Site icon Vistara News

Vastu Tips: ವ್ಯಾಪಾರ ವೃದ್ಧಿಗೆ ನಿಮ್ಮ ಅಂಗಡಿಯಲ್ಲಿ ಈ ವಾಸ್ತು ಸಲಹೆ ಪಾಲಿಸಿ

shop

shop

ಬೆಂಗಳೂರು: ಸುಮಾರು 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ವಾಸ್ತು ಶಾಸ್ತ್ರ ಜೀವನ ಸುಧಾರಣೆಗೆ ಹಲವು ಸಲಹೆ ನೀಡುತ್ತದೆ. ಪ್ರತಿಯೊಂದು ವ್ಯವಸ್ಥೆ ಹೀಗೆಯೇ ಇರಬೇಕು ಎನ್ನುವುದನ್ನು ತಿಳಿಸುತ್ತದೆ. ನೆಮ್ಮದಿ ಕಂಡುಕೊಳ್ಳಲು, ಆರೋಗ್ಯ ಸುಧಾರಿಸಲು, ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಏನು ಮಾಡಬೇಕು ಎನ್ನುವುದರ ಬಗ್ಗೆ ಸೂಚನೆ ನೀಡುತ್ತದೆ. ಅಂಗಡಿಯ ವಾಸ್ತು ಹೇಗಿರಬೇಕು, ವ್ಯಾಪಾರ ವೃದ್ಧಿಗೆ ಯಾವೆಲ್ಲ ಸಲಹೆಗಳನ್ನು ಪಾಲಿಸಬೇಕು ಮುಂತಾದ ವಿವರ ಇಲ್ಲಿದೆ (Vastu Tips).

ಆಕಾರ

ನಿಮ್ಮ ಅಂಗಡಿ ಗ್ರಾಹಕರನ್ನು ಆಕರ್ಷಿಸಿದರೆ ಅವರು ಹೆಚ್ಚು ಹೊತ್ತು ಅಲ್ಲಿ ಉಳಿಯುತ್ತಾರೆ, ವ್ಯಾಪಾರ ಮಾಡುತ್ತಾರೆ ಮತ್ತು ಪದೇ ಪದೇ ಭೇಟಿ ನೀಡುತ್ತಾರೆ. ಇದಕ್ಕಾಗಿ ಅಂಗಡಿಯ ಆಕಾರದತ್ತ ಗಮನ ಹರಿಸುವುದು ಮುಖ್ಯ. ಅಂಗಡಿ ಚೌಕ ಅಥವಾ ಆಯತ ಆಕಾರವನ್ನು ಹೊಂದಿರಬೇಕು. ಮುಂಭಾಗವು ಹಿಂಭಾಗಕ್ಕಿಂತ ಅಗಲವಾಗಿರಬೇಕು. ಆದ್ದರಿಂದ ತ್ರಿಕೋನಾಕಾರದ, ಕಿರಿದಾದ ಮುಂಭಾಗ ಮತ್ತು ಅಗಲವಾದ ಹಿಂಭಾಗವನ್ನು ಹೊಂದಿರುವ ಅಂಗಡಿ ವಿನ್ಯಾಸವನ್ನು ತಪ್ಪಿಸಿ. ಅಸಹಜ ಎನಿಸುವ ಆಕಾರವು ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಮತ್ತು ಅಂಗಡಿ ಮಾಲಕರು ಮಾನಸಿಕ ಉದ್ವಿಗ್ನತೆ ಅನುಭವಿಸುವಂತೆ ಮಾಡಬಲ್ಲದು.

ದಿಕ್ಕು

ಗ್ರಾಹಕರು ಮತ್ತು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವಲ್ಲಿ ನಿಮ್ಮ ಅಂಗಡಿಯ ಪ್ರವೇಶ ದ್ವಾರವು ನಿರ್ಣಾಯಕ ಪಾತ್ರ ವಹಿಸುತ್ತದೆ. ವಾಸ್ತು ಪ್ರಕಾರ ಅಂಗಡಿಯ ಪ್ರವೇಶದ್ವಾರವು ಈಶಾನ್ಯ ಅಥವಾ ಪೂರ್ವ ದಿಕ್ಕಿಗೆ ಮುಖ ಮಾಡಬೇಕು. ಈ ದಿಕ್ಕುಗಳು ಶುಭ ಶಕ್ತಿಗಳೊಂದಿಗೆ ಸಂಬಂಧ ಹೊಂದಿವೆ. ಇದು ವ್ಯವಹಾರಕ್ಕೆ ಸಮೃದ್ಧಿ ಮತ್ತು ಯಶಸ್ಸನ್ನು ತಂದು ಕೊಡುತ್ತದೆ.

ಕ್ಯಾಶ್‌ ಕೌಂಟರ್‌ ಇಲ್ಲಿರಲಿ

ಅಂಗಡಿ ಯಾವುದೇ ಇರಲಿ ಅಲ್ಲಿ ಕ್ಯಾಶ್ ಕೌಂಟರ್ ಎನ್ನುವುದು ಪ್ರಮುಖವಾಗಿರುತ್ತದೆ. ಕ್ಯಾಶ್‌ ಕೌಂಟರ್‌ ಇರಿಸುವ ಮುನ್ನ ಅದರ ದಿಕ್ಕನ್ನು ನಿರ್ಧರಿಸುವುದು ಅಗತ್ಯ. ಕ್ಯಾಶ್ ಕೌಂಟರ್ ಅನ್ನು ಉತ್ತರ ದಿಕ್ಕಿಗೆ ತೆರೆಯುವ ರೀತಿಯಲ್ಲಿ ಅಳವಡಿಸಿ. ಉತ್ತರ ಭಾಗವನ್ನು ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದ ದೇವತೆಯಾದ ಕುಬೇರನ ವಾಸಸ್ಥಳವೆಂದು ಪರಿಗಣಿಸಲಾಗಿದೆ. ಹೀಗಾಗಿ ಕ್ಯಾಶ್ ಕೌಂಟರ್ ಅನ್ನು ಈ ದಿಕ್ಕಿನಲ್ಲಿ ಇರಿಸುವುದು ಆರ್ಥಿಕ ಸಮೃದ್ಧಿ ಮತ್ತು ಸ್ಥಿರವಾದ ನಗದು ಹರಿವನ್ನು ಆಕರ್ಷಿಸುತ್ತದೆ ಎಂದು ನಂಬಲಾಗಿದೆ. ಅಲ್ಲದೆ ನಿಮ್ಮ ಅಂಗಡಿಯು ನಗದು ಅಥವಾ ಲಾಕರ್ ಕೋಣೆಯನ್ನು ಒಳಗೊಂಡಿದ್ದರೆ ಅದನ್ನು ನೈಋತ್ಯ ಭಾಗದಲ್ಲಿ ಇರಿಸಿ.

ಅಂಗಡಿ ಮಾಲಕರ ಸ್ಥಾನ

ಅಂಗಡಿ ಮಾಲಕರ ಆಸನವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಬೇಕು. ಈ ಸ್ಥಾನವು ಮಾಲಕರಿಗೆ ಅತ್ಯಂತ ಲಾಭದಾಯಕ ಎಂದು ಪರಿಗಣಿಸಲಾಗುತ್ತದೆ. ಇದು ಆರ್ಥಿಕ ಬೆಳವಣಿಗೆ ಮತ್ತು ಯಶಸ್ಸನ್ನು ಉತ್ತೇಜಿಸುತ್ತದೆ.

ಎಲೆಕ್ಟ್ರಾನಿಕ್ಸ್‌ ವಸ್ತುಗಳ ದಿಕ್ಕು

ಕಂಪ್ಯೂಟರ್‌, ದೂರದರ್ಶನ, ರೆಫ್ರಿಜರೇಟರ್‌ ಮತ್ತು ಮೈಕ್ರೋವೇವ್‌ಗಳಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಮ್ಮ ಅಂಗಡಿಯ ಆಗ್ನೇಯ ಮೂಲೆಯಲ್ಲಿ ಇರಿಸಿ. ಇದು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೆಚ್ಚುವರಿಯಾಗಿ ಅದೃಷ್ಟ ಮತ್ತು ಸ್ಥಿರತೆಗಾಗಿ ಕಚ್ಚಾ ವಸ್ತುಗಳು ಮತ್ತು ಭಾರವಾದ ವಸ್ತುಗಳನ್ನು ಅಂಗಡಿಯ ನೈಋತ್ಯ ಭಾಗದಲ್ಲಿ ಇರಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ ಗರಿಷ್ಠ ಗ್ರಾಹಕರ ಗಮನ ಸೆಳೆಯಲು ಉತ್ಪನ್ನಗಳ ಮಾದರಿಯನ್ನು ವಾಯುವ್ಯ ಮತ್ತು ಉತ್ತರ ಭಾಗದಲ್ಲಿ ಪ್ರದರ್ಶಿಸಿ.

ರಿಸೆಪ್ಶನ್‌ ಇರಬೇಕಾದ ದಿಕ್ಕು

ಯಾವುದೇ ಕಚೇರಿಯಾಗಲಿ ಅಲ್ಲಿ ರಿಸೆಪ್ಶನ್‌ ಪ್ರಮುಖವಾಗಿರುತ್ತದೆ. ರಿಸೆಪ್ಶನ್‌ ಡೆಸ್ಕ್‌ ಅನ್ನು ಪೂರ್ವ ಅಥವಾ ಈಶಾನ್ಯ ಮೂಲೆಯಲ್ಲಿ ಇರಿಸಿ. ಅಂಗಡಿಯ ಮುಂಭಾಗ ಸ್ವಸ್ತಿಕ್‌ನಂತಹ ಶುಭ ಚಿಹ್ನೆಗಳನ್ನು ಅಳವಡಿಸಿ. ಗೋಡೆಯ ಮೇಲೆ ‘ಶುಭ-ಲಾಭ್’ ಮತ್ತು ‘ರಿದ್ಧಿ-ಸಿದ್ಧಿ’ಯಂತಹ ಪದಗಳನ್ನು ಬರೆಯಿರಿ. ಇನ್ನು ಪ್ರವೇಶ ದ್ವಾರದ ದಿಕ್ಕಿಗೆ ಅನುಗುಣವಾದ ಬಣ್ಣದಲ್ಲೇ ಬೋರ್ಡ್‌ ಅಳವಡಿಸಿ. ವಾಯುವ್ಯ ಪ್ರವೇಶದ್ವಾರವನ್ನು ಹೊಂದಿರುವ ಅಂಗಡಿಗಳಿಗೆ ಬಿಳಿ ಅಥವಾ ಬೂದು ಬಣ್ಣದ ಬೋರ್ಡ್‌ ಬಳಸಿ. ಉತ್ತರ ದಿಕ್ಕಿಗೆ ಅಂಗಡಿ ಮುಖ ಮಾಡಿದ್ದರೆ ಬೋರ್ಡ್‌ ನೀಲಿ, ಕಪ್ಪು ಅಥವಾ ಹಸಿರು ಬಣ್ಣದಲ್ಲಿರಲಿ ಎಂದು ವಾಸ್ತು ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: Vastu Tips: ವರ್ಕ್ ಫ್ರಂ ಹೋಮ್ ಕೆಲಸ ಮಾಡುತ್ತಿದ್ದೀರಾ? ಈ ವಾಸ್ತು ಸಲಹೆ ಫಾಲೋ ಮಾಡಿ

Exit mobile version