ಲಕ್ನೋ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ (Election Results 2024). 294 ಸೀಟುಗಳನ್ನು ಗೆದ್ದುಕೊಂಡ ಬಿಜೆಪಿ ನೇತೃತ್ವದ ಎನ್‌ಡಿಒ (NDA) ಒಕ್ಕೂಟ ಸರ್ಕಾರ ರಚನೆಗೆ ಮುಂದಾಗಿದೆ. ಮಿತ್ರಪಕ್ಷಗಳು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಬೆಂಬಲ ಸೂಚಿಸಿದ್ದು, ಜೂನ್ 9ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಇತ್ತ ಉತ್ತರ ಪ್ರದೇಶದಿಂದ ಸ್ಪರ್ಧಿಸಿದ್ದ ಎಂಟು ಶಾಸಕರು ಸಂಸದರಾಗಿ ಆಯ್ಕೆಯಾಗಿದ್ದು, ಈ ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯದಲ್ಲಿ ಮಿನಿ ವಿಧಾನಸಭಾ ಚುನಾವಣೆ ನಡೆಯಲಿದೆ.
ರಾಜಕೀಯವಾಗಿ ಬಹಳ ನಿರ್ಣಾಯಕ ರಾಜ್ಯವಾದ ಉತ್ತರ ಪ್ರದೇಶದಲ್ಲಿ 13 ಶಾಸಕರು ಮತ್ತು ನಾಲ್ಕು ಎಂಎಲ್‌ಸಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಂತಿಮವಾಗಿ ಮೂವರು ಎಂಎಲ್‌ಸಿಗಳು ಮತ್ತು ಐವರು ಶಾಸಕರು ಸೇರಿದಂತೆ ಎಂಟು ಮಂದಿ ಜನಪ್ರತಿನಿಧಿಗಳು ಸೋಲು ಕಂಡಿದ್ದಾರೆ.
ಗೆದ್ದ ಶಾಸಕರು
ಬಿಜೆಪಿಯ ಪ್ರವೀಣ್ ಪಟೇಲ್ (ಫುಲ್ಪುರ್), ಅತುಲ್ ಗಾರ್ಗ್ (ಗಾಜಿಯಾಬಾದ್) ಮತ್ತು ಅನೂಪ್ ಪ್ರಧಾನ್ (ಖೈರ್) ಸಂಸದರಾಗಿ ಆಯ್ಕೆಯಾಗಿದ್ದಾರೆ. ಇನ್ನು ಸಮಾಜವಾದಿ ಪಾರ್ಟಿ (ಎಸ್‌ಪಿ)ಯ ಅಖಿಲೇಶ್ ಯಾದವ್ (ಕಾರ್ಹಾಲ್), ಝಿಯಾ ಯುಆರ್ ರೆಹಮಾನ್ (ಕುಂಡರ್ಕಿ) ಮತ್ತು ಲಾಲ್ಜಿ ವರ್ಮಾ (ಕಡೆಹರಿ), ನಿಷಾದ್ ಪಕ್ಷದ ವಿನೋದ್ ಕುಮಾರ್ ಬಿಂಡ್ (ಭದೋಹಿ), ಆರ್‌ಎಲ್‌ಡಿಯ ಚಂದನ್ ಚೌಹಾಣ್ (ಬಿಜ್ನೋರ್) ಜಯ ಗಳಿಸಿದ ಶಾಸಕರು. ಇನ್ನು ಎಂಎಲ್‌ಸಿಗಳ ಪೈಕಿ ಪಿಡಬ್ಲ್ಯುಡಿ ಸಚಿವ, ಬಿಜೆಪಿಯ ಜಿತಿನ್ ಪ್ರಸಾದ್ ಅವರು ಪಿಲಿಭಿತ್ ಲೋಕಸಭಾ ಕ್ಷೇತ್ರದಿಂದ 1,64,935 ಮತಗಳ ಅಂತರದಿಂದ ಗೆದ್ದಿದ್ದಾರೆ.
ಸೋತ ಸಚಿವರು
ತೋಟಗಾರಿಕೆ, ಕೃಷಿ ಮಾರುಕಟ್ಟೆ, ಕೃಷಿ ವಿದೇಶಿ ವ್ಯಾಪಾರ ಮತ್ತು ಕೃಷಿ ರಫ್ತು ಖಾತೆ ರಾಜ್ಯ ಸಚಿವ, ಎಂಎಲ್‌ಸಿ ದಿನೇಶ್ ಪ್ರತಾಪ್ ಸಿಂಗ್ ಅವರು ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ 3,90,030 ಮತಗಳ ಅಂತರದಿಂದ ಸೋಲಿನ ಆಘಾತ ಅನುಭವಿಸಿದ್ದಾರೆ. ಮೈನ್ಪುರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ, ಉತ್ತರ ಪ್ರದೇಶ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಯವೀರ್ ಸಿಂಗ್ ಅವರು ಮೈನ್ಪುರಿ ಸಂಸದೀಯ ಕ್ಷೇತ್ರದ ಹಾಲಿ ಸಂಸದೆ ಎಸ್‌ಪಿಯ ಡಿಂಪಲ್ ಯಾದವ್ ವಿರುದ್ಧ ಸೋಲುಂಡಿದ್ದಾರೆ.
ಇದನ್ನೂ ಓದಿ: Lok Sabha Election 2024: ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ 41 ಪಕ್ಷಗಳ ಸಂಸದರು!
ಬಲಾಬಲ ಹೇಗಿದೆ?
ದೆಹಲಿ ಗದ್ದುಗೆಗೆ ಏರುವಲ್ಲಿ ಉತ್ತರ ಪ್ರದೇಶ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಯಾಕೆಂದರೆ ಇಲ್ಲಿ ಅತೀ ಹೆಚ್ಚಿನ 80 ಸ್ಥಾನಗಳಿವೆ. ಹೀಗಾಗಿ ಈ ರಾಜ್ಯದಲ್ಲಿ ಅತೀ ಹೆಚ್ಚಿನ ಸ್ಥಾನ ಪಡೆಯಲು ರಾಜಕೀಯ ಪಕ್ಷಗಳು ಗಮನ ಹರಿಸುತ್ತವೆ. ಕಳೆದ ಬಾರಿ ಇಲ್ಲಿ ಬಿಜೆಪಿ 62 ಸ್ಥಾನಗಳನ್ನು ಪಡೆದುಕೊಂಡಿತ್ತು. ಆದರೆ ಈ ಬಾರಿ ಈ ಸಂಖ್ಯೆಯಲ್ಲಿ ಭಾರೀ ಕುಸಿತವಾಗಿದ್ದು ಕೇಸರಿ ಪಾಳಯಕ್ಕೆ ಬಹು ದೊಡ್ಡ ಹೊಡೆತ ಬಿದ್ದಿದೆ. ಬಿಜೆಪಿ 33, ಎಸ್‌ಪಿ 37, ಕಾಂಗ್ರೆಸ್ 6, ಆರ್‌ಎಲ್‌ಡಿ 2, ಎಎಸ್‌ಪಿಕೆಆರ್ ಮತ್ತು ಅದಾಲ್ ತಲಾ 1 ಕಡೆ ಗೆದ್ದುಕೊಂಡಿದೆ.