ಬೆಂಗಳೂರು: ವಾತಾವರಣದ ಬಿಸಿ ಏರುವ ಜತೆಗೆ ರಾಜಕೀಯ ಬಿಸಿ, ಐಪಿಎಲ್ ಬಿಸಿ, ಪರೀಕ್ಷೆಯ ಬಿಸಿಯೂ ಆರಂಭವಾಗಿದೆ. ಪರೀಕ್ಷೆ ಎಂದಾಕ್ಷಣ ವಿದ್ಯಾರ್ಥಿಗಳ ಜತೆಗೆ ಪಾಲಕರಿಗೂ ಚಿಂತೆ ಆರಂಭವಾಗುತ್ತದೆ. ತಮ್ಮ ಮಕ್ಕಳು ಚೆನ್ನಾಗಿ ಓದಿ ಉತ್ತಮ ಅಂಕ ಪಡೆಯಲಿ ಎಂದು ಹಗಲಿರುಳು ಅದನ್ನೇ ಪಠಿಸುತ್ತಾರೆ. ಈ ವಿಚಾರದಲ್ಲಿ ವಾಸ್ತುಶಾಸ್ತ್ರ ಕೂಡ ನಿಮ್ಮ ನೆರವಿಗೆ ಬರುತ್ತದೆ. ಅಂದರೆ ಕೆಲವೊಂದು ವಾಸ್ತು ಟಿಪ್ಸ್ ಪಾಲಿಸುವ ಮೂಲಕ ಮಕ್ಕಳ ಏಕಾಗ್ರತೆ, ಅಧ್ಯಯನಶೀಲತೆ ಹೆಚ್ಚಿಸಬಹುದು. ಇದರಿಂದ ಅವರ ಅಂಕವೂ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು. ಇಂದಿನ ವಾಸ್ತು ಟಿಪ್ಸ್ (Vastu Tips)ನಲ್ಲಿ ಅಧ್ಯಯನ ಪೂರಕ ವಾತಾವರಣ ಸೃಷ್ಟಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎನ್ನುವ ವಿವರವಿದೆ.
ಸ್ಟಡಿ ರೂಮ್
ಪಶ್ಚಿಮ, ಪೂರ್ವ, ದಕ್ಷಿಣ, ಉತ್ತರ ಮತ್ತು ಈಶಾನ್ಯ ದಿಕ್ಕಿಗೆ ಮುಖ ಮಾಡಿ ಓದುವುದರಿಂದ ಮಕ್ಕಳಿಗೆ ಪಠ್ಯ ಬೇಗನೇ ಅರ್ಥವಾಗುತ್ತದೆ ಮತ್ತು ತುಂಬಾ ಸಮಯದವರೆಗೆ ನೆನಪಿನಲ್ಲಿರುತ್ತದೆ. ನೆನಪಿಡಿ, ಯಾವುದೇ ಕಾರಣಕ್ಕೂ ಮಕ್ಕಳು ವಾಯವ್ಯ ದಿಕ್ಕಿಗೆ ಮುಖ ಮಾಡಿ ಅಧ್ಯಯನ ನಡೆಸದಂತೆ ನೋಡಿಕೊಳ್ಳಿ. ಈ ವಲಯದ ಶಕ್ತಿ ಸೋಮಾರಿತನವನ್ನು ಉಂಟು ಮಾಡುತ್ತದೆ. ಮಾತ್ರವಲ್ಲ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಗಮನಿಸಬೇಕಾದ ಅಂಶ
- ಸ್ಟಡಿ ರೂಮ್ನಲ್ಲಿ ಗಣಪತಿ, ಸರಸ್ವತಿ ಮುಂತಾದ ದೇವರ ವಿಗ್ರಹ ಇಡಿ.
- ಸ್ಟಡಿ ರೂಮ್ನಲ್ಲಿರುವ ಟಾಯ್ಲೆಟ್ ಬಾಗಿಲು ಎಲ್ಲ ಸಮಯದಲ್ಲಿಯೂ ಮುಚ್ಚಿರಲಿ. ತೆರೆದಿದ್ದರೆ ನೆಗೆಟಿವ್ ಎನರ್ಜಿ ಪ್ರವಹಿಸುವ ಸಾಧ್ಯತೆ ಇರುತ್ತದೆ.
- ಸ್ಟಡಿ ರೂಮ್ನಲ್ಲಿ ಕನ್ನಡಿ ಅಥವಾ ಟಿವಿ ಇರಲೇಬಾರದು.
- ಮಕ್ಕಳು ಅಧ್ಯಯನಕ್ಕೆ ಲ್ಯಾಪ್ಟಾಪ್ ಬಳಸುತ್ತಿದ್ದರೆ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿರಬೇಕು.
- ಭಾರವಿರುವ, ಬೃಹತ್ ಗ್ರಾತದ ಪುಸ್ತಕಗಳನ್ನು ದಕ್ಷಿಣ ಭಾಗದಲ್ಲಿ ಇರಿಸಿ. ಹಗುರ ಮತ್ತು ನೋಟ್ ಪುಸ್ತಕಗಳನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಿ.
- ಮಕ್ಕಳ ಮನಸ್ಸಿನ ಮೇಲೆ ಧನಾತ್ಮಕ ಪರಿಣಾಮ ಬೀರುವ ಚಿತ್ರಗಳನ್ನು ಸ್ಟಡಿ ರೂಮ್ನಲ್ಲಿ ತೂಗು ಹಾಕಿ. ಉದಾಹರಣೆಗೆ ಸೂರ್ಯೋದಯ, ಪಕ್ಷಿಗಳು, ಹೂಗಳು, ಪರಿಸರ ಮುಂತಾದ ಚಿತ್ರಗಳು.
- ನೀರನ್ನು ಸ್ಟಡಿ ರೂಮ್ನ ಉತ್ತರ ದಿಕ್ಕಿನಲ್ಲಿಯೇ ಇರಿಸಿ.
- ಸ್ಫೂರ್ತಿದಾಯಕ, ಧನಾತ್ಮಕ ವಾಕ್ಯಗಳನ್ನು ಮಕ್ಕಳ ರೂಮ್ನಲ್ಲಿ ಇರಿಸಿ.
- ಸ್ಟಡಿ ರೂಮ್ನಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಇರಲಿ. ಆದಷ್ಟು ನೈಸರ್ಗಿಕ ಬೆಳಕು ಬೀಳುವಂತಿರಬೇಕು.
- ಮೆಟ್ಟಿಲುಗಳ ಕೆಳಗೆ ಸ್ಟಡಿ ರೂಮ್ ಇರದಂತೆ ನೋಡಿಕೊಳ್ಳಿ.
ಸ್ಟಡಿ ಟೇಬಲ್ ಹೀಗಿರಲಿ
- ಸ್ಟಡಿ ಟೇಬಲ್ ಯಾವಾಗಲೂ ಚೌಕಾಕಾರ ಅಥವಾ ಆಯತಾಕಾರದಲ್ಲಿರಲಿ. ಅದರಲ್ಲಿಯೂ ಚೌಕಾಕಾರ ಉತ್ತಮ. ಇನ್ನು ಟೇಬಲ್ ಆಯತಾಕಾರವಾಗಿದ್ದರೆ ಉದ್ದ ಮತ್ತು ಅಗಲವು 1:2ಕ್ಕಿಂತ ಹೆಚ್ಚಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಉದಾಹರಣೆಗೆ, ಅಧ್ಯಯನ ಟೇಬಲ್ನ ಉದ್ದವು 4 ಅಡಿಗಳಾಗಿದ್ದರೆ ಅಗಲವು 2 ಮತ್ತು 8 ಅಡಿಗಳ ನಡುವೆ ಇರಬೇಕು.
- ವೃತ್ತಾಕಾರದ, ಕನ್ನಡಿ ಹೊಂದಿರುವ ಟೇಬಲ್ ಬಳಸಲೇಬೇಡಿ.
- ಉತ್ತಮ ಗುಣಮಟ್ಟದ ಮರದ ಟೇಬಲ್ ಅನ್ನೇ ಬಳಸಿ.
- ಸ್ಟಡಿ ಟೇಬಲ್ ಗೋಡೆಯಿಂದ ಕನಿಷ್ಠ 3-4 ಇಂಚು ದೂರದಲ್ಲಿರಲಿ. ಈ ಅಂತರ ಮಕ್ಕಳ ಚಿಂತನಾ ಶಕ್ತಿಯನ್ನು ಹೆಚ್ಚಿಸುತ್ತದೆ.
- ಬಾತ್ ರೂಮ್ಗೆ ಮುಖ ಮಾಡುವಂತೆ ಸ್ಟಡಿ ಟೇಬಲ್ ಇಡಬೇಡಿ.
- ಸ್ಟಡಿ ಟೇಬಲ್ ಅನ್ನು ಬೀಮ್ ಅಥವಾ ಲಾಫ್ಟ್ನ ಕೆಳಗೆ ಇಡುವುದನ್ನು ತಪ್ಪಿಸಿ. ಇಲ್ಲದಿದ್ದರೆ ಅಧ್ಯಯನ ಮಾಡುವಾಗ ಗೊಂದಲಗಳು ಉಂಟಾಗಬಹುದು.
- ಸ್ಟಡಿ ಟೇಬಲ್ನಲ್ಲಿ ವಸ್ತುಗಳು, ಪುಸ್ತಕಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಿ ಇಡಬೇಡಿ ಮತ್ತು ಯಾವಾಗಲೂ ಸ್ವಚ್ಛವಾಗಿರಲಿ.
ಇದನ್ನೂ ಓದಿ: Vastu Tips: ವಾಸ್ತು ದೋಷ ಪರಿಹಾರಕ್ಕೆ ನಿಮ್ಮ ದೇವರ ಕೋಣೆ ಹೀಗಿರಲಿ…