Site icon Vistara News

Tips for Monsoon: ಮಳೆಗಾಲದಲ್ಲಿ ಬಟ್ಟೆಗಳನ್ನು ಗರಿಗರಿಯಾಗಿ ಇರಿಸುವುದು ಹೇಗೆ?

Tips for Monsoon

ಮಳೆಗಾಲದಲ್ಲಿ ಒಣಗಿ ಗರಿಯಾದ (Tips for Monsoon) ವಸ್ತ್ರಗಳನ್ನು ಹಾಕಿಕೊಳ್ಳಬೇಕೆಂಬ ಆಸೆ ಎಷ್ಟೋ ಬಾರಿ ಕೈಗೂಡುವುದಿಲ್ಲ. ಹಸಿ ವಾಸನೆ, ಮುಗ್ಗಲು ನಾತ ಇತ್ಯಾದಿಗಳು ಮಳೆಗಾಲದ ಸಂಗಾತಿಗಳಂತೆ ಜೊತೆಗೇ ಇರುತ್ತವೆ. ತೊಳೆದ ವಸ್ತ್ರಗಳಲ್ಲೇ ಇಂಥ ಸಮಸ್ಯೆಗಳಾದರೆ ದಿನವೂ ಒದ್ದೆಯಾಗುವ ಟವೆಲ್‌ಗಳ ಗತಿ ಏನು? ತೆಳುವಾದ ಹತ್ತಿಯ ಟವೆಲ್‌ಗಳಾದರೆ ಕಷ್ಟಪಟ್ಟಾದರೂ ಒಣಗಬಹುದು ಮಾರನೇ ದಿನಕ್ಕೆ. ದಪ್ಪನೆಯ ಟರ್ಕಿ ಟವೆಲ್‌ಗಳಾದರಂತೂ ದಿನವೂ ಅರ್ಧ ಒದ್ದೆಯಾಗಿದ್ದು ಗಬ್ಬು ನಾತ ಬೀರಲು ಪ್ರಾರಂಭಿಸುತ್ತದೆ. ಫಂಗಸ್‌ ಬೆಳೆದು, ಟಬೆಲ್‌ ತುಂಬಾ ಕಪ್ಪು ಚುಕ್ಕಿಗಳ ಚಿತ್ತಾರ ರಚನೆಯಾಗುತ್ತದೆ. ನಿಮ್ಮಿಷ್ಟದ ಟವೆಲ್‌ಗಳನ್ನು ಮಳೆಗಾಲದ ಮೂರು ತಿಂಗಳು ಮುಗಿಯುವಷ್ಟರಲ್ಲಿ ಬಿಸಾಡುವ ಅವಸ್ಥೆ ಬಂದರೆ ಕಷ್ಟತಾನೇ? ಹಾಗಾಗಿ ವರ್ಷ ಋತುವಿನ ಸಮಯದಲ್ಲಿ ಟವೆಲ್‌ಗಳನ್ನು ತಾಜಾ ಇರಿಸಿಕೊಳ್ಳುವುದು ಹೇಗೆ ಎನ್ನುವ ಟಿಪ್ಸ್‌ ಇಲ್ಲಿದೆ.

ಕರ್ಪೂರ

ಮನೆಯಲ್ಲಿ ಆಗೀಗ ಕರ್ಪೂರವನ್ನು ಉರಿಸುವುದು ಇದಕ್ಕೆ ಸರಳವಾದ ಉಪಾಯ. ಮನೆಯೆಲ್ಲ ಹಸಿವಾಸನೆಯಿದ್ದರೆ, ಸಹಜವಾಗಿ ಬಟ್ಟೆಗಳೂ ಮುಗ್ಗಲು ನಾತ ಸೂಸುತ್ತವೆ. ಇವೆಲ್ಲ ಮನೆಯ ಮೂಲೆಗಳಲ್ಲಿ ಕಾಣದಂತೆ ಬೆಳೆಯುವ ಶಿಲೀಂಧ್ರಗಳ ಉಪಟಳದಿಂದ ಆಗುವಂಥದ್ದು. ಬಾಗಿಲು, ಕಿಟಕಿಗಳನ್ನೆಲ್ಲ ಭದ್ರವಾಗಿ ಮುಚ್ಚಿ, ಒಳಗೆ ಒಂದಿಷ್ಟು ಕರ್ಪೂರಗಳನ್ನು ಉರಿಸಿ. ಒಂದರ್ಧ ಗಂಟೆ ಬಾಗಿಲು-ಕಿಟಕಿಗಳನ್ನು ಮುಚ್ಚಿಯೇ ಇರಿಸಿ, ನಂತರ ತೆರೆಯಿರಿ. ಇದರಿಂದ ಶಿಲೀಂಧ್ರಗಳ ವಾಸನೆಯನ್ನು ಹೋಗಲಾಡಿಸಬಹುದು. ಬಟ್ಟೆ ಇರಿಸುವ ಕಪಾಟುಗಳಲ್ಲೂ ಈ ಕರ್ಪೂರಗಳನ್ನು ಒಂದೊಂದಾಗಿ ಮೂಲೆಯಲ್ಲಿರಿಸಿ. ಇದರಿಂದ ಟವೆಲ್‌ ಸೇರಿದಂತೆ ಎಲ್ಲ ವಸ್ತ್ರಗಳ ಮುಗ್ಗಲು ವಾಸನೆ ಕಡಿಮೆಯಾಗುತ್ತದೆ.

ಬೇಕಿಂಗ್‌ ಸೋಡಾ

ವಾಷಿಂಗ್‌ ಮಿಷನ್‌ಗೆ ಟವೆಲ್‌, ಬೆಡ್‌ಶೀಟ್‌ನಂಥ ಭಾರದ ವಸ್ತ್ರಗಳನ್ನು ಹಾಕುವಾಗ ಅರ್ಧ ಚಮಚ ಬೇಕಿಂಗ್‌ ಸೋಡಾ ಸೇರಿಸಿ. ಮಾಮೂಲಿ ಡಿಟರ್ಜಂಟ್‌ ಜೊತೆಗೆ ಇದನ್ನು ಸೇರಿಸಬೇಕು. ಒಂದೊಮ್ಮೆ ವಾಷಿಂಗ್‌ ಮಿಷನ್‌ ಅಲ್ಲದೆಯೆ, ಬಟ್ಟೆಗಳನ್ನು ಬಕೆಟ್‌ನಲ್ಲಿ ನೆನೆಸುವುದಾದರೂ ಇದೇ ಕ್ರಮವನ್ನು ಅನುಸರಿಸಿ. ಇದರಿಂದ ಬಟ್ಟೆಗಳ ಮೇಲಿನ ತೇವದ ಕಲೆಗಳು ಮಾಯವಾಗಿ, ದುರ್ವಾಸನೆಯೂ ದೂರವಾಗುತ್ತದೆ.

ಇಸ್ತ್ರಿ

ದಿನವೂ ಒದ್ದೆಯಾಗುವ ಟವೆಲ್ ಒಣಗುತ್ತಲೇ ಇಲ್ಲ ಎಂದಾದರೆ ಇಸ್ತ್ರಿ ಮಾಡಿ ಹರವಿಡುವುದು ಸುಲಭವಾದ ಉಪಾಯ. ಮಾಡಿದರೆ, ಮನೆಮಂದಿ ಎಲ್ಲರ ವಸ್ತ್ರಗಳನ್ನೂ ಇಸ್ತ್ರಿ ಮಾಡುವುದು ಅಗತ್ಯ ಎನ್ನುವ ದಿನಗಳೂ ಬರಬಹುದು ಮಳೆಗಾಲದಲ್ಲಿ. ಮನೆಯಲ್ಲೇ ಡ್ರೈಯರ್‌ ಇರಿಸಿಕೊಂಡಿದ್ದರೆ ಇಂಥ ಯಾವ ಸಮಸ್ಯೆಗಳೂ ಇರುವುದಿಲ್ಲ. ಆದರೆ ಮಳೆಗಾಲದ ಮೂರ್ನಾಲ್ಕು ತಿಂಗಳ ಹೊರತಾಗಿ ಈ ಡ್ರೈಯರ್‌ಗಳು ಉಳಿದ ದಿನಗಳಲ್ಲಿ ಅಗತ್ಯ ಎನಿಸುವುದಿಲ್ಲ.

ಸಿಲಿಕಾ ಪ್ಯಾಕೆಟ್‌

ಹೆಚ್ಚುವರಿ ತೇವವನ್ನು ಹೀರಿಕೊಳ್ಳುವ ಕೆಲಸಕ್ಕೆ ಪುಟ್ಟ ಸಿಲಿಕಾ ಪ್ಯಾಕೆಟ್‌ಗಳನ್ನೂ ಬಳಸಬಹುದು. ಕಪಾಟಿನ ಬಟ್ಟೆಗಳ ನಡುವೆ ಕೆಲವು ಸಿಲಿಕಾ ಪ್ಯಾಕೆಟ್‌ಗಳನ್ನು ಇರಿಸಿದರೆ, ವಾರ್ಡ್‌ರೋಬ್‌ ಒಳಗೆ ಹೆಚ್ಚುವರಿ ತೇವ ನಿಲ್ಲದಂತೆ ಇವು ಹೀರಿಕೊಳ್ಳುತ್ತವೆ. ಬೆಡ್‌ಶೀಟ್‌, ಟವೆಲ್‌ನಂಥ ದಪ್ಪ ಬಟ್ಟೆಗಳ ಒಳಗೇ ಇದನ್ನು ಇರಿಸಿದರೂ ಒಳ್ಳೆಯದೇ.

Vinegar

ವಿನೇಗರ್‌

ವಾಷಿಂಗ್‌ ಮಶೀನ್‌ ಉಪಯೋಗಿಸುವವರು, ಅದರ ರಿನ್ಸ್‌ ಆವರ್ತದಲ್ಲಿ 2-4 ಚಮಚ ವಿನೇಗರ್‌ ಸೇರಿಸಬಹುದು. ಇದರಿಂದಲೂ ಬಟ್ಟೆಗಳ ದುರ್ವಾಸನೆ ಹೋಗಲಾಡಿಸಬಹುದು. ಕರ್ಪೂರ ಇರಿಸಿದಂತೆಯೇ, ಮನೆಯಲ್ಲಿ ಲೋಬಾನ ಹಾಕುವ ಕ್ರಮವೂ ಪ್ರಯೋಜನಕಾರಿ. ಇಂಥ ಯಾವುದೇ ಕ್ರಮಗಳನ್ನು ಅನುಸರಿಸಿದಾಗಲೂ ಮೊದಲಿಗೆ, ಒಂದರ್ಧ ತಾಸು ಕಿಟಕಿ-ಬಾಗಿಲುಗಳನ್ನು ಮುಚ್ಚಿಡಿ. ನಂತರ ಗಾಳಿಯಾಡಲು ಬಿಡಿ.

ಇದನ್ನೂ ಓದಿ: Nonstick Pans: ನಾನ್‌ಸ್ಟಿಕ್‌ ಪಾತ್ರೆಗಳ ತಪ್ಪು ಬಳಕೆಯಿಂದಲೂ ಜ್ವರ ಬಾಧಿಸುತ್ತದೆ!

ಎಲ್ಲಿರಿಸುತ್ತೀರಿ?

ಟವೆಲ್‌ಗಳನ್ನು ಬಳಕೆಯ ಬಳಿಕ ಯಾವ ಜಾಗದಲ್ಲಿ ಇಡುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ಬಾತ್‌ರೂಮಿನ ಆಚೀಚಿನ ಕಪಾಟುಗಳು ಇದಕ್ಕೆ ಸೂಕ್ತವಲ್ಲ. ಕಾರಣ, ವಾತಾವರಣದಲ್ಲಿ ಈಗಾಗಲೇ ಸಾಕಷ್ಟು ತೇವವಿದೆ. ಜೊತೆಗೆ ಬಚ್ಚಲುಮನೆಯ ಆಚೀಚಿನ ಸ್ಥಳಗಳಲ್ಲಿ ಇನ್ನೂ ಹೆಚ್ಚು ಒದ್ದೆಯಾಗಿರುತ್ತದೆ. ಬದಲಿಗೆ, ಚೆನ್ನಾಗಿ ಗಾಳಿಯಾಡುವ ಜಾಗಗಳು ಸೂಕ್ತ.

Exit mobile version