Site icon Vistara News

Vastu Tips: ಸುಖ, ಸಮೃದ್ಧಿ ಹೆಚ್ಚಲು ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ

vastu

vastu

ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಏಳಿಗೆ, ಉತ್ತಮ ಬಾಂಧವ್ಯ, ಆರೋಗ್ಯವನ್ನು ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲಾ ರೀತಿಯ ಪ್ರಯತ್ನಗಳ ಹೊರತಾಗಿಯೂ ಜೀವನದಲ್ಲಿ ಸೋಲು ಅನುಭವಿಸಬೇಕಾಗುತ್ತದೆ. ತಮ್ಮದಲ್ಲದ ತಪ್ಪಿಗೆ ನೋವು ಅನುಭವಿಸಿ ಹಲವರು ಹತಾಶೆಗೆ ಜಾರುತ್ತಾರೆ. ವಾಸ್ತು ಶಾಸ್ತ್ರದ (vastu tips) ಪ್ರಕಾರ ಕಟ್ಟಡಗಳ ವಿನ್ಯಾಸವೂ ಕೂಡ ಜನರ ಆರೋಗ್ಯ, ಸಂಬಂಧ, ಜೀವನದ ಮೇಲೆ ಪರಿಣಾಮ ಬೀರುತ್ತದೆಯಂತೆ. ವಾಸ್ತು ಶಾಸ್ತ್ರ ಪ್ರಕೃತಿಯ ಐದು ಅಂಶಗಳನ್ನು, ಅವುಗಳ ಸರಿಯಾದ ಸ್ಥಾನಗಳಲ್ಲಿ ಇಡುವುದನ್ನು ವಿವರಿಸುತ್ತದೆ. ನಮ್ಮ ಜೀವನದಲ್ಲಿ ಸಮೃದ್ಧಿ, ಬೆಳವಣಿಗೆ ಮತ್ತು ಸಂತೋಷ ತರುವ ಜತೆಗೆ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ನಿಮ್ಮ ಮನೆಯನ್ನು ನಿರ್ಮಿಸುವಾಗ ಕೆಲವೊಂದು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ತುಳಸಿ ಗಿಡ ಎಲ್ಲಿರಬೇಕು?

ಹಿಂದೂ ಸಂಸ್ಕೃತಿಯಲ್ಲಿ ತುಳಸಿ ಗಿಡಕ್ಕೆ ಮಹತ್ತರ ಸ್ಥಾನವಿದೆ. ಈ ಪವಿತ್ರ ಗಿಡವನ್ನು ಮನೆಯ ಎದುರು ಭಾಗದಲ್ಲಿ ನೆಡಬೇಕು. ವಿಷ್ಣು ದೇವರಿಗೆ ಪ್ರಿಯ ಎಂದೇ ಪರಿಗಣಿಸ್ಪಡುವ ಈ ಗಿಡ ಅಪಾರ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಸುತ್ತಮುತ್ತಲಿನ ಋಣಾತ್ಮಕ ಶಕ್ತಿಯನ್ನು ಹೀರಿ ಧನಾತ್ಮಕ ವಾತಾವರಣವನ್ನು ಮೂಡಿಸಲು ತುಳಸಿ ಗಿಡ ನೆರವಾಗುತ್ತದೆ. ತುಳಸಿ ಕಟ್ಟೆಯನ್ನು ಪೂರ್ವ ದಿಕ್ಕಿನಲ್ಲಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸಬಹುದು.

ಮನೆ ಎದುರಿನಲ್ಲೇ ಚಪ್ಪಲಿ ಸ್ಟ್ಯಾಂಡ್‌ ಬೇಡ

ಮನೆಯ ಎದುರು ಭಾಗದಲ್ಲೇ ಚಪ್ಪಲಿ ಸ್ಟ್ಯಾಂಡ್‌ ಇಡಬೇಡಿ. ಇದು ಋಣಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಪರಿಣಾಮವಾಗಿ ಮನೆಯ ಸಮಾಧಾನವೇ ಹಾಳಾಗಿ ಬಿಡಬಹುದು. ಪಶ್ವಿಮ ಅಥವಾ ನೈಋತ್ಯ ಮೂಲೆಯಲ್ಲಿ ಚಪ್ಪಲಿ ಸ್ಟ್ಯಾಂಡ್‌ ಇಡಬೇಕು. ಉತ್ತರ, ಆಗ್ನೇಯ ಮತ್ತು ಪೂರ್ವ ದಿಕ್ಕುಗಳಲ್ಲಿ ಯಾವುದೇ ಕಾರಣಕ್ಕೂ ಇದನ್ನು ಇರಿಸಬಾರದು.

ಉತ್ತರಕ್ಕೆ ತಲೆ ಹಾಕಿ ಮಲಗಬೇಡಿ

ಪುರಾಣದಲ್ಲಿ ಆನೆಯ ತಲೆ ಕಡಿದ ವಿಚಾರವನ್ನು ಹೇಳಿ ಉತ್ತರಕ್ಕೆ ತಲೆ ಹಾಕಿ ಮಲಗಬಾರದು ಎಂದು ನಮ್ಮ ಹಿರಿಯರು ತಿಳಿಸುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಉತ್ತರ ದಿಕ್ಕಿನ ಅಯಸ್ಕಾಂತೀಯ ಶಕ್ತಿ ಹೆಚ್ಚಿರುತ್ತದೆ. ಒಂದು ವೇಳೆ ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ರಕ್ತದ ಸಮಸ್ಯೆ ಕಾಣಿಸಿಕೊಳ್ಳಬಹುದು ಜತೆಗೆ ನಿದ್ರಾಹೀನತೆಯೂ ಕಾಡಬಹುದು. ಆರೋಗ್ಯ ಸಮಸ್ಯೆ ಕಾಡಿದರೆ ಸಹಜವಾಗಿ ಮನೆಯ ನೆಮ್ಮದಿ ವಾತಾವರಣವೂ ಹದಗೆಡುತ್ತದೆ.

ಬಾಗಿಲು, ಕಿಟಕಿಗಳ ಸ್ಥಾನ

ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿನ ಬಾಗಿಲುಗಳು ಮತ್ತು ಕಿಟಕಿಗಳು ದಕ್ಷಿಣ ಮತ್ತು ಪಶ್ಚಿಮ ದಿಕ್ಕಿಗಿಂತ ದೊಡ್ಡದಾಗಿರಬೇಕು. ನೈಋತ್ಯ ದಿಕ್ಕಿನಲ್ಲಿ ಕಿಟಕಿಗಳನ್ನು ಇಡಬೇಡಿ.

ನಿಷ್ಕ್ರೀಯ ಗೋಡೆ ಗಡಿಯಾರ ಅಪಶಕುನದ ಸಂಕೇತ

ಮನೆಯಲ್ಲಿನ ಗೋಡೆ ಗಡಿಯಾರ ಯಾವತ್ತೂ ಉತ್ತಮ ರೀತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. ಇವುಗಳನ್ನು ಮನೆಯ ಪೂರ್ವ, ಪಶ್ಚಿಮ ಮತ್ತು ಉತ್ತರ ಭಾಗದ ಗೋಡೆಗಳಲ್ಲಿ ಅಳವಡಿಸಬಹುದು. ಇದರಿಂದ ಹೊಸ ಅವಕಾಶಗಳು ದೊರೆಯುವ ಜತೆಗೆ ಯಾವುದೇ ಸಮಸ್ಯೆಗಳಿಲ್ಲದೆ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಹಸಿರು ಗೋಡೆ ಗಡಿಯಾರಗಳು ನಿಮ್ಮ ಅವಕಾಶಗಳನ್ನು ಕಸಿದುಕೊಳ್ಳಬಹುದು. ಹೀಗಾಗಿ ಈ ಬಗ್ಗೆ ಎಚ್ಚರವಹಿಸಿ.

ಪೀಠೋಪಕರಣಗಳ ಸ್ಥಾನ

ಭಾರವಾದ ಪೀಠೋಪಕರಣಗಳನ್ನು ದಕ್ಷಿಣ ಮತ್ತು ಪಶ್ಚಿಮ ಗೋಡೆಗಳ ಪಕ್ಕದಲ್ಲಿ ಇರಿಸಿ. ಹಗುರವಾದ ಪೀಠೋಪಕರಣಗಳನ್ನು ಉತ್ತರ ಮತ್ತು ಪೂರ್ವ ಗೋಡೆಗಳ ಪಕ್ಕದಲ್ಲಿ ಇಡಬೇಕು. ಪ್ಲಾಸ್ಟಿಕ್ ಪೀಠೋಪಕರಣಗಳ ಬದಲು ಆದಷ್ಟು ಮರದ ಪೀಠೋಪಕರಣಗಳನ್ನು ಬಳಸಲು ಪ್ರಯತ್ನಿಸಿ. ಲೋಹದ ಪೀಠೋಪಕರಣಗಳು ಸುತ್ತಲೂ ವಿದ್ಯುತ್ಕಾಂತೀಯ ಕ್ಷೇತ್ರವನ್ನು ಸೃಷ್ಟಿಸುವುದರಿಂದ ಅವುಗಳನ್ನು ತಪ್ಪಿಸಬೇಕು. ಅಲ್ಲದೆ ಇವು ನಕಾರಾತ್ಮಕತೆಯ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಹೀಗಿರಲಿ ನಾಮಫಲಕ

ಮನೆಯ ನಾಮಫಲಕವನ್ನು ಸ್ವಚ್ಛವಾಗಿಡಿ. ಹೊಳೆಯುವ ನಾಮಫಲಕ ಅನೇಕ ಅವಕಾಶಗಳನ್ನು ಹೊತ್ತು ತರುತ್ತದೆ. ಅಲ್ಲದೆ ಇದು ಮನೆಯವರ ಜೀವನ ಶೈಲಿಯನ್ನು ಇದು ಸೂಚಿಸುತ್ತದೆ. ಜತೆಗೆ ಮೊದಲ ನೋಟದಲ್ಲೇ ಮನೆಯ ಯಜಮಾನನ ಸ್ವಭಾವವನ್ನು ತಿಳಿಸುತ್ತದೆ.

ಮುಖ್ಯ ಬಾಗಿಲಿನ ವಿಚಾರದಲ್ಲಿ ಗಮನ ಹರಿಸಿ

ಮುಖ್ಯ ಬಾಗಿಲು ಮನೆಯ ಒಳಗೆ ಪ್ರವೇಶಿಸಲು ಅವಕಾಶ ಕಲ್ಪಿಸುವುದಷ್ಟೇ ಅಲ್ಲದೆ ಧನಾತ್ಮಕ ಸಕ್ತಿ ಪ್ರವೇಶಿಸಲಿರುವ ಮಾರ್ಗವೂ ಹೌದು. ಈ ಬಾಗಿಲು ಮರದಲ್ಲೇ ತಯಾರಿಸಿದ್ದಾಗಿರಬೇಕು ಜತೆಗೆ ಮನೆಯ ಇತರ ಬಾಗಿಲುಗಳಿಗಿಂತ ದೊಡ್ಡದಾಗಿರಬೇಕು. ಈ ಬಾಗಿಲನ್ನು ಉತ್ತರ, ಪೂರ್ವ, ಪಶ್ವಿಮ ಅತವಾ ಈಶಾನ್ಯದಲ್ಲಿ ಇಡಬಹುದು.

ಬ್ರಹ್ಮಸ್ಥಾನ ಖಾಲಿಯಾಗಿರಲಿ

ಕಟ್ಟಡದ ಮಧ್ಯಭಾಗಕ್ಕೆ ಬ್ರಹ್ಮ ಸ್ಥಾನ ಎಂದು ಹೆಸರು. ಈ ಭಾಗ ಕಂಬ, ಮೆಟ್ಟಿಲು ಅಥವಾ ಇನ್ಯಾವುದೇ ವಸ್ತುವಿನಿಂದ ಕೂಡಿರಬಾರದು. ಬ್ರಹ್ಮಸ್ಥಾನದಲ್ಲಿ ಯಾವುದಾದರೂ ತಡೆ ಇದ್ದರೆ ಅದು ಆರೋಗ್ಯ ಮತ್ತು ಸಂಪತ್ತು ನಾಶಕ್ಕೆ ಕಾರಣವಾಗಲಿದೆ.

ಈಶಾನ್ಯ ಭಾಗ ಹೀಗಿರಬೇಕು

ಈಶಾನ್ಯ ಭಾಗವು ಸಕಾರಾತ್ಮಕ ಶಕ್ತಿಗಳ ಮೂಲ. ಆದ್ದರಿಂದ ಅದು ತೆರೆದ, ಸ್ವಚ್ಛವಾಗಿರುವ, ಬೆಳಕು ಬೀಳುವ ಪ್ರದೇಸವಾಗಿರಬೇಕು. ನೈಋತ್ಯ ಭಾಗವು ಮುಚ್ಚಿರಬೇಕು. ಇದಕ್ಕಾಗಿ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳನ್ನು ಉತ್ತರ ಮತ್ತು ಪೂರ್ವದ ಗೋಡೆಗಳಿಗಿಂತ ಎತ್ತರ ಮತ್ತು ದಪ್ಪವಾಗಿ ನಿರ್ಮಿಸಬಹುದು.

ಇದನ್ನೂ ಓದಿ: Vastu Tips For Health: ಆರೋಗ್ಯಪೂರ್ಣ ಆಗಿರಬೇಕೆ? ಈ ವಾಸ್ತು ಟಿಪ್ಸ್ ಪಾಲಿಸಿ

Exit mobile version