Site icon Vistara News

Vastu Tips: ಪಂಚಭೂತ ತತ್ವದ ಪ್ರಕಾರ ನಿಮ್ಮ ಮನೆ ಹೀಗಿರಬೇಕು

vastu tips

vastu tips

ಬೆಂಗಳೂರು: ಭಾರತೀಯರು ಬಹಳ ಹಿಂದಿನಿಂದಲೂ ಪ್ರಕೃತಿಯ ಪ್ರಾಧಾನ್ಯತೆಯನ್ನು ಅರಿತಿದ್ದರು. ಅದೇ ಕಾರಣದಿಂದ ನಿಸರ್ಗವನ್ನು ಆರಾಧಿಸಿಕೊಂಡು ಬಂದಿದ್ದಾರೆ. ಇನ್ನು ಸುಮಾರು 5 ಸಾವಿರ ವರ್ಷಗಳಿಂದಲೂ ಚಾಲ್ತಿಯಲ್ಲಿರುವ ವಾಸ್ತು ಶಾಸ್ತ್ರವೂ ಪ್ರಕೃತಿಗೆ ಪೂರಕವಾಗಿದೆ. ಪಂಚಭೂತಗಳಾದ ವಾಯು, ನೀರು, ಅಗ್ನಿ, ಆಕಾಶ ಮತ್ತು ಭೂಮಿಯನ್ನು ಮನೆಯೊಂದಿಗೆ ಸಮೀಕರಿಸಿ ವಾಸ್ತು ಕೆಲವೊಂದು ನಿಯಮಗಳನ್ನು ರೂಪಿಸಿದೆ. ಆ ಬಗ್ಗೆ ವಿವರ ಇಲ್ಲಿದೆ (Vastu Tips).

ವಾಯು

ಪ್ರತಿಯೊಂದು ಜೀವ ಸಂಕುಲಕ್ಕೆ ಅತೀ ಅಗತ್ಯವಾದ ವಾಯು ವಾಸ್ತು ಶಾಸ್ತ್ರದಲ್ಲೂ ಮುಖ್ಯ ಪಾತ್ರ ಹೊಂದಿದೆ. ಮನೆಯೊಳಗೆ ಸಮರ್ಪಕ ವಾಯು ಸಂಚಾರ ಇರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ತಜ್ಞರು ಸೂಚಿಸುತ್ತಾರೆ. ವಾಯು ಈಶಾನ್ಯ ದಿಕ್ಕಿನಿಂದ ನೇರವಾಗಿ ಮನೆಯೊಳಗೆ ಪ್ರವೇಶಿಸುವಂತಿರಬೇಕು. ಈ ದಿಕ್ಕಿನಲ್ಲಿ ನೀವು ಲೋಹದ ಗಂಟೆಗಳನ್ನು ಇರಿಸಬಹುದು ಅಥವಾ ಸಕಾರಾತ್ಮಕತೆಯನ್ನು ಬೀರುವ ಆಹ್ಲಾದಕರ ಶಬ್ದಗಳಿಗಾಗಿ ವಿಂಡ್ ಚೈಮ್‌ಗಳನ್ನು ಬಳಸಬಹುದು.

ನೀರು

ಪ್ರಮುಖ ಅಂಶಗಳಲ್ಲಿ ನೀರು ಕೂಡ ಒಂದು. ನಮ್ಮ ದೇಹದ ಶೇ. 80 ಭಾಗದಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೆ ಭೂಮಿಯ ಮೂರನೇ ಎರಡರಷ್ಟು ಭಾಗವು ನೀರಿನಿಂದಲೇ ಆವೃತವಾಗಿದೆ. ವಾಸ್ತು ಪ್ರಕಾರ ನೀರು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಮನೆಯ ಉತ್ತರ ಭಾಗದಲ್ಲಿ ಜಲಮೂಲವನ್ನು ಇರಿಸಲು ವಾಸ್ತು ತಜ್ಞರು ಸೂಚಿಸುತ್ತಾರೆ. ಅಲ್ಲದೆ ಮನೆಯ ಉತ್ತರ ಭಾಗವು ಎಲ್ಲ ಶಕ್ತಿಯನ್ನು ಹೊಂದಿರುವ ಸ್ಥಳ ಎಂದೇ ಪರಿಗಣಿಸಲಾಗುತ್ತದೆ.

ಅಗ್ನಿ

ಅಗ್ನಿ ಎಂದರೆ ಕೇವಲ ಬೆಂಕಿಯಲ್ಲ. ಅದು ಬ್ರಹ್ಮಾಂಡವನ್ನೇ ಪ್ರತಿನಿಧಿಸುವ ಬೃಹತ್‌ ಶಕ್ತಿ. ಮಾತ್ರವಲ್ಲ ಅಗ್ನಿ ಎಂದರೆ ಜಗತ್ತಿಗೇ ಬೆಳಕು ನೀಡುವ ಸೂರ್ಯನೂ ಹೌದು, ನಮ್ಮ ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸಲು ಅಗತ್ಯವಾದ ಬೆಂಕಿಯೂ ಹೌದು. ಅಲ್ಲದೆ ನಮ್ಮನ್ನು ಬೆಚ್ಚಗೆ ಮತ್ತು ಸುರಕ್ಷಿತವಾಗಿಡಲು ನೆರವಾಗುತ್ತದೆ. ಜತೆಗೆ ಅಗ್ನಿ ಭಾವೋದ್ರೇಕ, ರೋಷ, ದೃಢನಿಶ್ಚಯ, ಧೈರ್ಯ ಮತ್ತು ಭಕ್ತಿಯಂತಹ ಬಲವಾದ ಭಾವನೆಗಳನ್ನು ಪ್ರತಿನಿಧಿಸುತ್ತದೆ. ಅಗ್ನಿಯ ಸ್ಥಾನ ವಾಸ್ತು ಪ್ರಕಾರ ಮನೆಯ ಆಗ್ನೇಯ ಮೂಲೆ. ಜತೆಗೆ ಮನೆಯ ಎಲ್ಲ ಕಡೆಗೂ ಸೂರ್ಯ ಬೆಳಕು ಸಮರ್ಪಕವಾಗಿ ಬೀಳುವಂತಿರಬೇಕು.

ಆಕಾಶ

ಆಕಾಶದ ವಿಶಾಲತೆಯು ಮಾನವರ ದೈನಂದಿನ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಮತ್ತು ಮನೆಯೊಳಗೆ ಈ ಅಂಶದ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ. ವಾಸ್ತು ಸಲಹೆಗಳ ಪ್ರಕಾರ, ಮನೆಯಲ್ಲಿನ ಮಧ್ಯಭಾಗವು ಯಾವಾಗಲೂ ಖಾಲಿ ಇರಬೇಕು. ಈ ಜಾಗದಲ್ಲಿ ಯಾವುದೇ ಅಡೆತಡೆಯ ವಸ್ತುಗಳು ಇರಬಾರದು ಮತ್ತು ಈ ಸ್ಥಳವು ಆಕಾಶಕ್ಕೆ ತೆರೆದಿದ್ದರೆ ಇದು ಮನೆಗೆ ಸಾಕಷ್ಟು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಆಕಾಶಕ್ಕೆ ನೇರ ತೆರದುಕೊಂಡಿರುವ ಪ್ರದೇಶವು ಗಾಳಿ, ಸೂರ್ಯನ ಬೆಳಕು ಮತ್ತು ನೀರನ್ನು ಸಹ ಆಹ್ವಾನಿಸುತ್ತದೆ. ಈ ಅಂಶಗಳ ಈ ಏಕೀಕರಣವು ಮನೆಗೆ ಸಕಾರಾತ್ಮಕತೆಯನ್ನು ಮತ್ತು ಮನೆಯ ನಿವಾಸಿಗಳಿಗೆ ಸಮೃದ್ಧಿಯನ್ನು ತರುತ್ತದೆ.

ಭೂಮಿ

ಮನೆ ನಿರ್ಮಿಸುವಾಗ ಭೂಮಿಗೆ ಗೌರವ ಸಲ್ಲಿಸುವುದನ್ನು ಮರೆಯಬೇಡಿ. ಭೂಮಿಯು ಮಾನವ ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಇದು ಬ್ರಹ್ಮಾಂಡಕ್ಕೆ ದೃಢವಾದ ಅಡಿಪಾಯ ಎಂದು ಪರಿಗಣಿಸಲ್ಪಡುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ನೈಋತ್ಯ ಪ್ರದೇಶದಲ್ಲಿ ನೀವು ಸಸ್ಯಗಳನ್ನು ನೆಡಬಹುದು. ಹಸಿರು ವಾತಾವರಣ ನಿಮ್ಮ ಆರೋಗ್ಯಕ್ಕೆ ಪೂರಕವಾಗಿರುವುದು ಮಾತ್ರವಲ್ಲ ಮನೆಯ ಸೌಂದರ್ಯವನ್ನೂ ಹೆಚ್ಚಿಸುತ್ತದೆ.

ಇದನ್ನೂ ಓದಿ: Vastu Tips: ಇದು ಬರೀ ಬೆಳಕಲ್ಲ… ಅದೃಷ್ಟಕ್ಕಾಗಿ ವಾಸ್ತು ಪ್ರಕಾರ ಮನೆಯನ್ನು ಈ ರೀತಿ ಬೆಳಗಿ

Exit mobile version