Site icon Vistara News

Vastu Tips: ಅದೃಷ್ಟ, ಸಂಪತ್ತು ಹೊತ್ತು ತರುವ ಬಿದಿರನ್ನು ಹೀಗೆ ಬೆಳೆಸಿ

bamboo plant

bamboo plant

ಬೆಂಗಳೂರು: ಮನೆ ಮತ್ತು ವಾಸ್ತು ಶಾಸ್ತ್ರದ ನಡುವೆ ನೇರ ಸಂಬಂಧವಿದೆ. ಸಂಪತ್ತು ವೃದ್ಧಿ, ನೆಮ್ಮದಿ ಮತ್ತು ಮನೆಯ ಸದಸ್ಯರ ಆರೋಗ್ಯದ ಮೇಲೆ ವಾಸ್ತು ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಮನೆಯ ಪ್ರತಿಯೊಂದು ಮೂಲೆ, ಕೋಣೆ ಹೇಗಿರಬೇಕು, ಗೋಡೆಯ ಬಣ್ಣ ಯಾವುದಿರಬೇಕು, ಅಲಂಕಾರಕ್ಕೆ ಏನನ್ನು ಬಳಸಬೇಕು ಎನ್ನುವುದನ್ನು ವಾಸ್ತು ಶಾಸ್ತ್ರ ವಿವರಿಸುತ್ತದೆ. ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿ ಬಿದಿರು ಗಿಡದ (Bamboo Plants) ಪ್ರಾಧಾನ್ಯತೆ ಏನು? ಇದನ್ನು ಎಲ್ಲಿ ಇರಿಸಬೇಕು? ಮುಂತಾದ ವಿವರಗಳನ್ನು ನೋಡೋಣ.

ಅತೀ ವೇಗವಾಗಿ ಬೆಳೆಯುವ ಸಸ್ಯಗಳಲ್ಲಿ ಬಿದಿರು ಕೂಡ ಒಂದು. ಹೀಗಾಗಿ ಇದನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದು ಮನೆಯ ಸೌಂದರ್ಯ ಹೆಚ್ಚಿಸುವ ಜತೆಗೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಹಲವರು ಮನೆಯ ಅಂಗಳದಲ್ಲಿ ಮತ್ತು ಮನೆಯೊಳಗೆ ಪಾಟ್‌ಗಳಲ್ಲಿ ಬಿದಿರು ಬೆಳೆಸುತ್ತಾರೆ. ಇನ್ನು ಲಕ್ಕಿ ಬಾಂಬೂ (Lucky Bamboo) ಎಂದು ಕರೆಯಲ್ಪಡುವ ಬಿದಿರನ್ನು ನೀರಿನಲ್ಲಿಯೂ ಬೆಳೆಯಬಹುದು. ಇದರ ಇನ್ನೊಂದು ವಿಶೇಷತೆ ಎಂದರೆ ಇದಕ್ಕೆ ಅತಿಯಾಗಿ ಆರೈಕೆ ಬೇಕಾಗಿಲ್ಲ. ಆದರೆ ಇದನ್ನು ಮನೆಯೊಳಗೆ ಇರಿಸುವ ದಿಕ್ಕಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಗರಿಷ್ಠ ಪ್ರಯೋಜನ ಪಡೆಯಲು ಬಿದಿರನ್ನು ಯಾವ ರೀತಿ ಬೆಳೆಯಬೇಕು ಎನ್ನುವ ಟಿಪ್ಸ್‌ ಇಲ್ಲಿದೆ.

ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ

ಆರೋಗ್ಯಪೂರ್ಣವಾಗಿರುವ ಬಿದಿರು ಗಿಡ ಗಾಢ ಹಸಿರು ಬಣ್ಣದಲ್ಲಿರುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಇದನ್ನು ಮನೆಯ ಪ್ರವೇಶ ದ್ವಾರದ ಬಳಿ ಇರಿಸುವುದರಿಂದ ನಿಮಗೆ ಅದೃಷ್ಟ ಒಲಿಯುತ್ತದೆ ಎಂದು ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಹೊರಾಂಗಣ ಮತ್ತು ಒಳಾಂಗಣಕ್ಕೂ ಸೂಕ್ತ

ಮೊದಲೇ ಹೇಳಿದಂತೆ ಬಿದಿರು ಗಿಡವನ್ನು ಮನೆಯೊಳಗೆ ಅಥವಾ ಹೊರಗೆ ಬೆಳೆಯಬಹುದು. ನೀವು ವಿವಿಧ ರೀತಿಯ ಬಿದಿರನ್ನು ಜತೆಯಾಗಿಯೂ ನೆಡಬಹುದು. ಉದಾಹರಣೆಗೆ ಹಸಿರು ಮತ್ತು ಹಳದಿ ಬಣ್ಣದಲ್ಲಿರುವ ಬಿದಿರನ್ನು ಒಟ್ಟಿಗೆ ಬೆಳೆಸಿ ಇದರಿಂದ ಮನೆಯ ಅಲಂಕಾರ ಮಾಡಿದಂತೆಯೂ ಆಗುತ್ತದೆ. ಮಾತ್ರವಲ್ಲ ಬಿದಿರು ಗಿಡಗಳನ್ನು ವಿವಿಧ ಎತ್ತರಗಳಲ್ಲಿ ಟ್ರಿಮ್‌ ಮಾಡಬಹುದು.

ಪಂಚಭೂತಗಳ ಹೊಂದಾಣಿಕೆ

ನಮ್ಮ ಜೀವನದ ಮೇಲೆ ಪಂಚಭೂತಗಳು ಗಾಢ ಪರಿಣಾಮ ಬೀರುತ್ತವೆ ಎಂದು ಹಿರಿಯರು ಹೇಳುತ್ತಾರೆ. ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ-ಇವೇ ಆ ಪಂಚಭೂತಗಳು. ಈ ಐದು ಅಂಶಗಳು ಪರಸ್ಪರ ಹೊಂದಾಣಿಕೆಯಾದರೆ ಧನಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶಿಸುತ್ತದೆ. ಬಿದಿರು ಗಿಡ ಪಂಚಭೂತಗಳನ್ನು ಪ್ರತಿನಿಧಿಸುತ್ತದೆ. ಹೀಗಾಗಿ ನೀವು ಮನೆಯೊಳಗೆ ಬಿದಿರು ಗಿಡ ಬೆಳೆಸುವುದಾದರೆ ಅದಕ್ಕೆ ಕೆಂಪು ರಿಬ್ಬನ್‌ ಕಟ್ಟಿ. ಇನ್ನು ನೀರಿನಲ್ಲಿ ಬೆಳೆಸುವುದಾದರೆ ನೀರಿಗೆ ಕೆಲವು ನಾಣ್ಯ ಮತ್ತು ಬೆಣಚು ಕಲ್ಲುಗಳನ್ನು ಹಾಕುವುದು ಉತ್ತಮ.

ಅದೃಷ್ಟ ಹೊತ್ತು ತರುತ್ತದೆ

ಬಿದಿರು ಮನೆಯೊಳಗೆ ಇರಿಸುವುದರಿಂದ ನಿಮ್ಮ ಅದೃಷ್ಟ ಹೆಚ್ಚುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಿಮ್ಮ ಮನೆಯ ಟೇಬಲ್‌ ಮೇಲೂ ಇದನ್ನು ಇರಿಸಬಹುದು. ಆದರೆ ಗಮನಿಸಿ ಬಿದಿರಿಗೆ ಸಂಬಂಧಿಸಿ 4 ಅಶುಭ ಎನ್ನಲಾಗಿದೆ. ಹೀಗಾಗಿ 4 ಬಿದಿರಿನ ಕಾಂಡಗಳನ್ನು ಯಾವುದೇ ಕಾರಣಕ್ಕೂ ಇರಿಸಬೇಡಿ. ಸಂಪತ್ತು ವೃದ್ಧಿಗೆ 8 ಅಥವಾ 9 ಬಿದಿರು ಕಾಂಡಗಳ ಗುಂಪನ್ನು ಬೆಳೆಸಿ. ಉತ್ತಮ ಆರೋಗ್ಯಕ್ಕಾಗಿ 5 ಅಥವಾ 7 ಬಿದಿರಿನ ಕಾಂಡಗಳನ್ನು ಜತೆಗೆ ಬೆಳೆಸಿ.

ಎಲ್ಲಿಡಬೇಕು?

ಮುಖ್ಯ ವಿಚಾರ ಎಂದರೆ ಬಿದಿರಿನ ಗಿಡವನ್ನು ಸೂಕ್ತವಾದ ದಿಕ್ಕಿನಲ್ಲಿ ಇರಿಸಿದರೆ ಮಾತ್ರ ಅದರಿಂದ ಪ್ರಯೋಜನ ಲಭಿಸುತ್ತದೆ. ಹೀಗಾಗಿ ಇದನ್ನು ಮನೆಯ ಒಳಗೆ ಪೂರ್ವ ದಿಕ್ಕಿನಲ್ಲಿ ಇರಿಸಿ. ಮೊದಲೇ ಹೇಳಿದಂತೆ ಮನೆಯ ಮುಖ್ಯ ದ್ವಾರದ ಬಳಿಯೂ ಬೆಳೆಸಬಹುದು. ಇನ್ನು ಆಫೀಸ್‌, ಮಕ್ಕಳ ಸ್ಟಡಿ ಕೋಣೆಯ ಈಶಾನ್ಯ ದಿಕ್ಕಿನಲ್ಲಿ ಇರಿಸುವುದು ಒಳಿತು. ಇದರಿಂದ ಏಕಾಗ್ರತೆ ಸಾಧ್ಯವಾಗುತ್ತದೆ.

ಇದನ್ನೂ ಓದಿ: Vastu Tips: ಪಂಚಭೂತ ತತ್ವದ ಪ್ರಕಾರ ನಿಮ್ಮ ಮನೆ ಹೀಗಿರಬೇಕು

Exit mobile version