ನಮ್ಮ ಮನೆಗಳಲ್ಲಿ ಸ್ವಚ್ಛಗೊಳಿಸುವ ಏಜೆಂಟ್‌ಗಳು ಏನೆಲ್ಲ ಇದ್ದರೂ ಕೆಲವೊಮ್ಮೆ ಸಹಾಯಕ್ಕೆ ಬರುವುದು ಕೆಲವು ಉಪಾಯಗಳು. ಕೆಲವು ವಸ್ತುಗಳು ನಮ್ಮ ಸಮಸ್ಯೆಯನ್ನು ಚಕ್ಕನೆ ಸರಿ ಮಾಡಿಬಿಡುತ್ತವೆ. ಇಂಥ ವಸ್ತುಗಳ ಪೈಕಿ ಟೂತ್ ಪೇಸ್ಟ್ ಕೂಡಾ ಒಂದು. ಇದು ಕೇವಲ ನಮ್ಮ ಹಲ್ಲನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾತ್ರವಲ್ಲ, ಇಡೀ ಮನೆಯನ್ನೂ ಸ್ವಚ್ಛಗೊಳಿಸುವ ಕಾರ್ಯವನ್ನೂ ಮಾಡುತ್ತದೆ. ಟೂತ್‌ಪೇಸ್ಟ್‌ಗೆ ಕೆಟ್ಟ ವಾಸನೆಯನ್ನು ಹೋಗಲಾಡಿಸುವ ಶಕ್ತಿಯೂ ಇರುವುದರಿಂದ ಇದು ಬಾತ್‌ರೂಂ, ಟಾಯ್ಲೆಟ್ ಹಾಗೂ ಕಿಚನ್‌ನ ಕೆಲವು ವಸ್ತುಗಳ ಸ್ವಚ್ಛತೆಗೂ ಸಹಾಯಕ್ಕೆ ಬರುತ್ತದೆ. ಬನ್ನಿ, ಟೂತ್‌ಪೇಸ್ಟ್ ಮೂಲಕ ನಾವು ಯಾವೆಲ್ಲ ವಸ್ತುಗಳನ್ನು ಹೊಸದರಂತೆ ಪಳಪಳಿಸುವಂತೆ ಮಾಡಬಹುದು ಎಂಬುದನ್ನು (Toothpaste hacks) ನೋಡೋಣ.
ಸ್ಟೈನ್‌ಲೆಸ್ ಸ್ಟೀಲ್ ಸಿಂಕ್ ಸ್ಚಚ್ಛಗೊಳಿಸಲು
ನಿಮ್ಮ ಕಿಚನ್‌ನ ಸ್ಟೈನ್‌ಲೆಸ್ ಸ್ಟೀಲ್ ಸಿಂಕ್ ಪಳಪಳನೆ ಹೊಳೆಯಬೇಕಾದರೆ ಏನು ಮಾಡಬೇಕು ಎಂಬ ಗೊಂದಲ ನಿಮಗೆ ಬಹಳ ಸಾರಿ ಆಗಿರಬಹುದು. ಏನೇನೋ ಕಿಚನ್ ಟಿಪ್‌ಗಳನ್ನು ನೋಡಿ ಪ್ರಯತ್ನಿಸಿರಲೂ ಬಹುದು. ಜಾಹಿರಾತು ನೋಡಿ ಕೆಲವು ಕ್ಲೀನರ್‌ಗಳನ್ನು ಪ್ರಯತ್ನಿಸಿರಬಹುದು. ಆದರೆ, ಕೆಲವು ಕಲೆಗಳು, ಕಪ್ಪಾದ ಅಂಚು ಇತ್ಯಾದಿ ಬಹಳ ಕಾಲ ಹಾಗೆಯೇ ಇರುತ್ತದೆ. ಆದರೆ ಟೂತ್‌ಪೇಸ್ಟ್ ನಿಮ್ಮ ಈ ಚಿಂತೆಯನ್ನು ದೂರ ಮಾಡುತ್ತದೆ. ಸ್ವಲ್ಪ ಟೂತ್‌ಪೇಸ್ಟನ್ನು ಒಂದು ಸ್ಪಾಂಜ್ ಮೇಲೆ ಹಾಕಿ, ಇಡೀ ಸಿಂಕನ್ನು ವೃತ್ತಾಕಾರದಲ್ಲಿ ಉಜ್ಜುತ್ತಾ ಬನ್ನಿ. ಕಲೆಗಳಿದ್ದ ಜಾಗಕ್ಕೆ ಹೆಚ್ಚು ಒತ್ತು ಕೊಡಿ. ನಂತರ ನೀರು ಹಾಕಿ ತೊಳೆಯಿರಿ. ನಿಮ್ಮ ಸಿಂಕ್ ಗೀರುಗಳನ್ನು ಉಳಿಸದೆ ಪಳಪಳನೆ ಹೊಳೆಯುತ್ತದೆ.
ನಳ್ಳಿಗಳು ಹಾಗೂ ಪೈಪುಗಳು
ಬಾತ್‌ರೂಂ, ಟಾಯ್ಲೆಟ್ ಹಾಗೂ ಕಿಚನ್‌ನ ನಳ್ಳಿಗಳು, ಕೆಲವು ಫಿಟ್ಟಿಂಗ್‌ಗಳು, ಪೈಪುಗಳು ಕೆಲ ಕಾಲದ ನಂತರ ಕೊಳೆ ಹಿಡಿದುಕೊಂಡು ಕೆಟ್ಟದಾಗಿ ಕಾಣಿಸಲಾರಂಭಿಸುತ್ತದೆ. ಇವುಗಳ ಮೈ ದೊರಗಾಗಿ ಚುಕ್ಕೆಗಂತ ಕಲೆಗಳು ಕಾಣಿಸಲಾರಂಭಿಸುತ್ತವೆ. ಆದರೆ, ಬಾತ್‌ರೂಂ ಹಾಗೂ ಟಾಯ್ಲೆಟ್ ಸ್ವಚ್ಛಗೊಳಿಸುವ ಸಂದರ್ಭ ಇವುಗಳ ಮೇಲೆ ಅಷ್ಟಾಗಿ ಗಮನ ಕೊಡುವುದಿಲ್ಲ. ಇವುಗಳನ್ನೂ ತೊಳೆದರೆ ಹೊಸದರಂತೆ ಕಾಣಿಸುತ್ತವೆ. ಅದಕ್ಕಾಗಿ ಟೂತ್‌ಪೇಸ್ಟ್ ಅತ್ಯುತ್ತಮ ಉಪಾಯ. ಟೂತ್‌ಪೇಸ್ಟ್ ಹಾಕಿ ಒಂದು ಹಳೆಯ ಬ್ರಷ್‌ನಿಂದ ಉಜ್ಜಿದರೆ, ಈ ಎಲ್ಲ ಫಿಟ್ಟಿಂಗ್‌ಗಳೂ ಹೊಸದರಂತೆ ಸ್ವಚ್ಛವಾಗುತ್ತವೆ.
ಗ್ಲಾಸ್ ಮತ್ತು ಸೆರಾಮಿಕ್ ಸ್ಟವ್‌ಗಳ ಟಾಪ್
ಅಡುಗೆ ಮನೆಯಲ್ಲಿ ಸೆರಾಮಿಕ್ ಹಾಗೂ ಗ್ಲಾಸ್ ಸ್ಟವ್‌ಗಳ ಟಾಪ್‌ಗಳಲ್ಲಿ ಅಡುಗೆ ಮಾಡಿದ ಕಲೆಗಳು, ಆಹಾರದ ತುಣುಕುಗಳು, ಚೆಲ್ಲಿದ ಗುರುತುಗಳು ಇತ್ಯಾದಿ ಸಾಮಾನ್ಯ. ಇಂತಹುಗಳನ್ನು ಸ್ವಚ್ಛಗೊಳಿಸಲೂ ಕೂಡಾ ಟೂತ್‌ಪೇಸ್ಟ್ ಸಹಾಯ ಮಾಡುತ್ತದೆ. ಚಿಕ್ಕ ಬ್ರಷ್ ಇಲ್ಲಿ ನಿಮಗೆ ಟೂತ್‌ಪೇಸ್ಟ್ ಜೊತೆಗೆ ಸಹಾಯಕ್ಕೆ ಬರುತ್ತದೆ.
ಕಾಫಿ ಟೀ ಮಗ್‌ಗಳ ಸ್ವಚ್ಛತೆಗೆ
ಬಹಳ ಸಾರಿ ನಿತ್ಯವೂ ಕಾಫಿ, ಚಹಾ ಕುಡಿಯುವ ಮಗ್‌ಗಳಲ್ಲಿ ಚಹಾ ಕಾಫಿಯ ಕಲೆಗಳು ಹಾಗೆಯೇ ಉಳಿದುಬಿಡುತ್ತವೆ. ಪಕ್ಕನೆ ನೋಡುವಾಗ ಇದು ಗೋಚರಿಸದಿದ್ದರೂ, ಸರಿಯಾಗಿ ನೋಡಿದರೆ ಹಳೆಯದಾದಂತೆ ಕಾಣಿಸುತ್ತದೆ. ಎಷ್ಟು ತೊಳೆದರೂ ಹೊಸದರಂತೆ ಕಾಣುವುದಿಲ್ಲ. ಇಂಥ ಸಂದರ್ಭ ನೀವು ಟೂತ್‌ಪೇಸ್ಟನ್ನು ಬಳಸಬಹುದು. ಸಣ್ಣ ಬ್ರಷ್‌ನ ತುದಿಗೆ ಪೇಸ್ಟ್ ಹಚ್ಚಿ ಮಗ್‌ಗಳನ್ನು ತೊಳೆಯಬಹುದು.
ಇದನ್ನೂ ಓದಿ: Eye Care Tips: ಕಣ್ಣಿನ ಸುಸ್ತಿಗೆ ನೀವು ಇಷ್ಟಾದರೂ ಮಾಡಿ, ಕಣ್ಣಿಗೆ ಅಗತ್ಯ ವಿಶ್ರಾಂತಿ ನೀಡಿ!
ಕಟ್ಟಿಂಗ್ ಬೋರ್ಡ್ ಸ್ವಚ್ಛತೆಗೆ
ನಿತ್ಯವೂ ತರಕಾರಿಗಳನ್ನು ಕತ್ತರಿಸುವ ಕಟ್ಟಿಂಗ್ ಬೋರ್ಡ್ ಕೂಡಾ ಸಾಕಷ್ಟು ಗೀರುಗಳನ್ನೂ ಆ ಗೀರುಗಳ ಅಂಚಿನಲ್ಲಿ ಕಲೆಗಳನ್ನೂ ಮೈಗೂಡಿಸಿಕೊಂಡಿರುತ್ತದೆ. ಎಷ್ಟು ತೊಳೆದರೂ ಹೊಸದರಂತೆ ಕಾಣುವುದಿಲ್ಲ. ಬೀಟ್‌ರೂಟ್ ಮತ್ತಿತರ ಕೆಲವು ತರಕಾರಿಗಗಳನ್ನು ಕತ್ತರಿಸಿದಾಗ ಈ ಕಲೆ ಇನ್ನೂ ದುಪ್ಪಟ್ಟಾಗುತ್ತದೆ. ಇಂಥ ಸಂದರ್ಭ ಇದರ ಮೇಲ್ಮೈಯನ್ನು ಸ್ವಚ್ಛಗೊಳಿಸಲು ಟೂತ್‌ಪೇಸ್ಟ್ ಅತ್ಯುತ್ತಮ ಉಪಾಯ. ಕಟ್ಟಿಂಗ್ ಬೋರ್ಡ್‌ಗಳನ್ನು ಸ್ವಚ್ಛವಾಗಿ ಇಡುವುದು ಕೂಡಾ ಬಹಳ ಮುಖ್ಯವಾದ್ದರಿಂದ ಹೀಗೆ ನೀವು ಆಗಾಗ, ಸ್ವಚ್ಛಗೊಳಿಸುತ್ತಿರಬಹುದು.