Site icon Vistara News

101ನೇ ವಯಸ್ಸಿನಲ್ಲೂ ‘ಕರ್ತವ್ಯ’ ಮರೆಯದೆ ವೋಟ್‌ ಮಾಡಿದ ನಿವೃತ್ತ ಯೋಧ; ಸೆಲ್ಯೂಟ್‌ ಎಂದರು ಜನ

Army Officer

101-Year-Old Retired Army Officer Comes Out To Vote In Mumbai, Internet Salutes Him

ಮುಂಬೈ: ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಸೋಮವಾರ (ಮೇ 20) ಐದನೇ ಹಂತದ ಮತದಾನ (Lok Sabha Election) ನಡೆದಿದೆ. ಬಹುತೇಕ ಕಡೆ ಶಾಂತಿಯುತವಾಗಿಯೇ ಮತದಾನ ನಡೆದಿದೆ. ಮೂರನೇ ಹಂತದಲ್ಲಿ ಕೇವಲ ಶೇ.57.5ರಷ್ಟು ಮತದಾನ (Voter Turnout) ದಾಖಲಾಗಿದೆ. ಇದರ ಮಧ್ಯೆಯೇ, ಮುಂಬೈನಲ್ಲಿ 101ನೇ ವಯಸ್ಸಿನಲ್ಲೂ ನಿವೃತ್ತ ಯೋಧರೊಬ್ಬರು (Retired Army Officer) ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಯುವಕರು ಸೇರಿ ಎಲ್ಲರಿಗೂ ಮಾದರಿ ಎನಿಸಿದ್ದಾರೆ. ಅವರು ಮತದಾನ ಮಾಡಿದ ಫೋಟೊಗಳು ಈಗ ವೈರಲ್‌ ಆಗಿವೆ.

ಮುಂಬೈ ಪೊಲೀಸರು ನಿವೃತ್ತ ಯೋಧ ಮತದಾನ ಮಾಡಿದ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. “ನೀವು ಮತದಾನವನ್ನು ತಪ್ಪಿಸಿಕೊಳ್ಳಲು 101 ಕಾರಣಗಳನ್ನು ಕೊಡಬಹುದು. ಆದರೆ, ನಿವೃತ್ತ ಯೋಧರಾದ ಕಾರ್ಖನೀಸ್‌ ಅವರು 101ನೇ ವಯಸ್ಸಿನಲ್ಲೂ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಮಾದರಿ ಎನಿಸಿದ್ದಾರೆ. ಇವರು ಮುಂಬೈನ ರಹೇಜಾ ಕಾಲೇಜಿಗೆ ತೆರಳಿ ಮತದಾನ ಮಾಡಿದ್ದು, ನಮ್ಮ ಸಿಬ್ಬಂದಿಯು ಅವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ.

ನಿವೃತ್ತ ಯೋಧರ ಕರ್ತವ್ಯಪ್ರಜ್ಞೆಗೆ ಜಾಲತಾಣಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇಳಿ ವಯಸ್ಸಿನಲ್ಲೂ ಮತದಾನ ಮಾಡಿದ ನಿವೃತ್ತ ಯೋಧನಿಗೆ ನನ್ನ ಸೆಲ್ಯೂಟ್‌” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ನಿಜವಾಗಿಯೂ ಇದು ಸ್ಫೂರ್ತಿದಾಯಕ. 98 ವರ್ಷದ ನನ್ನ‌ ಅಜ್ಜಿಯು ಕೂಡ ಇಂದು ಮತ ಚಲಾಯಿಸಿದ್ದಾರೆ. ಇನ್ನು ಯೋಧನಿಗೆ ಸಹಾಯ ಮಾಡಿದ ಪೊಲೀಸ್‌ ಸಿಬ್ಬಂದಿಗೂ ಧನ್ಯವಾದಗಳು” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್‌ಸ್ಟಾಗ್ರಾಂ ಪೋಸ್ಟ್‌ಅನ್ನು ಸಾವಿರಾರು ಜನ ಲೈಕ್‌ ಮಾಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಐದನೇ ಹಂತದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ರಾಜ್ಯದಲ್ಲಿ ಕೆಲವೆಡೆ ಹಿಂಸಾಚಾರ ಪ್ರಕರಣಗಳು ಸುದ್ದಿಯಾಗಿದ್ದರೂ ಶೇ.73ರಷ್ಟು ಮತದಾನ ದಾಖಲಾಗಿದೆ. ಇನ್ನು ಲಡಾಕ್‌ನಲ್ಲಿ ಶೇ.67.15, ಜಾರ್ಖಂಡ್‌ನಲ್ಲಿ ಶೇ.61.90ರಷ್ಟು ಮತದಾನ ನಡೆದಿದೆ. ಇನ್ನು ಮಹಾರಾಷ್ಟ್ರದಲ್ಲಿ ಕೇವಲ ಶೇ.48.66ರಷ್ಟು ಮತದಾನ ದಾಖಲಾಗಿದ್ದು, ಐದನೇ ಹಂತದಲ್ಲಿ ಕನಿಷ್ಠ ಮತದಾನ ನಡೆದ ರಾಜ್ಯ ಎನಿಸಿದೆ. ನಾಲ್ಕನೇ ಹಂತದಲ್ಲೂ ಮಹಾರಾಷ್ಟ್ರದಲ್ಲಿ ಕನಿಷ್ಠ ಮತದಾನ ದಾಖಲಾಗಿತ್ತು.

ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿ ಹಲವು ಗಣ್ಯರ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದೆ.

ಇದನ್ನೂ ಓದಿ: Postal Ballot: ಅನಾರೋಗ್ಯದ ಕಾರಣ ಅಂಚೆ ಮತದಾನ ಕೋರಿ 78ರ ಅಜ್ಜಿ ಅರ್ಜಿ; ಬೇಡವೆಂದ ಸುಪ್ರೀಂ!

Exit mobile version