Site icon Vistara News

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೊಮ್ಮೆ ಹಿನ್ನಡೆ; ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Hemant Soren

Hemant Soren

ನವದೆಹಲಿ: ಅಕ್ರಮವಾಗಿ ಹಣ ವರ್ಗಾವಣೆ, ಭೂ ವ್ಯವಹಾರ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳಿಂದ ಬಂಧಿತರಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ, ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮುಖ್ಯಸ್ಥ ಹೇಮಂತ್‌ ಸೊರೆನ್‌ (Hemant Soren) ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ (Supreme Court) ಮತ್ತೊಮ್ಮೆ ಹಿನ್ನಡೆಯಾಗಿದೆ. ಬಂಧನವನ್ನು ಪ್ರಶ್ನಿಸಿ ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ ಬುಧವಾರ (ಮೇ 22) ನಿರಾಕರಿಸಿದೆ. ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವ ಉದ್ದೇಶದಿಂದ ಹೇಮಂತ್‌ ಸೊರೆನ್‌ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಹೇಮಂತ್ ಸೊರೆನ್ ಅವರು ವಿಚಾರಣಾ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂಬ ಅಂಶವನ್ನು ಮರೆಮಾಚಿದ್ದಕ್ಕಾಗಿ ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯ ಎಚ್ಚರಿಕೆ ನೀಡಿದ ನಂತರ ಸೊರೆನ್ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಜಾಮೀನು ಅರ್ಜಿಯನ್ನು ಹಿಂತೆಗೆದುಕೊಂಡರು. ಇದರಿಂದ ಸೊರೆನ್‌ ಅವರಿಗೆ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಹೇಮಂತ್ ಸೊರೆನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ್ದ ಕೋರ್ಟ್‌ ಮಂಗಳವಾರ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿತ್ತು. ಜಾರ್ಖಂಡ್‌ನಲ್ಲಿ ಮೇ 25 ಮತ್ತು ಜೂನ್ 1ರಂದು ಚುನಾವಣೆ ನಡೆಯಲಿದ್ದು, ಪ್ರಚಾರ ನಡೆಸಲು ಜಾಮೀನು ನೀಡಬೇಕೆಂದು ಕೋರಿ ಸೊರೆನ್‌ ಮನವಿ ಸಲ್ಲಿಸಿದ್ದರು.

ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಪ್ರಚಾರಕ್ಕಾಗಿ ಮೇ 10ರಂದು ಸುಪ್ರೀಂಕೋರ್ಟ್‌ನಿಂದ ಜಾಮೀನು ಪಡೆದಿದ್ದರು. ಹೀಗಾಗಿ ಇದೇ ಮಾದರಿಯಲ್ಲಿ ಸೊರೆನ್‌ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಅವರಿಗಿಂತ ಹೇಮಂತ್ ಸೊರೆನ್ ಅವರ ಪ್ರಕರಣವನ್ನು ಭಿನ್ನ ಎಂದಿರುವ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಮೇ 10ರಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿದಾಗ, ಅವರು ವಿಚಾರಣಾ ನ್ಯಾಯಾಲಯದಿಂದ ನಿಯಮಿತ ಜಾಮೀನು ಕೋರಿರಲಿಲ್ಲ ಮತ್ತು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅವರ ವಿರುದ್ಧ ಯಾವುದೇ ನ್ಯಾಯಾಂಗ ಆದೇಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: Hemant Soren: ಹೇಮಂತ್‌ ಸೊರೆನ್‌ ಬಂಧನಕ್ಕಿಲ್ಲ ತಡೆ, 5 ದಿನ ಕಸ್ಟಡಿಗೆ; ಚಂಪಯಿ ಪದಗ್ರಹಣ

ಅಕ್ರಮವಾಗಿ ಹಣ ವರ್ಗಾವಣೆ, ಭೂ ಅವ್ಯವಹಾರ ಪ್ರಕರಣ ಕೇಳಿಬಂದ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳು ಹೇಮಂತ್‌ ಸೊರೆನ್‌ ಅವರಿಗೆ 9 ಬಾರಿ ಸಮನ್ಸ್‌ ಜಾರಿಗೊಳಿಸಿದ್ದರು. ಆದರೆ ಹೇಮಂತ್‌ ಸೊರೆನ್‌ ಅವರು ಪ್ರತಿ ಬಾರಿ ಸಮನ್ಸ್‌ ನೀಡಿದಾಗಲೂ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು. ಇ.ಡಿ ಅಧಿಕಾರಿಗಳು ಮನೆಗೆ ಲಗ್ಗೆ ಇಡುತ್ತಾರೆ ಎಂಬುದನ್ನು ಅರಿತಿದ್ದ ಅವರು ದೆಹಲಿಗೆ ತೆರಳಿ, ಗೌಪ್ಯ ಸ್ಥಳದಲ್ಲಿದ್ದರು. ಆದರೆ ಇ.ಡಿ ಅಧಿಕಾರಿಗಳು ಕೊನೆಗೂ ಹೇಮಂತ್‌ ಸೊರೆನ್‌ ಅವರನ್ನು ಈ ವರ್ಷದ ಜನವರಿ 31ರಂದು ಬಂಧಿಸಿದ್ದರು. ನಂತರ ಮುಖ್ಯಮಂತ್ರಿ ಸ್ಥಾನಕ್ಕೆ ಹೇಮಂತ್‌ ಸೊರೆನ್‌ ಅವರು ರಾಜೀನಾಮೆ ನೀಡಿದ್ದರು.

Exit mobile version