ಬೆಂಗಳೂರು: ಕೆಲವೊಮ್ಮೆ ಎಲ್ಲ ಇದ್ದರೂ ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯಾಗಿರುತ್ತದೆ. ಇನ್ನು ಹಲವು ಬಾರಿ ಯಾವ ಕೆಲಸ ಕೈಗೊಂಡರೂ ಯಶಸ್ಸು ಕಾಣುವುದೇ ಇಲ್ಲ. ಪರಿಶ್ರಮ, ನಿರಂತರ ಪ್ರಯತ್ನದ ಹೊರತಾಗಿಯೂ ಸೋಲು ಬೆಂಬಿಡದೆ ಕಾಡುತ್ತದೆ. ಇದಕ್ಕೆ ವಾಸ್ತು ದೋಷವೂ ಕಾರಣ ಇರಬಹುದು ಎನ್ನುತ್ತಾರೆ ತಜ್ಞರು. ಹಾಗಾದರೆ ಈ ದೋಷವನ್ನು ಪರಿಹರಿಸಲು ನಾವು ದೇವರ ಕೋಣೆಯಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವ ವಿವರ ಇಂದಿನ ವಾಸ್ತು ಟಿಪ್ಸ್ (Vastu Tips)ನಲ್ಲಿದೆ.
ವಿಗ್ರಹಗಳು ಈಶಾನ್ಯ ದಿಕ್ಕಿಗೆ ಮುಖ ಮಾಡಿರಲಿ
ನಿಮ್ಮ ಪೂಜಾ ಕೋಣೆಯಲ್ಲಿನ ದೇವರ ವಿಗ್ರಹ ಯಾವ ದಿಕ್ಕಿಗೆ ಮುಖ ಮಾಡಿದೆ ಎನ್ನುವುದು ಮುಖ್ಯ. ಈಶಾನ್ಯ ಕಡೆಗೆ ದೇವರ ವಿಗ್ರಹ ಮುಖ ಮಾಡಿರುವುದು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಅಲ್ಲದೆ ವಿಗ್ರಹಗಳು ಎಂದಿಗೂ ಪರಸ್ಪರ ಮುಖ ಮಾಡುವಂತೆ ಎದುರು ಬದುರಾಗಿರಬಾರದು. ಅಲ್ಲದೆ ವಿಗ್ರಹ ಗೋಡೆಯತ್ತ ಮುಖ ಮಾಡಿರಬಾರದು. ವಿಗ್ರಹದ ಸುತ್ತಲೂ ಸಮರ್ಪಕವಾಗಿ ಗಾಳಿಯಾಡಲಿ. ವಿಗ್ರಹ ಗೋಡೆಯಿಂದ ಕನಿಷ್ಠ ಒಂದೂವರೆ ಇಂಚಾದರೂ ದೂರದಲ್ಲಿರಲಿ. ದೇವರ ಕೋಣೆ ಯಾವತ್ತೂ ಸುವಾಸನೆಯಿಂದ ಕೂಡಿರಲಿ.
ಗೋಡೆಗೆ ಲೈಟ್ ಬಣ್ಣ ಇರಲಿ
ದೇವರ ಕೋಣೆಯಲ್ಲಿನ ಬಣ್ಣವೂ ವಾಸ್ತು ಪ್ರಕಾರ ಪ್ರಧಾನ ಪಾತ್ರವಹಿಸುತ್ತದೆ. ಹೀಗಾಗಿ ಗೋಡೆಗಳಿಗೆ ಸೂಕ್ತ ಬಣ್ಣವನ್ನೇ ಆಯ್ಕೆ ಮಾಡಿ. ಬಿಳಿ, ಲೈಟ್ ನೀಲಿ, ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಬಳಿಯಬಹುದು. ಅಂತೆಯೇ ಸ್ಥಳದ ಪಾವಿತ್ರ್ಯವನ್ನು ಹೆಚ್ಚಿಸಲು ಸೂಕ್ಷ್ಮ ಮತ್ತು ಹಿತವಾದ ಬಣ್ಣಗಳನ್ನು ಬಳಸಲು ತಜ್ಞರು ಸೂಚಿಸುತ್ತಾರೆ.
ಇಲ್ಲಿರಲಿ…
ದೇವರ ಕೋಣೆ ಯಾವಾಗಲೂ ನೆಲ ಅಂತಸ್ತಿನಲ್ಲಿರಲಿ. ಅಲ್ಲದೆ ಬಾತ್ ರೂಮ್ ಮತ್ತು ಮಹಡಿ ಮೆಟ್ಟಿಲುಗಳಿಂದ ದೂರ ಇರಬೇಕು. ವಿಗ್ರಹಗಳನ್ನು ನೆಲದ ಮೇಲಿರಿಸಬೇಡಿ. ವೇದಿಕೆಯನ್ನು ತಂದು ಅದರ ಮೇಲೆ ವಿಗ್ರಹಗಳನ್ನಿಡಿ. ಆದಷ್ಟು ಮರದಿಂದ ಮಾಡಿದ ವೇದಿಕೆಯನ್ನೇ ಬಳಸಿ.
ಬಿರುಕುಬಿಟ್ಟ ವಿಗ್ರಹ ಇಡಲೇಬೇಡಿ
ಬಿರುಕುಬಿಟ್ಟ ವಿಗ್ರಹಗಳನ್ನು ದೇವರ ಕೋಣೆಯಲ್ಲಿ ಬಿಡಿ ಮನೆಯಲ್ಲೇ ಇಡಬಾರದು. ಇದರಿಂದ ಮನೆಯಲ್ಲಿ ಋಣಾತ್ಮಕ ಶಕ್ತಿ ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ವಿಗ್ರಹ ಇದ್ದರೆ ಹರಿಯುವ ಶುದ್ಧ ನೀರಿನಲ್ಲಿ ಬಿಟ್ಟು ಬಿಡಿ. ಅದೇ ರೀತಿ ಮೃತ ಹಿರಿಯರ ಫೋಟೊ ದೇವರ ಕೋಣೆಯಲ್ಲಿ ಇರಿಸಬೇಡಿ.
ಬಾಗಿಲು ಇದ್ದರೆ ಉತ್ತಮ
ನೀವು ಪ್ರತ್ಯೇಕ ದೇವರ ಕೋಣೆ ಹೊಂದಿದ್ದರೆ ಅದಕ್ಕೆ ಬಾಗಿಲು ಅಳವಡಿಸಲು ಗಮನ ಹರಿಸಿ. ಪ್ರಾರ್ಥನೆಯ ಸಮಯದಲ್ಲಿ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗುತ್ತದೆ. ಬಾಗಿಲು ದೇವರ ಕೋಣೆಯ ಉತ್ತರ ಅಥವಾ ಪೂರ್ವ ಗೋಡೆಗೆ ವಿರುದ್ಧವಾಗಿ ಇರಿಸುವುದು ಸೂಕ್ತ.
ದೀಪದ ವ್ಯವಸ್ಥೆ
ವಾಸ್ತು ಪ್ರಕಾರ ಬೆಳಕಿನ ಪಾತ್ರವೂ ನಿರ್ಣಾಯಕ. ನಿಮ್ಮ ಮನೆಯನ್ನು ಚೆನ್ನಾಗಿ ಬೆಳಗಿಸಲು ಮತ್ತು ಬ್ಯಾಕ್ಟೀರಿಯಾ, ಕೀಟಾಣುಗಳಿಂದ ಮುಕ್ತವಾಗಿಡಲು ನೈಸರ್ಗಿಕ ಬೆಳಕು ಒಂದು ಪ್ರಮುಖ ಅಂಶ. ಆದ್ದರಿಂದ ಸಾಧ್ಯವಾದರೆ ನಿಮ್ಮ ಪೂಜಾ ಕೋಣೆಯಲ್ಲಿ ಕಿಟಕಿಯನ್ನು ಅಳವಡಿಸಲು ಪ್ರಯತ್ನಿಸಿ. ಜತೆಗೆ ಸೂರ್ಯ ಮುಳುಗಿದಾಗ ಕೋಣೆಯನ್ನು ಬೆಳಗಿಸಲು ಸಾಂಪ್ರದಾಯಿಕ ಮಣ್ಣಿನ ದೀಪ ಮತ್ತು ಎಲ್ಇಡಿ ಬಲ್ಬ್‌ಗಳನ್ನು ಬಳಸಬಹುದು.
ಇದನ್ನೂ ಓದಿ: Vastu Tips: ಕೆಟ್ಟ ಶಕ್ತಿ ದೂರ ಮಾಡಿ ಪಾಸಿಟಿವ್ ಎನರ್ಜಿ ತುಂಬಲು ಆಫೀಸ್‌ನಲ್ಲಿ ಈ ಗಿಡಗಳನ್ನು ಇಡಿ
ಲೋಹದ ಪರಿಕರಗಳು
ಆದಷ್ಟು ಲೋಹಗಳಿಂದ ಮಾಡಿದ ಪರಿಕರಗಳನ್ನೇ ಬಳಸಿ. ಇವು ಹೊರಡಿಸುವ ಶಬ್ದಗಳು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತವೆ. ಜತೆಗೆ ಚಿಕ್ಕ ಪಾತ್ರೆಯಲ್ಲಿ ನೀರು ತುಂಬಿ ಅದಕ್ಕೆ ಹೂ ಹಾಕಿಡಿ. ಜತೆಗೆ ದೇವರ ಕೋಣೆಯಲ್ಲಿ ಗಂಟೆ, ಕಾಲು ದೀಪ, ತೂಗುವ ದೀಪ ಮತ್ತು ಹೂವಿನ ಹಾರಗಳಿರಲಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ