Site icon Vistara News

Vastu Tips: ಹೊಸ ಮನೆ ನಿರ್ಮಿಸುವಾಗ ಈ ಅಂಶಗಳನ್ನು ಗಮನಿಸಿ

vastu tips

vastu tips

ಬೆಂಗಳೂರು: ಮನೆ ಕೊಂಡುಕೊಳ್ಳುವ ಅಥವಾ ನಿರ್ಮಿಸುವ ಯೋಜನೆಯಲ್ಲಿದ್ದೀರಾ? ಹಾಗಾದರೆ ಕೆಲವೊಂದು ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಲು ಕೆಲವೊಂದು ವಾಸ್ತು ಟಿಪ್ಸ್‌ (Vastu Tips)ಗಳನ್ನು ಅನುಸರಿಸಬೇಕಾಗುತ್ತದೆ. ಕಟ್ಟಡಗಳ ವಿನ್ಯಾಸವೂ ಕೂಡ ಜನರ ಆರೋಗ್ಯ, ಸಂಬಂಧ, ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಾಗಾದರೆ ಹೊಸ ಮನೆಯ ವಿಚಾರದಲ್ಲಿ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ಎನ್ನುವ ಮಾಹಿತಿ ಇಲ್ಲಿದೆ.

ಯಾವ ದಿಕ್ಕಿನಲ್ಲಿರಬೇಕು?

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲು ಜನರನ್ನು ಮಾತ್ರವಲ್ಲ ಶಕ್ತಿಯನ್ನೂ (Energy) ಆಕರ್ಷಿಸುತ್ತದೆ. ಶಕ್ತಿ ಮುಖ್ಯ ದ್ವಾರದ ಮುಖಾಂತರ ಒಳಗೆ ಮತ್ತು ಹೊರಗೆ ಸಂಚರಿಸುತ್ತದೆ. ಹೀಗಾಗಿ ಮನೆಯ ಮುಖ್ಯ ಬಾಗಿಲು ಯಾವ ಕಡೆಗಿದೆ ಎನ್ನುವುದೂ ಪ್ರಧಾನ ವಿಚಾರವಾಗುತ್ತದೆ. ಮನೆ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಮುಖ ಮಾಡಿರಲಿ. ನಿಮ್ಮ ಹೊಸ ಮನೆಯನ್ನು ನಿರ್ಮಿಸುವ ಮೊದಲು ಇದನ್ನು ಪರಿಶೀಲಿಸಿ ಅಥವಾ ಈ ಅಂಶವನ್ನು ಗಮನದಲ್ಲಿರಿಸಿಯೇ ಮನೆ ಹುಡುಕಿ.

ರೂಮ್‌ಗಳ ಮುಖ ಈ ಕಡೆಗಿರಲಿ

ಪ್ರತಿಯೊಂದು ಕೋಣೆಯನ್ನು ನಿರ್ದಿಷ್ಟ ದಿಕ್ಕಿನಲ್ಲೇ ನಿರ್ಮಿಸಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಅದರ ಪ್ರಕಾರ ಈ ವಿಚಾರ ಗಮನಿಸಿ:

ಅಡುಗೆ ಕೋಣೆ: ವಾಸ್ತು ಪ್ರಕಾರ ಅಡುಗೆ ಕೋಣೆ ಮನೆಯ ಆಗ್ನೇಯ ದಿಕ್ಕಿನಲ್ಲಿರಬೇಕು. ಯಾವ ಕಾರಣಕ್ಕೂ ಉತ್ತರ ದಿಕ್ಕಿನಲ್ಲಿ ಅಡುಗೆ ಕೋಣೆ ಇರಬಾರದು.

ಮಾಸ್ಟರ್ ಬೆಡ್ ರೂಮ್: ಮಾಸ್ಟರ್ ಬೆಡ್ ರೂಮ್ ಅನ್ನು ನೈಋತ್ಯ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ. ಆಗ್ನೇಯದಲ್ಲಿ ಮಾಸ್ಟರ್ ಬೆಡ್ ರೂಮ್ ಹೊಂದಿರಲೇ ಬಾರದು. ಯಾಕೆಂದರೆ ಅಗ್ನಿ ಅಂಶವು ಆ ದಿಕ್ಕನ್ನು ನಿಯಂತ್ರಿಸುತ್ತದೆ.

ಮಕ್ಕಳ ಕೋಣೆ: ಮಕ್ಕಳ ಕೋಣೆ ಯಾವತ್ತೂ ನೈಋತ್ಯ ದಿಕ್ಕಿನಲ್ಲಿ ಇರುವುದು ಮುಖ್ಯ. ಮಕ್ಕಳು ದಕ್ಷಿಣ ಅಥವಾ ಪೂರ್ವದ ಕಡೆಗೆ ತಲೆ ಹಾಕಿ ಮಲಗುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಶೌಚಾಲಯ: ಶೌಚಾಲಯ / ಬಾತ್‌ ರೂಮ್‌ ಮನೆಯ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿರಬೇಕು ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

ಕೋಣೆಯ ಆಕಾರ

ಕೋಣೆಯ ಆಕಾರದ ಬಗ್ಗೆಯೂ ಗಮನ ಹರಿಸುವುದು ಮುಖ್ಯ. ವೃತ್ತಾಕಾರದ ಕೋಣೆಗಳು ಹೆಚ್ಚು ಸ್ಟೈಲಿಶ್ ಮತ್ತು ಟ್ರೆಂಡಿಯಾಗಿ ಕಾಣುತ್ತಿದ್ದರೂ ಅವು ಮನೆಯ ವಾಸ್ತುವಿಗೆ ಅನುಗುಣವಾಗಿಲ್ಲ ಎನ್ನುವುದನ್ನು ಗಮನಿಸಿ. ಕೋಣೆಗಳು ಯಾವತ್ತೂ ಚೌಕಾಕಾರ ಅಥವಾ ಆಯತಾಕಾರದಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.

ನೀರಿನ ಟ್ಯಾಂಕ್‌ ಎಲ್ಲಿರಬೇಕು?

ಮನೆಯಲ್ಲಿ ನೀರಿನ ಟ್ಯಾಂಕ್‌ ಇರಿಸುವ ದಿಕ್ಕಿನತ್ತಲೂ ಗಮನ ಹರಿಸುವುದು ಮುಖ್ಯ. ಓವರ್ ಹೆಡ್ ಟ್ಯಾಂಕ್ ಅನ್ನು ಮನೆಯ ಪಶ್ಚಿಮ ಅಥವಾ ನೈಋತ್ಯ ದಿಕ್ಕಿನಲ್ಲಿ ಇರಿಸಬೇಕು. ಒಂದು ವೇಳೆ ನೀವು ಅದನ್ನು ನೈಋತ್ಯ ದಿಕ್ಕಿನಲ್ಲಿ ಇರಿಸಿದರೆ ಮೇಲ್ಛಾವಣಿಯಿಂದ ಎರಡು ಅಡಿ ಎತ್ತರದಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಸೆಪ್ಟಿಕ್ ಟ್ಯಾಂಕ್ ಇಲ್ಲಿರಲಿ

ಸೆಪ್ಟಿಕ್ ಟ್ಯಾಂಕ್ ಅನ್ನು ತಪ್ಪಾದ ಸ್ಥಳದಲ್ಲಿ ಇರಿಸಿದರೆ ಮನೆಯಲ್ಲಿ ವಾಸಿಸುವ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಸೆಪ್ಟಿಕ್ ಟ್ಯಾಂಕ್ ಅನ್ನು ವಾಯವ್ಯ ದಿಕ್ಕಿನಲ್ಲಿ ಮಾತ್ರ ಇರಬೇಕು. ಅದು ಯಾವುದೇ ಕಾರಣಕ್ಕೂ ಕಾಂಪೌಂಡ್ ಗೋಡೆಯನ್ನು ಮುಟ್ಟುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಉತ್ತಮ ಆರೋಗ್ಯಕ್ಕಾಗಿ ಹೀಗೆ ಮಾಡಿ

ಆರೋಗ್ಯವೇ ಸಂಪತ್ತು. ಹೀಗಾಗಿ ಉತ್ತಮ ಆರೋಗ್ಯಕ್ಕಾಗಿ ಈ ಅಂಶಗಳನ್ನು ಪಾಲಿಸಬೇಕು. ಮನೆಯೊಳಗೆ ಇನ್‌ ಡೋರ್‌ ಗಿಡಗಳನ್ನು ಬೆಳೆಸಬೇಕು, ಈಶಾನ್ಯ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬೇಕು, ಅಡುಗೆಮನೆಯಲ್ಲಿ ಆಹಾರವನ್ನು ನೈಋತ್ಯ ದಿಕ್ಕಿನಲ್ಲಿ ಸಂಗ್ರಹಿಸಬೇಕು, ಯಾವುದೇ ನಳ್ಳಿಯಲ್ಲಿ ನೀರು ತೊಟ್ಟಿಕ್ಕುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು, ಕನಿಷ್ಠ ವಾರಕ್ಕೊಮ್ಮೆಯಾದರೂ ಕರ್ಪೂರವನ್ನು ಉರಿಸಬೇಕು. ಇದರಿಂದ ಋಣಾತ್ಮಕ ಶಕ್ತಿಯನ್ನು ದೂರ ಮಾಡಬಹುದು.

ಇದನ್ನೂ ಓದಿ: Vastu Tips: ಸುಖ, ಸಮೃದ್ಧಿ ಹೆಚ್ಚಲು ಈ ವಾಸ್ತು ಟಿಪ್ಸ್‌ ಫಾಲೋ ಮಾಡಿ

ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version