ಜಗತ್ತಿನಲ್ಲಿ ನಿಂಬೆಹಣ್ಣಿನಷ್ಟು ನಿರ್ಲಕ್ಷ್ಯಕ್ಕೊಳಗಾದ ಹಣ್ಣು ಇನ್ನೊಂದಿಲ್ಲವೇನೋ. ವರ್ಷಪೂರ್ತಿ ಬೇಕಾದಗಲೆಲ್ಲ ಸುಲಭವಾಗಿ ಸಿಗುವ ಈ ಹಣ್ಣಿನ ಬಗ್ಗೆ ಅದೇಕೋ ನಮಗೆ ತಾತ್ಸಾರ. ಆದರೆ, ನಿಂಬೆಹಣ್ಣಿನಲ್ಲಿ ನಮ್ಮ ಅಳತೆಗೂ ಮೀರಿದ ಶಕ್ತಿ ಸಾಮರ್ಥ್ಯವಿದೆ. ಅದರಲ್ಲಿರುವ ಪೋಷಕಾಂಶಗಳು, ರೋಗನಿರೋಧಕ ಶಕ್ತಿ ಹಾಗೂ ದೇಹಕ್ಕೆ ಚೈತನ್ಯ ನೀಡುವ ಎಲ್ಲ ಬಗೆಯ ಪೋಷಕಾಂಶಗಳೂ ಕೂಡಾ ನಿತ್ಯವೂ ಬೇಕಾದಂಥದ್ದೇ. ಪ್ರತಿನಿತ್ಯ ನಮ್ಮ ಅಡುಗೆಯಲ್ಲಿ ಒಂದಲ್ಲ ಒಂದು ಬಗೆಯಲ್ಲಿ ನಿಂಬೆಹಣ್ಣನ್ನು ರುಚಿಗಾಗಿ ಬಳಸುವ ನಾವು, ಆರೋಗ್ಯಕ್ಕಾಗಿಯೂ ಬಗೆಬಗೆಯಲ್ಲಿ ಬಳಸುತ್ತೇವೆ. ಸುಸ್ತಾಗಿ ಬಸವಳಿದಾಗ, ಆರೋಗ್ಯ ಕೈಕೊಟ್ಟಾಗ, ಜ್ವರದಿಂದ ಬಳಲಿ ನಿತ್ರಾಣಗೊಂಡು ಮಲಗಿದಾಗ ಒಂದು ಲೋಟ ನಿಂಬೆಹಣ್ಣಿನ ಪಾನಕ ಕುಡಿದರೆ ಸಾಕು, ಎಷ್ಟೋ ಹಾಯೆನಿಸುತ್ತದೆ. ನಮ್ಮ ದೇಹಕ್ಕೆ ನಿಂಬೆಹಣ್ಣಿನ ಪ್ರಯೋಜನ ಬಹಳಷ್ಟಿದೆ. ಆದರೆ, ಇಂಥ ನಿಂಬೆಹಣ್ಣನ್ನು ಖರೀದಿಸುವ ಸಂದರ್ಭ ಎಷ್ಟೋ ಬಾರಿ ನಮಗೆ ಸರಿಯಾದ ನಿಂಬೆಹಣ್ಣನ್ನು ಖರೀದಿಸುವ ಬಗ್ಗೆ ಗೊಂದಲ ಇದ್ದಿದ್ದೇ. ಯಾಕೆಂದರೆ, ಬಹಳಷ್ಟು ಸಾರಿ, ನಿಂಬೆಹಣ್ಣು ಹೊರಗಿನಿಂದ ಹದವಾಗಿ, ಹಣ್ಣಾಗಿ ಕಂಡರೂ, ಒಳಗೆ ಜ್ಯೂಸೇ ಇರುವುದಿಲ್ಲ. ಹಿಂಡಿದರೆ ಜ್ಯೂಸ್ ಬರುವುದೇ ಇಲ್ಲ. ಅಷ್ಟಾಗಿ ಅನುಭವ ಇಲ್ಲದ ಹೊಸಬರಿಗಂತೂ, ನಿಂಬೆಹಣ್ಣು ಖರೀದಿಸುವುದು ಒಂದು ಸವಾಲು. ಬನ್ನಿ, ಪರ್ಫೆಕ್ಟ್ ಜ್ಯೂಸಿ ನಿಂಬೆಹಣ್ಣಿನ ಖರೀದಿಸುವ ಕುಶಲತೆಯ (Tips To Find The Juiciest Lemon) ಟಿಪ್ಸ್ ತಿಳಿಯೋಣ.
ತೂಕವನ್ನು ಗಮನಿಸಿ
ಬಹಳ ಸುಲಭವಾದ ಐಡಿಯಾ ಎಂದರೆ ತೂಕವನ್ನು ಗಮನಿಸುವುದು. ಸಾಮಾನ್ಯವಾಗಿ ಜ್ಯೂಸಿಯಾಗಿರುವ ನಿಂಬೆಹಣ್ಣು ಯಾವಾಗಲೂ ಹೆಚ್ಚು ತೂಕವನ್ನು ಹೊಂದಿರುತ್ತದೆ. ಹೆಚ್ಚು ನಿಂಬೆಹಣ್ಣು ಸಿಗುತ್ತದೆ ಎಂಬ ಕಾರಣಕ್ಕೆ ಕಡಿಮೆ ತೂಕದ ನಿಂಬೆಹಣ್ಣನ್ನು ಆರಿಸಬೇಡಿ. ಅವುಗಳು ಹೊರಗಿನಿಂದ ಚಂದವೇ ಕಂಡರೂ, ಹಿಂಡಿದಾಗ ಒಳಗೆ ನೀರೇ ಇರುವುದಿಲ್ಲ. ಒಂದೇ ಬಗೆಯ ಸಾಮಾನ್ಯ ಗಾತ್ರದ ತೂಕ ಹೆಚ್ಚಿರುವ ನಿಂಬೆಯಲ್ಲಿ ಧಾರಾಳವಾಗಿ ಜ್ಯೂಸ್ ಇರುತ್ತದೆ.
ಮೆದುವಾಗಿದೆಯಾ ನೋಡಿ
ನಿಂಬೆಹಣ್ಣಿನ ಅಂದಾಜು ತೂಕ ಕೈಯಲ್ಲಿ ಹಿಡಿದು ಗಮನಿಸಿದ ಮೇಲೆ ಅದನ್ನು ಮೆಲ್ಲನೆ ಒತ್ತಿ ನೋಡಿ. ಜೋರಾಗಿ ಅಲ್ಲ. ಅದು ಮೆದುವಾಗಿದೆ ಅನಿಸಿದರೆ ಖಂಡಿತವಾಗಿಯೂ ಅದರೊಳಗೆ ಹೆಚ್ಚು ಜ್ಯೂಸ್ ಇದೆ ಎಂದು ಅರ್ಥ. ಮೆದುವಾಗಿ ಇರುವ ನಿಂಬೆಹಣ್ಣುಗಳಲ್ಲಿ ಹೆಚ್ಚು ಜ್ಯೂಸ್ ಇದೆ. ಆದರೆ ಹೀಗೆ ಪರೀಕ್ಷಿಸಲು ಜೋರಾಗಿ ಒತ್ತಿ ನಿಂಬೆಹಣ್ಣನ್ನೇ ಹಾಳು ಮಾಡಬೇಡಿ.
ನಿಂಬೆಹಣ್ಣಿನ ಸಿಪ್ಪೆಯನ್ನು ಗಮನಿಸಿ
ಸಿಪ್ಪೆಯ ಮೇಲ್ಮೈ ಏರುತಗ್ಗುಗಳಿದ್ದು ದೊರಗಾಗಿದ್ದರೆ ಅದರಲ್ಲಿ ಜ್ಯೂಸ್ ಹೆಚ್ಚಿರಲಾರದು. ನಯವಾದ, ಒಂದೇ ಬಗೆಯಲ್ಲಿ ಸಿಪ್ಪೆ ಇದೆ ಎಂದಾದಲ್ಲಿ ಅದರಲ್ಲಿ ಜ್ಯೂಸ್ ಬೇಕಾದಷ್ಟಿದೆ ಎಂದು ಅರ್ಥ. ಹಾಗಾಗಿ ನಯವಾದ ಸಿಪ್ಪೆಯಿರುವ ನಿಂಬೆಹಣ್ಣನ್ನೇ ಹಿಂಡಲು ಆಯ್ಕೆ ಮಾಡಿ.
ನಿಂಬೆಹಣ್ಣಿನ ಬಣ್ಣ ಗಮನಿಸಿ
ಅದು ಹಳದಿ ಬಣ್ಣಕ್ಕೆ ತಿರುಗಿ ಗಾಢ ಬಣ್ಣದಲ್ಲಿದ್ದರೆ ಅದು ಹಿಂಡಲು ಸೂಕ್ತ. ಅದು ಸರಿಯಾಗಿ ಹಣ್ಣಾಗಿದೆ ಹಾಗೂ ಹಿಂಡಿದರೆ ಹೆಚ್ಚು ಜ್ಯೂಸ್ ಸಿಗಬಹುದು ಎಂದು ಅರ್ಥ. ಇನ್ನೂ ಹಸಿರು ಬಣ್ಣದಲ್ಲಿರುವ ನಿಂಬೆ ಹಿಂಡಲು ತಯಾರಾಗಿಲ್ಲ ಎಂದೇ ಅರ್ಥ.
ಇದನ್ನೂ ಓದಿ: Pain Relievers: ಸೈಡ್ ಎಫೆಕ್ಟ್ ಇಲ್ಲದ ಪ್ರಕೃತಿದತ್ತ ನೋವು ನಿವಾರಕಗಳಿವು
ಪ್ಯಾಚ್‌ಗಳಿದ್ದರೆ ಬಿಡಿ
ನಿಂಬೆಹಣ್ಣಿನಲ್ಲಿ ಅಲ್ಲಲ್ಲಿ ಕಂದು ಬಣ್ಣದ ಚುಕ್ಕೆಗಳು ಅಥವಾ ಪ್ಯಾಚ್‌ಗಳು ಕಂಡು ಬಂದರೆ ಅದು ಹಾಳಾಗುತ್ತಿದೆ ಎಂದರ್ಥ. ಅಂಥ ನಿಂಬೆಹಣ್ಣನ್ನು ಖರೀದಿಸಬೇಡಿ. ಇಂತಹ ನಿಂಬೆಹಣ್ಣನ್ನು ಹಿಂಡಿದರೆ ಜ್ಯೂಸ್ ಸಿಗುತ್ತದೆಯಾದರೂ, ಅದರ ಜ್ಯೂಸ್‌ನ ವಾಸನೆ ಬದಲಾಗಿರುತ್ತದೆ ಹಾಗೂ ಸ್ವಲ್ಪ ಕಹಿ ರುಚಿಯಾಗಿರುತ್ತದೆ.
ನಿಂಬೆಹಣ್ಣಿನ ಉಪಯೋಗವನ್ನು ಅದರ ಪೋಷಕ ತತ್ವವನ್ನು ಸದಾ ನಿಮ್ಮ ನಿತ್ಯಾಹಾರದಲ್ಲಿ ಬಳಸುವ ಮೂಲಕ ಅದರ ನಿಜವಾದ ಆರೋಗ್ಯದ ಲಾಭಗಳನ್ನು ಪಡೆಯಿರಿ.