Site icon Vistara News

Children photos: ನಿಮ್ಮ ಮಕ್ಕಳ ಇಂಥ ಫೋಟೋಗಳನ್ನು ಜಾಲತಾಣಗಳಲ್ಲಿ ಶೇರ್‌ ಮಾಡಬೇಡಿ ಪ್ಲೀಸ್

ಫೋಟೋಗಳನ್ನು ಜಾಲತಾಣಗಳಲ್ಲಿ ಹಂಚಬಾರದು

ಈಗ ಎಲ್ಲರ ಬದುಕು ಖುಲ್ಲಂಖುಲ್ಲಾ! ಸಾಮಾಜಿಕ ಜಾಲತಾಣಗಳು ಬಂದ ಮೇಲೆ, ಬದುಕಿನ ಪ್ರಮುಖ ಘಟ್ಟಗಳೆಲ್ಲ ಚಿತ್ರ ಸಮೇತ ಅವರವರ ಪ್ರೊಫೈಲುಗಳಲ್ಲಿ ಹಂಚಿಕೊಂಡಾಗಿರುತ್ತದೆ. ತಾನಿವತ್ತು ʻಏನು ತಿಂದೆ ಏನು ಕುಡಿದೆʼಯಿಂದ ಹಿಡಿದು ವಿಷಯ ಖುಷಿಯಿರಲಿ, ಬೇಸರವಿರಲಿ ಕೆಲವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಿದ್ದರೆ ನಿದ್ದೆ ಬಾರದು ಎಂಬ ಸ್ಥಿತಿಯೂ ಇರುತ್ತದೆ. ಇನ್ನು ಹೊಸದಾಗಿ ಮದುವೆಯಾದ, ಆಗಷ್ಟೇ ಮಗು ಹುಟ್ಟಿದ ಜೋಡಿಗಳಲ್ಲಿ ಬಹುತೇಕರಿಗೆ ಮುದ್ದಾದ ಚಂದದ ಫೋಟೋಗಳನ್ನು ಜಗತ್ತಿಗೇ ಕೂಡಲೇ ತೋರಿಸುವ ಹಂಬಲ. ಆದರೆ ಎಷ್ಟೋ ಬಾರಿ ಇವೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಅಗತ್ಯವಿದೆಯೇ ಎಂಬ ಸಣ್ಣ ಯೋಚನೆಯನ್ನೂ ಮಾಡುವುದಿಲ್ಲ.

ಸಾಮಾಜಿಕ ಜಾಲತಾಣಕ್ಕೂ ಒಂದು ಮಿತಿಯಿದೆ. ಅದರಲ್ಲಿ ನಿಮ್ಮ ಬದುಕಿನ ಖುಷಿಗಳನ್ನು ಹಂಚಿಕೊಳ್ಳುವುದು ತಪ್ಪೇನಿಲ್ಲ. ಆದರೆ ಎಲ್ಲಿ, ಯಾವಾಗ, ಎಷ್ಟು ಹಂಚಬೇಕು ಎಂಬ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಕೆಲವು ಖಾಸಗಿ ಕ್ಷಣಗಳು ಮಕ್ಕಳದಾಗಿರಲಿ ದೊಡ್ಡವರದೇ ಆಗಿರಲಿ, ಖಾಸಗಿಯಾಗಿದ್ದರೆ ಚೆನ್ನ. ಮಕ್ಕಳ ಬದುಕಿನಲ್ಲಿ ಖಾಸಗಿ ಅಂತೇನೂ ಇಲ್ಲವಲ್ಲ ಎಂದೂ ಹಲವರು ಯೋಚಿಸಬಹುದು. ತಮಾಷೆಗಾಗಿ ಎಂದುಕೊಂಡು ಹಾಕಿದ ಫೋಟೋಗಳು ಇನ್ನೇನೋ ಅವಾಂತರ ಸೃಷ್ಟಿಸಬಹುದು. ತೊಂದರೆಗಿಂತಲೂ ಹೆಚ್ಚು ಇಂಥ ಕೆಲವು ಚಿತ್ರಗಳನ್ನು ತಾನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂಬ ಸಾಮಾನ್ಯ ಜ್ಞಾನ, ಸಾಮಾಜಿಕ ಪ್ರಜ್ಞೆ ನಿಮ್ಮಲ್ಲಿದೆಯಾ? ಹಾಗಾಗಿ ಹಂಚುವ ಮೊದಲು ಈ ಒಂದಿಷ್ಟು ಸಾಮಾನ್ಯ ತಿಳುವಳಿಕೆ ನಿಮ್ಮಲ್ಲಿರಲಿ.

೧. ನಿಮ್ಮ ಉತ್ಸಾಹ ನಿಜವೇ. ಮಗು ಹುಟ್ಟಿತು. ಮೊದಲು ನಿಮ್ಮ ಮೇಲೆ ಉಚ್ಚೆ ಹಾರಿಸಿದ್ದು, ನಿಮ್ಮ ಮೇಲೆಯೇ ವಿಸರ್ಜನೆ ಮಾಡಿದ್ದು ಇತ್ಯಾದಿ ಇತ್ಯಾದಿಗಳೆಲ್ಲವೂ ಸಂಭ್ರಮವೇ. ತಮಾಷೆಯೇ, ಆದರೂ ಆಹಾ ಇಂಥದ್ದೊಂದು ಮಜಾ ನೆನಪು ಸಾಮಾಜಿಕ ಜಾಲತಾಣದಲ್ಲಿರಲಿ ಎಂದು ಕ್ಲೀನು ಮಾಡುವ ಮೊದಲೇ ಫೋಟೋ ಕ್ಲಿಕ್ಕಿಸಿಕೊಂಡಿದ್ದರೆ ಅದನ್ನು ಒಡನೆಯೇ ಜಾಲತಾಣದಲ್ಲಿ ಹಂಚಬೇಡಿ ಮತ್ತೆ. ಮುಂದೊಂದು ದಿನ ನಿಮ್ಮ ಮಗುವೇ ಬೆಳೆದು ನಿಮ್ಮ ಇಂಥ ಘನಕಾರ್ಯಕ್ಕೆ ಬೇಸರ ಪಟ್ಟುಕೊಳ್ಳಬಹುದು ಎಂದು ನೆನಪಿರಲಿ.

೨. ನಿಮ್ಮ ಮಗುವಿನ ಖಾಸಗಿ ಮಾಹಿತಿಗಳಿರುವ ಫೋಟೋ ಹಂಚುವ ಮೊದಲು ಕಾಳಜಿಯಿರಲಿ. ಶಾಲೆಯ ಐಡಿ ಕಾರ್ಡ್‌ ಧರಿಸಿರುವ, ಅದರಲ್ಲಿ ಎಲ್ಲ ವಿವರಗಳೂ ಬರೆದಿರುವಂಥ ಫೋಟೋಗಳು ಒಳ್ಳೆಯದಲ್ಲ. ನಿಮ್ಮ ಫಾಲೋವರ್‌ಗಳು, ಫ್ರೆಂಡ್‌ ಲಿಸ್ಟಿನಲ್ಲಿರುವವರು ನಿಮಗೆ ಪರಿಚಿತರಷ್ಟೇ ಆಗಿದ್ದರೂ, ಹ್ಯಾಕರ್‌ಗಳ ಹಾವಳಿಯೂ ಇದೆ ಎಂಬುದು ನೆನಪಿರಲಿ.

೩.ಮಕ್ಕಳಿಗೆ ಶಿಕ್ಷೆ ಕೊಡುವ, ಅವರನ್ನು ಅವಮಾನಿತರನ್ನಾಗಿ ನಿಲ್ಲಿಸಿದ ಫೋಟೋಗಳು ಕೂಡಾ ಒಳ್ಳೆಯದಲ್ಲ. ಇದು ಮಕ್ಕಳ ಪ್ರಾಮಾಣಿಕತೆಯನ್ನೂ, ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತದೆ.

೪. ಮಕ್ಕಳು ಗುಂಪಿನಲ್ಲಿರುವ ಚಿತ್ರ ಹಾಕುವಾಗಲೂ ಎರಡು ಬಾರಿ ಯೋಚಿಸಿ. ಅಲ್ಲಿ ನಿಮ್ಮ ಮಕ್ಕಳು ಮಾತ್ರ ಇರುವುದಲ್ಲ ಎಂಬ ಸೂಕ್ಷ್ಮ ಗೊತ್ತಿರಲಿ. ಹಾಗೆ ಹಾಕಬೇಕೆನಿಸಿದರೆ, ಫೋಟೋದಲ್ಲಿರುವ ಇತರ ಮಕ್ಕಳ ಹೆತ್ತವರ ಅನುಮತಿ ಪಡೆದು ಮತ್ತೆ ಬಳಸಿ.

೫. ಮಕ್ಕಳು ಅಳುವ ಚಿತ್ರ, ಅಥವಾ ಅವರನ್ನು ಇನ್ನೊಬ್ಬರು ಮುಂದೊಂದು ದಿನ ತಮಾಷೆ ಮಾಡಬಹುದಾದ ಚಿತ್ರವೆನಿಸಿದರೆ ಅಂಥದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಡಿ.

೬. ಸಿಗರೇಟನ್ನು ಸ್ಟೈಲಾಗಿ ಮಕ್ಕಳ ಬಾಯಲ್ಲಿಟ್ಟು ಫೋಟೋ ತೆಗೆದು ಪೋಸ್ಟ್‌ ಮಾಡುವುದು ಕೂಡಾ ಅತ್ಯಂತ ಕೆಟ್ಟ ಚಾಳಿ. ಸಮಾಜಕ್ಕೆ ತಪ್ಪು ಸಂದೇಶ ನೀಡುವ, ಅಥವಾ ಸೇಫ್‌ ಅಲ್ಲದ ಕೆಲಸವನ್ನು ಮಗು ಮಾಡುತ್ತಿರುವಂಥ ಚಿತ್ರಗಳನ್ನು ಹಾಕುವುದು ಯಾವತ್ತಿಗೂ ಒಳ್ಳೆಯದಲ್ಲ.

೭. ಮಕ್ಕಳು ಬೆತ್ತಲೆ ಇದ್ದಾಗ ನಿಮಗೆ ಮುದ್ದು ಕಾಣಿಸಿತೆಂದು ಫೋಟೋ ತೆಗೆದರೂ ಅದನ್ನು ಜಾಲತಾಣದಲ್ಲಿ ಹಾಕುವುದು ತಪ್ಪು. ನಿಮ್ಮ ಮಗು ಬೆಳೆದು ದೊಡ್ಡವರಾದಾಗ ಈವರೆಗೆ ಎಲ್ಲರೂ ನೋಡಿದ್ದ ತನ್ನ ಬೆತ್ತಲೆ ಫೋಟೋ ನೋಡಿ ಅವರಿಗೆ ಮುಜುಗರವಾಗಬಹುದು. ಮಾನಸಿಕವಾಗಿ ಬಹಳ ನೊಂದುಕೊಳ್ಳಬಹುದು. ಅಥವಾ ಅಂತರ್ಜಾಲದಲ್ಲೇ ಬೇರೆಯವರು ಇಂಥ ಫೋಟೋಗಳನ್ನು ದುರ್ಬಳಕೆ ಮಾಡಬಹುದು.

೮. ಮಕ್ಕಳು ಅನಾರೋಗ್ಯದಲ್ಲಿದ್ದಾಗ, ಆಸ್ಪತ್ರೆಯಲ್ಲಿದ್ದಾಗ ಅಥವಾ ಅವರಿಗೆ ಪೆಟ್ಟಾಗಿದ್ದಾಗ ಅಂಥ ಫೋಟೋಗಳನ್ನು ತೆಗೆದು ಪೋಸ್ಟ್‌ ಮಾಡಬಾರದು. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು.

ಇದನ್ನೂ ಓದಿ: Video Viral | ಕೆಲವು ಮಕ್ಕಳು ಹುಟ್ತಾನೆ ಕುಣಿದುಕೊಂಡೇ ಬರ್ತಾವೇನೋ!

Exit mobile version