Site icon Vistara News

Toothpaste For Cleaning: ಅಡುಗೆ ಮನೆ ಕೊಳೆಯಾಗಿದೆಯೇ? ಸ್ವಚ್ಛತೆಗೆ ಟೂತ್‌ಪೇಸ್ಟ್‌ ಬಳಸಿ!

Toothpaste For Cleaning

ಟೂತ್‌ಪೇಸ್ಟ್‌ ಯಾವುದಕ್ಕೆಲ್ಲ ಉಪಯೋಗಿಸಬಹುದು ಎಂದು ಕೇಳಿದರೆ, ಯಾರಾದರೂ ನಕ್ಕಾರು. ಹಲ್ಲುಜ್ಜುವುದಕ್ಕೆ ಬಿಟ್ಟರೆ ಇನ್ಯಾವುದಕ್ಕೆ ಎಂದು ತಿರುಗಿ ಪ್ರಶ್ನೆಯನ್ನೂ ಕೇಳಿಯಾರು. ಆದರೆ ಟೂತ್‌ಪೇಸ್ಟ್‌ ಕೇವಲ ವೈಯಕ್ತಿಕ ಶುಚಿತ್ವಕ್ಕಷ್ಟೇ ಬಳಕೆಯಾಗುವ ದಿನಗಳು ಹೋಗಿವೆ. ಅದನ್ನು ಅಡುಗೆಮನೆ ಸ್ವಚ್ಛತೆಗೂ ಬಳಸಬಹುದು. ಇದನ್ನು ಅಡುಗೆಮನೆಯ ಕೊಳೆ ತೊಳೆಯುವುದಕ್ಕೆ ಮತ್ತು ವಾಸನೆ ತೆಗೆಯುವುದಕ್ಕೂ ಬಳಸಬಹುದು. ಸಾಮಾನ್ಯವಾಗಿ ಸ್ಟೌಗಳ ಮೇಲಿನ ಹಟಮಾರಿ ಜಿಡ್ಡು, ಅರಿಶಿನದಂಥ ಕಲೆಗಳನ್ನು ತೆಗೆಯುವುದಕ್ಕೂ ಇದು ಅನುಕೂಲ. ಆದರೆ ಇದಕ್ಕಾಗಿ ಬಿಳಿಯ ಟೂತ್‌ಪೇಸ್ಟ್‌ ಮಾತ್ರವೇ ಬಳಸಬೇಕು. ಬಣ್ಣಬಣ್ಣದ, ಫ್ಲೂರೈಡ್‌ ಸೇರಿದ ಪೇಸ್ಟ್‌ಗಳನ್ನು ಬಳಸುವುದರಿಂದ ವಸ್ತುಗಳಿಗೆ ಹಾನಿಯಾಗಬಹುದು. ಹೊಳಪು ಕಳೆಯುವುದು ಅಥವಾ ಕೋಟಿಂಗ್‌ ಕಿತ್ತು ಬರುವಂಥ ಸಮಸ್ಯೆಗಳು ತಲೆದೋರಬಹುದು. ಜೊತೆಗೆ ಈ ಹಾನಿಯನ್ನು ಸರಿಪಡಿಸಲು ಕಷ್ಟವಾಗಬಹುದು ಅಥವಾ ಆಗದೆಯೇ ಇರಬಹುದು. ಹಾಗಾಗಿ ಬಿಳಿಯ ಟೂತ್‌ಪೇಸ್ಟ್‌ ಮಾತ್ರವೇ ಸೂಕ್ತ. ಹಾಗಾದರೆ ಅಡುಗೆ ಮನೆಯಲ್ಲಿ ಯಾವುದನ್ನೆಲ್ಲ (Toothpaste For Cleaning) ಸ್ವಚ್ಛಗೊಳಿಸಬಹುದು ಟೂತ್‌ಪೇಸ್ಟ್‌ನಿಂದ?

ಸ್ಟೀಲ್‌ ಸಿಂಕ್‌

ನಮ್ಮ ಪಾತ್ರೆಗಳನ್ನೆಲ್ಲ ಶುಚಿ ಮಾಡುವುದಕ್ಕೆ ನಾವು ಬಳಸುವ ಸಿಂಕ್‌ ಸಹ ಸ್ವಚ್ಛವಾಗಿರಬೇಕಲ್ಲ. ಕೊಳಕು ಜಾಗದಲ್ಲಿ ಬೇರೆ ವಸ್ತುಗಳನ್ನು ಸ್ವಚ್ಛ ಮಾಡಲಾಗದು. ಹಾಗಾಗಿ ಸಿಂಕ್‌ ಫಳಫಳ ಮಾಡುವುದಕ್ಕೆ ಟೂತ್‌ಪೇಸ್ಟ್‌ ಒಳ್ಳೆಯ ಉಪಾಯ. ಒದ್ದೆ ಬಟ್ಟೆ ಅಥವಾ ಒದ್ದೆ ಸ್ಪಾಂಜ್‌ಗೆ ಎರಡಿಂಚು ಉದ್ದದಷ್ಟು ಟೂತ್‌ಪೇಸ್ಟ್‌ ಹಾಕಿಕೊಳ್ಳಿ. ಇದನ್ನು ವೃತ್ತಾಕಾರದಲ್ಲಿ ಸಿಂಕ್‌ನ ಮೇಲೆ ಹಾಗೂ ಮೂಲೆಮೂಲೆಗಳಲ್ಲಿ ಉಜ್ಜಿ. ಕಲೆಗಳಿದ್ದರೆ ಸ್ವಲ್ಪ ಹೆಚ್ಚು ಪೇಸ್ಟ್‌ ಬೇಕಾದೀತು ಆ ಭಾಗಕ್ಕೆ. ಒಂದೆರಡು ನಿಮಿಷಗಳ ನಂತರ ಸಂಪೂರ್ಣವಾಗಿ ತೊಳೆದು ಶುಚಿ ಮಾಡಿ. ಇದರಿಂದ ಸಿಂಕ್‌ ಫಳಫಳಿಸುವಂತಾಗುತ್ತದೆ.

ನಲ್ಲಿ ಇತ್ಯಾದಿಗಳು

ಅಡುಗೆ ಮನೆಯಲ್ಲಿ ಪದೇಪದೆ ನೀರು ಬೇಕಾಗುವುದರಿಂದ ನಲ್ಲಿ ಮತ್ತದರ ಸುತ್ತಲಿನ ಜಾಗಗಳು ಕ್ರಮೇಣ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಗಡಸು ನೀರಾದರಂತೂ ಸುತ್ತೆಲ್ಲ ಬಿಳಿಯ ಕಲೆಗಳಾಗಿರುತ್ತವೆ. ಒದ್ದೆ ಬಟ್ಟೆ ಅಥವಾ ಸ್ಪಾಂಜ್‌ ಮೇಲೆ ಟೂತ್‌ಪೇಸ್ಟ್‌ ಹಾಕಿ ಇಂಥ ಕಲೆಗಳ ಮೇಲೆ ಚೆನ್ನಾಗಿ ಉಜ್ಜುವುದರಿಂದ, ಹೊಳಪು ಮರಳಿಸಬಹುದು. ಒಂದೊಮ್ಮೆ ಸೂಕ್ಷ್ಮ ಮೂಲೆಗಳನ್ನು ತಲುಪಲು ಆಗುತ್ತಿಲ್ಲ ಎಂದಾದರೆ ಉಪಯೋಗಿಸದ ಹಲ್ಲುಜ್ಜುವ ಬ್ರಷ್‌ನೇ ಈ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬಹುದು. ನಲ್ಲಿಯನ್ನೆಲ್ಲ ತೊಳೆದು ಸ್ವಚ್ಛ ಮಾಡಿದ ಮೇಲೆ, ಒಣಗಿದ ಬಟ್ಟೆಯಿಂದ ಒರೆಸಿ ನೀರು ತೆಗೆಯುವುದು ಮುಖ್ಯ. ಇದರಿಂದ ನಲ್ಲಿಯನ್ನು ಚಮಕಾಯಿಸಬಹುದು.

ಗಾಜು, ಸೆರಾಮಿಕ್‌ ಸ್ಟೌ

ಸ್ಟೀಲಿನ ಸ್ಟೌ ಅಥವಾ ಹಾಬ್‌ಗಳಾದರೆ ಉಜ್ಜಿ ಸ್ವಚ್ಛ ಮಾಡುವ ಆಯ್ಕೆ ಇರುತ್ತದೆ. ತೀರಾ ಕಲೆಯಾಗಿದ್ದರೆ ಸ್ಕ್ರಬ್ಬರ್‌ ಉಪಯೋಗಿಸಬಹುದು. ಆದರೆ ಗಾಜು ಅಥವಾ ಸೆರಾಮಿಕ್‌ ಸ್ಟೌಗಳಾದರೆ ಬಲ ಪ್ರಯೋಗ ಮಾಡದೆಯೇ, ನಾಜೂಕಾಗಿಯೇ ಉಪಯೋಗಿಸಬೇಕು. ಇದಕ್ಕೆ ಟೂತ್‌ಪೇಸ್ಟ್‌ ಒಳ್ಳೆಯ ಸ್ವಚ್ಛತೆಯನ್ನು ನೀಡುತ್ತದೆ. ಒಮ್ಮೆ ಲಘುವಾಗಿ ನೊರೆ ಬರುವಷ್ಟು ಉಜ್ಜಿದರೆ, ಸ್ಟೌ ಹೊಸದರಂತೆ ಹೊಳಪು ಪಡೆಯುತ್ತದೆ.

ಕಾಫಿ, ಚಹಾ ಕಲೆಗಳು

ನಿಮ್ಮಿಷ್ಟದ ಕಾಫಿ ಮಗ್‌ ಅಥವಾ ಚಹಾ ಕಪ್‌ನಲ್ಲಿ ಕೆಂಪು ಕಲೆಗಳಿವೆಯೇ? ಎಷ್ಟು ಉಜ್ಜಿದರೂ ಹೋಗುತ್ತಿಲ್ಲವೇ? ಇದಕ್ಕಾಗಿ ಕಠೋರ ರಾಸಾಯನಿಕಗಳನ್ನು ಉಪಯೋಗಿಸಿದರೆ ಪಿಂಗಾಣಿ ಕಪ್‌ಗಳು ಹೊಳಪು ಅಥವಾ ಬಣ್ಣ ಕಳೆದುಕೊಳ್ಳಬಹುದು. ಪ್ರತ್ಯೇಕ ಸ್ಕ್ರಬ್ಬರ್‌ಗೆ ಸ್ವಲ್ಪ ಪೇಸ್ಟ್‌ ಹಾಕಿಕೊಂಡು ಲಘುವಾಗಿ ಉಜ್ಜಿ. ಕೆಲವು ಕ್ಷಣಗಳ ನಂತರ ತೊಳೆದು ಶುಚಿ ಮಾಡಿದರೆ, ಕಲೆಗಳು ಮಾಯವಾಗಿರುತ್ತವೆ.

ಇದನ್ನೂ ಓದಿ: Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಕಟಿಂಗ್‌ ಬೋರ್ಡ್‌

ಮೊದಲಿನಂತೆ ಈಳಿಗೆ ಮಣೆಯ ಬಳಕೆ ಈಗಿಲ್ಲ. ಈಗ ಹೆಚ್ಚಿನವರು ಉಪಯೋಗಿಸುವುದು ಕಟಿಂಗ್‌ ಬೋರ್ಡ್‌. ಬೀಟ್‌ರೂಟ್‌ ಕತ್ತರಿಸಿದಾಗಿನ ಕಲೆಗಳು, ಟೊಮೇಟೊ ರಸದ ಹುಳಿ, ಈರುಳ್ಳಿಯ ವಾಸನೆ- ಹೀಗೆ ಎಲ್ಲವೂ ಕಟಿಂಗ್‌ ಬೋರ್ಡ್‌ನಲ್ಲಿ ಅಡಕವಾಗಿರುತ್ತದೆ. ಇವನ್ನೆಲ್ಲ ಆಗಾಗ ಸ್ವಚ್ಛ ಮಾಡದಿದ್ದರೆ ಫಂಗಸ್‌ ಬೆಳೆಯಬಹುದು. ಹಾಗಾಗಿ ಕಟಿಂಗ್‌ ಬೋರ್ಡ್‌ ಒದ್ದೆ ಮಾಡಿ, ಸ್ಕ್ರಬ್ಬರ್‌ಗೆ ಟೂತ್‌ಪೇಸ್ಟ್‌ ಹಾಕಿ ಉಜ್ಜಿ. ಚೆನ್ನಾಗಿ ನೊರೆ ಬರಲಿ. ನಂತರ ತೊಳೆದು ಒಣಗಿಸಿ. ಇದರಿಂದ ಕಟಿಂಗ್‌ ಬೋರ್ಡ್‌ ಮೇಲಿನ ಕಲೆ ಮತ್ತು ವಾಸನೆಗಳು ದೂರಾಗುತ್ತವೆ.

Exit mobile version