ಬೆಂಗಳೂರು: ಇನ್ ಡೋರ್ ಸಸ್ಯಗಳು (Indoor plants) ಮನೆಯ ಅಂದ ಹೆಚ್ಚಿಸುವ ಜತೆಗೆ ಶುದ್ಧ ಗಾಳಿಯನ್ನು ಒದಗಿಸುವ ಮೂಲಕ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತವೆ. ಮಾತ್ರವಲ್ಲ ವಾಸ್ತು ಶಾಸ್ತ್ರದ ಪ್ರಕಾರ ಈ ಸಸ್ಯಗಳು ಮನೆಯ ಒಟ್ಟಾರೆ ವಾತಾವರಣ, ಕುಟುಂಬ ಸದಸ್ಯರ ಅದೃಷ್ಟದ ಮೇಲೂ ಪರಿಣಾಮ ಬೀರುತ್ತದೆ. ಅದೇ ರೀತಿ ಮನೆಯಲ್ಲಿ ಇಡಬಾರದ ಸಸ್ಯಗಳ ಬಗ್ಗೆಯೂ ವಾಸ್ತು ಶಾಸ್ತ್ರ ಹೇಳುತ್ತದೆ. ಯಾವೆಲ್ಲ ಸಸ್ಯಗಳನ್ನು ಮನೆಯೊಳಗೆ ಇಡಬಾರದು? ಎನ್ನುವ ಮಾಹಿತಿ ಇಂದಿನ ವಾಸ್ತು ಟಿಪ್ಸ್ (Vastu Tips)ನಲ್ಲಿದೆ.
ಕಳ್ಳಿ ಗಿಡ (Cactus)
ಮುಳ್ಳಿನಿಂದ ಕೂಡಿದ್ದರೂ ಕಳ್ಳಿ ಗಿಡ ನೋಡಲು ಆಕರ್ಷಕವಾಗಿರುತ್ತದೆ. ಆದರೆ ಇದರ ರೂಪಕ್ಕೆ ಮನ ಸೋತು ಮನೆಯೊಳಗೆ ತರುವ ಮುನ್ನ ಎಚ್ಚರ. ವಾಸ್ತು ಮತ್ತು ಫೆಂಗ್ ಶೂಯಿ ತಜ್ಞರ ಪ್ರಕಾರ ಕಳ್ಳಿ ಗಿಡ ಸುಂದರವಾಗಿದ್ದರೂ ಮನೆಯೊಳಕ್ಕೆ ಕೆಟ್ಟ ಶಕ್ತಿಯನ್ನು ಆಹ್ವಾನಿಸಬಹುದು ಎಂದು ಸೂಚಿಸುತ್ತಾರೆ. ಎಲೆಗಳ ಮೇಲಿನ ಮತ್ತು ಚೂಪಾದ ಮುಳ್ಳುಗಳು ಅವುಗಳೊಳಗೆ ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ ಎಂದು ನಂಬಲಾಗಿದೆ. ಮನೆಯಲ್ಲಿ ಕಳ್ಳಿಯನ್ನು ಇಟ್ಟುಕೊಳ್ಳುವುದು ದುರಾದೃಷ್ಟಗಳನ್ನು ತರುತ್ತದೆ ಮತ್ತು ಕುಟುಂಬದಲ್ಲಿ ಒತ್ತಡ ಮತ್ತು ಆತಂಕವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಂತ ನೀವು ಕಳ್ಳಿ ಗಿಡವನ್ನು ಬೆಳೆಸಬಾರದು ಎಂದರ್ಥವಲ್ಲ. ಸರಿಯಾದ ಸ್ಥಳದಲ್ಲಿ ಇರಿಸಿದರೆ ಅವು ನಿಜವಾಗಿಯೂ ಪ್ರಯೋಜನಕಾರಿಯಾಗಬಹುದು. ಉದಾಹರಣೆಗೆ ಟೆರೇಸ್ ಅಥವಾ ಕಿಟಕಿಯ ಬಳಿ ಇರಿಸಿದಾಗ, ಅದು ಒಳಗೆ ಹರಿಯಲು ಪ್ರಯತ್ನಿಸುತ್ತಿರುವ ನಕಾರಾತ್ಮಕ ಶಕ್ತಿಯ ವಿರುದ್ಧ ಹೋರಾಡುತ್ತದೆ.
ಬೋನ್ಸಾಯ್ (Bonsai)
ವಾಸ್ತು ಪ್ರಕಾರ ಬೋನ್ಸಾಯ್ ಸಸ್ಯ ಕೂಡ ನಿಮ್ಮ ಮನೆಗೆ ಅಷ್ಟು ಉತ್ತಮವಲ್ಲ. ಅವು ನೋಡಲು ಸುಂದರವಾಗಿದ್ದರೂ ಮಂಗಳಕರವಲ್ಲ. ವಾಸ್ತು ತಜ್ಞರು ಈ ಸಸ್ಯವನ್ನು ಮನೆಯಲ್ಲಿ ಎಲ್ಲಿಯೂ ಇಡಬಾರದು ಎಂದು ಸೂಚಿಸುತ್ತಾರೆ. ಇದು ನಿಧಾನ ಅಥವಾ ಕುಂಠಿತ ಬೆಳವಣಿಗೆಯನ್ನು ಸಂಕೇತಿಸುತ್ತದೆ. ಇದನ್ನು ಉದ್ಯಾನವನ ಅಥವಾ ತೆರೆದ ಸ್ಥಳದಲ್ಲಿ ಇರಿಸಬಹುದು.
ಹತ್ತಿ ಗಿಡ (Cotton Plant)
ಹತ್ತಿ ಗಿಡವನ್ನು ಮನೆಯೊಳಗೆ ಇರಿಸಿಕೊಳ್ಳುವುದು ದುರದೃಷ್ಟಕರ ಎಂದು ಪರಿಗಣಿಸಲಾಗುತ್ತದೆ. ಅಲಂಕಾರಕ್ಕೆ ಸಂಬಂಧಿಸಿ ಈ ಸಸ್ಯಗಳು ತುಂಬಾ ಸುಂದರವಾಗಿ ಕಾಣುತ್ತವೆ. ಆದರೆ ವಾಸ್ತು ಪ್ರಕಾರ ಅವು ಪರಿಪೂರ್ಣ ಆಯ್ಕೆಯಲ್ಲ. ಇವನ್ನು ಒಳಾಂಗಣದಲ್ಲಿ ಇರಿಸಿದಾಗ ದುರಾದೃಷ್ಟವನ್ನು ತರುತ್ತವೆ ಎಂದು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಮದರಂಗಿ ಮತ್ತು ಹುಣಸೆ ಹುಳಿ ಗಿಡ (Mehendi And Tamarind plant)
ಮದರಂಗಿ ಅಥವಾ ಮಿರ್ಟಲ್ ಸಸ್ಯಗಳಲ್ಲಿ ದುಷ್ಟ ಶಕ್ತಿಗಳು ವಾಸಿಸುತ್ತವೆ ಎಂದು ಹೇಳಲಾಗುತ್ತದೆ ಹೀಗಾಗಿ ಇವುಗಳನ್ನು ಮನೆಯಲ್ಲಿ ಇಡಬಾರದು. ಅದೇ ರೀತಿ ಹುಣಸೆ ಹುಳಿ ಗಿಡ ಅಥವಾ ಮರ ಅಂಗಳದಲ್ಲಿ ಇರಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ಈ ಮರದಿಂದ ಆದಷ್ಟು ಅಂತರ ಕಾಪಾಡಿಕೊಳ್ಳುವುದು ಅಗತ್ಯ. ಇದರಿಂದ ಮನಸ್ಸಿನಲ್ಲಿ ಸದಾ ನಕಾರಾತ್ಮಕ ಆಲೋಚನೆ ಮೂಡುತ್ತದೆ ಎನ್ನಲಾಗಿದೆ.
ಒಣಗಿದ ಗಿಡಗಳು (Dead Plants)
ಅದೇ ರೀತಿ ಮನೆಯೊಳಗೆ ಒಣಗಿದ ಗಿಡ ಇದ್ದರೆ ಕೂಡಲೇ ಅದನ್ನು ತೆರವುಗೊಳಿಸಿ. ಸತ್ತ ಸಸ್ಯಗಳು ಮನೆಗೆ ಉತ್ತಮವಲ್ಲ. ವಾಸ್ತು ಪ್ರಕಾರ ಯಾವುದೇ ರೀತಿಯ ಒಳಾಂಗಣ ಸಸ್ಯಗಳು ಯಾವಾಗಲೂ ತಾಜಾ ಮತ್ತು ಹಸಿರಾಗಿ ಕಾಣಬೇಕು ಮತ್ತು ಅರಳುವ ಹೂವುಗಳನ್ನು ಹೊಂದಿರಬೇಕು. ಅದಕ್ಕಾಗಿಯೇ ನಾವು ಸಸ್ಯಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸತ್ತ ಅಥವಾ ಸಾಯುತ್ತಿರುವ ಸಸ್ಯಗಳು ಅಪಶಕುನದ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಎಚ್ಚರಿಕೆ ವಹಿಸಿ
ಅದೇ ರೀತಿ ಸಸ್ಯಗಳ ಎಲೆ ಅಥವಾ ಯಾವುದೇ ಭಾಗಗಳನ್ನು ಮಕ್ಕಳು ಅಥವಾ ನಿಮ್ಮ ಸಾಕು ಪ್ರಾಣಿಗಳು ಸೇವಿಸದಂತೆ ಎಚ್ಚರ ವಹಿಸಿ. ಅವರ ಕೈಗೆ ಸಿಗದಂತೆ ಇರಿಸುವುದು ಅತ್ಯಗತ್ಯ.
ಇದನ್ನೂ ಓದಿ: Vastu Tips: ನಿಮ್ಮ ಜೀವನ ಸಮೃದ್ಧಿಗಾಗಿ ಈ ಗಿಡಗಳನ್ನು ಬೆಳೆಸಿ