Site icon Vistara News

Vastu Tips: ನೆಮ್ಮದಿಯ ಜೀವನಕ್ಕೆ ಮನೆಯನ್ನು ಹೀಗೆ ಅಲಂಕಾರ ಮಾಡಿ…

hall

hall

ಬೆಂಗಳೂರು: ಉತ್ತಮ ನಿದ್ದೆ, ಸದೃಢ ಆರೋಗ್ಯ, ಆರ್ಥಿಕ ಸಬಲತೆ ನೆಮ್ಮದಿ ಜೀವನಕ್ಕೆ ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ ನಾವು ಮನೆಯಲ್ಲಿನ ಕೆಲವೊಂದು ವಿಚಾರಗಳತ್ತ ಗಮನ ಹರಿಸಿದರೆ ಇದು ಸುಲಭವಾಗಿ ನಮ್ಮದಾಗುತ್ತದೆ. ಶತಮಾನಗಳ ಹಿಂದಿನ ವಾಸ್ತು ಶಾಸ್ತ್ರ ನಾವು ಯಾವೆಲ್ಲ ಅಂಶಗಳತ್ತ ಗಮನ ಹರಿಸಬೇಕು ಎನ್ನುವುದನ್ನು ವಿವರಿಸುತ್ತದೆ. ಇಂದಿನ ವಾಸ್ತು ಟಿಪ್ಸ್‌ (Vastu Tips)ನಲ್ಲಿ ಮನೆಯ ಅಲಂಕಾರಕ್ಕೆ ಯಾವೆಲ್ಲ ವಸ್ತುಗಳನ್ನು ಬಳಸಬೇಕು ಮತ್ತು ಹೇಗೆ ಬಳಸಬೇಕು ಎನ್ನುವುದನ್ನು ವಿವರಿಸುತ್ತೇವೆ.

ಶ್ರೀ ಯಂತ್ರ / ಶ್ರೀ ಚಕ್ರ, ದೇವರ ವಿಗ್ರಹ

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ಶ್ರೀ ಯಂತ್ರ ಅಥವಾ ಶ್ರೀ ಚಕ್ರ ನಿಮ್ಮ ನೆರವಿಗೆ ಬರಲಿದೆ. ಶ್ರೀ ಚಕ್ರ ಬಳಸುವುದರಿಂದ ಆರ್ಥಿಕ ಸಮಸ್ಯೆ ನೀಗುತ್ತದೆ ಎನ್ನಲಾಗಿದೆ. ಅದೃಷ್ಟಕ್ಕಾಗಿ ಈ ವಸ್ತುವನ್ನು ಮನೆಯ ಪೂರ್ವದಲ್ಲಿ ಅಳವಡಿಸಿ. ಜತೆಗೆ ದೇವರ ವಿಗ್ರಹಗಳನ್ನು ದೇವರ ಕೋಣೆಯ ಜತೆಗೆ ಹಾಲ್‌ನಲ್ಲಿ ಇರಿಸಬಹುದು.

ಆಮೆಯ ವಿಗ್ರಹ

ಸ್ಫಟಿಕ ಅಥವಾ ಮರದಿಂದ ತಯಾರಿಸಿದ ಆಮೆಯ ವಿಗ್ರಹ ನಿಮ್ಮ ಅಲಂಕಾರಿಕ ವಸ್ತುಗಳ ಪಟ್ಟಿಯಲ್ಲಿರಲಿ. ಇದು ಮನೆಯೊಳಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆಮೆಯ ಚಿಪ್ಪು ಗಟ್ಟಿ ಮತ್ತು ರಕ್ಷಣಾತ್ಮಕವಾಗಿರುವುದರಿಂದ ನೀವು ಮತ್ತು ನಿಮ್ಮ ಕುಟುಂಬವನ್ನು ವಿಪತ್ತು ಮತ್ತು ದುರದೃಷ್ಟದಿಂದ ರಕ್ಷಣೆ ಒದಗಿಸುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಒಂದು ವೇಳೆ ನೀವು ಸ್ಫಟಿಕ ಆಮೆಯನ್ನು ಬಳಸುತ್ತಿದ್ದರೆ ಉತ್ತಮ ಫಲಿತಾಂಶಕ್ಕಾಗಿ ಅದನ್ನು ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಿಸಿ. ಮರದ ಆಮೆಯನ್ನು ಪೂರ್ವ ಮತ್ತು ಆಗ್ನೇಯ ದಿಕ್ಕಿನಲ್ಲಿ ಇರಿಸಿದರೆ ಶುಭ ಫಲ ದೊರೆಯುತ್ತದೆ.

ನವಿಲು ಗರಿ

ನವಿಲು ಗರಿ ಇರಿಸುವುದರಿಂದ ನಿಮ್ಮ ಮನೆ ಇನ್ನಷ್ಟು ಆಕರ್ಷಕವಾಗುತ್ತದೆ. ಜತೆಗೆ ನೆಮ್ಮದಿಯನ್ನೂ ಹೊತ್ತು ತರುತ್ತದೆ. ಈ ಮನಮೋಹಕ ಗರಿಗಳ ಹೊಳೆಯುವ ಬಣ್ಣಗಳು ಆಧ್ಯಾತ್ಮಿಕತೆ ಮತ್ತು ಸಾಮರಸ್ಯವನ್ನು ಸಂಕೇತಿಸುತ್ತವೆ. ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ನವಿಲು ಗರಿ ಹಲ್ಲಿಗಳ ಕಾಟದಿಂದಲೂ ಮುಕ್ತಿ ನೀಡುತ್ತದೆ.

ನೀರಿನಲ್ಲಿ ಹೂಗಳನ್ನು ಹಾಕಿಡಿ

ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ನೀವು ದೊಡ್ಡ ಪಾತ್ರೆಯೊಂದಕ್ಕೆ ನೀರು ತುಂಬಿಸಿ ಅದರಲ್ಲಿ ಹೂ ಹಾಕಿಡಬಹುದು. ಇದು ಮನೆಯನ್ನು ಇನ್ನಷ್ಟು ಆಕರ್ಷಕವಾಗಿಸುತ್ತದೆ. ಈ ನೀರಿಗೆ ಗುಲಾಬಿ ಎಸಳುಗಳನ್ನೂ ಹಾಕಬಹುದು. ಇದಕ್ಕಾಗಿ ಕಲಾತ್ಮಕತೆಯಿಂದ ಕೂಡಿದ, ಕಸೂತಿ ಹೊಂದಿದ ಪಾತ್ರೆಯನ್ನು ಬಳಸಿದರೆ ಉತ್ತಮ.

ವಿಂಡ್ ಚೈಮ್ಸ್

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮನೆಗಳಲ್ಲಿ ವಿಂಡ್ ಚೈಮ್‌ಗಳನ್ನು ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಇದನ್ನು ಮನೆಯ ಸೌಂದರ್ಯ ಹೆಚ್ಚಿಸಲು ಬಳಸುವ ಜತೆಗೆ ವಾಸ್ತು ದೋಷದಿಂದ ಮುಕ್ತರಾಗಲೂ ಉಪಯೋಗಿಸಬಹುದಾಗಿದೆ. ನೀವು 6 ಅಥವಾ 8 ಟೊಳ್ಳಾದ ರಾಡ್‌ಗಳನ್ನು ಹೊಂದಿರುವ ವಿಂಡ್ ಚೈಮ್‌ಗಳನ್ನು ತೂಗು ಹಾಕಿದರೆ ಮನೆಯೊಳಗೆ ಧನಾತ್ಮಕ ಶಕ್ತ ಹೆಚ್ಚುತ್ತದೆ. ಜತೆಗೆ ಆಹ್ಲಾದಕರ ಶಬ್ದ ಮನಸಿಗೆ ನೆಮ್ಮದಿಯನ್ನೂ ತರುತ್ತದೆ.

ಅಕ್ವೇರಿಯಮ್‌

ವಾಸ್ತು ಪ್ರಕಾರ ಮೀನು ಮತ್ತು ಅಕ್ವೇರಿಯಂಗಳು ಸಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತವೆ. ಹೀಗಾಗಿ ವಾಸ್ತು ದೋಷದ ಲಕ್ಷಣ ಕಂಡು ಬಂದರೆ ಮನೆಗೆ ಅಕ್ವೇರಿಯಂ ತನ್ನಿ. ಇದನ್ನು ನಿಮ್ಮ ಲಿವಿಂಗ್ ರೂಮ್‌ನ ಈಶಾನ್ಯ ಭಾಗದಲ್ಲಿ ಇರಿಸಲು ಮರೆಯದಿರಿ.

ಇದನ್ನೂ ಓದಿ: Vastu Tips: ವ್ಯಾಪಾರ ವೃದ್ಧಿಗೆ ನಿಮ್ಮ ಅಂಗಡಿಯಲ್ಲಿ ಈ ವಾಸ್ತು ಸಲಹೆ ಪಾಲಿಸಿ

ಹಾರ್ಸ್‌ ಶೂ 

ವಾಸ್ತು ಶಾಸ್ತ್ರದ ಪ್ರಕಾರ ಹಾರ್ಸ್‌ ಶೂ ಅನ್ನು ಮನೆಯೊಳಗೆ ಅದೃಷ್ಟವನ್ನು ತರಬಲ್ಲ ಅತ್ಯಂತ ಪ್ರಮುಖ ವಸ್ತು ಎಂದು ಪರಿಗಣಿಸಲಾಗುತ್ತದೆ. ಇದು ಅದೃಷ್ಟ ಮತ್ತು ಸಂಪತ್ತನ್ನು ಆಕರ್ಷಿಸುತ್ತದೆ. ನೀವು ಅದರ ತುದಿಗಳನ್ನು ಮೇಲ್ಮುವಾಗಿ ನಿಲ್ಲುವಂತೆ ತೂಗು ಹಾಕಬೇಕು. ಇದರಿಂದ ಹಾದುಹೋಗುವ ಎಲ್ಲ ಉತ್ತಮ ಶಕ್ತಿಗಳನ್ನು ಆಕರ್ಷಿಸಬಹುದಾಗಿದೆ. ಮುಖ್ಯ ದ್ವಾರವು ಇದಕ್ಕೆ ಸೂಕ್ತವಾದ ಸ್ಥಳ. ಹಾರ್ಸ್‌ ಶೂ ಅನ್ನು ತಲೆಕೆಳಗಾಗಿ ನೇತು ಹಾಕಿದರೆ ಅದು ಮನೆಯಿಂದ ಅದೃಷ್ಟವನ್ನು ಹೊರಹಾಕುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version