್ನು ನಿಂಬೆಹಣ್ಣು ಫಳಫಳ ಹೊಳೆಯುವಂತೆ ಮಾಡುತ್ತದೆ ಎಂದುಕೊಂಡು ಅದನ್ನು ಕಬ್ಬಿಣದ ಮೇಲೂ ಪ್ರಯೋಗಿಸಬೇಡಿ. ಕಬ್ಬಿಣದ ಕಾವಲಿಗಳ ಮೇಲೆ ದೋಸೆ ಹುಯ್ಯಲು ನೀವು ಅದನ್ನು ಎಣ್ಣೆ ತಿಕ್ಕಿ ಪಳಗಿಸಿದ ಗುಣವೇ ಇದರಿಂದ ನಾಶವಾಗಬಹುದು. ಅದರ ಮೇಲ್ಮೈಯಲ್ಲಿ ಇರುವ ಎಣ್ಣೆಯಂಶ ಪೂರ್ತಿಯಾಗಿ ಹೋದಲೆ ಕಬ್ಬಿಣದ ಕಾವಲಿ ನಿಮ್ಮ ಉಪಯೋಗಕ್ಕೆ ನೀವಂದುಕೊಂಡ ಹಾಗೆ ಬಗ್ಗದು. ಮೆದುವಾದ ಬ್ರಷ್‌ನಿಂದ ಉಜ್ಜಿ ತೊಳೆಯಿರಿ. ಸೋಪ್/ಲಿಕ್ವಿಡ್ ಆದಷ್ಟೂ ಕಡಿಮೆ ಬಳಸಿ. ಬಿಸಿನೀರನಿಂದಲೂ ತೊಳೆಯಬಹುದು.
ಚಾಕು
ಕಿಚನ್‌ನಲ್ಲಿ ನಿತ್ಯವೂ ಬಳಸುವ ಚಾಕುಗಳು ಅತ್ಯಂತ ಹೆಚ್ಚು ಉಪಯೋಗಕ್ಕೆ ಬರುವ ವಸ್ತುಗಳಲ್ಲಿ ಒಂದು. ಈ ಚಾಕುಗಳನ್ನು ಕೆಲವೊಮ್ಮೆ ಹೈ- ಕಾರ್ಬನ್ ಸ್ಟೀನ್‌ಲಿಂದ ಮಾಡಲಾಗಿರುತ್ತದೆ. ಹಾಗಾಗಿ, ಅವುಗಳನ್ನು ತೊಳೆಯಲು ನಿಂಬೆಹಣ್ಣು ಸೂಕ್ತವಲ್ಲ. ಇದು ಕೆಲವೊಮ್ಮೆ ಚಾಕುವಿನ ಮೇಲ್ಮೈ ಮೇಲೆ ಘಾಸಿ ಮಾಡಬಹುದು. ತುಕ್ಕು ಹಿಡಿಯುವಂತೆ ಪ್ರೇರೇಪಿಸಬಹುದು.
ಮರದ ಪಾತ್ರೆಗಳು/ಸೌಟುಗಳು
ಮರದ ವಸ್ತುಗಳ ಬಳಕೆ ಇಂದು ಕಿಚನ್‌ನಲ್ಲಿ ಹೆಚ್ಚಾಗುತ್ತಿದೆ. ಮರದ ಪಾತ್ರೆಗಳು, ಮರದ ಕಟ್ಟಿಂಗ್ ಬೋರ್ಡ್, ಮರದ ಸೌಟುಗಳು, ಟ್ರೇ ಇತ್ಯಾದಿಗಳ ಬಳಕೆ ಸಾಮಾನ್ಯ. ಹಾಗಾಗಿ, ಇವುಗಳನ್ನು ಸ್ವಚ್ಛಗೊಳಿಸಲು ಖಂಡಿತವಾಗಿಯೂ ನಿಂಬೆಹಣ್ಣು ಸೂಕ್ತವಲ್ಲ. ಇದು ಇವುಗಳನ್ನು ಹಾಳು ಮಾಡುತ್ತದೆ. ಒಡೆಯುವಂತೆಯೂ ಮಾಡಬಹುದು. ಮೆದುವಾದ ಸೋಪ್/ಲಿಕ್ವಿಡ್ ಬಳಸಿ ಮರದ ವಸ್ತುಗಳನ್ನು ಸ್ವಚ್ಛ ಮಾಡಿ. ನಂತರ ತೆಳುವಾದ ಲೇಯರ್ ಎಣ್ಣೆ ಹಚ್ಚಿ.
Tips for Monsoon: ಮಳೆಗಾಲದಲ್ಲಿ ಬಟ್ಟೆಗಳನ್ನು ಗರಿಗರಿಯಾಗಿ ಇರಿಸುವುದು ಹೇಗೆ?ಇದನ್ನೂ ಓದಿ:
ಅಲ್ಯೂಮಿನಿಯಂ ಪಾತ್ರೆಗಳು
ಅಲ್ಯೂಮಿನಿಯಂ ಪಾತ್ರೆಗಳ ಬಳಕೆ ಇತ್ತೀಚೆಕೆ ಕಡಿಮೆಯಾಗುತ್ತಿದ್ದರೂ, ಇನ್ನೂ ಹಲವರು ಅಲ್ಯೂಮಿನಿಯಂ ಪಾತ್ರೆಗಳನ್ನು ಬಳಸುವುದುಂಟು. ಇವುಗಳನ್ನು ಫಳಫಳಿಸುವ ನೆಪದಲ್ಲಿ ನಿಂಬೆ ಬಳಸಬೇಡಿ. ಅಲ್ಯೂಮಿನಿಯಂ ಪಾತ್ರೆಯ ಮೇಲೆ ನಿಂಬೆ ವರ್ತಿಸಿ ಅವುಗಳ ಹೊಳಪನ್ನು ಕಡಿಮೆ ಮಾಡಬಹುದು, ಜೊತೆಗೆ ಬಣ್ಣ ಮಾಸಲೂಬಹುದು. ಇವು ಹೊಸದಾಗಿ ಫಳಫಳಿಸಲು ಯಾವುದಾದರೂ ಡಿಶ್ ಸೋಪ್ ಬಳಸಿ, ತಿಕ್ಕಿ ತೊಳೆಯಿರಿ. ಹೊಸದರಂತೆ ಫಳಫಳಿಸಬಹುದು.