Site icon Vistara News

Vastu Tips: ನಿಮ್ಮ ಜೀವನ ಸಮೃದ್ಧಿಗಾಗಿ ಈ ಗಿಡಗಳನ್ನು ಬೆಳೆಸಿ

plant indoor

plant indoor

ಬೆಂಗಳೂರು: ಸಸ್ಯಗಳು ಮನೆಯ ಅಂದ ಹೆಚ್ಚಿಸುವುದಷ್ಟೇ ಅಲ್ಲದೆ ಆರೋಗ್ಯ ವೃದ್ಧಿಗೂ ಸಹಕಾರಿ. ಶುದ್ಧ ಗಾಳಿ, ತಂಪನ್ನು ಇವು ನೀಡುತ್ತವೆ. ಜತೆಗೆ ಮನೆಯ ಅಲಂಕಾರಕ್ಕೂ ಬಳಸಬಹುದು. ಇನ್ನು ವಾಸ್ತು ಶಾಸ್ತ್ರದಲ್ಲೂ ಸಸ್ಯಗಳಿಗೆ ಮಹತ್ವದ ಸ್ಥಾನವಿದೆ. ವಾಸ್ತು ಪ್ರಕಾರ ಕೆಲವೊಂದು ಸಸ್ಯಗಳು ಮನೆಯ ಸದಸ್ಯರ ಆರೋಗ್ಯ, ಮಾನಸಿಕ ನೆಮ್ಮದಿ, ಸಂಪತ್ತು ಮುಂತಾದ ವಿಷಯಗಳ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿವೆ. ನೀವು ಮನೆಯ ಅಲಂಕಾರಕ್ಕೆ ವಾಸ್ತು ಪ್ರಕಾರ ಯಾವ ರೀತಿಯ ಸಸ್ಯಗಳನ್ನು ಆರಿಸಬೇಕು ಎನ್ನುವದ ವಿವರ ಇಲ್ಲಿದೆ (Vastu Tips).

ತುಳಸಿ

ಧಾರ್ಮಿಕವಾಗಿ ಬಹಳ ಮಹತ್ವದ ಸಸ್ಯವಾಗಿರುವ ತುಳಸಿಯಲ್ಲಿ ಅಪಾರ ಔಷಧೀಯ ಗುಣಗಳೂ ಇವೆ. ಇದು 24 ಗಂಟೆಯೂ ಆಮ್ಲಜನಕ ಬಿಡುಗಡೆ ಮಾಡುತ್ತದೆ. ಅಲ್ಲದೆ ವಾಸ್ತು ಪ್ರಕಾರ ತುಳಸಿ ಗಿಡವನ್ನು ಮನೆಯಲ್ಲಿಡುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಪಾಸಿಟಿವ್‌ ಎನರ್ಜಿಯನ್ನು ಆಕರ್ಷಿಸಬಹುದು. ಹೀಗಾಗಿ ಇಂದೇ ತುಳಸಿ ಗಿಡವನ್ನು ಮನೆಗೆ ತನ್ನಿ. ಗಮನಿಸಿ ತುಳಸಿ ಗಿಡವನ್ನು ಮನೆಯ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡುವುದು ಉತ್ತಮ.

ಬಿದಿರು

ಬಿದಿರು ಅದೃಷ್ಟ ಮತ್ತು ಶಾಂತಿಯ ಸಂಕೇತ ಎನ್ನುವ ನಂಬಿಕೆ ಇದೆ. ಖ್ಯಾತಿ ಮತ್ತು ಸಂಪತ್ತು ವೃದ್ಧಿಗೂ ಬಿದಿರು ಸಹಾಯಕ ಎನ್ನಲಾಗಿದೆ. ಗಾಢ ಬಣ್ಣದ ಬಿದಿರಿನ ಬದಲು ಹಳದಿ ತೊಗಟೆಯ ಗಿಡವನ್ನು ಆರಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಬಿದಿರನ್ನು ಪೂರ್ವ ಅಥವಾ ಆಗ್ನೇಯ ಮೂಲೆಯಲ್ಲಿ ಇರಿಸುವುದನ್ನು ಮರೆಯಬೇಡಿ.

ಮನಿ ಪ್ಲಾಂಟ್‌

ಹೆಸರೇ ಹೇಳುವಂತೆ ಮನಿ ಪ್ಲಾಂಟ್‌ ಮನೆಯ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಮನಿ ಪ್ಲಾಂಟ್‌ಗೆ ವಾಸ್ತು ಶಾಸ್ತ್ರದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗಣೇಶನ ಮೂಲೆ ಎಂದು ಹೇಳಲಾಗುವ ಆಗ್ನೇಯ ಮೂಲೆಯು ಮನಿ ಪ್ಲಾಂಟ್ ಬೆಳೆಯಲು ಉತ್ತಮ ದಿಕ್ಕು ಎಂದು ಪರಿಗಣಿಸಲಾಗಿದೆ.

ಬಾಳೆ ಗಿಡ

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಹಿತ್ತಲಿನಲ್ಲಿ ಬಾಳೆ ಗಿಡವನ್ನು ಬೆಳೆಸುವುದರಿಂದ ಉತ್ತಮ ಆರೋಗ್ಯ ಮತ್ತು ಮಾನಸಿಕ ಶಾಂತಿ ಸಿಗುತ್ತದೆ. ಬಾಳೆ ಗಿಡವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ನಮ್ಮ ದೇಶದ ಕೆಲವು ಭಾಗಗಳಲ್ಲಿ ಇದನ್ನು ಪೂಜಿಸಲಾಗುತ್ತದೆ. ಹಿತ್ತಲಿನ ಈಶಾನ್ಯ ದಿಕ್ಕಿನ ಮೂಲೆಯಲ್ಲಿ ಬಾಳೆ ಗಿಡವನ್ನು ನೆಡಿ.

ಕಹಿ ಬೇವು

ಕಹಿ ಬೇವು ತನ್ನ ಅದ್ಭುತ ಔಷಧೀಯ ಗುಣಗಳಿಂದಲೇ ಜನಪ್ರಿಯವಾಗಿದೆ. ಇದು ಗಾಳಿಯನ್ನು ಶುದ್ಧೀಕರಿಸುತ್ತದೆ. ಅಲ್ಲದೆ ಮನೆಯ ಹಿತ್ತಿಲಿನಲ್ಲಿ ಬೇವಿನ ಮರದ ಉಪಸ್ಥಿತಿಯು ಸಕಾರಾತ್ಮಕತೆ ಮತ್ತು ಸಂತೋಷವನ್ನು ಉಂಟು ಮಾಡುತ್ತದೆ. ಕಹಿ ಬೇವು ಮಂಗಳಕರ ಸಸ್ಯ ಎಂದೇ ಗುರುತಿಸಲ್ಪಡುತ್ತದೆ. ವಾಸ್ತು ಪ್ರಕಾರ ಕಹಿ ಬೇವನ್ನು ವಾಯವ್ಯ ಮೂಲೆಯಲ್ಲಿ ಬೆಳೆಸುವುದು ಉತ್ತಮ.

ಇದನ್ನೂ ಓದಿ: Vastu Tips: ಸಮೃದ್ಧಿಯ ಸಂಕೇತವಾದ ಮನಿ ಪ್ಲಾಂಟ್‌ ಹೀಗೆ ಬೆಳೆಸಿ

ಇವನ್ನು ಬೆಳೆಸಬೇಡಿ

ವಾಸ್ತು ಪ್ರಕಾರ ಕೆಲವೊಂದು ಸಸ್ಯಗಳನ್ನು ಬೆಳೆಸುವುದು ಶ್ರೇಯಸ್ಕರವಲ್ಲ ಎನ್ನಲಾಗಿದೆ. ಬೋನ್ಸಾಯ್‌, ಹುಣಸೆ ಹಣ್ಣಿನ ಗಿಡ, ಕಳ್ಳಿಯಂತಹ ಮುಳ್ಳಿನ ಸಸ್ಯ, ಹತ್ತಿಯ ಗಿಡಗಳನ್ನು ವಾಸ್ತು ಉದ್ದೇಶಕ್ಕಾಗಿ ಬೆಳೆಸಬಾರದು.‌ ಅಲ್ಲದೆ ಸತ್ತ ಗಿಡಗಳನ್ನು ಕೂಡಲೇ ತೆರವು ಮಾಡಬೇಕು. ಇವೆಲ್ಲ ಅಶುಭ ಸೂಚಕ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version