ಬೆಂಗಳೂರು: ಇನ್ನೇನು ಪರೀಕ್ಷೆ ಸೀಸನ್ ಆರಂಭವಾಗಲಿದೆ. ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಪರೀಕ್ಷೆಯೂ ಒಂದು. ಮಕ್ಕಳ ಕಲಿಕಾ ಮಟ್ಟವನ್ನು ನಿರ್ಧರಿಸುವ ಪರೀಕ್ಷೆ ಹತ್ತಿರ ಬರುತ್ತಿದ್ದಂತೆ ಹೆತ್ತವರಿಗೂ ಚಿಂತೆ ಆರಂಭವಾಗುತ್ತದೆ. ಮಕ್ಕಳನ್ನು ಓದಿಸುವುದೇ ಅವರಿಗೆ ಬಹು ದೊಡ್ಡ ಸವಾಲು. ಮಕ್ಕಳ ಅಧ್ಯಯನ ವಿಚಾರದಲ್ಲಿ ವಾಸ್ತು ಶಾಸ್ತ್ರ ಕೂಡ ನಿಮ್ಮ ನೆರವಿಗೆ ಬರುತ್ತದೆ ಎನ್ನುವ ವಿಚಾರ ನಿಮಗೆ ಗೊತ್ತೆ? ಹಾಗಾದರೆ ಇಂದಿನ ವಾಸ್ತು ಟಿಪ್ಸ್ನಲ್ಲಿ (Vastu Tips) ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸದಂತೆ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವುದನ್ನು ನೋಡೋಣ.
ದಿಕ್ಕು
ವಾಸ್ತು ಪ್ರಕಾರ ಅಧ್ಯಯನ ನಡೆಸುವಾಗ ಪ್ರತಿ ವಿಷಯಕ್ಕೆ ಅನುಗುಣವಾಗಿ ಬೇರೆ ಬೇರೆ ದಿಕ್ಕಿಗೆ ಮುಖ ಮಾಡುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ಅದರಂತೆ:
- ಪಶ್ಚಿಮ: ವಿಜ್ಞಾನ, ಗಣಿತ, ಐಟಿ ಇತ್ಯಾದಿಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಪಶ್ಚಿಮದತ್ತ ಮುಖ ಮಾಡಬೇಕು.
- ಪೂರ್ವ: ಸೃಜನಶೀಲ ಅಥವಾ ಧಾರ್ಮಿಕ ಅಧ್ಯಯನಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಪೂರ್ವ ಉತ್ತಮ ದಿಕ್ಕು.
- ದಕ್ಷಿಣ: ಕಾನೂನು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ, ರಕ್ಷಣಾ ಸೇವೆಗಳಿಗೆ ತಯಾರಿ ನಡೆಸುವವರಿಗೆ, ಮಾರಾಟ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲಿನ ವಿದ್ಯಾರ್ಥಿಗಳಿಗೆ ದಕ್ಷಿಣ ದಿಕ್ಕು ಶುಭ.
- ಉತ್ತರ: ಸಿಎ, ಸಿಎಸ್, ಅಕೌಂಟ್ಸ್, ಬ್ಯಾಂಕಿಂಗ್ ಮತ್ತು ಫೈನಾನ್ಸ್ ವಿದ್ಯಾರ್ಥಿಗಳು ಉತ್ತರ ದಿಕ್ಕಿಗೆ ಮುಖ ಮಾಡುವುದು ಉತ್ತಮ.
- ಈಶಾನ್ಯ: ಸಂಶೋಧನೆ, ಪಿಎಚ್.ಡಿ ವಿದ್ಯಾರ್ಥಿಗಳಿಗೆ ಈಶಾನ್ಯ ಉತ್ತಮ ಆಯ್ಕೆ.
ಗಮನಿಸಿ ಯಾವುದೇ ಕಾರಣಕ್ಕೂ ಮಕ್ಕಳು ವಾಯವ್ಯ ದಿಕ್ಕಿಗೆ ಮುಖ ಮಾಡಿ ಅಧ್ಯಯನ ನಡೆಸದಂತೆ ನೋಡಿಕೊಳ್ಳಿ. ಈ ವಲಯದ ಶಕ್ತಿ ಸೋಮಾರಿತನವನ್ನು ಉಂಟು ಮಾಡುತ್ತದೆ. ಮಾತ್ರವಲ್ಲ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬಣ್ಣ
ಬಣ್ಣಗಳು ನಮ್ಮ ಮನಸ್ಥಿತಿಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಅವು ಖಂಡಿತವಾಗಿಯೂ ತಮ್ಮದೇ ಆದ ಶಕ್ತಿಯನ್ನು ಹೊಂದಿವೆ. ಹೀಗಾಗಿ ಸ್ಟಡಿ ರೂಮ್ಗೆ ಬಣ್ಣ ಕೊಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಸ್ಟಡಿ ರೂಮ್ ಯಾವ ಕಡೆ ಮುಖ ಮಾಡಿದೆ ಎನ್ನುವುದನ್ನು ಆಧರಿಸಿ ಗೋಡೆಗಳಿಗೆ ಬಣ್ಣ ಬಳಿಯಬೇಕು.
- ಪೂರ್ವ: ಕಂದು ಮತ್ತು ಹಸಿರು
- ದಕ್ಷಿಣ: ಕಿತ್ತಳೆ, ಕೆಂಪು ಅಥವಾ ಗುಲಾಬಿ
- ಪಶ್ಚಿಮ: ಬೂದು, ಬಿಳಿ
- ಉತ್ತರ: ನೀಲಿ
ಫೋಟೊಗಳು
ಪರಿಣಾಮಕಾರಿ ಅಧ್ಯಯನಕ್ಕೆ ಮಕ್ಕಳ ಅಧ್ಯಯನ ಕೋಣೆಯಲ್ಲಿ ಯಾವೆಲ್ಲ ಫೋಟೊ ಅಳವಡಿಸಬೇಕು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
- ಸರಸ್ವತಿ ದೇವಿ: ಜ್ಞಾನದ ದೇವತೆ ಮತ್ತು ಕಲೆ, ಬುದ್ಧಿವಂತಿಕೆಯ ಸಂಕೇತ ಸರಸ್ವತಿ ದೇವಿಯ ಫೋಟೊ ಅಥವಾ ವಿಗ್ರಹವನ್ನು ಸ್ಟಡಿ ರೂಮ್ನಲ್ಲಿಡಿ.
- ಗಾಯತ್ರಿ ಮಂತ್ರ: ಗಾಯತ್ರಿ ಮಂತ್ರದ ಚಿತ್ರವು ನಿಮ್ಮ ಮಗುವಿನ ಜ್ಞಾನ ಮತ್ತು ಬುದ್ಧಿವಂತಿಕೆ ಮೇಲೆ ಅದ್ಭುತ ಪರಿಣಾಮ ಬೀರುತ್ತದೆ. ವೇದಗಳ ತಾಯಿಯಾದ ಗಾಯತ್ರಿ ಮಾತಾ ಅಪಾರ ಜ್ಞಾನ ನೀಡುತ್ತಾಳೆ.
- ಗಣಪತಿ: ಅಕ್ಷರ ಮತ್ತು ಕಲಿಕೆಯ ಸರ್ವೋಚ್ಚ ಪೋಷಕನಾದ ಗಣಪತಿಯು ಶಿಕ್ಷಣದ ಹಾದಿಯಲ್ಲಿನ ಎಲ್ಲ ಅಡೆತಡೆಗಳನ್ನು ತೊಡೆದು ಹಾಕುತ್ತಾನೆ. ಹೀಗಾಗಿ ಗಣೇಶನ ಚಿತ್ರ ಅಥವಾ ವಿಗ್ರಹವನ್ನು ಇಡುವುದರಿಂದ ಮಕ್ಕಳು ಕಲಿಕೆಯ ಪ್ರಕ್ರಿಯೆಯಲ್ಲಿನ ಎಲ್ಲ ಸವಾಲುಗಳನ್ನು ಜಯಿಸುತ್ತಾರೆ.
- ಗರುಡ: ವಿಷ್ಣುವಿನ ವಾಹನವಾದ ಗರುಡನಿಗೆ ತೀಕ್ಷ್ಣ ದೃಷ್ಟಿ ಮತ್ತು ಅದ್ಭುತ ಬುದ್ಧಿಶಕ್ತಿ ಇದೆ. ಅಧ್ಯಯನ ಮೇಜಿನ ಮೇಲೆ ಗರುಡನ ವಿಗ್ರಹವನ್ನು ಇಡುವುದು ಕೌಶಲ್ಯಗಳನ್ನು ತೀಕ್ಷ್ಣಗೊಳಿಸುತ್ತದೆ ಮತ್ತು ಮಕ್ಕಳನ್ನು ಸೂಪರ್ ಸ್ಮಾರ್ಟ್ ಮತ್ತು ಬುದ್ಧಿವಂತರನ್ನಾಗಿ ಮಾಡುತ್ತದೆ.
- ನಂದಿ: ಶಿವನ ವಾಹನವಾದ ನಂದಿ ಆಗಮ ಶಾಸ್ತ್ರಗಳ ಅಧಿಪತಿ. ಅವನ ಜ್ಞಾನ ಭಂಡಾರ ಅಪಾರವಾದುದು. ಹೀಗಾಗಿ ನಂದಿಯ ಫೋಟೊ ಇಡುವುದರಿಂದ ನಿಮ್ಮ ಮಗುವಿನ ಜ್ಞಾನದ ದಿಗಂತವನ್ನು ವಿಸ್ತರಿಸಬಹುದು.
ಇದನ್ನೂ ಓದಿ: Vastu Tips: ವಾಸ್ತು ಪ್ರಕಾರ ಮಕ್ಕಳ ರೂಮ್ ವಿನ್ಯಾಸಗೊಳಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಇವನ್ನು ಗಮನಿಸಿ
- ಅಧ್ಯಯನ ಟೇಬಲ್ ಅನ್ನು ಬೀಮ್ ಅಥವಾ ಲಾಫ್ಟ್ನ ಕೆಳಗೆ ಇಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಅಧ್ಯಯನ ಮಾಡುವಾಗ ಗೊಂದಲಗಳು ಉಂಟಾಗಬಹುದು.
- ಮೆಟ್ಟಿಲುಗಳ ಕೆಳಗೆ ಸ್ಟಡಿ ರೂಮ್ ಇರದಂತೆ ನೋಡಿಕೊಳ್ಳಿ.
- ಪ್ಲಾಸ್ಟಿಕ್, ಲೋಹದ ಪೀಠೋಪಕರಣಗಳ ಬದಲು ಮರದಿಂದ ಮಾಡಿದ ಪೀಠೋಪಕರಣ ಬಳಸಿ.
- ಸ್ಟಡಿ ರೂಮ್ನಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಇರಲಿ. ಆದಷ್ಟು ನೈಸರ್ಗಿಕ ಬೆಳಕು ಬೀಳುವಂತಿರಬೇಕು.
- ರೂಮ್ನಲ್ಲಿ ಕನ್ನಡಿ ಇರಿಸಬೇಡಿ.
- ಬಾತ್ ರೂಮ್ಗೆ ಮುಖ ಮಾಡುವಂತೆ ಸ್ಟಡಿ ಟೇಬಲ್ ಇಡಬೇಡಿ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ