Site icon Vistara News

Lok Sabha Election: ಚಿಕ್ಕಮಗಳೂರು-ಉಡುಪಿ ಕ್ಷೇತ್ರ; ಮುರೊಳ್ಳಿಗೆ ಕೈ ಟಿಕೆಟ್‌ ನೀಡಲು ಆಗ್ರಹ, ಹೆಗ್ಡೆ ಘರ್‌ ವಾಪ್ಸಿಗೆ ವಿರೋಧ

Sudhir Kumar Murolli

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ (Lok Sabha Election) ಸ್ಪರ್ಧಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಪಟ್ಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಚಿಕ್ಕಮಗಳೂರು-ಉಡುಪಿ ಲೋಕಸಭಾ ಚುನಾವಣೆಯ ಟಿಕೆಟ್‌ ಯಾರಿಗೆ ಎಂಬ ಕುರಿತು ಎರಡೂ ಜಿಲ್ಲೆಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಸದ್ಯ ಇನ್ನೂ ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಮತ್ತೆ ಕಾಂಗ್ರೆಸ್‌ ಸೇರಲಿದ್ದು, ಅವರಿಗೆ ಲೋಕಸಭಾ ಚುನಾವಣೆಯ ಟಿಕೆಟ್‌ ನೀಡಲಾಗುತ್ತದೆ ಎಂಬ ವರದಿಗಳಿದ್ದರೂ, ಅವರಿಗೆ ಟಿಕೆಟ್‌ ನೀಡಲು ಪಕ್ಷದ ಸಂಘಟನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ಪಕ್ಷದ ಹೈಕಮಾಂಡ್‌ ಗೊಂದಲಕ್ಕೆ ಬಿದ್ದಿದೆ. ಹೀಗಾಗಿ ಟಿಕೆಟ್‌ ಹಂಚಿಕೆಯ ಕುರಿತು ತೀರ್ಮಾನಿಸಿಲು ಸದ್ದಿಲ್ಲದೆ ಮತ್ತೊಂದು ಸುತ್ತಿನ ಅಭಿಪ್ರಾಯ ಸಂಗ್ರಹ ನಡೆಸಲಾಗುತ್ತಿದೆ.

ಈ ಹಿಂದೆ ಕಾಂಗ್ರೆಸ್‌ನಲ್ಲಿಯೇ ಇದ್ದ ಜಯಪ್ರಕಾಶ್‌ ಹೆಗ್ಡೆ ಬಿಜೆಪಿ ಸೇರಿದ್ದರು. ಬಿಜೆಪಿಯೂ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಈಗ ಚುನಾವಣೆಯ ಸಂದರ್ಭದಲ್ಲಿ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಿ ಸ್ಪರ್ಧಿಸಲು ಮುಂದಾಗಿರುವುದಕ್ಕೆ ಎರಡೂ ಜಿಲ್ಲೆಯ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರನ್ನು ವಿರೋಧಿಸಿ ಆಂದೋಲನ ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿಗೆ ಮನವಿ

ಈ ನಡುವೆ, ಕೆಪಿಸಿಸಿಯ ರಾಜ್ಯ ವಕ್ತಾರರರಾಗಿರುವ, ಸಾಮಾಜಿಕ ಚಿಂತಕ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿಗೆ ಟಿಕೆಟ್‌ ನೀಡಬೇಕೆಂಬ ಒತ್ತಡ ಹೆಚ್ಚಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಶಾಸಕರು, ಉಡುಪಿಯ ಪರಾಜಿತ ಅಭ್ಯರ್ಥಿಗಳು ಹಾಗು ಹಿರಿಯ ನಾಯಕರು ರಾಜಧಾನಿ ಬೆಂಗಳೂರಿನಲ್ಲಿ ಲಾಬಿ ಆರಂಭಸಿದ್ದಾರೆ.

ಮಂಗಳವಾರದಂದು ಈ ಎಲ್ಲ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಸುಧೀರ್ ಕುಮಾರ್ ಮುರೊಳ್ಳಿಗೇ ಟಿಕೆಟ್‌ ನೀಡಿ ಎಂದು ಮನವಿ ಮಾಡಿದ್ದಾರೆ.

ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ವಿನಯ್ ಕುಮಾರ್ ಸೊರಕೆ, ಶೃಂಗೇರಿ ಕ್ಷೇತ್ರದ ಶಾಸಕ ಟಿ. ಡಿ. ರಾಜೇಗೌಡ, ಕಾರ್ಕಳದ ಉದಯ್ ಕುಮಾರ್ ಶೆಟ್ಟಿ, ಕುಂದಾಪುರದ ದಿನೇಶ್ ಹೆಗ್ಡೆ, ಉಡುಪಿಯ ರಮೇಶ್ ಕಾಂಚನ್, ಉಡುಪಿ ಜಿಲ್ಲಾ ಎನ್ಎಸ್‌ಯುಐ ಅಧ್ಯಕ್ಷ ಸೌರವ್ ಬಲ್ಲಾಳ್, ದೀಪಕ್ ಕೋಟ್ಯಾನ್ ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಉಮಾ ಐ.ಬಿ. ಶಂಕರ್, ಲಕ್ಷ್ಮೀಶ್ ಗಬ್ಬಲಡ್ಕ, ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅಸಗೋಡು ನಾಗೇಶ್, ಚನ್ನಗಿರಿ ಗೌಡ, ಕುಕ್ಕುಡಿಗೆ ರವೀಂದ್ರ, ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ, ಪ್ರವೀಣ್ ಹೊಳೆಕೊಪ್ಪ, ವಿಜಯತೇಜ್ ಶೆಟ್ಟಿ, ಸಂದೇಶ್ ಕೊಪ್ಪ, ಶ್ರೀಜಿತ್ ದಂಡಿನಮಕ್ಕಿ ದುರ್ಗಾ ಚರಣ್ ಕುಂಚೂರು ಸೇರಿದಂತೆ 50 ಕ್ಕೂ ಹೆಚ್ಚು ಪ್ರಮುಖ ನಾಯಕರು ಈ ನಿಯೋಗದಲ್ಲಿದ್ದರು.

ಇದನ್ನೂ ಓದಿ | LoK Sabha Election 2024: ಕರ್ನಾಟಕ ಬಿಜೆಪಿ ಟಿಕೆಟ್‌ ಇಂದೇ ಫೈನಲ್; ಈ 17 ಮಂದಿಗೆ ಪಕ್ಕಾ!

ನಮ್ಮ ಮಲೆನಾಡು ಕರಾವಳಿಯ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿರುವ ಹಾಗೂ ಇಲ್ಲಿಯ ಸ್ಥಳೀಯ ಸಮಸ್ಯೆಗಳಿಗೆ ಹೋರಾಟ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ವಕ್ತಾರರಾಗಿರುವ ಸುಧೀರ್ ಕುಮಾರ್ ಮುರೊಳ್ಳಿ ಅವರಿಗೆ ಈ ಬಾರಿ ಅವರ ಪಕ್ಷದಿಂದ ಟಿಕೆಟ್ ನೀಡಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಅವರಿಗೆ ಪಕ್ಷ ಟಿಕೆಟ್‌ ನೀಡಿದಲ್ಲಿ ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರ ಮರಳಿ ಪಕ್ಷದ ಹಿಡಿತಕ್ಕೆ ಸಿಕ್ಕುವುದರಲ್ಲಿ ಅನುಮಾನವಿಲ್ಲ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ ಹೇಳಿದ್ದಾರೆ.
ಒಟ್ಟಾರೆಯಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಪ್ರಕಾಶ್‌ ಹೆಗ್ಡೆಯವರನ್ನೇ ಮತ್ತೊಮ್ಮೆ ನೆಚ್ಚಿಕೊಳ್ಳುತ್ತದೆಯೇ ಅಥವಾ ಹೊಸಬರಿಗೆ ಅವಕಾಶ ಮಾಡಿಕೊಡುತ್ತದೆಯೇ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Exit mobile version